ಕರ್ನಾಟಕ

ಕೌನ್ಸಿಲಿಂಗ್‌ನಲ್ಲಿ ಮೀಸಲಾತಿ ನೀಡಿಲ್ಲ ಎಂದು ಆರೋಪಿಸಿ ಮಲ್ಲೇಶ್ವರದಲ್ಲಿರುವ ಸಿಇಟಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು

Pinterest LinkedIn Tumblr

pro

ಬೆಂಗಳೂರು, ಜೂ.9: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶಾತಿಗಾಗಿ ನಡೆಯುತ್ತಿರುವ ಕೌನ್ಸಿಲಿಂಗ್‌ನಲ್ಲಿ ಮೀಸಲಾತಿ ನೀಡಿಲ್ಲ ಎಂದು ಆರೋಪಿಸಿ ಮಲ್ಲೇಶ್ವರದಲ್ಲಿರುವ ಸಿಇಟಿ ಕಚೇರಿ ಮುಂದೆ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಏಕಾಏಕಿ ಪ್ರತಿಭಟನೆ ನಡೆಸಿದ್ದರಿಂದ ಸಿಇಟಿ ಕಚೇರಿ ಬಳಿ ಕೆಲಕಾಲ ಗೊಂದಲ ಹಾಗೂ ಆತಂಕ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಲ್ಲದೆ ಇಂದು ನಾಲ್ಕನೇ ದಿನದ ಸಿಇಟಿ ಕೌನ್ಸಿಲಿಂಗ್‌ಗೆ ಬಂದಿದ್ದ ವಿದ್ಯಾರ್ಥಿಗಳಿಗೂ ಬಿಸಿ ತಟ್ಟಿತು. ವೈದ್ಯಕೀಯ ಪದವೀಧರ ಅಭ್ಯರ್ಥಿಗಳು ಹಾಗೂ ಸೇವಾ ನಿರತ ವೈದ್ಯಕೀಯ ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನೆಗೆ ಇಂದು ಎಬಿವಿಪಿ ಬೆಂಬಲ ನೀಡಿತ್ತು.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶಾತಿಗಾಗಿ ನಡೆಸುತ್ತಿರುವ ನಾಲ್ಕನೇ ಸುತ್ತಿನ ಕೌನ್ಸಿಲಿಂಗ್‌ನಲ್ಲಿ ಅವಕಾಶ ನೀಡುತ್ತಿಲ್ಲ ಎಂದು ಸೇವಾ ನಿರತ ವೈದ್ಯಕೀಯ ಅಭ್ಯರ್ಥಿಗಳು ದೂರಿದರು. ಮತ್ತೊಂದೆಡೆ ಪಿಜಿಇಟಿ ಕೌನ್ಸಿಲಿಂಗ್‌ನಲ್ಲಿ ಮೀಸಲಾತಿ ನೀಡದೆ ಕೆಇಎ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದೆ. ತಕ್ಷಣವೇ ಕೌನ್ಸಿಲಿಂಗ್ ತಡೆ ಹಿಡಿಯಬೇಕೆಂದು ಪ್ರತಿಭಟನಾ ನಿರತ ವೈದ್ಯಕೀಯ ಅಭ್ಯರ್ಥಿಗಳು ಮನವಿ ಮಾಡಿದರು.

ಮೆರಿಟ್ ಆಧಾರದಲ್ಲಿ ಮೊದಲ ಮೂರು ಕೌನ್ಸಿಲಿಂಗ್‌ಗೆ ಹಾಜರಾಗಿ ಸೀಟುಗಳನ್ನು ಆಯ್ಕೆ ಮಾಡಿಕೊಂಡಿರುವ ಅಭ್ಯರ್ಥಿಗಳಿಗೆ ನಾಲ್ಕನೇ ಆಫ್‌ಲೈನ್ ಕೌನ್ಸಿಲಿಂಗ್‌ನಲ್ಲಿ ಹಾಜರಾಗಲು ಕೆಇಎ ಅವಕಾಶ ನೀಡುತ್ತಿಲ್ಲ. ಇದರಿಂದ ಪ್ರತಿಷ್ಠಿತ ಕಾಲೇಜುಗಳಲ್ಲಿ ಪ್ರತಿಭಾವಂತರಿಗೆ ಅವಕಾಶ ಸಿಗುತ್ತಿಲ್ಲ ಎಂದು ನೊಂದ ವಿದ್ಯಾರ್ಥಿಗಳು ಆಪಾದಿಸಿದರು.

ಈ ಹಿಂದೆ ಕೌನ್ಸಿಲಿಂಗ್‌ಗೆ ಹಾಜರಾಘಿದ್ದ ಕೆಲವು ಅಭ್ಯರ್ಥಿಗಳು ಖಾಸಗಿ ಕಾಲೇಜುಗಳಲ್ಲಿ ಶುಲ್ಕ ನೀಡಿ ಪ್ರವೇಶ ಪಡೆದಿದ್ದಾರೆ. ಈಗ ಸರ್ಕಾರಿ ಕಾಲೇಜುಗಳಲ್ಲಿ ಕಡಿಮೆ ಶುಲ್ಕಕ್ಕೆ ಸೀಟುಗಳು ಲಭ್ಯವಿದ್ದರೂ ಕೆಇಎ ದುರುದ್ದೇಶದಿಂದ ಆಯ್ಕೆ ಮಾಡಲು ಅವಕಾಶ ನೀಡುತ್ತಿಲ್ಲ. ನಾಲ್ಕನೇ ಸುತ್ತಿನ ಕೌನ್ಸಿಲಿಂಗ್‌ಗೆ ಅವಕಾಶ ನೀಡಬೇಕೆಂದು ಆಗ್ರಹಿಸಿದರು. ಕೆಇಎ ನಾಲ್ಕನೇ ಸುತ್ತಿನ ಕೌನ್ಸಿಲಿಂಗ್‌ಗೆ ಅವಕಾಶ ನೀಡದಿದ್ದರೆ, ನ್ಯಾಯಾಲಯದ ಮೊರೆ ಹೋಗಲಾಗುವುದು. ನಮಗೆ ಅವಕಾಶ ನೀಡದೆ ಖಾಸಗಿಯವರಿಗೆ ಸೀಟು ಮಾರಿಕೊಳ್ಳುವ ಉದ್ದೇಶದಿಂದಲೇ ಈ ತಂತ್ರ ಅನುಸರಿಸಲಾಗುತ್ತಿದೆ. ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶವ್ಯಕ್ತಪಡಿಸಿದ್ದಾರೆ.

ಮುಂದುವರೆದ ಕೌನ್ಸಿಲಿಂಗ್:
ಪ್ರಸಕ್ತ ಸಾಲಿನ ಐದನೇ ದಿನವಾದ ಸಿಇಟಿ ಕೌನ್ಸಿಲಿಂಗ್ ಇಂದೂ ಸಹ ಮುಂದುವರೆಯಿತು. ವೈದ್ಯಕೀಯ, ದಂತ ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ವಿವಿಧ ಕೋರ್ಸ್‌ಗಳಿಗೆ 6,500 ವಿದ್ಯಾರ್ಥಿಗಳು ಹಾಜರಾಗಿದ್ದರು.
ಇಂದು 14,001 ರಿಂದ 20,000ವರೆಗೆ ರ್ಯಾಂ ಕ್ ಪಡೆದ 6,500 ವಿದ್ಯಾರ್ಥಿಗಳು ರಾಜ್ಯದ ನಾನಾ ಭಾಗಗಳಿಂದ ಆಗಮಿಸಿ ಕೌನ್ಸಿಲಿಂಗ್‌ಗೆ ಹಾಜರಾಗಿದ್ದರು. ಸಿಇಟಿ ಕಚೇರಿಯಲ್ಲಿ ಬೆಳಗ್ಗಿನಿಂದಲೇ ವಿದ್ಯಾರ್ಥಿಗಳು ತಮಗಿಷ್ಟವಾದ ಕಾಲೇಜುಗಳನ್ನು ಆಯ್ಕೆ ಮಾಡಿಕೊಂಡರು.

Write A Comment