ಕರ್ನಾಟಕ

ಅಕ್ರಮವಾಗಿ ಕಲ್ಲು ನಿಕ್ಷೇಪ ತೆಗೆಯುತ್ತಿದ್ದ 18 ಉದ್ಯಮಗಳ ಮೇಲೆ ಏಕ ಕಾಲದಲ್ಲಿ ದಾಳಿ; 800 ಕೋಟಿ ರೂ. ಮೌಲ್ಯದ ಭೂಮಿ ಯಂತ್ರೋಪಕರಣ, ವಾಹನ ವಶ

Pinterest LinkedIn Tumblr

maining

ಬೆಂಗಳೂರು, ಜೂ.17: ಆನೇಕಲ್ ತಾಲ್ಲೂಕಿನ 9 ಗ್ರಾಮಗಳಲ್ಲಿ ಅಕ್ರಮವಾಗಿ ಕಲ್ಲು ನಿಕ್ಷೇಪ ತೆಗೆಯುತ್ತಿದ್ದ 18 ಉದ್ಯಮಗಳ ಮೇಲೆ ಏಕ ಕಾಲದಲ್ಲಿ ದಾಳಿ ನಡೆಸಿರುವ ಜಿಲ್ಲಾಡಳಿತದ ಅಧಿಕಾರಿಗಳು ಅಂದಾಜು 800 ಕೋಟಿ ರೂ. ಮೌಲ್ಯದ ಭೂಮಿ ಯಂತ್ರೋಪಕರಣಗಳು, ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಇಂದು ಬೆಳಿಗ್ಗೆ 9 ತಂಡಗಳಲ್ಲಿ ಕಮ್ಮನಾಯಕನಹಳ್ಳಿ, ಕಮ್ಮನಾಯಕನ ಅಗ್ರಹಾರ, ಶಿವನಹಳ್ಳಿ, ಮಹಂತಲಿಂಗಪುರ, ಹುಲ್ಲಹಳ್ಳಿ, ಎಸ್. ಬಂಗೀಪುರ, ಗಿಡ್ಡೇನಹಳ್ಳಿ ಮತ್ತಿತರ ಗ್ರಾಮಗಳ ಸಮೀಪ ಅಕ್ರಮವಾಗಿ ಜಲ್ಲಿ ಕ್ರಷರ್ ಮಾಡುತ್ತಿದ್ದ ಉದ್ಯಮಗಳ ಮೇಲೆ ದಾಳಿ ನಡೆಸಲಾಯಿತು.

ಇದೇ ವೇಳೆ ಅನಧಿಕೃತವಾಗಿ ನಿರ್ಮಿಸಿದ್ದ ಕಟ್ಟಡಗಳು ಹಾಗೂ ಶೆಡ್‌ಗಳನ್ನು ಜೆಸಿಬಿ ಸಹಾಯದಿಂದ ಕೆಡವಿ ಹಾಕಲಾಯಿತು. ಜಿಲ್ಲಾಧಿಕಾರಿ ವಿ. ಶಂಕರ್ ಅವರ ಮಾರ್ಗದರ್ಶನದಲ್ಲಿ ಅಪರ ಜಿಲ್ಲಾಧಿಕಾರಿ ವೆಂಕಟಾಚಲಪತಿ ನೇತೃತ್ವದಲ್ಲಿ ಬೆಂಗಳೂರು ದಕ್ಷಿಣ ವಲಯ ಉಪವಿಭಾಗಾಧಿಕಾರಿ ಎಲ್.ಸಿ. ನಾಗರಾಜ್, ಉಪವಿಭಾಗಾಧಿಕಾರಿ (ಜಾರಿದಳ) ನಾಗರಾಜರೆಡ್ಡಿ ಅವರು ಅಧಿಕಾರಿಗಳ ತಂಡದೊಂದಿಗೆ ಕಮ್ಮನಾಯಕಹಳ್ಳಿ ನಡೆಯುತ್ತಿದ್ದ ಕಲ್ಲು ಕ್ರಷರ್ ಉದ್ಯಮಕ್ಕೆ ದಿಢೀರ್ ಭೇಟಿ ನೀಡಿ ಹಲವಾರು ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡರು.

ಶ್ರೀಚಕ್ರ ಎಂಜಿನಿಯರಿಂಗ್ ಎಂಟರ್ ಪ್ರೈಸಸ್ ಸಂಸ್ಥೆಯವರು ತಮಗೆ ಸೇರಿದ ನಿವೇಶನದಲ್ಲಿ ಉದ್ಯಮ ನಡೆಸುತ್ತಿರುವುದಾಗಿ ಸಮರ್ಥಿಸಿಕೊಂಡರು. ಸಂಬಂಧಪಟ್ಟ ಎಲ್ಲ ದಾಖಲೆಗಳನ್ನು ತೆಗೆದುಕೊಂಡು ಬರುವಂತೆ ನಾಗರಾಜ್‌ರವರು ಸೂಚನೆ ನೀಡಿದರು.

ಸರ್ಕಾರಿ ಜಾಗದಲ್ಲಿ ಜಲ್ಲಿ ಕ್ರಷರ್ ನಡೆಸುತ್ತಿರುವುದು ಮೇಲ್ನೊಟ್ಟಕ್ಕೆ ಸ್ಪಷ್ಟವಾಗಿದೆ. ನಾಲ್ಕು ಎಕರೆ ಜಾಗದಲ್ಲಿ ಉದ್ಯಮ ನಡೆಸುವಂತೆ ಅನುಮತಿ ನೀಡಿದ್ದರೂ ಸುಮಾರು 20 ಎಕರೆಗೂ ಹೆಚ್ಚು ಸ್ಥಳದಲ್ಲಿ ಉದ್ಯಮ ನಡೆಸಲಾಗುತ್ತಿದೆ. ತಕ್ಷಣವೇ ಜಲ್ಲಿ ಕ್ರಷರ್ ಕಾರ್ಯವನ್ನು ಸ್ಥಗಿತಗೊಳಿಸಬೇಕು ಎಂದು ಆದೇಶಿಸಿದರು.

ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರಿಗೆ ನೀಡಿದ ದರಖಾಸ್ತು ಸರಕಾರಿ ಭೂಮಿಯಲ್ಲೂ ಉದ್ಯಮ ನಡೆಸಲಾಗುತ್ತಿವೆ. ಕೂಡಲೇ ಉದ್ಯಮಕ್ಕೆ ಬಳಸಲಾಗುತ್ತಿರುವ ಟಿಪ್ಪರ್‌ಗಳು, ಜೆಸಿಬಿ, ಇಟಾಚಿ ವಾಹನಗಳನ್ನು ವಶಪಡಿಸಿಕೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಎಲ್.ಸಿ. ನಾಗರಾಜ್‌ರವರು ಅಕ್ರಮವಾಗಿ ಜಲ್ಲಿ ಕ್ರಷರ್ ನಡೆಸಲಾಗುತ್ತಿದೆ ಎಂಬ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಇಂದು ಏಕಕಾಲದಲ್ಲಿ ದಾಳಿ ನಡೆಸಲಾಗಿದೆ.

ಸಂಬಂಧಪಟ್ಟ ಎಲ್ಲ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಜಲ್ಲಿ ಉದ್ಯಮವನ್ನು ಆರಂಭಿಸದಂತೆ ಎಚ್ಚರಿಕೆ ನೀಡಲಾಗಿದೆ. ಈವರೆಗೆ ತೆಗೆಯಲಾಗಿರುವ ಎಲ್ಲ ಜಲ್ಲಿಗಳನ್ನು ವಶಕ್ಕೆ ಪಡೆದು ಅಳತೆ ಮಾಡಲಾಗುವುದು ಎಂದವರು ತಿಳಿಸಿದರು.

ಕೆಲವೆಡೆ ಸರ್ಕಾರ ಎರಡು, ಮೂರು ಎಕರೆಯಷ್ಟು ಜಾಗವನ್ನು ಜಲ್ಲಿ ಕ್ರಷರ್‌ಗೆ ಅನುಮತಿ ನೀಡಲಾಗಿದ್ದರೂ ಹೆಚ್ಚುವರಿ ಜಾಗವನ್ನು ಬಳಸಿಕೊಂಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಉಪ ತಹಶೀಲ್ದಾರ್ ರಘುಮೂರ್ತಿ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಕೆ.ಪಿ. ಚಿದಂಬರಂ ಮತ್ತಿತರರು ಉಪಸ್ಥಿತರಿದ್ದರು.

Write A Comment