ರಾಷ್ಟ್ರೀಯ

ಪದವಿ ಪರಿಶೀಲನೆಗಾಗಿ ಅವಧ್ ವಿವಿಗೆ ತೋಮರ್ ಅವರನ್ನು ಕರೆದೊಯ್ದ ಪೊಲೀಸರು

Pinterest LinkedIn Tumblr

Tomar1

ನವದೆಹಲಿ/ಲಖನೌ (ಪಿಟಿಐ): ನಕಲಿ ಪದವಿ ಪ್ರಮಾಣ ಪತ್ರ ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿರುವ ಮಾಜಿ ಸಚಿವ ಜಿತೇಂದ್ರ ಸಿಂಗ್ ತೋಮರ್ ಅವರನ್ನು ದೆಹಲಿ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ಬುಧವಾರ ಉತ್ತರ ಪ್ರದೇಶದ ಫೈಜಾಬಾದ್‌ಗೆ ಕರೆದೊಯ್ದಿದ್ದಾರೆ.

ಅದಾಗ್ಯೂ, ತಮ್ಮ ವಿರುದ್ಧ ಆರೋಪಗಳು ಸುಳ್ಳು. ಇದರ ಹಿಂದೆ ಕೇಂದ್ರ ಸರ್ಕಾರದ ‘ಪಿತೂರಿ’ ಇದೆ ಎಂದು ತೋಮರ್ ಆರೋಪಿಸಿದ್ದಾರೆ.

ಫೈಜಾಬಾದ್‌ನ ಆರ್‌ಎಂಎಲ್ ಅವಧ್ ವಿಶ್ವವಿದ್ಯಾಲಯದಿಂದ ಬಿಎಸ್‌ಸಿ ಪದವಿ ಶಿಕ್ಷಣ ಪೂರೈಸಿದ್ದಾಗಿ ತೋಮರ್‌ ಅವರು ಹೇಳಿಕೊಂಡಿದ್ದಾರೆ. ಆದರೆ, ಕಳೆದೊಂದು ತಿಂಗಳಿನಿಂದ ನಡೆಸಿದ ತನಿಖೆಯಿಂದ ತೋಮರ್ ಅವರು ವಿಜ್ಞಾನ ವಿಷಯದಲ್ಲಿ ಪದವಿ ಪಡೆದಿರುವುದಾಗಿ ಪ್ರಮಾಣ ಪತ್ರದ ಸಾಚಾತನದ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ.

ಪದವಿ ಪ್ರಮಾಣ ಪತ್ರದ ಸಾಚಾತನದ ಬಗ್ಗೆ ಸ್ಥಳದಲ್ಲಿಯೇ ಪರಿಶೀಲನೆ ಹಾಗೂ ವಿಚಾರಣೆ ನಡೆಸಲು ತೋಮರ್ ಅವರನ್ನು ಪೊಲೀಸರು ಫೈಜಾಬಾದ್‌ಗೆ ಕರೆದೊಯ್ಯುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.

ಫೈಜಾಬಾದ್‌ಗೆ ಕರೆದೊಯ್ಯಲು ತೋಮರ್ ಅವರನ್ನು ಮಂಗಳವಾರ ತಡರಾತ್ರಿ ರೈಲಿನ ಮೂಲಕ ದೆಹಲಿಯಿಂದ ಲಖನೌಗೆ ಕರೆ ತಂದರು. ಬಳಿಕ ಅವರನ್ನು ರಸ್ತೆ ಮೂಲಕ ಫೈಜಾಬಾದ್‌ಗೆ ಕರೆದೊಯ್ಯಲಾಗುತ್ತಿದೆ.

ಲಖನೌ ರೈಲು ನಿಲ್ದಾಣದಲ್ಲಿ ಮಾತನಾಡಿದ ತೋಮರ್‌, ‘ನನ್ನ ಪದವಿ ನೈಜವಾಗಿದೆ. ಈ ಪ್ರಕರಣದ ಹಿಂದೆ ಬಿಜೆಪಿ ಹಾಗೂ ಕೇಂದ್ರ ಸರ್ಕಾರದ ಪಿತೂರಿ ಅಡಗಿದೆ. ಅವರು ಎಎಪಿ ಸರ್ಕಾರವನ್ನು ಕಾರ್ಯನಿರ್ವಹಿಸಲು ಬಿಡುತ್ತಿಲ್ಲ’ ಆರೋಪಿಸಿದರು.

ತೋಮರ್ ಅವರಿಗೆ ಎಸಿಪಿ ದರ್ಜೆಯ ಅಧಿಕಾರಿ ಹಾಗೂ ಇತರ ಏಳು ಸಿಬ್ಬಂದಿ ಬೆಂಗಾವಲು ರಕ್ಷಣೆ ನೀಡಿದ್ದಾರೆ. ತ್ರಿನಗರ ಕ್ಷೇತ್ರದ ಶಾಸಕರಾಗಿರುವ 49 ವರ್ಷದ ತೋಮರ್ ಅವರನ್ನು ದೆಹಲಿ ನ್ಯಾಯಾಲಯ ನಾಲ್ಕು ದಿನಗಳ ಪೊಲೀಸ್ ವಶಕ್ಕೆ ನೀಡಿ ಮಂಗಳವಾರ ಆದೇಶಿಸಿತ್ತು.

Write A Comment