ಕರ್ನಾಟಕ

ಅಂದು ಕೊಳಚೆಬೀಡು– ಇಂದು ಪ್ರವಾಸಿತಾಣ; ಅಳ್ಳಾಳಸಂದ್ರ ಕೆರೆ ಚಹರೆ ಬದಲಾಯಿತು l 44 ಎಕರೆಯಷ್ಟು ವಿಶಾಲವಾದ ಕೆರೆ

Pinterest LinkedIn Tumblr

pvec19p3cylklake

ಬೆಂಗಳೂರು: ಕೆಲವೇ ತಿಂಗಳುಗಳ ಹಿಂದೆ ಕಲುಷಿತ ನೀರಿನಿಂದ ತುಂಬಿ ಕೆಟ್ಟ ವಾಸನೆ ಬೀರುತ್ತಿದ್ದ ಯಲಹಂಕ ಸಮೀಪದ ಅಳ್ಳಾಳಸಂದ್ರ ಕೆರೆಯು ಇಂದು ಸ್ಥಳೀಯ ಸಂಘಟನೆಗಳು, ಬಿಬಿಎಂಪಿ, ಜನಪ್ರತಿನಿಧಿ­ಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಸಹಭಾಗಿತ್ವದಲ್ಲಿ ಸ್ವಚ್ಛಗೊಂಡು ಸುಂದರ ಕೆರೆಯಾಗಿ ಅಭಿವೃದ್ಧಿ ಹೊಂದಿದೆ.

ಕೆರೆಗೆ ಕೆಲವು ಸೌಲಭ್ಯಗಳನ್ನು ಕಲ್ಪಿಸಿ, ಸ್ಥಳೀಯ ಯುವ ಸಂಘಟನೆ ಹಾಗೂ ಸಾರ್ವಜನಿಕರ ಸಹಭಾಗಿತ್ವದಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಯೋಜನೆ ರೂಪಿಸಿದೆ. ಈ ಸಂಬಂಧ ಬಿಬಿಎಂಪಿಗೆ ಪ್ರಸ್ತಾವನೆ ಸಲ್ಲಿಸಿದೆ. ಇದಕ್ಕೆ ಬಿಬಿಎಂಪಿಯಿಂದ ಅನುಮತಿ ದೊರೆತು, ಯೋಜನೆಯು ಅನುಷ್ಠಾನಕ್ಕೆ ಬಂದರೆ ಕೆಲವೇ ತಿಂಗಳುಗಳಲ್ಲಿ ಅಳ್ಳಾಳಸಂದ್ರ ಕೆರೆಯು ಪ್ರವಾಸಿ ತಾಣವಾಗಿ ಪರಿವರ್ತನೆಯಾಗುವ ಮೂಲಕ ಪ್ರವಾಸಿಗರನ್ನು ಕೈ ಬೀಸಿ ಕರೆಯಲಿದೆ.

44 ಎಕರೆ ವಿಸ್ತೀರ್ಣವಿರುವ ಈ ಕೆರೆಗೆ ಸುತ್ತಮುತ್ತಲ ಅಪಾರ್ಟ್‌ಮೆಂಟ್‌ಗಳು ಹಾಗೂ ಕಾರ್ಖಾನೆಗಳಿಂದ ಕಲುಷಿತ ನೀರು ಸೇರುತ್ತಿದ್ದ ಪರಿಣಾಮ ಸ್ಥಳಿಯ ಜನರು ಕೆಟ್ಟ ವಾಸನೆ ಹಾಗೂ ಸೊಳ್ಳೆಗಳ ಕಾಟದಿಂದ ತೊಂದರೆ ಅನುಭವಿಸುತ್ತಿದ್ದರು. ಈ ಬಗ್ಗೆ ಸ್ಥಳೀಯ ಸಂಘಟನೆಗಳು ಹಾಗೂ ಜನರು ಬಿಬಿಎಂಪಿ, ಜಲಮಂಡಳಿ ಹಾಗೂ ಉಪಲೋಕಾಯುಕ್ತರಿಗೆ ದೂರು ನೀಡಿದ್ದರು.

ನಂತರ ಉಪಲೋಕಾಯುಕ್ತ ನ್ಯಾಯಮೂರ್ತಿ ಎಸ್‌.ಬಿ.ಮಜಗೆ ಅವರು ಬಿಬಿಎಂಪಿ ಹಾಗೂ ಜಲಮಂಡಳಿ ಅಧಿಕಾರಿಗಳ ತಂಡದೊಂದಿಗೆ ಕೆರೆಗೆ ಎರಡು ಬಾರಿ ಭೇಟಿ ನೀಡಿದ್ದರು. ಕೆರೆಗೆ ಸೇರುತ್ತಿರುವ ಕಲುಷಿತ ನೀರನ್ನು ತಡೆ ಗಟ್ಟಬೇಕು ಹಾಗೂ ನೀರಿನಲ್ಲಿ ಬೆಳೆದಿರುವ ಕಳೆಯನ್ನು ತೆರವುಗೊಳಿಸಬೇಕೆಂದು ಅಧಿಕಾರಿಗಳಿಗೆ ಆದೇಶಿಸಿ, ಗಡುವು ನೀಡಿದ್ದರು. ನಂತರ ಅಧಿಕಾರಿಗಳು, ಸ್ಥಳೀಯ ಸಂಘಟನೆಗಳು, ಜನಪ್ರತಿನಿಧಿಗಳು, ವಿದ್ಯಾರ್ಥಿಗಳು ಹಾಗೂ ನಾಗರಿಕರ ಸಹಯೋಗದೊಂದಿಗೆ ಕೆರೆ ಪುನಶ್ಚೇತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಈಗ ಕೆರೆಗೆ ಸೇರುತ್ತಿದ್ದ ಕಲುಷಿತ ನೀರನ್ನು ಬಹುತೇಕ ತಡೆಗಟ್ಟಲಾಗಿದೆ.

ಬಿಬಿಎಂಪಿ ವತಿಯಿಂದ ಸುಮಾರು ₨10 ಕೋಟಿ ವೆಚ್ಚದಲ್ಲಿ ಕೆರೆಯನ್ನು ಅಭಿ ವೃದ್ಧಿಪಡಿಸಲಾಗಿದೆ. ಇದರಲ್ಲಿ ಹೂಳು ತೆಗೆಯುವ, ಕೆರೆ ಸುತ್ತ ಕಟ್ಟೆ ನಿರ್ಮಾಣ, ತಡೆಗೋಡೆ ನಿರ್ಮಾಣ, ಶೌಚಾಲಯ, ಉದ್ಯಾನ, ರಾಜಕಾಲುವೆಗಳ ಒಳಹರಿವು ನಿರ್ಮಾಣ ಹಾಗೂ ಗ್ರಿಲ್‌ ಅಳವಡಿಸುವ ಕಾರ್ಯಗಳನ್ನು ಪೂರ್ಣಗೊಳಿಸಲಾಗಿದೆ.

ಕೆರೆ ಅಭಿವೃದ್ಧಿಯಲ್ಲಿ ‘ಯುವ’ ಸಂಘಟನೆ: ಕೆರೆಯನ್ನು ಪುನಶ್ಚೇತನ ಗೊಳಿಸಬೇಕೆಂಬ ಉದ್ದೇಶದಿಂದ ಯಲಹಂಕ ಯುನೈಟೆಡ್‌ ಎನ್ವಿರಾನ್‌ ಮೆಂಟ್‌ ಅಸೋಸಿಯೇಷನ್‌ (ಯುವ) ಸಂಘಟನೆಯು 2013ರ ಆಗಸ್ಟ್‌ನಲ್ಲಿ ಹುಟ್ಟಿಕೊಂಡಿತು. ಸಂಘಟನೆಯು ಆರಂಭದಲ್ಲಿ ಉಪಲೋಕಾಯುಕ್ತರಿಗೆ ಈ ಬಗ್ಗೆ ದೂರು ನೀಡಿ, ಸಮಸ್ಯೆಯನ್ನು ಬಗೆಹರಿಸಬೇಕೆಂದು ಮನವಿ ಮಾಡಿತ್ತು. ನಂತರ ಬಿಬಿಎಂಪಿ, ಜನಪ್ರತಿನಿಧಿಗಳು, ಸ್ಥಳೀಯ ನಾಗರಿಕರು, ಶಾಲಾ–ಕಾಲೇಜುಗಳ ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ಪ್ರತಿ ತಿಂಗಳ ಎರಡನೇ ಶನಿವಾರ 9 ಬಾರಿ ಶ್ರಮದಾನ ಹಮ್ಮಿಕೊಳ್ಳುವ ಮೂಲಕ ಕೆರೆಯನ್ನು ಸ್ವಚ್ಛಗೊಳಿಸಲಾಗಿದೆ.

ಕೆರೆ, ಪರಿಸರ, ನೀರು, ಆರೋಗ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಕೆರೆಯ ಅಂಗಳದಲ್ಲಿ ಕೆರೆಗಳಲ್ಲಿ ಕಳೆ ತೆಗೆ ಯುವ ಬಗ್ಗೆ ತಜ್ಞರಿಂದ ವಿಚಾರಗೋಷ್ಠಿ, ಟೆರೆಸ್‌ ಗಾರ್ಡನ್‌ ಬಗ್ಗೆ ಅರಿವು, ನಗರ ಭೂಸಾರಿಗೆ ನಿರ್ದೇಶನಾಲಯದ ಸಹಯೋಗದೊಂದಿಗೆ ಗ್ರಾಮೀಣ ಸೊಗಡಿನ ಆಟಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೊಳಗೊಂಡಂತೆ 4 ಬಾರಿ ಸೈಕಲ್ ದಿನಾಚರಣೆ, ವಿಶ್ವ ಜಲದಿನ ಹಾಗೂ ಕೆರೆ ಹಬ್ಬಗಳನ್ನು ಹಮ್ಮಿಕೊಳ್ಳಲಾಗಿದೆ.

ಜಿಲ್ಲಾಡಳಿತದ ವತಿಯಿಂದ ಒತ್ತುವರಿಯಾಗಿದ್ದ ಕೆರೆ ಅಂಗಳದ ಜಾಗವನ್ನು ಬಹುತೇಕ ತೆರವುಗೊಳಿಸಲಾಗಿದೆ. ನಗರೋತ್ಥಾನ ಯೋಜನೆಯಡಿ ₨5 ಕೋಟಿ ವೆಚ್ಚದಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಈಜುಕೊಳ ಹಾಗೂ ಜಿಮ್‌ ನಿರ್ಮಾಣ ಕಾಮಗಾರಿ ಕೈಗೊಳ್ಳುವ ಸಂಬಂಧ ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದ್ದು, ಇದು ಮುಗಿದ ಕೂಡಲೇ ಕಾಮಗಾರಿ ಆರಂಭವಾಗಲಿದೆ.

ಕೆರೆಯಲ್ಲಿ ಲಭ್ಯವಿರುವ ಸೌಕರ್ಯಗಳು: ಕೆರೆಯ ಮಧ್ಯದಲ್ಲಿ ಎರಡು ದ್ವೀಪ, ಎರಡು ಕಿಲೋಮೀಟರ್‌ ನಡಿಗೆಪಥ, ವಿದ್ಯುತ್‌ದೀಪ, ಮಕ್ಕಳ ಆಟಕ್ಕಾಗಿ 3 ಕಡೆ  ಪ್ರತ್ಯೇಕ ವ್ಯವಸ್ಥೆ, 12 ವರ್ಷ ಮೇಲ್ಪಟ್ಟವರಿಗೆ ತೆರೆದ ಜಿಮ್‌, ಶೌಚಾಲಯ, ವಾಯುವಿಹಾರಿಗಳು ವಿಶ್ರಾಂತಿ ಪಡೆಯಲು 4 ಗಜೀಬಾ (ಹೆಂಚಿನ ಮನೆಗಳು), ಕುಳಿತುಕೊಳ್ಳಲು 20 ಅಡಿಗೊಂದರಂತೆ ಆಸನ ಹಾಗೂ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಪ್ರಸ್ತಾವನೆ
ಕೆರೆಯಲ್ಲಿ ಬೋಟಿಂಗ್‌ ಸೌಲಭ್ಯ, ಇಕೋ ವಾಕ್‌್ಸ, ಟೂರಿಸಂ ಕಿಯಾಕ್‌್ಸ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಬೇಕೆಂಬ ಉದ್ದೇಶದಿಂದ ಬಿಬಿಎಂಪಿ ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅವರು ಈ ವಿಚಾರದಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅವರಿಂದ ಅನುಮತಿ ದೊರೆತ ಕೂಡಲೇ ಯುವ ಸಂಘಟನೆ ಹಾಗೂ ಸ್ಥಳೀಯರ ಸಹಕಾರದೊಂದಿಗೆ ಈ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು.

Write A Comment