ಮನೋರಂಜನೆ

ರಜನಿ, ಸಲ್ಲು ಸಿನಿಮಾ ರಾಕ್‌ಲೈನ್‌ ಮಾಡಿದ್ದು ಹೇಗೆ?

Pinterest LinkedIn Tumblr

Rockline-venkatesh1-edit-page

ಕಳೆದ ಹಲವಾರು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕನ್ನಡ ಚಿತ್ರ ನಿರ್ಮಾಪಕರು ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹ ಸದ್ಯಕ್ಕೆ ಮುಗಿದಿದೆ. ಆದರೆ, ಬಿಕ್ಕಟ್ಟು ಇನ್ನೂ ಪೂರ್ಣ ಪ್ರಮಾಣದಲ್ಲಿ ಬಗೆಹರಿದಿಲ್ಲ. ಮತ್ತೂಂದೆಡೆ ಯಶಸ್ವಿ ನಿರ್ಮಾಪಕ ಎಂದೇ ಹೆಸರು ಗಳಿಸಿರುವ ರಾಕ್‌ಲೈನ್‌ ವೆಂಕಟೇಶ್‌ ಅವರು ಕನ್ನಡದ ಗಡಿ ದಾಟಿ ಮುಂದೆ ಸಾಗುತ್ತಿದ್ದಾರೆ. ದಕ್ಷಿಣ ಭಾರತದ ಸೂಪರ್‌ ಸ್ಟಾರ್‌ ರಜನಿಕಾಂತ್‌ ಅವರನ್ನು ಹಾಕಿಕೊಂಡು ಚಿತ್ರ ನಿರ್ಮಾಣ ಮಾಡಿದ ನಂತರ ಬಾಲಿವುಡ್‌ಗೆ ಕಾಲಿಟ್ಟಿದ್ದಾರೆ. ತಮ್ಮದೇ ಛಾಪು ಮೂಡಿಸುವ ಧಾವಂತದಲ್ಲಿದ್ದಾರೆ. ಹಾಗಾದರೆ ನಿಜವಾಗಿಯೂ ಕನ್ನಡದ ಚಿತ್ರ ನಿರ್ಮಾಪಕರು ಸಂಕಷ್ಟದಲ್ಲಿ ಇದ್ದಾರೆಯೇ? ಎಲ್ಲಿ ಎಡವುತ್ತಿದ್ದಾರೆ? ಯಾವ ರೀತಿಯ ಚಿತ್ರ ನಿರ್ಮಾಣ ಮಾಡಿದರೆ ಯಶಸ್ಸು ಸಾಧ್ಯ? ಕನ್ನಡ ಹೊರತುಪಡಿಸಿ ಇತರ ಭಾಷೆಯ ಚಿತ್ರರಂಗಗಳಲ್ಲಿ ಪರಿಸ್ಥಿತಿ ಹೇಗಿದೆ ಎಂಬಿತ್ಯಾದಿ ವಿಷಯಗಳ ಬಗ್ಗೆ ರಾಕ್‌ಲೈನ್‌ ಜತೆಗೆ “ನೇರಾನೇರ’ ಮಾತಿಗಿಳಿದಾಗ…

* ದಕ್ಷಿಣ ಭಾರತದ ಸೂಪರ್‌ ಸ್ಟಾರ್‌ ರಜನಿಕಾಂತ್‌ ಅವರನ್ನು ಹಾಕಿಕೊಂಡು ಸಿನಿಮಾ ಮಾಡಿದಿರಿ? ಹೇಗೆ ಸಾಧ್ಯವಾಯ್ತು?

ಕೆಲವು ತುಂಬಾ ದೊಡ್ಡ ಬಜೆಟ್‌ನ ಸಿನಿಮಾ ಮಾಡಿದೆ. ಅದನ್ನು ತೆಲುಗು, ತಮಿಳು, ಹಿಂದಿ ಹೀರೋಗಳಿಗೆ ಹೇಳಿಸ್ತಾ ಇದ್ದೆ. ಹೀಗೆ ಹೇಳಿಸ್ತಾ ಇದ್ದುದರಿಂದ ಒಂದು ತಮಿಳು, ಒಂದು ತೆಲುಗು, ಒಂದು ಹಿಂದಿ ಸಿನಿಮಾ ಮಾಡೋದಕ್ಕೆ ಸಾಧ್ಯವಾಯ್ತು. ಇವೆಲ್ಲಾ ಕತೆಯಿಂದ ಸಾಧ್ಯ ಆಯ್ತು ಅಷ್ಟೇ. ಒಬ್ಬ ಪ್ರೊಡ್ನೂಸರ್‌ ಬಂದು ಕತೆ ಹೇಳ್ತಾನೆ ಅಂದಾಗ ಬ್ಯಾಕ್‌ಗ್ರೌಂಡ್‌ ಬೇಕೇ ಬೇಕು. ಸ್ಟಾರ್‌ಗಳು ಯಾರೀತ ಅಂತ ನೋಡುತ್ತಾರೆ. ರಜನಿ ಸರ್‌ಗೆ ನನ್ನ ಬಗ್ಗೆ ಗೊತ್ತಿತ್ತು. ಸಬೆjಕ್ಟ್ ಓಕೆ ಆಯ್ತು. ಸಿನಿಮಾ ಆಯ್ತು. ಆದರೆ ಬೇರೆ ಸ್ಟಾರ್‌ಗಳು ಹಿನ್ನೆಲೆ ನೋಡ್ತಾರೆ. ಕತೆ ಮತ್ತು ಪ್ರೊಡ್ನೂಸರ್‌ ಕಡೆನೂ ನೋಡ್ತಾರೆ. ಹಿನ್ನೆಲೆ ಏನು, ಇವರಿಂದ ಸಿನಿಮಾ ಮಾಡ್ಲಿಕಾಗತ್ತಾ, ಸಿನಿಮಾ ಮಾಡಿದ ಮೇಲೆ ಸಿನಿಮಾ ರಿಲೀಸ್‌ ಮಾಡೋ ಕೆಪ್ಯಾಸಿಟಿ ಇವರಿಗಿದ್ಯಾ, ಮಾರ್ಕೆಟಿಂಗ್‌ ಮಾಡ್ತಾರೆ ಎಂದೆಲ್ಲಾ ನೋಡ್ತಾರೆ.

* ಕನ್ನಡದಲ್ಲಿ ದೊಡ್ಡ ಬಜೆಟ್‌ ಸಿನಿಮಾ ಮಾಡೋದು ತುಂಬಾ ಕಷ್ಟ ಅಂತಾರೆ? ಮಾಡಿದರೂ ರಿಟರ್ನ್ಸ್ ಬರಬೇಕಲ್ಲ?

ಫ್ರಾಂಕ್‌ ಆಗಿ ಹೇಳ್ತೀನಿ. ನಾನು ಸಿನಿಮಾ ಮಾಡಿದ ರೀತಿ, ಬಜೆಟ್‌, ವ್ಯಾಪಾರ, ವಿತರಣೆ ಮಾಡಿದ ಅನುಭವದಿಂದ ಹೇಳುವುದಾದರೆ ಇಲ್ಲಿ 20 ಕೋಟಿ ಅಲ್ಲ 30 ಕೋಟಿ ಬಜೆಟ್‌ ಸಿನಿಮಾ ಮಾಡಿದರೂ ಅದನ್ನು ಸ್ವೀಕರಿಸುವ ಕೆಪ್ಯಾಸಿಟಿ ಕರ್ನಾಟಕದಲ್ಲಿದೆ. ನಮ್ಮ ಜನ ಆಥರ ಸಿನಿಮಾ ಮಾಡಿದರೆ ಸ್ವಾಗತಿಸೋಕೆ, ನೋಡೋಕೆ ರೆಡ್ಡಿ ಇದ್ದಾರೆ. ಇದು ನನ್ನ ಅನಿಸಿಕೆ. ತಪ್ಪೋ ಸರಿಯೋ ಗೊತ್ತಿಲ್ಲ. ಸಿನಿಮಾ ಅನುಭವ ಅಷ್ಟಿದೆ. ಮೊದಲು ಕುರುಬನ ರಾಣಿ ಮಾಡಿದಾಗ ಈದು ದೊಡ್ಡ ಬಜೆಟ್‌ ಆಗಿತ್ತು. ಅಷ್ಟೊಂದ್‌ ಬಜೆಟಾ ಅಂತ ಕೇಳಿದ್ದರು ಕೆಲವರು. ನಂಗೆ ಧೈರ್ಯ ಇತ್ತು. ಅದರಲ್ಲಿ ದುಡ್ಡು ಬಂತು. ಆಮೇಲೆ ಯಾರೇ ನೀನು ಚೆಲುವೆ ಮಾಡಿದೆ. ಅದಕ್ಕೂ ಅಷ್ಟೊಂದು ಬಜೆಟ್‌ ಬೇಕಾ ಎಂಬ ಅಭಿಪ್ರಾಯ ಬಂತು. ಸ್ಕ್ರಿಪ್ಟ್ ಚೆನ್ನಾಗಿದ್ದಾಗ ಯಾಕೆ ಭಯ ಪಡಬೇಕು ಅಂತ ನಾನು. ಅದರಲ್ಲೂ ಗೆದ್ದೆ. ಆಮೇಲೆ ಪ್ರೀತ್ಸೋದ್‌ ತಪ್ಪಾ ಮಾಡಿದ್ದು. ಅದಂತೂ ದೊಡ್ಡ ಬಜೆಟ್‌. ಮೂರು ಮೂರೂವರೆ ಕೋಟಿ. ನನ್ನ ಮಾತು ಕೇಳಿ ಕೆಲವರು ಡಿಸ್ಟ್ರಿಬ್ಯೂಷನ್‌ ಮಾಡಲಿಕ್ಕೆ ಒಪ್ಪಿಕೊಂಡರು. ಆದರೆ ರಾತ್ರೋರಾತ್ರಿ ಕೈಎತ್ತಿಬಿಟ್ಟರು. ಆಮೇಲೆ ನಾನೇ ರಿಲೀಸ್‌ ಮಾಡಿದೆ. ಅವತ್ತಿಂದ ನಾನು ಡಿಪೆಂಡ್‌ ಆಗೋದು ಬಿಟ್ಟೆ. ನನ್ನ ಸಿನಿಮಾವನ್ನು ನಾನೇ ರಿಲೀಸ್‌ ಮಾಡ್ತೇನೆ. ಬಿಡುಗಡೆಯಾಗಿ ಒಂದು ವಾರ ಆದ ಮೇಲೆ ಪ್ರೊಡ್ನೂಸರ್‌ಗಳಿಗೆ ಇಷ್ಟ ಆದ್ರೆ ತೆಗೆದುಕೊಳ್ಳಲಿ ಎಂಬ ಕಾನ್ಸೆಪ್ಟ್ ನನ್ನದು.

* ಕನ್ನಡ ನೆಲದಿಂದ ಹೋಗಿ ಇತರ ಭಾಷೆಗಳಲ್ಲಿ ಚಿತ್ರ ನಿರ್ಮಾಣ ಮಾಡುವುದು ಅಷ್ಟು ಸುಲಭದ ಮಾತೇನಲ್ಲ?

ದೇವರ ದಯದಿಂದ ನಂಗೆ ಕನ್ನಡಿಗರ ಸಪೋರ್ಟ್‌ ಇದೆ. ಆರಂಭದಿಂದಲೂ ಮಾಲಾಶ್ರೀ, ಶಿವರಾಜ್‌ಕುಮಾರ್‌, ರವಿಚಂದ್ರನ್‌, ವಿಷ್ಣು ಸರ್‌, ಅಂಬರೀಶ್‌ ಸರ್‌, ಉಪೇಂದ್ರ, ದರ್ಶನ್‌ ಹೀಗೆ ಎಲ್ಲರೂ ಸಪೋರ್ಟ್‌ ಮಾಡಿದ್ದಾರೆ. ಸುದೀಪ್‌ ಜೊತೆ ಒಂದು ಡಿಫ‌ರೆಂಟಾಗಿ ಸಿನಿಮಾ ಮಾಡಬೇಕು ಅನ್ನೋ ಆಸೆ ಇದೆ. ಒಳ್ಳೆ ಸ್ಕ್ರಿಪ್ಟ್ ಸಿಗಬೇಕು. ಅದಕ್ಕಾಗಿ 5 ವರ್ಷ ಆದ್ರೂ ಕಾಯೋಣ ಅಂತ. ಇವರೆಲ್ಲರ ಸಪೋರ್ಟ್‌ನಿಂದ 35-36 ಸಿನಿಮಾ ಮಾಡೋಕಾಯ್ತು. ಈ ಹಿನ್ನೆಲೆ ನಂಗೆ ಆಚೆ ಸಿನಿಮಾ ಮಾಡೋಕೆ ಹೆಲ್ಪ್ ಆಯಿತು. ತೆಲುಗು, ಹಿಂದಿ ಚಿತ್ರ ಮಾಡ್ಲಿಕ್ಕೆ ಸುಲಭ ಆಯ್ತು. ಈಗಲೂ ಸುಮಾರು ಸಿನಿಮಾಗಳಿವೆ. ಕೆಲವು ಓಕೆ ಆಗಬೇಕು. ಇನ್ನು ಕೆಲವು ಫೈನಲೈಸ್‌ ಆಗಿವೆ. ಈಗ ಒಂದು ತೆಲುಗು ಚಿತ್ರ ಸ್ಕ್ರಿಪ್ಟ್ ಮಾಡ್ತಾ ಇದ್ದೇನೆ. ಸ್ಕ್ರಿಪ್ಟ್ ಪೂರ್ತಿಯಾಗದೆ ನಾನು ಹೀರೋ ಯಾರು ಅಂತ ಯೋಚೆ° ಮಾಡಲ್ಲ. ನಾಲ್ಕೈದು ಜನಕ್ಕೆ ಆ ಸ್ಕ್ರಿಪ್ಟ್ ಹೊಂದಿಕೊಳ್ಳುತ್ತದೆ.

* ಬಾಲಿವುಡ್‌ನ‌ಲ್ಲಿ ಗಟ್ಟಿಯಾಗಿ ನೆಲೆಯೂರಲು ಹೊರಟಿದ್ದೀರಿ?

ಸಲ್ಮಾನ್‌ಖಾನ್‌ ನಟನೆ ಕಬೀರ್‌ಖಾನ್‌ ನಿರ್ದೇಶನದ ಚಿತ್ರದ ನಂತರ ಈಗ ರೋಹಿತ್‌ ಶೆಟ್ಟಿ ಜೊತೆ ಮುಂದಿನ ಸಿನಿಮಾ ಮಾಡುತ್ತಿದ್ದೇನೆ. ನಾನು ತಮಿಳಿನ ಸೂದು ಕವ್ವಂ ಸಿನಿಮಾದ ಕನ್ನಡ ಹಕ್ಕು ತಗೋಳ್ಳೋಣ ಅಂತ ಹೋಗಿದ್ದೆ. ಆ ಸಬೆjಕ್ಟ್ ಹಿಂದಿಗೆ ಸೂಟ್‌ ಆಗತ್ತೆ ಅನ್ನಿಸಿ ಹಿಂದಿ ಹಕ್ಕನ್ನು ತೆಗೆದುಕೊಂಡು ಬಂದಿದ್ದೆ. ಆಮೇಲೆ ಕೆಲವು ಕಾರ್ಪೋರೇಟ್‌ ಕಂಪನಿಗಳಿಂದ ಆ ಸಿನಿಮಾ ಮಾಡೋಣ ಅಂತ ಆಫ‌ರ್‌ ಬಂತು. ನಾ ಒಪ್ಪಲಿಲ್ಲ. ಆಮೇಲೊಂದು ದಿನ ರೋಹಿತ್‌ ಶೆಟ್ಟಿ ಆಫೀಸಿಂದ ಫೋನ್‌ ಬಂತು. ನಾನು ಹೋಗಿ ಮಾತಾಡಿದೆ. ಅವರು ಮೊದಲು ರೈಟ್ಸ್‌ ಕೇಳಿದ್ರು. ಆದರೆ ನಾನು ಸರ್‌ ನಿಮ್ಮಂತಹ ನಿರ್ದೇಶಕರ ಜೊತೆ ಬಾಲಿವುಡ್ಡಲ್ಲಿ ಸಿನಿಮಾ ಮಾಡಬೇಕು ಅಂತ ಆಸೆ ಎಂದು ಹೇಳಿದೆ. ಅದಕ್ಕೆ ಅವರು ಕೋ-ಪ್ರೊಡಕ್ಷನ್‌ ಮಾಡೋಣ ಎಂದರು. ಒಪ್ಪಿಕೊಂಡೆ. ಸ್ಕ್ರಿಪ್ಟ್ ಕೆಲಸ ನಡೆಯುತ್ತಿದೆ.

* ಸ್ಯಾಂಡಲ್‌ವುಡ್‌ಗಿಂತ ಬಾಲಿವುಡ್‌ನ‌ಲ್ಲಿ ಸಿನಿಮಾ ಮಾಡುವ ಅನುಭವ ಭಿನ್ನ ಅಲ್ಲವೇ?

ಇಲ್ಲಿನ ರಿಸ್ಕಾ, ಟೆನÒನ್‌, ಸಮಸ್ಯೆ ಯಾವುದೂ ಅಲ್ಲಿಲ್ಲ. ಸ್ಕ್ರಿಪ್ಟ್ ತಗೊಂಡು ಸ್ಟ್ರಾರ್‌ ಹತ್ರ ಹೋಗಿ ಅವರು ಒಪ್ಪಿಕೊಂಡ್ರೆ ರಿಸ್ಕ್ ಫ್ಯಾಕ್ಟರ್‌ ಝೀರೋ. ಅವರ ಮುಖ ನೋಡಿದ ತಕ್ಷಣ ಎಲ್ಲವೂ ತನ್ನಿಂತಾನೇ ಆಗುತ್ತದೆ. ನಮ್ಮ ಡೈರೆಕ್ಟರ್‌ ಕಬೀರ್‌ ಖಾನ್‌ ಎಲ್ಲವನ್ನೂ ಪ್ಲಾನ್‌ ಮಾಡಿ, ಅಚ್ಚುಕಟ್ಟಾಗಿ ಮಾಡುವಂತಹ ಮನುಷ್ಯ. ನೀಟಾಗಿ ಸಿನಿಮಾ ಮಾಡ್ತಾರೆ. ಎಲ್ಲೂ ವೇಸ್ಟ್‌ ಆಗಲ್ಲ. ಲೈನ್‌ ಪ್ರೊಡ್ನೂಸರ್‌ ಅಂತ ಇರ್ತಾರೆ. ಅವರು ಎಲ್ಲಾ ಕೆಲ್ಸ ಮಾಡ್ತಾರೆ. ನಾವು ಅವರನ್ನು ಮಾನಿಟರ್‌ ಮಾಡ್ತಾ, ಕಂಟ್ರೋಲ್‌ ಮಾಡ್ತಾ ಹೋಗಬೇಕು. ಸಲ್ಮಾನ್‌ ಖಾನ್‌ ಬ್ಯಾನರ್‌ನಲ್ಲಿ ಮೊದಲ ಪ್ರೊಡಕ್ಷನ್‌ ಇದು. ಕೋ ಪ್ರೊಡಕ್ಷನ್‌. ಮೇನ್‌ ಅವರದೇ. ಸ್ಟಾರ್‌ಗಳು ಕಾಲ್‌ಶೀಟ್‌ ಆಚೆ ಕೊಡಲ್ಲ ಸಾಮಾನ್ಯವಾಗಿ. ನನ್ನದು ಮತ್ತು ಅವರದು ಜಾಯಿಂಟ್‌ ಪ್ರೊಡಕ್ಷನ್‌.

* ಕಾಲಿವುಡ್‌, ಟಾಲಿವುಡ್‌, ಬಾಲಿವುಡ್‌ ನೋಡಿದ ಮೇಲೆ ಸ್ಯಾಂಡಲ್‌ವುಡ್‌ನ‌ಲ್ಲಿ ಸಿನಿಮಾ ಮಾಡೋಕೆ ಮನಸ್ಸು ಬರತ್ತಾ?

ಒಳ್ಳೆ ಸ್ಕ್ರಿಪ್ಟ್ ಇದ್ರೆ ಮಾಡಬಹುದು. ಮುಂದಿನ ವರ್ಷ ಮಾಡಬೇಕು ಅಂತ ಅಂದುಕೊಂಡಿದ್ದೇನೆ.

* ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕರೇ ಧರಣಿ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆಯಲ್ಲ? ನಿಜಕ್ಕೂ ನಿರ್ಮಾಪಕರ ಸ್ಥಿತಿ ಅಷ್ಟೊಂದು ಕೆಳಮಟ್ಟಕ್ಕೆ ತಲುಪಿದೆಯಾ?

ನೋಡಿ ಪ್ರಾಣಿಗಳಲ್ಲಿ ತುಂಬಾ ಥರದ ಪ್ರಾಣಿಗಳಿವೆ. ಕೆಲವು ಪ್ರಾಣಿಗಳನ್ನು ಕಡಿದು ತಿನ್ನೋಕೆ ಅಂತಲೇ ದೇವರು ಹುಟ್ಟಿಸಿರ್ತಾನೆ. ಕೋಳಿ, ಆಡು ಇಂಥವನ್ನೆಲ್ಲಾ. ನಾಯಿನ ನಾವು ಕಡಿದು ತಿನ್ನಲ್ಲ. ನಾನು ಗಮನಿಸಿದಂತೆ ಸಿನಿಮಾ ವೃತ್ತಿ ಗೊತ್ತಿಲ್ಲದೇ ಇರೋ ನಿರ್ಮಾಪಕರು, ನಾಲೆಜ್‌ ಇರದೇ ಇರೋ ನಿರ್ಮಾಪಕರು, ಬೇರೆ ಬೇರೆ ವ್ಯಾಪಾರ ಮಾಡ್ತಿಧ್ದೋರು ಇಲ್ಲಿಗೆ ಬಂದಿದ್ದಾರೆ. ಅವರನ್ನು ಬರಬಾರದು ಅಂತ ಹೇಳ್ಳೋದು ತಪ್ಪು. ಆದರೆ ತಿಳ್ಕೊಂಡು ಸಿನಿಮಾ ಮಾಡಬೇಕು. ನಾವು ಯಾವುದಾದರೂ ವ್ಯಾಪಾರ ಮಾಡಬೇಕು ಅಂತಂದುಕೊಂಡಾಗ ತಿಳ್ಕೊಂಡು ಮಾಡುತ್ತೇವೆ. ಆದರೆ ಇಲ್ಲಿ ಕೋಟ್ಯಂತರ ರೂಪಾಯಿ ಕುರುಡಾಗಿ ಹಾಕಿ ಸಿನಿಮಾ ಮಾಡುತ್ತಾರೆ.

* ಹಾಗಾದರೆ ಸಮಸ್ಯೆ ಎಲ್ಲಿದೆ? ಎಲ್ಲಿಂದ ಆರಂಭವಾಯ್ತು?

ಹಿಂದೆ ಎಲ್ಲವೂ ಸಿಸ್ಟಮ್ಯಾಟಿಕ್‌ ಆಗಿ ನಡೆಯುತ್ತಿತ್ತು. ಒಬ್ಬ ಹೀರೋ ಒಂದು ಕೋಟಿ ತೆಗೆದುಕೊಳ್ಳುವವ 70 ಲಕ್ಷ ತಗೋತಿದ್ದರು. ಯಾಕೆ ಅಂದ್ರೆ ದುಡ್ಡು ಹಾಕಿ ಸಿನಿಮಾ ಮಾಡಿದ ನಿರ್ಮಾಪಕನಿಗೆ ನಷ್ಟ ಆಗದೇ ಇರಲಿ ಅಂತ. ಎಲ್ಲಾ ಹೀರೋಗಳಿಗೂ ಈ ಭಾವನೆ ಇತ್ತು. ಎಲ್ಲರೂ ನಮಗೆ ಸ್ಪಂದಿಸ್ತಾ ಇದ್ರು. ಆದ್ರೆ ಆಮೇಲೆ ಬಂದ ಹೊಸಬರು ದೊಡ್ಡ ಸಾರ್‌ ಸಿನಿಮಾ ಮಾಡಬೇಕು ಅಂತ ಪ್ರಯತ್ನ ಪಡ್ತಾರೆ. ಅವರ ಮಾರ್ಕೆಟ್‌ಗಿಂತ ಜಾಸ್ತಿ ದುಡ್ಡು ಕೊಡೋಕೆ ಹೋಗ್ತಾರೆ. ಒಬ್ಬ ಸ್ಟಾರ್‌ ತಾನು ಬೇರೆಡೆ ಕಮಿಟ್‌ ಆಗಿದೀನಿ ಅಂದರೂ ಬಿಡಲ್ಲ. ಸಂಭಾವನೆ ಜಾಸ್ತಿ ಮಾಡ್ತಾನೇ ಹೋಗ್ತಾರೆ.

* ನೀವು ಹೇಳುವುದನ್ನು ನೋಡಿದರೆ ಕೆಲವು ನಿರ್ಮಾಪಕರೇ ಚಿತ್ರರಂಗದ ಇವತ್ತಿನ ಸಮಸ್ಯೆಗೆ ಕಾರಣ ಅಂದಂಗಾಯ್ತು?

ನಾವೇ ನಿರ್ಮಾಪಕರು ಸ್ಟಾರ್‌ಗಳನ್ನು ಕೆಡಿಸಿದ್ವಿ. ನಂಗೆ ಅಮ್ಮ ಪಾರ್ವತಮ್ಮ ರಾಜ್‌ಕುಮಾರ್‌ ಹೇಳ್ತಿದ್ರು. ಅಣ್ಣಾವ್ರು 10 ಸಾವಿರ ರೂ.ತಗೋಬೇಕಾದಲ್ಲಿ ಆರು ಅಥವಾ ಏಳು ಸಾವಿರ ರೂ. ತಗೋತಿದ್ರು. ಒಂದು ಲಕ್ಷ ರೂ. ಇದ್ದಾಗ 60 ಸಾವಿರ ಅಥವಾ 70 ಸಾವಿರ ರೂ. ತಗೋತಿದ್ರು. ಇನ್ನೊಬ್ಬ ಜಾಸ್ತಿ ಕೊಡ್ತೀನಿ ಅಂದ್ರೆ ಸಾಕಪ್ಪಾ, ಇಷ್ಟೇ ಸಾಕು ಅನ್ನುತ್ತಿದ್ದರಂತೆ. ಸ್ಟಾರ್‌ಗಳು ಹೀಗಿದ್ದರೆ ನಿರ್ಮಾಪಕರಿಗೆ ರಿಲ್ಯಾಕ್ಸ್‌ ಆಗಿ ಒಳ್ಳೆ ಸಿನಿಮಾ ಮಾಡೋಕೆ ಸಾಧ್ಯ ಆಗತ್ತೆ. ಕಲಾವಿದರಿಗೆ ವ್ಯಾಪಾರಿ ಬುದ್ಧಿ ಬಂದರೆ, ನಿರ್ಮಾಪಕನೂ ವ್ಯಾಪಾರಿ ಬುದ್ಧಿ ತೋರಿಸ್ತಾನೆ. ಅವರಂತೂ ವ್ಯಾಪಾರಕ್ಕೆ ಬಂದೋರು ಅಲ್ವೇ. ಹೀಗಾದಾಗ ಕೆಟ್ಟ ಪ್ರೊಡಕುr ರೆಡಿಯಾಗುತ್ತದೆ. ಕೆಟ್ಟ ಪ್ರೊಡಕುr ಮಾರ್ಕೆಟ್‌ಗೆ ಬಂದಾಗ ಜನ ಅಸಮಾಧಾನ ತೋರಿಸುತ್ತಾರೆ. ನಷ್ಟ ಆಗತ್ತೆ. ನಿರ್ಮಾಪಕ ದುಃಖೀಸ್ತಾನೆ. ಇದೇ ಥರ ಎಲ್ಲರೂ ಮಾಡಿದರೆ ಎಲ್ಲಾ ಚಿತ್ರಗಳೂ ಸೋಲುತ್ತದೆ.

* ಇತ್ತೀಚಿನ ಕೆಲವು ವರ್ಷಗಳಲ್ಲಿ ಗಾಂಧಿನಗರದಲ್ಲಿ ಸಾಕಷ್ಟು ಹೊಸ ನೀರು ಬಂದಿದೆ? ಅನೇಕ ಹೊಸ ನಿರ್ಮಾಪಕರು ಹುಟ್ಟಿಕೊಂಡಿದ್ದಾರೆ?

ಹೊಸದಾಗಿ ಬಂದವರು ಎಲ್ಲಾ ಹಾಳು ಮಾಡಿದ್ರು. ದಿನಾ ಪೇಪರಲ್ಲಿ ಫೋಟೋ ಬರಬೇಕು, ಟೀವೀಲಿ ಬರಬೇಕು, ಹೀರೋ ಜೊತೆ ಫೋಟೋ ತೆಗೆಸಿಕೊಳ್ಳಬೇಕು ಎಂಬ ವ್ಯಾಮೋಹದಿಂದ ಬಂದವರು ಮೊದಲು ಸ್ಟಾರ್‌ಗಳನ್ನು, ನಂತರ ಟೆಕ್ನಿಷಿಯನ್‌ಗಳನ್ನು ಹಾಳು ಮಾಡ್ತಾರೆ. ಮಿಡ್ಲ್ಮ್ಯಾನ್‌ಗಳು ತಪ್ಪು ಲೆಕ್ಕ ಕೊಟ್ಟು ಅವರನ್ನು ದಾರಿ ತಪ್ಪಿಸಿದ್ರು. ಅವರಾದ್ರೂ ಲಾಭ ಮಾಡಿಕೊಂಡ್ರಾ? ಇಲ್ಲ. ಸೋತು ಆಚೆ ಬಂದ್ರು. ಆಮೇಲೆ ಚಿತ್ರರಂಗದಲ್ಲಿ ಯಾರೂ ಸರಿ ಇಲ್ಲ ಅಂತ ಬೈಕೊಂಡ್ರು. ತಮ್ಮ ತಪ್ಪು ಮುಚ್ಚಿಟ್ಟು ಚಿತ್ರರಂಗವನ್ನು ಬೈದ್ರು.

* ನೀವೆಲ್ಲ ಹಿರಿಯ ನಿರ್ಮಾಪಕರು ಮುಂದೆ ನಿಂತು ಈ ಬಿಕ್ಕಟ್ಟು ಸರಿಪಡಿಸಬಹುದಿತ್ತಲ್ಲ?

ನಾನು ಆಗಲೇ ಹೇಳಿದ್ನಲ್ಲ, ದೇವರು ಕೆಲವು ಪ್ರಾಣಿಗಳನ್ನು ಕಡಿಯೋಕೆ ಅಂತಲೇ ಸೃಷ್ಟಿ ಮಾಡಿರ್ತಾನೆ. ಇವರೆಲ್ಲಾ ಇಂಡಸ್ಟ್ರಿಗೆ ಬಲಿಯಾಗೋಕೆ ಬಂದರು. ಕೆಲವು ಹಿರಿಯರು ಇಂಥವರನ್ನೆಲ್ಲಾ ಮಿಸ್‌ ಯೂಸ್‌ ಮಾಡ್ಕೊàತಾರೆ. ಈಗ ಸುಂಟರಗಾಳಿ ಎದ್ದಿದೆ. ಅದರೆದುರಿಗೆ ನಿಲ್ಲೋ ಶಕ್ತಿ ನಮಗೆ ದೇವರು ಕೊಟ್ಟಿಲ್ಲ. ಸುಂಟರಗಾಳಿ ಪಾಸಾಗ್ಲಿ. ಸ್ವಲ್ಪ ಕ್ಲೀನ್‌ ಆಗ್ಲಿ. ಕ್ಲೀನ್‌ ಆಗೇ ಆಗತ್ತೆ. ಆಗ ಸಿನಿಮಾ ಮಾಡ್ತೀನಿ.

* ನಿಮ್ಮ ಪ್ರಕಾರ ನಿರ್ಮಾಪಕರು ಯಾವ ರೀತಿ ಸಿನಿಮಾ ಮಾಡಬೇಕು? ಭಿನ್ನವಾಗಿ ಸಿನಿಮಾ ಮಾಡುವ ಪ್ರಯತ್ನ ಕಡಮೆಯಾದಂತಿದೆ?

ಮುಂಚಿನಿಂದಲೂ ನಾನು ಕತೆ ಕೇಳ್ತಾ ಇದ್ದೆ. ಅದರಲ್ಲಿ ಯಾವುದಾದರೂ ಒಂದು ಇಂಟರೆಸ್ಟಿಂಗ್‌ ಪಾಯಿಂಟ್‌ ಸಿಕ್ಕರೆ ಅದನ್ನು ಬೆಳೆಸುತ್ತಿದ್ದೆ. ಹೀಗೆ ಒಂದು ಸ್ಕ್ರಿಪ್ಟ್ ಆಗಲಿಕ್ಕೆ ಮೂರು ತಿಂಗಳು, ಒಂದು ವರ್ಷ, ಮೂರು ವರ್ಷ ಎಲ್ಲಾ ಆಗತ್ತೆ. ಒಂದು ಸ್ಕ್ರಿಪ್ಟ್ ಅಂತೂ ಎಂಟು ವರ್ಷದಿಂದ ಹಾಗೇ ಇದೆ. ಸ್ಕ್ರಿಪ್ಟ್ ಪೂರ್ತಿ ಒಪ್ಪಿಗೆಯಾಗುವವರೆಗೆ ಸಿನಿಮಾ ಮಾಡಬಾರದು ಅನ್ನೋದು ನನ್ನ ಉದ್ದೇಶ. ವರ್ಷಕ್ಕೆ ಎರಡು ಮೂರು ನಾಕು ಸಿನಿಮಾ ಮಾಡಿದ್ದೂ ಇತ್ತು. ಆದರೆ ಇತ್ತೀಚೆಗೆ ಆಚೆ ಕಡೆ ಬರೋ ಸಿನಿಮಾಗಳನ್ನು ನೋಡಿದಾಗ ನಾವಿನ್ನೂ ಅದೇ ಥರ ಸಿನಿಮಾ ಮಾಡ್ಕೊಂಡು ನಮ್ಮ ಪ್ರೇಕ್ಷಕರನ್ನು ಮೋಸ ಮಾಡಬೇಕಾ ಅನ್ಸತ್ತೆ. ಅವರನ್ನು ಕನ್ವಿನ್ಸ್‌ ಮಾಡ್ಕೊಂಡು ಮತ್ತ ಅದೇ ಥರ ಸಿನಿಮಾ ಯಾಕೆ ಮಾಡಬೇಕು ಅನ್ಸತ್ತೆ. ಕೆಲವರು ಸಿಕ್ಕಾಗ ಕೇಳ್ತಾರೆ ನೀವೂ ಯಾಕೆ ಅದೇ ಥರ ಸಿನಿಮಾ ಮಾಡ್ತೀರಿ ಅಂತ ಕೇಳ್ತಾರೆ. ನೀವಾದ್ರೂ ಒಂದು ಡಿಫ‌ರೆಂಟ್‌ ಸಿನಿಮಾ ಮಾಡಬಾರದಾ ಅನ್ನುತ್ತಾರೆ. ಅವರೆಲ್ಲಾ ನಿಜವಾಗಲೂ ಸಿನಿಮಾವನ್ನು ಪ್ರೀತಿಸುವವರು. ಅವರಿಗೆ ಬೇಜಾರಾಗೋ ಥರ ಮಾಡಬಾರದು.

ಕನ್ನಡದಲ್ಲಿ ಮಲ್ಟಿಸ್ಟಾರರ್‌ ಸಿನಿಮಾ ಕಡಮೆಯಾಗಿದೆ? ಯಾಕೆ ಹೀಗೆ? ನೀವು ಹಿಂದೆ ಪ್ರಯತ್ನ ಮಾಡಿ ಗೆದ್ದಿದ್ದೀರಿ?

ಈಗ ಆಗಲ್ಲ. ಚಾನ್ಸೇ ಇಲ್ಲ. ಒಂದು ಸೀಕ್ರೆಟ್‌ ಹೇಳ್ತೀನಿ. ಸೀಕ್ರೆಟ್‌ ಅಂದ್ರೆ ನನ್ನ ಅನುಭವ. ಮಲ್ಟಿಸ್ಟಾರರ್‌ ಸಿನಿಮಾ ಯಾವಾಗ ಆಗತ್ತೆ ಅಂದ್ರೆ ನಾವು ಯಾರನ್ನು ಅಂದುಕೊಂಡಿತೇìವೋ ಅವರ ಮಾರ್ಕೆಟ್‌ ಕಡಿಮೆ ಆಗಿರಬೇಕು. ಟಾಪ್‌ನಲ್ಲಿದ್ದಾಗ ಯಾರೂ ಮಲ್ಟಿಸ್ಟಾರರ್‌ ಸಿನಿಮಾ ಮಾಡೋಕೆ ಒಪ್ಪಲ್ಲ. ಇನ್ನೊಂದ್‌ ಕೈ ಬೇಕು ಅಂತ ಇಬ್ಬರಿಗೂ ಅನ್ನಿಸ್ಬೇಕು. ಆಗಲೇ ಅವರು ಕೈ ಜೋಡಿಸೋದು. ಇಲ್ಲಾಂದ್ರೆ ಜೋಡಿಸಲ್ಲ. ಈಗೇನೋ ಸ್ವಾಭಿಮಾನಾನೋ ಏನೋ ನಂಗೆ ಗೊತ್ತಿಲ್ಲ.
ಸಂದರ್ಶನ : ಜೋಗಿ
-ಉದಯವಾಣಿ

Write A Comment