ಕರಾವಳಿ

ಚಿದು ಬರೆಯುವ ಪ.ಗೋ.ಸರಣಿ -12; ನೀವು ಲೆಕ್ಚರ್ ಆಗಲು ಲಾಯಕ್ … ಮಲಗಿಕೋ ನಾಲಾಯ್ಕ್

Pinterest LinkedIn Tumblr

Pa.Go File Pictures

ಪತ್ರಿಕೆಗಳಲ್ಲಿ ಓದುವ ಸುದ್ದಿ, ಲೇಖನಗಳು ಹೇಗಿರಬೇಕೆಂದು ಯಾರು ನಿರ್ಧರಿಸಬೇಕು ? ಇಂಥ ಪ್ರಶ್ನೆ ಎದುರಾದಾಗ ಸಹಜವಾಗಿಯೇ ಪತ್ರಿಕೆಯ ಸಂಪಾದಕರು ಎಂದು ಬಿಡಬಹುದು. ಯಾಕೆಂದರೆ ಅಂತಿಮವಾಗಿ ಒಂದು ಸುದ್ದಿಯ ಹೊಣೆಗಾರ ಆ ಪತ್ರಿಕೆಯ ಸಂಪಾಕದ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ.

ಸಂಪಾದಕನನ್ನು ಖುಷಿಪಡಿಸುವುದೇ ಒಬ್ಬ ಪತ್ರಕರ್ತನ ಅಥವಾ ವರದಿಗಾರನ, ಉಪಸಂಪಾದಕನ ಪರಮಹೊಣೆಗಾರಿಕೆ. ಸಂಪಾದಕ ಸಿಟಿಗೆದ್ದರೆ ಅಥವಾ ನಾಳೆಯಿಂದ ನೀನು ನನ್ನ ಪತ್ರಿಕೆಗೆ ಬೇಕಾಗಿಲ್ಲ ಎಂದುಬಿಟ್ಟರೆ ಮರುಮಾತಿಲ್ಲದೆ ಹೊರನಡೆಯಬೇಕು. ಈ ಕಾರಣಕ್ಕಾಗಿ ಸಂಪಾದಕರನ್ನು ಸಮಾಧಾನಪಡಿಸುವುದು ಮುಖ್ಯ. ಅವರು ಬಯಸಿದ ಹಾಗೆ ಬರೆಯುವುದು ಮುಖ್ಯ.

ಇದನ್ನು ಪ.ಗೋ ವ್ಯಾಖ್ಯಾನಿಸುತ್ತಿದ್ದ ರೀತಿಯೇ ಬೇರೆ. ಅದನ್ನು ನಾನು ಪ.ಗೋ ಥಿಯರಿ ಎನ್ನುತ್ತಿದ್ದೆ. ಕೆಲಸವೇ ಮುಖ್ಯ ಎನ್ನುವುದನ್ನು ತಲೆಯಿಂದ ತೆಗೆದು ಹಾಕಿ ಯೋಚಿಸು. ನಿನಗೆ ಕೆಲಸ ಮುಖ್ಯ ಆದ್ದರಿಂದ ನೀನು ಸಂಪಾದಕರನ್ನು ಖುಷಿಪಡಿಸಲು ಬರೆಯುತ್ತಿದ್ದಿ. ಇಲ್ಲದಿದ್ದರೂ ನೀನು ಮಾಡುತ್ತಿರುವುದು ಮುಂಗಾರು ಪತ್ರಿಕೆಯಲ್ಲಿ ವಡ್ಡರ್ಸೆಯನ್ನು ಖುಷಿಪಡಿಸಲು ಅವರ ನಿರೀಕ್ಷೆಗೆ ತಕ್ಕಂತೆ ಬರೆಯುತ್ತಿದ್ದಿ, ಬರೆ ನನ್ನದೇನೂ ಅಭ್ಯಂತರವಿಲ್ಲ.

ನೀನು ಸುದ್ದಿ ಬರೆಯುವಾಗ ನಿನ್ನ ತಲೆಯಲ್ಲಿ ವಡ್ಡರ್ಸೆ ರಘುರಾಮ ಶೆಟ್ರೇ ಇರುತ್ತಾರೆ ಹೊರತು ಪತ್ರಿಕೆಯನ್ನು ಓದುವ ಓದುಗ ಇರುವುದಿಲ್ಲ. ನಿನಗೆ ಕೆಲಸ ಹೇಗೆ ಮುಖ್ಯವೋ ಪತ್ರಿಕೆ ಓದುವವನಿಗೆ ತನಗೇನು ಬೇಕು ಎನ್ನುವುದೇ ಮುಖ್ಯವಾಗುತ್ತದೆ. ಅವನು ನಿನ್ನ ಪತ್ರಿಕೆಯನ್ನು ಪುಕ್ಸಟ್ಟೆ ಓದುತ್ತಿಲ್ಲ, ಹಣಕೊಟ್ಟು ಖರೀದಿಸಿ ಓದುತ್ತಾನೆ, ಅವನು ನಿಜವಾದ ಓದುಗ. ನೀವು ಕಾಂಪ್ಲಿಮೆಂಟ್ ಆಗಿ ಕಳಿಸಿದರೆ ಮಾತ್ರ ಓದುವವನು ನಿಮ್ಮ ಪತ್ರಿಕೆಯ ನಿಜವಾದ ಓದುಗ ಅಲ್ಲವೇ ಅಲ್ಲ.

ನಿನ್ನ ಸುದ್ದಿಗಳು, ಲೇಖನಗಳು ಪತ್ರಿಕೆಯನ್ನು ಕೊಂಡು ಓದುವ ಓದುಗನಿಗೆ ನಿಷ್ಠವಾಗಿರಬೇಕು. ಅವನಿಗೆ ಯಾವ ಮಾಹಿತಿ ಬೇಕು ಎನ್ನುವ ತುಡಿತವಿರುತ್ತದೆ ಅದನ್ನು ನೀನು ಕೊಡಬೇಕು. ಅಂದರೆ ಪತ್ರಿಕೆಯ ಸಂಪಾದಕ ಕೊಡಬೇಕು, ನಿನ್ನಿಂದ ಸಂಪಾದಕ ಬರೆಸಬೇಕು. ಆಗ ಓದುಗ ನಿನ್ನ ಪತ್ರಿಕೆ ಎಲ್ಲಿದ್ದರೂ ಹುಡುಕಾಡಿಕೊಂಡು ಖರೀದಿಸಿ ಓದುತ್ತಾನೆ.

ಆದರೆ ನಾನು ಪ.ಗೋ ಥಿಯರಿಯನ್ನು ಒಪ್ಪುತ್ತಿರಲಿಲ್ಲ. ನನ್ನ ಕಿರಿಕ್ ಪ್ರಶ್ನೆ ಅವರಿಗೆ. ನೀವು ಹಾಗೆ ಬರೆಯುತ್ತಿದ್ದೀರಾ?. ನಾನು ಬರೆಯುತ್ತೇನೆ, ಸಂಪಾದಕ ಕ.ಬು.ಗೆ ಹಾಕಿದರೆ ಅದು ಅವರಿಗೆ ಇಷ್ಟವಿಲ್ಲವೆಂದು ಅರ್ಥ. ಆಗ ಯಾವ ಗೊಡವೆಯೂ ಇಲ್ಲದೆ ಅವರಿಗೆ ಬೇಕಾದಂತೆ ಬರೆದು ಹೊತ್ತಾಕಿ ತಿಂಗಳಿಗೆ ಲೈನೇಜ್ ಲೆಕ್ಕ ಹಾಕುತ್ತೀನಿ ಎನ್ನುತ್ತಿದ್ದರು.

ಪ.ಗೋ ಕೂಡಾ ತಮ್ಮ ಸಂಪಾದಕರ ಕೈಕೆಳಗೆ ಸ್ವತಂತ್ರರಾಗಿರಲಿಲ್ಲ ಎನ್ನುವುದನ್ನು ಒಪ್ಪಿಕೊಂಡು ಪತ್ರಿಕಾ ಬರವಣಿಗೆಯ ಸ್ವರೂಪ ಹೇಗಿರಬೇಕೆಂದು ವಿವರಿಸುತ್ತಿದ್ದರು. ಇಂಥ ಪಾಠಕ್ಕೆ ಅವರ ಕಾಟೇಜ್ ಸಾಕ್ಷಿಯಾಗುತ್ತಿತ್ತು. ತಡರಾತ್ರಿವರೆಗೂ ಇಂಥ ವೃತ್ತಿಯ ಸೂಕ್ಷ್ಮಗಳನ್ನು ಹೇಳಿಕೊಡುತ್ತಿದ್ದರು ಪ.ಗೋ.

ಯಾಕೆ ಮುಂಗಾರು ಕೊನೆ ಕೊನೆಗೆ ಸೋಲು ಕಂಡಿತು ಎನ್ನುವುದನ್ನು ಪ.ಗೋ ಹೇಳುವಾಗಲೂ ಇದೇ ಥಿಯರಿಯನ್ನು ಉದಾಹರಿಸುತ್ತಿದ್ದರು. ನೀನು ನಿತ್ಯವೂ ಬೈಯ್ಯುತ್ತಿದ್ದರೆ, ಸದಾಕಾಲ ನಿನ್ನ ಅನಿಸಿಕೆಯನ್ನೇ ಹೇರಿಕೆ ಮಾಡಿದರೆ ಓದುಗನಿಗೆ ಕಿರಿಕಿರಿಯಾಗುತ್ತದೆ. ಅವನಿಗೆ ಬೇಕಾದ ಸ್ಟಫ್ ಸಿಗುತ್ತಿಲ್ಲವೆನ್ನುವ ಕಾರಣಕೊಟ್ಟು ನಿಧಾನವಾಗಿ ದೂರ ಸರಿಯುತ್ತಾನೆ.

ಪ.ಗೋ ಒಂದು ಮಾತು ಹೇಳುತ್ತಿದ್ದರು ವಡ್ಡರ್ಸೆ ರಘುರಾಮ ಶೆಟ್ರು ಒಳ್ಳೆಯ ಪತ್ರಕರ್ತ. ಅವರು ನಂಬಿದಷ್ಟು ಅವರನ್ನು ನಂಬಲಿಲ್ಲ. ಪ.ಗೋ ಅವರ ಈ ಮಾತು ನನಗೆ ಒಗಟಿನಂತನ್ನಿಸಿತು.

ಪತ್ರಿಕೆಯ ಓದುಗರನ್ನು ಅವರು ನಂಬಿದ್ದರು, ತಾನು ಆಯ್ಕೆಮಾಡಿಕೊಂಡಿದ್ದ ನಿನ್ನಂಥವರನ್ನು ಬಹಳ ನಂಬಿದ್ದರು. ಆದರೆ ಓದುಗರೂ ಕೈಹಿಡಿಯಲಿಲ್ಲ, ನಿಂಥವರೂ ವಡ್ಡರ್ಸೆಗಿಂತಲೂ ಮೊದಲೇ ಅವರ ದಾರಿನೋಡಿಕೊಂಡರು. ನಾನು ಆ ಪತ್ರಿಕೆಯ ಒಳಗಿದ್ದು ಗ್ರಹಿಸಲಾಗದ ಸತ್ಯವನ್ನು ಪ.ಗೋ ಹೊರಗಿದ್ದು ಚೆನ್ನಾಗಿಯೇ ಗ್ರಹಿಸಿದ್ದರು.

ಒಂದು ವೇಳೆ ವಡ್ಡರ್ಸೆಯವರು ಪ್ರತಿಭಾವಂತರೆಂದು ಗುರುತಿಸಿದ್ದವರು ಕೊನೆತನಕವೂ ಅವರ ಜೊತೆಗಿರುತ್ತಿದ್ದರೆ ಮುಂಗಾರು ಮುಚ್ಚಿಕೊಳ್ಳುತ್ತಿರಲಿಲ್ಲ, ಅವರೂ ಅಧೀರರಾಗುತ್ತಿರಲಿಲ್ಲ ಎನ್ನುವುದು ವಾಸ್ತವ ಸತ್ಯ. ನಿಜ ಅರ್ಥದಲ್ಲೂ ಪ.ಗೋ ಮುಂಗಾರು ವೈಫಲ್ಯದ ಬಗ್ಗೆ ನನಗೆ ಮನವರಿಕೆ ಮಾಡಿಕೊಟ್ಟರು ಇದನ್ನು ತಳ್ಳುಹಾಕುವಂತಿಲ್ಲ.

ಪತ್ರಿಕೆಯಲ್ಲಿ ಸುದ್ದಿಗಳು ಓದುಗನ ಆಸಕ್ತಿ ಕೆರಳಿಸುವಂತಿರಬೇಕು ಹೊರತು ಓದುಗ ಕೆರಳುವಂತಿರಬಾರದು. ಈ ಕೆರಳು ಶಬ್ಧವನ್ನು ಪ.ಗೋ ನಾಜೂಕಾಗಿ ಬಳಸುವುದರ ಹಿಂದೆ ಇದ್ದ ಅರ್ಥವನ್ನು ಗ್ರಹಿಸುವುದು ಆ ಕ್ಷಣಕ್ಕೆ ಸಾಧ್ಯವಾಗದಿದ್ದಾಗ ಕೆರಳು ಶಬ್ಧವನ್ನು ಒಬ್ಬಮೇಸ್ಟ್ರು ವಿದ್ಯಾರ್ಥಿಗೆ ಬಿಡಿಸಿ ಬಿಡಿಸಿ ಹೇಳುವಂತೆ ಹೇಳುತ್ತಿದ್ದರು.

ನಾಜೂಕಾಗಿ ಬರೆದರೆ ಓದುಗನಿಗೆ ಕುತೂಹಲ ಕೆರಳುತ್ತದೆ, ವೃತ್ತಿಪರತೆಯಿಂದ ಬರೆಯುವ ಬದಲು ಬರೆಯಬೇಕಲ್ಲ ಎನ್ನುವ ಕಾರಣಕ್ಕಾಗಿ ಬರೆದರೆ ಕೆರಳುತ್ತಾನೆ. ಈ ಕೆರಳುವ ಪ್ರಕ್ರಿಯೆ ಒಬ್ಬನಿಂದಲೇ ಆಗುವಂಥದ್ದು ಆದರೆ ಹಲವು ಮಂದಿ ಕೆರಳುತ್ತಾರೆ. ಹೇಗೆಲ್ಲಾ ಪ.ಗೋ ಬರವಣಿಗೆಯ ಸೂಕ್ಷ್ಮಗಳನ್ನು ಹೇಳಿಕೊಡುತ್ತಿದ್ದರೆಂದರೆ ಈ ಮನುಷ್ಯನನ್ನು ವಿಶ್ವವಿದ್ಯಾನಿಲಯದಲ್ಲಿ ಪ್ರಾಕ್ಟಿಕಲ್ ಗಾದರೂ ನೇಮಕ ಮಾಡಿಕೊಳ್ಳಬಾರದೇ ಅನ್ನಿಸುತ್ತಿತ್ತು.

ನೀವು ಲೆಕ್ಛರ್ ಆಗಲು ಲಾಯಕ್ ಎನ್ನುತ್ತಿದ್ದೆ. ಈಗ ಮಲಗಿಕೋ ನಾಲಾಯ್ಕ್ ಎನ್ನುತ್ತಿದ್ದರು. ನಾನು ನಿಜಕ್ಕೂ ಸೀರಿಯಸ್ಸಾಗಿ ಹೇಳುತ್ತಿದ್ದೇನೆ ಎಂದಾಗ ಮರಿ ಇಂಥ ಥಿಯರಿ ಹೇಳುವವರೂ ಇಲ್ಲ, ಕೇಳುವವರೂ ಇಲ್ಲ. ಯೂನಿವರ್ಸಿಟಿಯವರಿಗೇ ಬೇಕಾಗೂ ಇಲ್ಲ. ನಾನೂ ಬಾಯಿ ಚಪಲಕ್ಕೆ ಕೇಳಿಸಿಕೊಳ್ಳುವ ಪ್ರಾಣಿ ಇದೆ ಎನ್ನುವ ಕಾರಣಕ್ಕೆ ಹೇಳ್ದೆ. ಬೇಕಾದ್ರೆ ನೀನು ತಲೆಯೊಳಗೆ ಇಟ್ಕೋ ಬೇಡವಾದ್ರೆ ಆ ತೋಡಿಗೆ ಹಾಕಿ ಮಲಗು.

ಹೌದು ಪ.ಗೋ ತಲೆಯೊಳಗೆ ಇಷ್ಟೆಲ್ಲಾ ಸೂಕ್ಷ್ಮಗಳು ಬರವಣಿಗೆಯ ಬಗ್ಗೆ ಇವೆ ಎನ್ನುವುದಾದರೂ ಹೊರಗಿನವರಿಗೆ ಹೇಗೆ ಗೊತ್ತಾಗಬೇಕು. ಯೂನಿವರ್ಸಿಟಿಗೆ ಹೋದ್ರೆ ವಿಸಿ ತಡಬಡಾಯಿಸುವಂಥ ಪ್ರಶ್ನೆ ಕೇಳಿ ಯಾಕಾದರೂ ಪತ್ರಿಕಾಗೋಷ್ಠಿ ಮಾಡಿ ಸಿಕ್ಕಿಹಾಕಿಕೊಂಡೆನೋ ಎನ್ನುವಂತೆ ಮಾಡಿ ಬಿಡುವ ಪ.ಗೋ ಕೊನೆತನಕವೂ ಇಂಟಲೆಕ್ಚ್ವಲ್ ರೀತಿ ನಡೆದುಕೊಳ್ಳಲಿಲ್ಲ.

ಅವರು ತಾನು ಧರಿಸುವ ಬಟ್ಟೆಗಳು ಗರಿಗರಿಯಾಗಿರಬೇಕು, ಇಸ್ತ್ರಿ ಹಾಕಿರಬೇಕು, ಮಡಚಿಕೊಂಡದ್ದು, ಅಲ್ಲಲ್ಲಿ ಸುಕ್ಕು ಸುಕ್ಕಾಗಿರುವುದು ಹೇಗಿದ್ದರೂ ಸರಿ ಎನ್ನುವಂಥ ಭಾವನೆ. ಅವರು ಟೈಲರ್ ನಿಂದ ಹೊಲಿಸಿ ತರುವಾಗ ಮಾತ್ರ ಇಸ್ತ್ರಿ ಕಾಣುತ್ತಿತ್ತು ಅವರ ಶರ್ಟ್, ಪ್ಯಾಂಟ್.

ಆ ಮಯ್ಯರು ನೋಡಿ ಗರಿಗರಿಯಾದ ರೇಷ್ಮೆ ಜುಬ್ಬ, ಧೋತಿ ಧರಿಸುತ್ತಾರೆ, ನೀವು ಒಂಥರಾ ಮೈಗೆ ಹಾಕಿಕೊಳ್ಳುವ ಬಟ್ಟೆಗಳ ಮೇಲೂ ವ್ಯಾಮೋಹವಿಲ್ಲ ಎಂದು ರೇಗಿಸುತ್ತಿದ್ದೆ.

ನೀನು ಹಾಕಿಕೋ ನಾನು ನೋಡ್ತೇನೆ. ನಾನಿರುವುದೇ ಹೀಗೆ. ಬಟ್ಟೆ ಹಾಕಿಕೊಳ್ಳುವುದು ನನ್ನ ಇಷ್ಟಕ್ಕೆ ನಿನ್ನ ಇಷ್ಟಕ್ಕಲ್ಲ ಬಾ ಬಾ ಹತ್ತು ಸ್ಕೂಟರ್ ಎನ್ನುತ್ತಿದ್ದರು. ಆದರೆ ಅವರಿಗೆ ನಾನು ಹೀಗೆಲ್ಲ ಹೇಳಿದರೆ ಸಿಟ್ಟಾಗುತ್ತಿರಲಿಲ್ಲ. ಇಷ್ಟಕ್ಕೂ ನಾನು ಯಾರ ಮುಂದೆಯೂ ಇಂಥ ವಿಚಾರಗಳನ್ನು ಮಾತನಾಡುತಿರಲಿಲ್ಲ. ನಾವಿಬ್ಬರೇ ಇದ್ದಾಗ ಒಂದೊಂದು ಸಲ ಆಪ್ತವಾಗಿ ಮಾತುಗಳು ಬರುತ್ತಿದ್ದವು.

ಇಲ್ಲೂ ನಾನು ಯಾಕೆ ಈ ವಿಚಾರ ಪ್ರಸ್ತಾಪ ಮಾಡುತ್ತಿದ್ದೇನೆಂದರೆ ಪ.ಗೂ ಪ್ರಧಾನಿಯಾಗಲಿ, ರಾಷ್ಟ್ರಪತಿಯೇ ಆಗಲಿ, ಮಂತ್ರಿಯೇ ಆಗಲಿ, ಅಧಿಕಾರಿಯೇ ಆಗಲಿ, ಒಬ್ಬ ಸಾಮಾನ್ಯ ಅಟೆಂಡರ್ ಆಗಿರಲಿ ತಾನು ಹೇಗೆ ಅವರಲ್ಲಿಗೆ ಹೋಗಬೇಕು ಹಾಗೆಯೇ ಹೋಗುತ್ತಿದ್ದರು ಹೊರತು ವ್ಯಕ್ತಿಯ ಹುದ್ದೆ, ಘನಸ್ಥಿಕೆ ನೋಡಿ ಬಟ್ಟೆ ಧರಿಸಿ ಹೋಗುತ್ತಿರಲಿಲ್ಲ.

ವ್ಯಕ್ತಿಯ ಬುದ್ಧಿವಂತಿಕೆ ಧರಿಸುವ ಬಟ್ಟೆಯಲ್ಲಿರುವುದಿಲ್ಲ ಎನ್ನುವುದನ್ನು ಪ.ಗೋ ಅವರಿಂದ ಕಲಿತೆ. ಒಂದು ವೇಳೆ ಪ.ಗೋವನ್ನು ಕಾಲೇಜುಗಳು ಬಳಸಿಕೊಂಡಿದ್ದರೆ ಒಂದಷ್ಟು ಜನ ಭಿನ್ನ ನೆಲೆಯ ಬರಹಗಾರರು ಪತ್ರಿಕೋದ್ಯಮಕ್ಕೆ ಬರುತ್ತಿದ್ದರೇನೋ ಎಂದು ಈಗಲೂ ಅನಿಸುತ್ತದೆ.

ಆದರೂ ಅವರು ಸಂದೇಶದಲ್ಲಿ ಫಾ.ಹೆನ್ರಿ ಡಿ ಸೋಜಾ ಅವರು ಆರಂಭಿಸಿದ್ದ ಪತ್ರಿಕೋದ್ಯಮ ತರಬೇತಿ ಶಿಬಿರಗಳಲ್ಲಿ ಮಾಡುತ್ತಿದ್ದ ಪಾಠವನ್ನು ವಿದ್ಯಾರ್ಥಿಯಂತೆ ನಾನೂ ಆಲಿಸುತ್ತಿದ್ದೆ. ಕನ್ನಡ, ಇಂಗ್ಲೀಷ್ ಎರಡೂ ಭಾಷೆಗಳಲ್ಲಿ ನಿರರ್ಗಳವಾಗಿ ವಿಚಾರ ಮಂಡಿಸುವ ಅಪ್ರತಿಮ ಸಾಮರ್ಥ್ಯ ಅವರಿಗಿತ್ತು.

ನನ್ನನ್ನು ಪ.ಗೋ ಅವರ ಕ್ಲಾಸಿನಲ್ಲಿ ಕುಳಿತುಕೊಳ್ಳಲು ಆಕ್ಷೇಪಿಸುತ್ತಿರಲಿಲ್ಲ. ಎಲ್ಲವೂ ಮುಗಿದ ಮೇಲೆ ನಿನಗೇನು ಸಿಕ್ಕಿತು ನನ್ನ ತಪ್ಪು ಕೇಳುತ್ತಿದ್ದರು. ನಿಮ್ಮ ತಪ್ಪು ಹುಡುಕಲು ಕ್ಲಾಸಿಗೆ ಬರಬೇಕೇ, ಕಾಟೇಜ್ ಸಾಕಲ್ಲವೇ ಎನ್ನುತ್ತಿದ್ದೆ. ಆಗ ಅವರೇ ಹೇಳುತ್ತಿದ್ದರು ನಾವು ಹೇಳುವ ವಿಚಾರಗಳು ಭ್ರಮೆ ಹುಟ್ಟಿಸಬಾರದು, ಭಯ ಹುಟ್ಟಿಸಬಾರದು. ಪ.ಗೋ ಬರವಣಿಗೆಯ ಮಟ್ಟಿಗೆ ಅನುಭವದ ಗಣಿ.

Chidambara-Baikampady
-ಚಿದಂಬರ ಬೈಕಂಪಾಡಿ

Write A Comment