ಕರ್ನಾಟಕ

ಅಮೆರಿಕಾಕ್ಕೆ ರಾಜ್ಯ ಮಹಿಳಾ ಉದ್ಯಮಿಗಳ ನಿಯೋಗ; ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಮಾತುಕತೆ

Pinterest LinkedIn Tumblr

cm-womens

ಬೆಂಗಳೂರು, ಜೂ.17: ಕರ್ನಾಟಕದ ಮಹಿಳಾ ಉದ್ಯಮಿಗಳಿಂದ ಬಹುರಾಷ್ಟ್ರೀಯ ಕಂಪೆನಿಗಳು ಶೇ.10ರಷ್ಟು ಉತ್ಪನ್ನಗಳನ್ನು ಖರೀದಿಸುವ ಮಹತ್ವದ ಒಪ್ಪಂದವಾಗಿದ್ದು, ಈ ಕುರಿತು ವಿಸ್ತೃತ ಚರ್ಚೆಗಾಗಿ ರಾಜ್ಯ ಮಹಿಳಾ ಉದ್ಯಮಿಗಳ ನಿಯೋಗ ಅಮೆರಿಕಾಗೆ ತೆರಳುತ್ತಿದೆ.

ವಿ ಕನೆಕ್ಟ್ ಎಂಬ ಸಂಘಟನೆ ಅಮೆರಿಕಾದ ಟೆಕ್ಸಾಸ್ ರಾಜ್ಯದ ಆಸ್ಟಿನ್ ನಗರದಲ್ಲಿ ಇದೇ 21ರಿಂದ 25ರವರೆಗೆ ಅಂತಾರಾಷ್ಟ್ರೀಯ ಮಹಿಳಾ ಉದ್ಯಮಿಗಳ ಸಮಾವೇಶ ನಡೆಸುತ್ತಿದ್ದು, ಎರಡು ಸಾವಿರ ಮಂದಿ ಭಾಗವಹಿಸುತ್ತಿದ್ದಾರೆ. ಇದರಲ್ಲಿ ಭಾಗವಹಿಸಲು ರಾಜ್ಯದಿಂದ ಮಹಿಳಾ ಉದ್ಯಮಿಗಳ ನಿಯೋಗ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ರತ್ನಪ್ರಭಾ ನೇತೃತ್ವದಲ್ಲಿ ತೆರಳುತ್ತಿದೆ.

ವಿ ಕನೆಕ್ಟ್ ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸುವ ಪ್ರಮುಖ ಸಂಸ್ಥೆಯಾಗಿದ್ದು, ಕರ್ನಾಟಕ ಮಹಿಳಾ ಉದ್ಯಮಿಗಳ ಉತ್ಪನ್ನಗಳ ಬಗ್ಗೆ ವಿಶೇಷ ಗೌರವ ಹೊಂದಿದೆ. ಹೀಗಾಗಿ ಬಹುರಾಷ್ಟ್ರೀಯ ಕಂಪೆನಿಗಳು ಖರೀದಿಸುವ ಉತ್ಪನ್ನ ಹಾಗೂ ಸರಕುಗಳ ಪೈಕಿ ಕರ್ನಾಟಕದ ಉದ್ಯಮಿಗಳಿಂದಲೇ ಶೇ.10ರಷ್ಟು ಖರೀದಿಸಲು ಒಪ್ಪಿಗೆ ಸಿಕ್ಕಿದೆ.

ಈ ಕುರಿತು ಒಪ್ಪಂದವಾಗಿದ್ದು, ಮಹಿಳಾ ಸಮಾವೇಶದಲ್ಲಿ ಭಾಗವಹಿಸುವ ಉದ್ಯಮಿಗಳು ವಿಸ್ತೃತ ಚರ್ಚೆ ನಡೆಸಲಿದ್ದಾರೆ. ಈ ಒಪ್ಪಂದ ಜಾರಿಯಾದರೆ ಕರ್ನಾಟಕದ ಮಹಿಳಾ ಉದ್ಯಮಿಗಳಿಗೆ 100ಮಿಲಿಯನ್ ಡಾಲರ್‌ನಷ್ಟು ವಹಿವಾಟು ಲಭ್ಯವಾಗಲಿದೆ. ಅಮೆರಿಕಾಕ್ಕೆ ತೆರಳುವ ಮಹಿಳಾ ಉದ್ಯಮಿಗಳು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಮಹಿಳಾ ಉದ್ಯಮಿಗಳ ವಿದೇಶಿ ಪ್ರವಾಸಕ್ಕೆ ಸಿಎಂ ಶುಭ ಹಾರೈಸಿದರು.

ಈವರೆಗೂ ಮಹಿಳಾ ಉದ್ಯಮಿಗಳು ಐದುಬಾರಿ ಸಮಾವೇಶದಲ್ಲಿ ಭಾಗವಹಿಸಿದ್ದು, ಇದು 6ನೇ ಸಮ್ಮೇಳನವಾಗಿದೆ. ಎಫ್‌ಕೆಸಿಸಿಐನ ಉಪಾಧ್ಯಕ್ಷ ಎಂ.ಸಿ.ದಿನೇಶ್, ಮಹಿಳಾ ಉದ್ಯಮ ಘಟಕದ ರೇವತಿ ವೆಂಕಟರಾಮನ್ ಅವರುಗಳನ್ನೊಳಗೊಂಡ ನಿಯೋಗ ನಾಳೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣ ಬೆಳೆಸಲಿದೆ ಎಂದು ಎಫ್‌ಕೆಸಿಸಿ ಅಧ್ಯಕ್ಷ ಸಂಪತ್‌ರಾಮನ್ ತಿಳಿಸಿದರು.

Write A Comment