ಕರ್ನಾಟಕ

102ರ ಅಜ್ಜಿಗೆ ಭರ್ಜರಿ ಗೆಲುವು

Pinterest LinkedIn Tumblr

gouthamma

ಚಾಮರಾಜನಗರ, ಜೂ.6: ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಹನೂರು ಸಮೀಪದ ದೊಡ್ಡಾಲತ್ತೂರು ಗ್ರಾಮದ, ಕಡು ಬಡತನದಲ್ಲಿಯೂ ಸ್ವಾವಲಂಬಿ ಜೀವನ ಸಾಗಿಸುತ್ತಿರುವ ಗೌತಮಮ್ಮ ಈಗ ಗ್ರಾಮ ಪಂಚಾಯತ್ ಸದಸ್ಯೆ.

ಗೌತಮಮ್ಮ 139 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಇಳಿ ವಯಸ್ಸಿನಲ್ಲೂ ಯಾರದೇ ಆಶ್ರಯವಿಲ್ಲದೇ ತನ್ನ ಜೀವನಕ್ಕೆ ಬೇಕಾಗುವ ನೀರು, ದವಸ-ಧಾನ್ಯ, ಕಟ್ಟಿಗೆ ಹೀಗೆ ಎಲ್ಲ ವಸ್ತುಗಳನ್ನು ತಾನೇ ತಂದುಕೊಂಡು ಜೀವನ ಸಾಗಿಸುವ ಗೌತಮಮ್ಮ ಜನ ಪ್ರತಿನಿಧಿಯಾಗುವ ಕನಸನ್ನು ನನಸು ಮಾಡಿಕೊಂಡಿದ್ದಾರೆ.

ಸದಾ ಒಂಟಿ ಜೀವನ ಸಾಗಿಸುತ್ತಿದ್ದ ಗೌತಮಮ್ಮರವರ ಮನೆಗೆ ಇದೀಗ ಗ್ರಾಮದ ಎಲ್ಲರೂ ಬರತೊಡಗಿದ್ದಾರೆ. ಗೌತಮ್ಮಮ್ಮ ಜನಪ್ರತಿನಿಧಿಯಾಗುವ ಕನಸು ಹೇಗಿತ್ತು ಎಂದರೆ, ಇದೂವರೆಗೂ ಗ್ರಾಮ ಪಂಚಾಯತ್‌ಗೆ ಚುನಾಯಿತರಾದವರು ಗ್ರಾಮದ ಅಭಿವೃದ್ಧಿಗೆ ಸಹಕಾರ ನೀಡಿಲ್ಲ ಇದರಿಂದ ಬೇಸತ್ತ ಗೌತಮಮ್ಮ ತಾನೊಮ್ಮೆ ಪಂಚಾಯತ್‌ಗೆ ಆಯ್ಕೆಯಾಗಬೇಕೆಂದು ಬಯಸಿದ್ದರಂತೆ. ಅದು ಇದೀಗ ಕೂಡಿಬಂತು.

ಶತಾಯುಷಿಯಾಗಿದ್ದರೂ ತಾನೇನು ಇತರಿಗೆ ಕಡಿಮೆಯಿಲ್ಲ ಎಂದು ಸವಾಲೆಸುವಂತೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದು ರಾಜ್ಯದ ಗಮನವನ್ನು ಸೆಳೆದಿತ್ತು. ಗ್ರಾಮಸ್ಥರು ಒಂದುಗೂಡಿ ಸಭೆ ನಡೆಸಿ, ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೌತಮಮ್ಮರನ್ನು ಚುನಾಯಿಸಲು ನಿರ್ಧರಿಸಿದರು. ಅದರಂತೆ ಮತದಾನದಂದು ಕೂಡ ಗ್ರಾಮಸ್ಥರೆಲ್ಲರೂ ಒಮ್ಮತದಿಂದ ಮತ ಚಲಾಯಿಸಿದ ಫಲವಾಗಿ ಗೌತಮಮ್ಮ ಗ್ರಾಮ ಪಂಚಾಯತ್‌ಗೆ ಆಯ್ಕೆಯಾದರು.

Write A Comment