ಕರ್ನಾಟಕ

ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆ ಭರ್ತಿ ಮಾಡಲು ಸರ್ಕಾರ ಸಿದ್ಧ: ಸಿಎಂ

Pinterest LinkedIn Tumblr

CM-police-station

ಬೆಂಗಳೂರು, ಜೂ.19- ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ರಾಜ್ಯ ಸರ್ಕಾರ ಬದ್ಧವಾಗಿದ್ದು, ನೇಮಕಾತಿ ಪ್ರಕ್ರಿಯೆಗಳು ಹಂತ ಹಂತವಾಗಿ ನಡೆಯುತ್ತಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬಾಗಲೂರು ನೂತನ ಪೊಲೀಸ್ ಠಾಣೆ ಉದ್ಘಾಟಿಸಿದ ನಂತರ  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ನೇಮಕಾತಿ ಮಾಡಿ ಇಲಾಖೆಯನ್ನು ಸದೃಢಗೊಳಿಸಲಾಗುವುದು. ಅದೇ ರೀತಿ ಅಗತ್ಯವಿರುವ ಕಡೆ ಪೊಲೀಸ್   ಠಾಣೆಗಳನ್ನು ಸ್ಥಾಪಿಸಲು ಸರ್ಕಾರ ಸಿದ್ಧವಿದೆ ಎಂದು ಸ್ಪಷ್ಟಪಡಿಸಿದರು. ನಾಗರಿಕ ಸಮಾಜದ ನೆಮ್ಮದಿಗಾಗಿ ಪೊಲೀಸ್ ಠಾಣೆಗಳ ಸ್ಥಾಪನೆ ಅಗತ್ಯವಾಗಿದೆ. ಅಗತ್ಯ ಇರುವ ಕಡೆ ಠಾಣೆಗಳ ಮಂಜೂರಾತಿಗಾಗಿ ಪ್ರಸ್ತಾವನೆ ಬಂದರೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಲಿದೆ ಎಂದು ಹೇಳಿದರು.

ಪಿಎಸ್‌ಐ ಹುದ್ದೆಗಳಿಗೆ ಲಿಖಿತ, ದೈಹಿಕ ಹಾಗೂ ಮೌಖಿಕ ಪರೀಕ್ಷೆಗಳು ಮುಗಿದಿದ್ದು, ನೇಮಕಾತಿ ಪ್ರಕ್ರಿಯೆ ಮುಕ್ತಾಯದ ಹಂತದಲ್ಲಿದೆ. ಸುಮಾರು 250ಕ್ಕೂ ಹೆಚ್ಚು ಪಿಎಸ್‌ಐಗಳು ಶೀಘ್ರದಲ್ಲೇ ಇಲಾಖೆಗೆ ಸೇರ್ಪಡೆಯಾಗಲಿದ್ದಾರೆ ಎಂದು ತಿಳಿಸಿದರು. ಬಾಗಲೂರು ಭಾಗದ ಜನ ಪೊಲೀಸ್ ಠಾಣೆಗಾಗಿ ಬಹಳ ವರ್ಷದಿಂದಲೂ ಸರ್ಕಾರದ ಮೇಲೆ ಒತ್ತಡ ಹೇರಿದ್ದರು. ಅವರ ಬಹುದಿನಗಳ ಕನಸು ಈಗ ಈಡೇರಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಕಾರ್ಯಕ್ರಮದಲ್ಲಿ ಗೃಹ ಸಚಿವ ಕೆ.ಜೆ.ಜಾರ್ಜ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ,, ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ್, ನಗರ  ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ, ಶಾಸಕ ಬೈರತಿ ಬಸವರಾಜ್ ಮತ್ತಿತರರು ಭಾಗವಹಿಸಿದ್ದರು.

* ಮೂರು ನೂತನ  ಪೊಲೀಸ್ ಠಾಣೆ ಉದ್ಘಾಟನೆ
ಬೆಂಗಳೂರು, ಜೂ.19-ನಗರದಲ್ಲಿ ಮೂರು ನೂತನ ಪೊಲೀಸ್ ಠಾಣೆಗಳ ಕಟ್ಟಡವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ಕೊತ್ತನೂರು ಪೊಲೀಸ್ ಠಾಣೆ, ಬಾಗಲೂರು ಪೊಲೀಸ್ ಠಾಣೆ ಮತ್ತು ರಾಮಮೂರ್ತಿನಗರ ಪೊಲೀಸ್ ಠಾಣೆಯ ನೂತನ ಕಟ್ಟಡದ ಉದ್ಘಾಟನೆಯನ್ನು  ಅವರು ನೆರವೇರಿಸಿದರು. ಈ ಸಂದರ್ಭದಲ್ಲಿ ಗೃಹ ಸಚಿವ ಕೆ.ಜೆ.ಜಾರ್ಜ್, ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ, ಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ್, ಶಾಸಕ ಬೈರತಿ ಬಸವರಾಜ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.

Write A Comment