ಕರ್ನಾಟಕ

ಮ್ಯಾಗಿ ನೂಡಲ್ ಕತೆ ಮುಗೀತು; ಮಾವಿಗೂ ಬಂತು ಸಂಚಕಾರ: ರಾಸಾಯನಿಕ ಬಳಸಿ ಹಣ್ಣು ಮಾಡುವ ಕೇಂದ್ರಗಳ ಮೇಲೆ ಕೃಷಿ ಇಲಾಖೆ ದಾಳಿ

Pinterest LinkedIn Tumblr

mangos

ಬೆಂಗಳೂರು: ಮ್ಯಾಗಿ ಕತೆ ಮುಗೀತು. ಇದೀಗ ಕ್ಯಾಲ್ಸಿಯಂ ಕಾರ್ಬೈಡ್ ಬಳಸಿ ಕೃತಕವಾಗಿ ಹಣ್ಣು ಮಾಡುವ ಮಳಿಗೆಗಳ ಮೇಲೆ ಆಹಾರ ಇಲಾಖೆ ಮುಗಿಬಿದ್ದಿದೆ. ಇಲಾಖೆ ಅಧಿಕಾರಿಗಳು

ಮೈಸೂರಿನ ಒಂಬತ್ತು ಗೋಡೌನ್‌ಗಳ ಮೇಲೆ ದಾಳಿ ಮಾಡಿ, ಕೃತಕವಾಗಿ ಮಾಗಿಸಲಾಗಿದ್ದ ಹಣ್ಣುಗಳನ್ನು ನಾಶ ಪಡಿಸಿದ್ದಾರೆ. ಬೆಂಗಳೂರಿನ ಕೆಲವು ಕಡೆ ಈಗಾಗಲೇ ಮಳಿಗೆಗಳ ಮೇಲೆ ಕಾರ್ಯಾಚರಣೆ ನಡೆಸಲಾಗಿದೆ.

ಕ್ಯಾಲ್ಸಿಯಂ ಕಾರ್ಬೈಡ್ ಬಳಸುವುದರಿಂದ ಮಾವು, ಬಾಳೆ ಮೊದಲಾದ ಹಣ್ಣುಗಳು ಲಕಲಕ ಹೊಳೆಯುತ್ತವೆ. ಆದರೆ ಬಣ್ಣಕ್ಕೆ ಮನಸೋತು ತಿಂದರೆ ಆರೋಗ್ಯ ಕೆಡುವುದು ಗ್ಯಾರಂಟಿ ಎಂಬುದು ತಜ್ಞರ ಅಭಿಮತ.

”ಮಾವಿನ ಹಣ್ಣ ಹಂಗಾಮು ನಡೆಯುತ್ತಿದ್ದು ಎಲ್ಲಾ ಕಡೆಗಳಲ್ಲೂ ಕ್ಯಾಲ್ಸಿಯಂ ಕಾರ್ಬೈಡ್ ಹರಳು ಬಳಸಿ ಹಣ್ಣು ಮಾಡುತ್ತಿರುವುದನ್ನು ಸರಕಾರ ಗಂಭೀರವಾಗಿ ಪರಿಗಣಿಸಿದೆ. ರಾಜ್ಯದೆಲ್ಲಡೆ ಕೃಷಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ಕ್ರಮ ಜರುಗಿಸಲಿದ್ದಾರೆ,” ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಆಹಾರ ಸುರಕ್ಷತೆ ಮತ್ತು ಸಾರ್ವಜನಿಕ ಆರೋಗ್ಯ ಸಂಸ್ಥೆಯ ಜಂಟಿ ನಿರ್ದೇಶಕ ಶಿವಕುಮಾರ್ ಅವರು, ”ನೈಸರ್ಗಿಕವಾಗಿ ಹಣ್ಣಾಗಲು ಬಿಡದೇ ರಾಸಾಯನಿಕ ಬಳಸುತ್ತಿರುವುದು ಸರಿಯಲ್ಲ. ಚಿಕ್ಕಬಳ್ಳಾಪುರ, ಕೋಲಾರದ ಹಣ್ಣುಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸಲಾಗಿದ್ದು, ಸೋಮವಾರ ವರದಿ ಕೈಸೇರಲಿದೆ. ಚಿತ್ರದುರ್ಗದಲ್ಲೂ ಕಾರ್ಯಾಚರಣೆ ನಡೆಸಿದ್ದು, ಎಲ್ಲಾ ಜಿಲ್ಲೆಗಳಲ್ಲೂ ಕೃತಕವಾಗಿ ಹಣ್ಣು ಮಾಗಿಸುವ ಪ್ರಕ್ರಿಯೆಯ ಮೇಲೆ ಕಣ್ಗಾವಲು ಇಡಲು ಸೂಚಿಸಲಾಗಿದೆ,” ಎಂದು ತಿಳಿಸಿದ್ದಾರೆ.

ಮಾವು, ಚಿಕ್ಕು, ಪಪ್ಪಾಯಿ, ಬಾಳೆ ಕಾಯಿಗಳನ್ನು ಭತ್ತದ ಹುಲ್ಲು, ಸೊಪ್ಪಿನ ಮಧ್ಯೆ ಇಟ್ಟು ನೈಸರ್ಗಿಕವಾಗಿ ಹಣ್ಣಾಗಿಸುವ ವಿಧಾನಕ್ಕೆ 7ರಿಂದ 10 ದಿನ ಬೇಕಾಗುತ್ತದೆ. ಅದರ ಬದಲು ಒಂದೇ ದಿನದಲ್ಲಿ ಆಕರ್ಷಕ ಬಣ್ಣದಿಂದ ಕಂಗೊಳಿಸಿ, ಹಣ್ಣಾಗಿಸುವ ವಿದ್ಯೆಯನ್ನು ಪತ್ತೆಹಚ್ಚಲು ಇಲಾಖೆ ಎಲ್ಲಾ ಜಿಲ್ಲೆಗಳಲ್ಲೂ ಕಾರ್ಯಾಚರಣೆ ನಡೆಸುತ್ತಿದೆ.

ಪತ್ತೆ ವಿಧಾನ: 1.ಗೋಡನ್ ಮೆಥೆಡ್: ಕೇಂದ್ರ ಆಹಾರ ಪ್ರಯೋಗಾಲಯ ನಿಗದಿ ಪಡಿಸಿದ ರಾಸಾಯನಿಕ ದ್ರಾವಣದಲ್ಲಿ ಫಿಲ್ಟರ್ ಕಾಗದವನ್ನು ಅದ್ದಿ ಕೃತಕವಾಗಿ ಹಣ್ಣಾಗಿಸುವ ಗೋಡನ್‌ನ ಒಳಗೆ ಹಿಡಿದರೆ ಅಥವಾ ಹಣ್ಣುಗಳ ಮೇಲೆ ಇಟ್ಟರೆ ಕಾಗದದ ಬಣ್ಣ ಬದಲಾಗುತ್ತದೆ. ಸಾಮಾನ್ಯ ನಾಗರಿಕರು ಇದನ್ನು ಮಾಡಬಹುದಾಗಿದ್ದು, ಸ್ಥಳದಲ್ಲೇ ಪತ್ತೆ ಹಚ್ಚುವ ಸರಳ ವಿಧಾನ ಇದು.

2.ಪಲ್ಪ್ ಮೆಥೆಡ್: ಕ್ಯಾಲ್ಸಿಯಂ ಕಾರ್ಬೈಡ್ ಹರಳುಗಳನ್ನು ಕಾಗದದಲ್ಲಿ ಸುತ್ತಿಟ್ಟು ತ್ವರಿತವಾಗಿ ಮಾಗಿಸಿದ ಹಣ್ಣುಗಳ ಪಲ್ಪ್‌ಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ವರದಿ ಬರಲು ನಾಲ್ಕೈದು ದಿನ ಸಮಯ ಬೇಕಾಗುತ್ತದೆ.

ಹಣ್ಣು ಮಾಡುವ ವಿಧಾನ ಕ್ಯಾಲ್ಸಿಯಂ ಕಾರ್ಬೈಡ್ ಹರಳುಗಳನ್ನು ಕಾಗದದ ಪೊಟ್ಟಣದ ಒಳಗಿಟ್ಟು ಬಾಳೆಗೊನೆ, ಮಾವಿನ ಹಣ್ಣಿನ ರಾಶಿಯಲ್ಲಿ ಇಡಲಾಗುತ್ತದೆ. ಈ ಹರಳುಗಳಿಂದ ಉತ್ಪತ್ತಿಯಾಗುವ ಇಥೆನಾಲ್ ವಾಯು ಹಣ್ಣುಗಳಿಗೆ ಬಣ್ಣ ಬರಿಸಿ, ಬೇಗ ಮಾಗುವಂತೆ ಮಾಡುತ್ತದೆ. ಬೇಗ ಮಾಗುವಂತೆ ಮಾಡಲು ಹೆಚ್ಚಿನ ಪ್ರಮಾಣದಲ್ಲಿ ಇದನ್ನು ಬಳಸಿದರೆ ಆರೋಗ್ಯಕ್ಕೆ ಹಾನಿಕರ.

ಗ್ರಾಹಜಕರಿಗೆ ಟಿಪ್ಸ್ ಯಾವುದೇ ಹಣ್ಣು ಲಕಲಕಿಸುವ ಬಣ್ಣದಿಂದ ಕಂಗೊಳಿಸುತ್ತಿದ್ದರೆ ಅಂತಹ ಹಣ್ಣನ್ನು ತಿನ್ನುದಿರುವುದು ಒಳಿತು. ಮಾವಿನ ಹಣ್ಣು ಫಳಫಳಿಸುವ ಹಳದಿ, ಕೆಂಪಾಗಿರದೇ ಇದ್ದರೆ, ಕಾಯಿಯ ಚಹರೆಯೇ ಇಲ್ಲದೇ ಇದ್ದರೆ ಅಂತಹ ಹಣ್ಣುಗಳನ್ನು ಗ್ರಾಹಕರು ಖರೀದಿಸಬಾರದು ಎನ್ನುತ್ತಾರೆ ಆಹಾರ ಸುರಕ್ಷತೆ ಮತ್ತು ಸಾರ್ವಜನಿಕ ಆರೋಗ್ಯ ಸಂಸ್ಥೆಯ ಜಂಟಿ ನಿರ್ದೇಶಕ ಶಿವಕುಮಾರ್.

Write A Comment