ಅಂತರಾಷ್ಟ್ರೀಯ

ಐಸಿಸ್ ಸೇರಲು ಹೋಗಿದ್ದ ಕರ್ನಾಟಕದ ಮೂವರು ಶಂಕಿತ ಉಗ್ರರ ಸಾವು; ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ

Pinterest LinkedIn Tumblr

isis

ಬೆಂಗಳೂರು, ಜೂ.10: ಇರಾಕ್ ಮತ್ತು ಸಿರಿಯಾದಲ್ಲಿ ಐಸಿಸ್ ಉಗ್ರರ ಪರ ಹೋರಾಟ ನಡೆಸಲು ತೆರಳಿದ್ದ ಕರ್ನಾಟಕದ ಮೂವರು ಶಂಕಿತ ಉಗ್ರರು ಸಾವನ್ನಪ್ಪಿರುವುದು ತಡವಾಗಿ ಬೆಳಕಿಗೆ ಬಂದಿದೆ. ಕರ್ನಾಟಕದ ಕೆಲವು ಮುಸ್ಲಿಂ ಯುವಕರು ಐಸಿಸ್ ಪರ ಒಲವು ಹೊಂದಿದ್ದಾರೆಂಬ ಗುಮಾನಿ ಕೇಳಿ ಬಂದ ಬೆನ್ನಲ್ಲೇ ಮೂವರು ಯುವಕರು ಸಾವನ್ನಪ್ಪಿರುವುದು ಇದನ್ನು ಇನ್ನಷ್ಟು ಪುಷ್ಟೀಕರಿಸುವಂತೆ ಮಾಡಿದೆ.

ಸಾವನ್ನಪ್ಪಿರುವವರನ್ನು ಬೆಂಗಳೂರು ಮೂಲದ ಕಾಕ್ಸ್‌ಟೌನ್ ನಿವಾಸಿ ಫಯಾಜ್ ಮಸೂದ್, ಶಿವಾಜಿನಗರ ಉಮರ್ ಸುಬಾನ್ ಹಾಗೂ ವಿಜಯಪುರದ ಅಬ್ದುಲ್ ಖುದ್ದುಸ್ ಟರ್ಕಿ ಎಂದು ಗುರುತಿಸಲಾಗಿದೆ.

ಈ ಮೂವರು ಶಂಕಿತ ಉಗ್ರರು ನಕಲಿ ಪಾಸ್‌ಪೋರ್ಟ್ ಪಡೆದು ದೂರದ ಸಿರಿಯಾ ಹಾಗೂ ಇರಾಕ್ ಪರ ಹೋರಾಟ ನಡೆಸಲು ಐಸಿಸ್ ಉಗ್ರಗಾಮಿಗಳೇ ಸೇರಿಕೊಂಡಿದ್ದರೆಂದು ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಕಾಕ್ಸ್‌ಟೌನ್ ನಿವಾಸಿಯಾದ ಫಯಾಜ್ ಮಸೂದ್, ಕತಾರ್‌ನಲ್ಲಿ ಖಾಸಗಿ ಕೆಲಸ ನಿಮಿತ್ತ 2013ರ ಸೆಪ್ಟೆಂಬರ್‌ನಲ್ಲಿ ತೆರಳಿದ್ದ. ಅಲ್ಲಿಂದ ಕಳೆದ ವರ್ಷ ಬೆಂಗಳೂರಿಗೆ ಬಂದು ಪುನಃ ಪಾಸ್‌ಪೋರ್ಟ್ ನವೀಕರಿಸಿಕೊಂಡಿದ್ದ. ಕತಾರ್‌ನಲ್ಲಿ ನಾನು ಕೆಲಸ ಮಾಡುತ್ತಿದ್ದೇನೆಂದು ಕುಟುಂಬದ ಸದಸ್ಯರಿಗೆ ತಿಳಿಸಿದ್ದು, ಈತ ಅಲ್ಲಿಂದ ಸಿರಿಯಾಗೆ ತೆರಳಿ ಐಸಿಸ್ ಉಗ್ರಗಾಮಿ ಸಂಘಟನೆಗೆ ಸೇರ್ಪಡೆಗೊಂಡ.

ಇದೇ ರೀತಿ ಶಿವಾಜಿನಗರದ ನಿವಾಸಿ ಉಮರ್ ಸುಬಾನ್ ಯೆಮೆನ್‌ನಲ್ಲಿ ಖಾಸಗಿ ಕಂಪನಿಯೊಂದರ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ. ಈತನೂ ಕೂಡ ಐಸಿಸ್ 2013ರ ಅಂತ್ಯಕ್ಕೆ ಇರಾಕ್ ತೆರಳಿ ಐಸಿಸ್‌ಗೆ ಸೇರ್ಪಡೆಯಾಗಿದ್ದ ಎಂದು ಗುಪ್ತಚರ ಇಲಾಖೆಯ ಮೂಲಗಳು ಖಚಿತಪಡಿಸಿವೆ. ವಿಜಯಪುರದ ನಿವಾಸಿಯಾದ ಅಬ್ದುಲ್ ಖುದ್ದುಸ್ ಟರ್ಕಿ, ಫಯಾಜ್ ಮಸೂದ್ ಹಾಗೂ ಉಮರ್ ಸುಬಾನ್ ಸಂಪರ್ಕ ಬೆಳೆಸಿಕೊಂಡು ನಕಲಿ ಪಾಸ್‌ಪೋರ್ಟ್ ಮೂಲಕ ಬಾಗ್ದಾದ್‌ಗೆ ತೆರಳಿದ್ದ ಎಂದು ತಿಳಿದುಬಂದಿದೆ.

ಫಯಾಜ್ ಮಸೂದ್, ಉಮರ್ ಸುಬಾನ್, ಅಬ್ದುಲ್ ಖುದ್ದುಸ್ ಟರ್ಕಿ ಕತಾರ್‌ನಿಂದ ಸೌದಿ ಅರೇಬಿಯಾಕ್ಕೆ ಬಂದು ಅಲ್ಲಿಂದ ಬಾಗ್ದಾದ್‌ಗೆ ತೆರಳಿದ್ದರು. ಇದೇ ರೀತಿ 81 ದೇಶಗಳಿಂದ 12 ಸಾವಿರ ಐಸಿಸ್ ಉಗ್ರರು ನೇಮಕಗೊಂಡಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.

ಈ ಬಗ್ಗೆ ಕುಟುಂಬದ ಸದಸ್ಯರಿಂದ ಪೊಲೀಸರು ಮಾಹಿತಿ ಪಡೆಯಲು ಪ್ರಯತ್ನಿಸಿದ್ದಾರೆ. ಆದರೆ ಪೋಷಕರು ಮಾತ್ರ ತುಟಿಪಿಟಿಕ್ ಎಂದಿಲ್ಲ. ನಮಗೆ ಅವರು ಕತಾರ್ ಹಾಗೂ ಯೆಮೆನ್‌ನಲ್ಲಿ ಇದ್ದಾರೆ ಎಂಬುದಷ್ಟೇ ತಿಳಿದಿದೆ. ಉಳಿದ ಮಾಹಿತಿ ತಿಳಿದಿಲ್ಲ ಎಂದು ನುಣುಚಿಕೊಂಡಿದ್ದಾರೆ.

ಕೇಂದ್ರ ಗುಪ್ತಚರ ಇಲಾಖೆ, ಕಳೆದ ಡಿಸೆಂಬರ್‌ನಲ್ಲಿ ಬೆಂಗಳೂರಿನಲ್ಲಿ ಬಂಧಿಸಿದ್ದ ಐಸಿಸ್ ಪರ ಒಲವು ಹೊಂದಿದ್ದ ಮೆಹದಿ ಮಸ್ರೂರ್ ಬಿಸ್ವಾಸ್‌ನಿಂದಾಗಿ ಕರ್ನಾಟಕದ ಅನೇಕ ಯುವಕರು ಐಸಿಸ್ ಉಗ್ರಗಾಮಿ ಸಂಘಟನೆಗೆ ಸೇರಿಕೊಂಡಿದ್ದಾರೆ ಎಂದು ಎಚ್ಚರಿಸಿದೆ.

ಬೆಂಗಳೂರು, ಮಂಗಳೂರು, ಮೈಸೂರು, ಬೆಳಗಾವಿ, ಹುಬ್ಭಳ್ಳಿ-ಧಾರವಾಡ, ವಿಜಯಪುರ, ಯಾದಗಿರಿ, ಗುಲ್ಬರ್ಗಾ, ಉತ್ತರ ಕನ್ನಡ ಸೇರಿದಂತೆ ಮತ್ತಿತರ ಜಿಲ್ಲೆಗಳ ಮುಸ್ಲಿಂ ಯುವಕರು ಐಸಿಸ್ ಸಂಘಟನೆ ಪರ ಒಲವು ಹೊಂದಿದ್ದಾರೆಂದು ತಿಳಿಸಿದೆ.

ದಕ್ಷಿಣ ಭಾರತದಲ್ಲಿ ಐಸಿಸ್ ಉಗ್ರಗಾಮಿ ಸಂಘಟನೆಯ ಸೇರ್ಪಡೆ ಹೊಣೆಗಾರಿಕೆಯನ್ನು ಕೇರಳದ ಪಲಕ್ಕಡ್ ನಿವಾಸಿ ಅಬು ತಹೀರ್‌ಗೆ ವಹಿಸಲಾಗಿದೆ. ಮೂಲತಃ ಇಂಡಿಯನ್ ಮುಜಾಹಿದ್ದೀನ್ ಉಗ್ರಗಾಮಿ ಸಂಘಟನೆಯ ಸದಸ್ಯನಾದ ಅಬು ತಹೀರ್ ದಕ್ಷಿಣ ಭಾರತದ ರಾಜ್ಯಗಳಲ್ಲಿ ಕೆಲವು ಮುಸ್ಲಿಂ ಯುವಕರನ್ನು ಐಸಿಸ್‌ಗೆ ಸೇರ್ಪಡೆಗೊಳ್ಳುವಂತೆ ಆಮಿಷವೊಡ್ಡಿದ್ದಾನೆ ಎಂದು ತಿಳಿದುಬಂದಿದೆ.

ಈ ಹಿಂದೆ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಸದಸ್ಯನಾದ ಸುಲ್ತಾನ್ ಅರ್ಮತರ್ ಐಸಿಸ್ ಸಂಘಟನೆಯ ಹೊಣೆಗಾರಿಕೆ ಹೊತ್ತುಕೊಂಡಿದ್ದ. ಆದರೆ ಸಿರಿಯಾದಲ್ಲಿ ಅಮೆರಿಕ ವಾಯು ದಾಳಿಗೆ ಈತ ಸಾವನ್ನಪ್ಪಿದ ಬಳಿಕ ಅಬು ತಹೀರ್ ಇದರ ಜವಾಬ್ದಾರಿ ನೋಡಿಕೊಳ್ಳುತ್ತಿದ್ದಾನೆ. ಮಹಾರಾಷ್ಟ್ರದ ಮತ್ತೋರ್ವ ನಿವಾಸಿ ಅರೀಬ್ ಮಜೀದ್ ದಕ್ಷಿಣ ಭಾರತದ ರಾಜ್ಯಗಳಲ್ಲಿ ಒಟ್ಟು 15ಕ್ಕೂ ಹೆಚ್ಚು ಯುವಕರನ್ನು ಈಗಾಗಲೇ ಸಂಘಟನೆಗೆ ಸೇರ್ಪಡೆಗೊಳಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.

Write A Comment