ಕರ್ನಾಟಕ

ಸರೋವರ ಸಂರಕ್ಷಣೆ ಹಾಗೂ ಅಭಿವೃದ್ಧಿ ಪ್ರಾಧಿಕಾರ ಇಂದಿನಿಂದಲೇ ಜಾರಿ

Pinterest LinkedIn Tumblr

Siddaramaiha-Environmet-Day

ಬೆಂಗಳೂರು, ಜೂ.5-ಕರ್ನಾಟಕ ಸರೋವರ ಸಂರಕ್ಷಣೆ ಹಾಗೂ ಅಭಿವೃದ್ಧಿ ಪ್ರಾಧಿಕಾರವನ್ನು ಇಂದಿನಿಂದಲೇ ಜಾರಿಗೆ ತರುತ್ತಿದ್ದು, ಕೆರೆ ಒತ್ತುವರಿ ತೆರವುಗೊಳಿಸಿ ಸಂರಕ್ಷಣೆ ನಿರ್ವಹಣೆಯನ್ನು ಈ ಪ್ರಾಧಿಕಾರ ಮಾಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ನಗರದ ಕಂಠೀರವ ಕ್ರೀಡಾಂಗಣದಲ್ಲಿಂದು

ಹಮ್ಮಿಕೊಳ್ಳಲಾಗಿದ್ದ ಪರಿಸರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನಿಂದಲೇ ಕರ್ನಾಟಕ ಸರೋವರ ಸಂರಕ್ಷಣೆ ಹಾಗೂ ಅಭಿವೃದ್ಧಿ ಕಾಯ್ದೆ ಜಾರಿಗೆ ಬರುತ್ತದೆ. ಎಲ್ಲೇ ಕೆರೆ ಒತ್ತುವರಿಯಾಗಿದ್ದರೂ ಅದನ್ನು ತೆರವುಗೊಳಿಸಿ ಕೆರೆಗಳನ್ನು ಸಂರಕ್ಷಣೆ ಮಾಡುವುದಲ್ಲದೆ ನಿರ್ವಹಣೆಯನ್ನು ಈ ಪ್ರಾಧಿಕಾರ ನಿರ್ವಹಿಸುತ್ತದೆ ಎಂದು ತಿಳಿಸಿದರು. ಪರಿಸರ ಸಂರಕ್ಷಣೆ, ತ್ಯಾಜ್ಯ ವಿಲೇವಾರಿ ಕೇವಲ ಬಿಬಿಎಂಪಿಯದ್ದೊಂದೇ ಜವಾಬ್ದಾರಿಯಲ್ಲ. ಇದರಲ್ಲಿ ನಾಗರಿಕರು ಕೈಜೋಡಿಸಬೇಕಿದೆ ಎಂದು ಹೇಳಿದರು. ನಗರೀಕರಣ, ಕೈಗಾರಿಕೀಕರಣ ಹೆಚ್ಚಾಗುತ್ತಾ ಹೋದಂತೆ ಕೃಷಿ ಭೂಮಿ ಕಡಿಮೆಯಾಗುತ್ತಾ ಹೋಗುತ್ತಿದೆ. ಅಭಿವೃದ್ಧಿ ಹಾಗೂ ಪರಿಸರ ಸಂರಕ್ಷಣೆ ನಡುವೆ ಸಮನ್ವಯತೆ ಅತ್ಯಗತ್ಯ ಎಂದರು.

ಬೆಂಗಳೂರಿನಲ್ಲಿ ಹಿಂದೆ ನೂರಾರು ಕೆರೆಗಳಿದ್ದವು. ಈಗ ಸಾಕಷ್ಟು ಒತ್ತುವರಿಯಾಗಿಬಿಟ್ಟಿವೆ. ನಮ್ಮ ಹಿರಿಯರು ನೆಡುತೋಪು, ಗುಂಡುತೋಪು ಹಾಗೂ ಕೆರೆಗಳನ್ನು ಮಾಡಿ ಪರಿಸರವನ್ನು ಉಳಿಸಿದ್ದರು. ಈಗ ಇವೆಲ್ಲ ಮರೆಯಾಗಿಬಿಟ್ಟಿವೆ. ಹಾಗಾಗಿ ಪರಿಸರ ಹಾಳಾಗುತ್ತಿದೆ ಎಂದು ಹೇಳಿದರು. ಪರಿಸರ ಸಂರಕ್ಷಣೆ ಕುರಿತು 700 ಕನಸುಗಳಿವೆ. ಇವುಗಳ ಈಡೇರಿಕೆಯನ್ನೇ ಘೋಷಣೆ ಮಾಡಿಕೊಂಡು ಪರಿಸರ ಸಂರಕ್ಷಣೆಗೆ ಮುಂದಾಗಿದ್ದಾರೆ. ನಾವಿರುವ ಸ್ಥಳದಲ್ಲೇ ಮೊದಲು ಪರಿಸರ ಸಂರಕ್ಷಣೆ ಪ್ರಾರಂಭವಾಗಬೇಕು. ಮನೆ, ಶಾಲೆ, ಕಚೇರಿಯ ಆವರಣ ಮತ್ತು ಇವುಗಳ ಸುತ್ತಮುತ್ತ ಸ್ವಚ್ಛವಾಗಿಟ್ಟುಕೊಂಡು ಪರಿಸರವನ್ನು ಕಾಪಾಡಬೇಕು ಎಂದು ಹೇಳಿದರು.

ಬಿ.ಡಿ.ಸಿಗರೇಟ್ ಸೇದಿ ಅಲ್ಲಲ್ಲೇ ಬಿಸಾಡುವುದು, ಕೈಯಲ್ಲಿದ್ದ ಕಸವನ್ನು ಅಲ್ಲಲ್ಲೇ ಎಸೆಯುವಂತಹ ಸಣ್ಣಪುಟ್ಟ ತಪ್ಪುಗಳನ್ನು ಎಲ್ಲರೂ ಬಿಟ್ಟರೆ ಬಹಳಷ್ಟು ಸುಧಾರಣೆಯಾಗುತ್ತದೆ. ಇರುವುದೊಂದೇ ಭೂಮಿ ಎಂಬುದನ್ನು ನಾವೆಲ್ಲರೂ ಮನಗಾಣಬೇಕು ಎಂದು ಸಿಎಂ ಹೇಳಿದರು. ಬೆಂಗಳೂರು 800 ಚ.ಕಿ.ಮೀ. ವಿಸ್ತೀರ್ಣವಿದೆ. 1.10 ಕೋಟಿ ಜನಸಂಖ್ಯೆ ಇದೆ.ದಿನಕ್ಕೆ 3.5 ಸಾವಿರ ಟನ್‌ನಿಂದ 4.5 ಸಾವಿರ ಟನ್‌ವರೆಗೆ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಗಾರ್ಡನ್‌ಸಿಟಿ ಈಗ ಗಾರ್ಬೇಜ್‌ಸಿಟಿಯಾಗಿದೆ. ಇದರಿಂದ ಸಾಕಷ್ಟು ತೊಂದರೆಗಳು ಎದುರಾಗುತ್ತಿವೆ. ತ್ಯಾಜ್ಯ ವಿಲೇವಾರಿ ಕುರಿತು ನಿರ್ಲಕ್ಷ್ಯ ಮನೋಭಾವವನ್ನು ಬಿಟ್ಟು ನಾಗರಿಕರು ಸರ್ಕಾರ ಮತ್ತು ಬಿಬಿಎಂಪಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಇದುವರೆಗೆ ತ್ಯಾಜ್ಯ ಸಂಸ್ಕರಣೆ ಮಾಡಲಾಗಿಲ್ಲ. ಒಂದೆಡೆ ತ್ಯಾಜ್ಯ ಡಂಪ್ ಮಾಡುತ್ತಿದ್ದೇವೆ. ಈಗಾಗಲೇ ಆರು ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪಿಸಲು ಕ್ರಮ ಕೈಗೊಂಡಿದ್ದೇವೆ. ಈ ತಿಂಗಳ ಅಂತ್ಯದಲ್ಲಿ ನಾಲ್ಕು ಘಟಕಗಳು ಕಾರ್ಯಾರಂಭ ಮಾಡುತ್ತವೆ. ಉಳಿದವು ಶೀಘ್ರವೇ ಪ್ರಾರಂಭವಾಗುತ್ತದೆ ಎಂದು ಸಿದ್ದರಾಮಯ್ಯ ತಿಳಿಸಿದರು. ಪರಿಸರ ಸಂರಕ್ಷಣೆಗೆ ನಮ್ಮ ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ಕಸ ಸಂಸ್ಕರಣೆ, ಹಸಿ ತ್ಯಾಜ್ಯ, ಒಣ ತ್ಯಾಜ್ಯ ಬೇರ್ಪಡಿಕೆ, ಮಳೆ ನೀರು ಕೊಯ್ಲು, ಸೌರಶಕ್ತಿ ಬಳಕೆ ರೂಪಿಸಿದ್ದೇವೆ. ನಮ್ಮೊಂದಿಗೆ ಜನ ಸಹಕರಿಸಬೇಕು, ಹಾಗಾದಾಗ ಮಾತ್ರ ಪರಿಸರ ಸಂರಕ್ಷಣೆಯನ್ನು ಮಾಡಬಹುದು ಎಂದು ಹೇಳಿದರು. ಶಾಲಾ ಕಾಲೇಜು ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆ ಬಗ್ಗೆ ಅರಿವು ಮೂಡಿಸಿಕೊಂಡು ಸಹಕರಿಸಬೇಕು ಎಂದರು.
ಅರಣ್ಯ ಸಚಿವ ರಮಾನಾಥ ರೈ ಮಾತನಾಡಿ, ಪರಿಸರ ಸಂರಕ್ಷಣೆ ಕಾರ್ಯದಲ್ಲಿ ಜನರು ಭಾಗಿಯಾಗಬೇಕು. ಇದರ ಜವಾಬ್ದಾರಿ ಎಲ್ಲರದ್ದಾಗಿದೆ ಎಂದು ಹೇಳಿದರು.

ಪರಿಸರ ಸಂರಕ್ಷಣೆ ಕುರಿತು ವಸ್ತುಪ್ರದರ್ಶನ ಏರ್ಪಡಿಸಿದ್ದುದು ಎಲ್ಲರ ಗಮನ ಸೆಳೆಯಿತು. ಪರಿಸರ ಕ್ಷೇತ್ರದಲ್ಲಿ  ಕೆಲಸ ಮಾಡಿದ್ದ ಲಕ್ಷ್ಮಣ್, ಡಾ.ಆರ್.ಪರಿಮಳ, ಡಾ.ಎಸ್.ಹರೀಶ್ ಜೋಷಿ ಹಾಗೂ ಕೆಲವು ಸಂಸ್ಥೆಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.  ಕಾರ್ಯಕ್ರಮದಲ್ಲಿ ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದಗೌಡ, ಸಚಿವರಾದ ರೋಷನ್‌ಬೇಗ್, ವಾಯು ಮಾಲಿನ್ಯ ನಿಯಂತ್ರಣಾ ಮಂಡಳಿ ಅಧ್ಯಕ್ಷ ಡಾ.ವಾಮಾನಾಚಾರ್ಯ,  ಮಂಡಳಿಯ ಸದಸ್ಯ ಕಾರ್ಯದರ್ಶಿ ವಿಜಯಕುಮಾರ್,ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮದನ್‌ಗೋಪಾಲ್, ಪರಿಸರ ಇಲಾಖೆ ಕಾರ್ಯದರ್ಶಿ ರಾಮಚಂದ್ರ ಮತ್ತಿತರರು ಪಾಲ್ಗೊಂಡಿದ್ದರು.

Write A Comment