ಕರ್ನಾಟಕ

ಮೈಸೂರು ಬರುತ್ತಿದೆ ಕೇಬಲ್‌ಕಾರ್; ಇನ್ನು ಮುಂದೆ ಚಾಮುಂಡಿ ಬೆಟ್ಟಕ್ಕೆ ಕೇಬಲ್‌ಕಾರ್ ಸೌಲಭ್ಯ

Pinterest LinkedIn Tumblr

Cable-car

ಮೈಸೂರು, ಜೂ.16: ಇಲ್ಲಿನ ಚಾಮುಂಡಿ ಬೆಟ್ಟಕ್ಕೆ ಕೇಬಲ್ ಕಾರ್ ಸೌಲಭ್ಯ ಕಲ್ಪಿಸಲು ಶೀಘ್ರದಲ್ಲೇ ಯೋಜನೆ ಜಾರಿಯಗಲಿದೆ ಎಂದು ಪ್ರವಾಸೋದ್ಯಮ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಚಾಮುಂಡಿ ಬೆಟ್ಟಕ್ಕೆ ಕೇಬಲ್ ಕಾರ್ ಅಳವಡಿಸುವ ಬಗ್ಗೆ ಮುಖ್ಯಮಂತ್ರಿಗಳು ಈಗಾಗಲೇ ಬಜೆಟ್‌ನಲ್ಲಿ ಪ್ರಸ್ಥಾಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ಶೀಘ್ರ ಅನುಷ್ಠಾನಗೊಳಿಸಲಾಗುವುದೆಂದು ತಿಳಿಸಿದರು.

ಕೇಬಲ್ ಕಾರ್‌ಗೆ ಪರಿಸರವಾದಿಗಳು ವಿರೋಧ ವ್ಯಕ್ತಪಡಿಸುತ್ತಿರುವ ಬಗ್ಗೆ ಪ್ರತಿಕ್ರಿಯಸಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ಯೋಜನೆ ಪ್ರಕಟವಾದಾಗ ಪರ-ವಿರೋಧ ಇದ್ದೇ ಇರುತ್ತದೆ. ವಿರೋಧಿಸುವವರೊಂದಿಗೆ ನಾನು ಮಾತನಾಡುತ್ತೇನೆ ಎಂದರು. ಹಸಿರು ವಲಯವನ್ನು ರಕ್ಷಿಸಿ ಯೋಜನೆಯನ್ನು ಕಾರ್ಯಗತಗೊಳಿಸುವುದು ಖಚಿತ ಎಂದರು.

ಅದೇ ರೀತಿ ಮೈಸೂರು ಅರಮನೆಯ ದೀಪಾಲಂಕಾರವನ್ನು ಮತ್ತಷ್ಟು ಆಕರ್ಷಣೀಯವಾಗಿಸಲು ಯೋಜನೆಯೊಂದನ್ನು ರೂಪಿಸಲಾಗಿದೆ ಎಂದು ಅವರು ತಿಳಿಸಿದರು. ಮೈಸೂರು ಅರಮನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಹಾಗಾಗಿ ಅರಮನೆಯ ಸೌಂದರ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದೆಂದು ಅವರು ಹೇಳಿದರು.

ಪ್ರವಾಸಿಗರಿಗೆ ಪ್ರವಾಸಿ ತಾಣಗಳ ಇತಿಹಾಸ, ಸಂಸ್ಕೃತಿ, ಕಲೆ ಇನ್ನಷ್ಟು ತಿಳಿಸುವ ನಿಟ್ಟಿನಲ್ಲಿ ಪ್ರವಾಸಿ ಗೈಡ್‌ಗಳಿಗೆ ಮಂಗಳೂರು-ಬೆಂಗಳೂರು-ಮೈಸೂರು ಸೇರಿದಂತೆ 5 ವಿವಿಗಳಲ್ಲಿ ತರಬೇತಿ ನೀಡಲು ಉದ್ದೇಶಿಸಲಾಗಿದೆ ಎಂದು ಸಚಿವರು ತಿಳಿಸಿದರು. ಪ್ರವಾಸೋದ್ಯಮ ಅಭಿವೃದ್ಧಿಗೆ ದೇಶದಲ್ಲೇ ಮೊದಲ ಬಾರಿಗೆ ಖಾಸಗಿಯವರಿಗೆ ಪ್ರವಾಸಿ ತಾಣಗಳ ನಿರ್ವಹಣೆ ಜವಾಬ್ದಾರಿಯನ್ನು ನೀಡಲಾಗುತ್ತಿದೆ ಎಂದರು. ಮೂಲಭೂತ ಸೌಕರ್ಯವನ್ನು ನಿರ್ವಹಿಸುವ ಜವಾಬ್ದಾರಿ ಅವರಿಗೆ ವಹಿಸಲಾಗುತ್ತದೆ ಎಂದರು. ಅತಿ ಶೀಘ್ರದಲ್ಲಿ ಮೈಸೂರು-ಬೆಂಗಳೂರು ನಡುವೆ ವಿಮಾನ ಹಾರಾಟ ಆರಂಭವಾಗಲಿದೆ ಎಂದು ಅವರು ತಿಳಿಸಿದರು.

Write A Comment