ಕರ್ನಾಟಕ

ಗೊಂದಲ,ಮಾರಾಮಾರಿ,ಬಹಿಷ್ಕಾರ ನಡುವೆ ಮತದಾನ ಜೋರು

Pinterest LinkedIn Tumblr

Voting-Panchayatಬೆಂಗಳೂರು,ಜೂ.2- ಹಲವೆಡೆ ಗುಂಪು ಷರ್ಘಣೆ, ಅಭ್ಯರ್ಥಿಗಳ ಬೆಂಬಲಿಗರ ನಡುವೆ ಮಾರಾಮಾರಿ, ಬ್ಯಾಲೆಟ್ ಪೇಪರ್‌ನಲ್ಲಿ ಬದಲಾದ ಚಿಹ್ನೆ, ಹಲವೆಡೆ ಮತದಾನ ಸ್ಥಗಿತ, ಪರಸ್ಪರ ಮಾತಿನ ಚಕಮಕಿ, ಕಲ್ಲು ತೂರಾಟ, ಪೊಲೀಸರಿಂದ ಲಘು ಲಾಠಿ ಪ್ರಹಾರ, ಮತ ಕೇಂದ್ರದ ಬಳಿ ವಾಮಾಚಾರ, ಮತ್ತೆ ಕೆಲವೆಡೆ ಮತದಾನ ಬಹಿಷ್ಕಾರ,

ಮತದಾರರ ಪಟ್ಟಿಯಲ್ಲಿ ಹೆಸರು ನಾಪತ್ತೆ ಮುಂತಾದ ಘಟನೆಗಳ ನಡುವೆಯೂ ಇಂದು ನಡೆದ 2ನೇ ಹಂತದ ಗ್ರಾಮ ಪಂಚಾಯ್ತಿ ಚುನಾವಣೆ ಬಹುತೇಕ ಶಾಂತಿಯುತವಾಗಿತ್ತು. ಮಧ್ಯಾಹ್ನದ ವೇಳೆಗೆ ಶೇ.50ರಷ್ಟು ಮತದಾನವಾಗಿತ್ತು.  ಕಡ್ಡಾಯ ಮತದಾನವಾದರೂ ಯಾವ ಗ್ರಾಮ ಪಂಚಾಯ್ತಿಯಲ್ಲೂ ಶೇ.100ರಷ್ಟು ಮತದಾನವಾಗುವ ಬಗ್ಗೆ ವರದಿಯಾಗಿಲ್ಲ. ಶೇ.50ರಷ್ಟು ಸ್ಥಾನ ಮಹಿಳೆಯರಿಗೆ ಮೀಸಲು ನೀಡಿರುವುದರಿಂದ ಮಹಿಳೆಯರು ಹೆಚ್ಚು ಉತ್ಸುಕರಾಗಿ ಮತ ಚಲಾಯಿಸುತ್ತಿದುದು ಕಂಡುಬಂತು. ಬೆಳಗ್ಗೆ 7ರಿಂದ ಸಂಜೆ 5ರವರೆಗೆ ನಡೆದ ಮತದಾನದಲ್ಲಿ ಮತದಾರರು ಸರದಿಸಾಲಿನಲ್ಲಿ ನಿಂತು ಮತ ಚಲಾಯಿಸಿದರು.

ಪ್ರಥಮ ಹಂತದ ಚುನಾವಣೆಯಲ್ಲಿ ಶೇ.82ರಷ್ಟು ಮತದಾನವಾಗಿತ್ತು. 2ನೇ ಹಂತದ ಚುನಾವಣೆಯಲ್ಲೂ ಕೂಡ ಇಷ್ಟೇ ಪ್ರಮಾಣದ ಮತದಾನವಾಗುವ ಸಾಧ್ಯತೆ ಇದೆ. ಈ ಚುನಾವಣೆಯಲ್ಲೂ ವಾಮಾಚಾರದ ಪ್ರಕರಣಗಳು ಮುಂದುವರೆದಿತ್ತು. ಬಂಗಾರಪೇಟೆಯ ಕಾರಹಳ್ಳಿ ಮತಕೇಂದ್ರದ ಬಳಿ ವಾಮಾಚಾರ ಮಾಡಿರುವ ಅಂಶ ಕಂಡುಬಂದು, ಅಭ್ಯರ್ಥಿಗಳು ಮತ್ತು ಗ್ರಾಮಸ್ಥರಲ್ಲಿ ಆಂತಕ ಮೂಡಿಸಿತ್ತು. ತಿಮ್ಮಾಪುರ ಗ್ರಾಮದಲ್ಲಿ ಅಭ್ಯರ್ಥಿಗಳಿಬ್ಬರು ಮತದಾನ ಮಾಡಲು ಪೈಪೋಟಿಗೆ ಬಿದ್ದು ಮಾತಿನ ಚಕಮಕಿ ನಡೆದಿದೆ. ಪ್ರಪ್ರಥಮ ಬಾರಿಗೆ ಗ್ರಾಮಪಂಚಾಯ್ತಿ ಚುನಾವಣೆಯಲ್ಲಿ ಬೀದರ್ ಜಿಲ್ಲೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು ಬಳಸಲಾಗಿರುವುದರಿಂದ ಈ ಜಿಲ್ಲೆಯಲ್ಲಿ ಅಷ್ಟೇನೂ ತೊಂದರೆಯಾಗಲಿಲ್ಲ. ಇನ್ನು ಉಳಿದಂತೆ ಬಹುತೇಕ  ಹಲವೆಡೆ ಬ್ಯಾಲೆಟ್ ಪೇಪರ್‌ನಲ್ಲಿ ಅಭ್ಯರ್ಥಿಗಳ ಚಿಹ್ನೆ ಅದಲು-ಬದಲು ಉಂಟಾಗಿ ಚುನಾವಣಾಧಿಕಾರಿಗಳಿಗೆ ತಲೆ ಬಿಸಿಯಾಗಿತ್ತು. ಹಲವೆಡೆ ಮತದಾನ ಸ್ಥಗಿತಗೊಳಿಸಿ ಮರುಮತದಾನಕ್ಕೆ  ಆದೇಶ ನೀಡಿದ ಘಟನೆಗಳೂ ನಡೆದಿವೆ.

ಯಾದಗಿರಿ ಜಿಲ್ಲೆ ಶಹಪುರ ತಾಲ್ಲೂಕಿನ  ಉಳ್ಳೆಸೊಗಡು ತಾಂಡ್ಯದಲ್ಲಿ  ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದು ಅಭ್ಯರ್ಥಿ ಸೇರಿ 6 ಮಂದಿಗೆ ತೀವ್ರ ಗಾಯವಾಗಿದೆ. ಬೈಕ್, ಕಾರು ಸೇರಿದಂತೆ ಹಲವು ವಾಹನಗಳು ಜಖಂಗೊಂಡಿವೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು , ಗಲಭೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.  ಚಿಕ್ಕಬಳ್ಳಾಪುರದ ನೆಲಕದರಹಳ್ಳಿ ಗ್ರಾಮಪಂಚಾಯ್ತಿ ಅಭ್ಯರ್ಥಿಯ ಪತಿಗೆ ಥಳಿಸಿದ ಘಟನೆಯಿಂದ ಎರಡು ಗುಂಪುಗಳ ನಡುವೆ ಘರ್ಷಣೆ ಉಂಟಾಗಿದೆ. ಹಲವರು ಗಾಯಗೊಂಡಿದ್ದಾರೆ. ಈ ಸಂಬಂಧ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಯಚೂರು ಜಿಲ್ಲೆ ಮುದಗೊಂಡ ಗ್ರಾಮ ಪಂಚಾಯ್ತಿಯಲ್ಲಿ ಮತದಾನ ತಡವಾಗಿದ್ದಕ್ಕೆ ಮತದಾರರು ಅಧಿಕಾರಿಗಳ ವಿರುದ್ಧ ಆಕ್ರೋಶಗೊಂಡು ಮಾತಿನ ಚಕಮಕಿ ನಡೆಸಿರುವುದು ವರದಿಯಾಗಿದೆ.

ಬೆಂಗಳೂರು ಗ್ರಾಮಾಂತರದ ನೆಲಮಂಗಲ ತಾಲ್ಲೂಕಿನ ಕೋಡಪ್ಪನಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಒಂದು ಗಂಟೆ ಮತದಾನ ವಿಳಂಬವಾಗಿದೆ. ಇಲ್ಲೂ ಕೂಡ ಚಿಹ್ನೆ ಅದಲು-ಬದಲಾದ ಗೊಂದಲ ಉಂಟಾಯಿತು.  ಅಧಿಕಾರಿಗಳು ಅದನ್ನು ಸರಿಪಡಿಸಿದ್ದಾರೆ.  ಕೊಪ್ಪಳ ಜಿಲ್ಲೆ ಚಿಕ್ಕಮಡಿಹಾಳದಲ್ಲಿ ಮತದಾನ ಸಂದರ್ಭದಲ್ಲಿ ಮತದಾರರಿಗೆ ಹಂಚಲು ತಂದಿದ್ದ ಒಂದು ಕ್ವಿಂಟಲ್ ಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ.  ಕನಕಾಪುರದ ಇಡಕಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ  ಇಮಡಾಪುರ ಮತಗಟ್ಟೆ ಸಂಖ್ಯೆ 5ರಲ್ಲಿ ಮತದಾನ ಸ್ಥಗಿತಗೊಳಿಸಲಾಗಿದೆ. ಅಭ್ಯರ್ಥಿಗಳ ಚಿಹ್ನೆ ಗೊಂದಲದಿಂದ ಮತದಾನವನ್ನು ಮುಂದಕ್ಕೆ ಹಾಕಿರುವುದು ತಿಳಿದುಬಂದಿದೆ.  ಆನೇಕಲ್ ತಾಲ್ಲೂಕಿನ ಮತ್ತಾನಲ್ಲೂರು ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದ್ದು , ಪೊಲೀಸರ ಮಧ್ಯಪ್ರವೇಶದಿಂದ ಯಾವುದೇ ಅಹಿತಕರ ಘಟನೆಗಳು ಸಂಭವಿಸಿಲ್ಲ.  ಗುಬ್ಬಿ ತಾಲ್ಲೂಕಿನ ಎಸ್.ಕೊಡಿಗೆಹಳ್ಳಿ ಗ್ರಾಮ ಪಂಚಾಯ್ತಿಯ ಮಲ್ಲಪ್ಪನಹಳ್ಳಿ ವಾರ್ಡ್‌ನಲ್ಲಿ ಅಭ್ಯರ್ಥಿಯ ಚಿಹ್ನೆ ಬದಲಾಗಿದೆ. ಇಲ್ಲಿನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದ್ದ ನಾಗರತ್ನಮ್ಮ ಅವರಿಗೆ ನೀಡಿದ್ದ ಟೆಲಿಫೋನ್ ಚಿಹ್ನೆಗೆ ಬದಲಾಗಿ ಟಿವಿ ಚಿಹ್ನೆ ಮುದ್ರಿತವಾಗಿದೆ. ಈಗಾಗಲೇ ಕೆಲವರು ಮತದಾನ ಮಾಡಿದ್ದಾರೆ. ಇದನ್ನು ಗಮನಿಸಿದ ಕೆಲವರು ಮತದಾನ ಬಹಿಷ್ಕರಿಸಿ ಗಲಾಟೆ ಮಾಡಿ ಚುನಾವಣೆ ಮುಂದೂಡುವಂತೆ ಆಗ್ರಹಿಸಿದ್ದಾರೆ.

* ಹಳ್ಳಿಗಳಲ್ಲಿ ಬೆಟ್ಟಿಂಗ್ ಬಲು ಜೋರು
ಮಳವಳ್ಳಿ, ಜೂ.2- ತಾಲೂಕಿನ 38 ಗ್ರಾಮ ಪಂಚಾಯ್ತಿಗಳ 537 ಸದಸ್ಯ ಸ್ಥಾನಗಳಿಗೆ ನಡೆದ ಮತದಾನದ ಪೆಟ್ಟಿಗೆಗಳನ್ನು ಪಟ್ಟಣದ ಜೂನಿಯರ್ ಕಾಲೇಜಿನಲ್ಲಿ ಬಿಗಿ ಪೂಲೀಸ್ ಬಂದೋಬಸ್ತ್‌ನಲ್ಲಿ ಇಡಲಾಗಿದ್ದು, ಎಲ್ಲೆಡೆ ಬೆಟ್ಟಿಂಗ್ ಜೋರಾಗಿಯೇ ನಡೆದಿದೆ. ಮತ ಎಣಿಕಾ ಕಾರ್ಯ ಪಟ್ಟಣದಲ್ಲಿ ಜೂ.5 ರಂದು ಬೆಳಗ್ಗೆ 8ಗಂಟೆ ಪ್ರಾರಂಭವಾಗಲಿದೆ. ಇದಕ್ಕಾಗಿ ತಾಲ್ಲೂಕು ಆಡಳಿತವು ಸಕಲ ಸಿದ್ದತೆಯನ್ನು ಕೈಗೊಂಡಿದೆ. ಒಟ್ಟು 1047 ಅಭ್ಯರ್ಥಿಗಳ ಹಣೆಬರಹವನ್ನು ಮತದಾರರು ಈಗಾಗಲೇ ಬರೆದಿದ್ದಾರೆ. ಯಾವ ಅಭ್ಯರ್ಥಿ ಪರ ಮತದಾರನಿದ್ದಾನೆ ಎಂಬುದು ಬಹಿರಂಗಗೊಳ್ಳಲು ಇನ್ನು ಕೇವಲ ಮೂರು ದಿನ ಮಾತ್ರ ಬಾಕಿ ಇದೆ.
ಅಭ್ಯರ್ಥಿಗಳು ಸೋಲು-ಗೆಲುವಿನ ಲೆಕ್ಕಾಚಾರ ದಲ್ಲಿ ತೊಡಗಿದ್ದಾರೆ. ಎಲ್ಲ ಅಭ್ಯರ್ಥಿಗಳ ಎದೆಯಲ್ಲಿ ಢವ ಢವ ಹೆಚ್ಚಾಗಿದೆ. ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ಫಲಿತಾಂಶದ ಬಗ್ಗೆಯೇ ಚರ್ಚೆ ನಡೆಯುತ್ತಿದೆ. ಗ್ರಾಮದ ದೇವಾಲಯ ಹೊಟೇಲ್, ಕ್ಯಾಂಟೀನ್ ಬಸ್ ನಿಲ್ದಾಣ ಸೇರಿದಂತೆ ಇತರ ಸ್ಥಳಗಳಲ್ಲಿ ಸೇರುವ ಗುಂಪು ತಮ್ಮ ವಾರ್ಡ್‌ನಿಂದ ಸ್ಪರ್ಧಿಸಿರುವವರ ಪೈಕಿ ಈ ಅಭ್ಯರ್ಥಿ ಗೆಲ್ಲುತ್ತಾನೆ, ಇಷ್ಟು ಮತಗಳ ಲೀಡ್‌ನಲ್ಲಿ ಗೆಲ್ಲುತ್ತಾನೆ ಎಂದು ಮಾತನಾಡಿ ಕೊಳ್ಳುತ್ತಿದ್ದಾರೆ.  ಮತಗಳ ಎಣಿಕಾ ಕಾರ್ಯ ಸಮೀಪಿಸುತ್ತಿ ದ್ದಂತೆಯೇ ಅಭ್ಯರ್ಥಿಗಳ ಪರ ಬೆಟ್ಟಿಂಗ್ ಕಟ್ಟುವುದು ಜೋರಾಗಿದೆ. ಬಹುತೇಕ ಗ್ರಾಪಂ ವ್ಯಾಪ್ತಿಯಲ್ಲಿ ಈ ಅಭ್ಯರ್ಥಿ ಗೆಲುವು ಸಾಧಿಸುತ್ತಾನೆ, ಇಷ್ಟೇ ಮತಗಳ ಅಂತರದಿಂದ ಜಯಭೇರಿ ಬಾರಿಸುತ್ತಾನೆ ಎಂಬಿತ್ಯಾದಿ ಹಲವಾರು ರೀತಿಯಲ್ಲಿ ಬೆಟ್ಟಿಂಗ್ ಕಟ್ಟುತ್ತಿದ್ದಾರೆ.

* ಗ್ರಾಮಾಭಿವೃದ್ಧಿಗೆ ಚುನಾವಣೆ
ಅತಿ ಮುಖ್ಯತುಮಕೂರು, ಜೂ.2-2ನೇ ಹಂತದ ಗ್ರಾ.ಪಂ. ಚುನಾವಣೆಯು ನಡೆಯುತ್ತಿದ್ದು, ಮತದಾನವನ್ನು ಕಡ್ಡಾಯಗೊಳಿಸಿರುವ ಹಿನ್ನೆಲೆಯಲ್ಲಿ  ಪ್ರತಿಯೊಬ್ಬರೂ ಮತದಾನ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಮನವಿ ಮಾಡಿದರು.
ತುಮಕೂರಿನ ಹೆಗ್ಗೆರೆ ಬಳಿ ಇರುವ ಸಿದ್ದಾರ್ಥನಗರದಲ್ಲಿನ ಸರ್ಕಾರಿ ಶಾಲೆಯಲ್ಲಿ ಜಿ.ಪರಮೇಶ್ವರ್ ಸೇರಿದಂತೆ ಕುಟುಂಬದವರು ಮತದಾನ ಮಾಡಿದ ನಂತರ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗ್ರಾ.ಪಂ.ಗಳಿಗೆ ಹೆಚ್ಚಿನ
ಅನುದಾನ  ನೀಡುತ್ತಿರುವ ಹಿನ್ನೆಲೆಯಲ್ಲಿ ಪಂಚಾಯಿತಿಗಳ ಮೂಲಕ ಗ್ರಾಮಗಳ ಅಭಿವೃದ್ಧಿಗೆ ಮುಂದಾಗಿವೆ ಹಾಗಾಗಿ ಪ್ರತಿಯೊಬ್ಬರೂ ಮತದಾನ ಮಾಡಬೇಕು ಎಂದರು.
ಕುಣಿಗಲ್ ತಾಲೂಕಿನ ಹುಲಿಯೂರು ದುರ್ಗದ ದೊಡ್ಡಕೊಪ್ಪಲಿನಲ್ಲಿ  ಡಿ.ಕೆ.ರವಿ ಕುಟುಂಬದವರು ಮತದಾನ ಬಹಿಷ್ಕರಿಸಿರುವುದು ತಪ್ಪು, ದಯವಿಟ್ಟು ಮತದಾನ ಮಾಡಬೇಕು ಎಂದು ಮನವಿ ಮಾಡಿದ ಅವರು, ಡಿ.ಕೆ.ರವಿ ಸಾವಿನ ಪ್ರಕರಣ ಸಿಬಿಐಗೆ ವಹಿಸಲಾಗಿದೆ. ಪ್ರಕರಣ ಸಂಬಂಧ ಸಿಬಿಐ ತನಿಖೆ ನಡೆಸಿ ಸತ್ಯಾಂಶ ಹೊರತರುತ್ತದೆ. ಈ ಬಗ್ಗೆ ಯಾವುದೇ ಅನುಮಾನ ಬೇಡ ಮತದಾನ ಮಾಡಬೇಕೆಂದು ಅವರು ಹೇಳಿದರು.
ಸರ್ಕಾರದ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುವುದು ಸರಿಯಲ್ಲ. ರಾಜ್ಯ ಸರ್ಕಾರ ಸಂಪೂರ್ಣವಾಗಿ ಡಿ.ಕೆ.ರವಿ  ಅವರ ಪರವಾಗಿದೆ. ಅವರ ಕುಟುಂಬಕ್ಕೆ ನ್ಯಾಯ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದು ತಿಳಿಸಿದರು.

* ಚುನಾವಣಾ ಸಿಬ್ಬಂದಿಗೆ ಸೊಳ್ಳೆ ಕಾಟ
ಬೆಂಗಳೂರು,ಜೂ.2-ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸಲು ಬಂದಿದ್ದ ಚುನಾವಣಾ ಸಿಬ್ಬಂದಿಗೆ ವಿಪರೀತ ಸೊಳ್ಳೆಗಳ ಕಾಟ. ಇದು ವಿಶ್ವವಿಖ್ಯಾತ ಬೆಂಗಳೂರಿನ ಫಜೀತಿ.
ಬೆಂಗಳೂರು ನಗರ, ಜಿಲ್ಲಾ ವ್ಯಾಪ್ತಿಗೆ ಬರುವ ಕೆಲವು ಗ್ರಾಮ ಪಂಚಾಯ್ತಿಗಳಲ್ಲಿ ನಿನ್ನೆ ರಾತ್ರಿಇಡೀ ಸಿಬ್ಬಂದಿ ಜಾಗರಣೆ ಮಾಡಬೇಕಾದ ಪರಿಸ್ಥಿತಿ ಎದುರಾಗಿ ಸೊಳ್ಳೆ ಕಾಟದಿಂದ ಹೈರಾಣಾಗಿದ್ದಾರೆ.
ಕಗ್ಗಲಿಪುರ ಗ್ರಾಮಪಂಚಾಯ್ತಿಯ ಹೂದಿಪಾಳ್ಯ ಮತಗಟ್ಟೆಗೆ ಆಗಮಿಸಿದ ಚುನಾವಣಾ ಸಿಬ್ಬಂದಿ ಸೊಳ್ಳೆಗಳ ಕಾಟಕ್ಕೆ ತತ್ತರಿಸಿಹೋಗಿದ್ದರು. ರಾತ್ರಿಯಷ್ಟೇ ಅಲ್ಲ ಹಗಲಿನಲ್ಲೂ ಸಹ ವಿಪರೀತ ಸೊಳ್ಳೆಗಳ ಕಾಟದಿಂದ ಕರ್ತವ್ಯ ನಿರ್ವಹಿಸಲು ಪದೇಪದೇ ಅಡ್ಡಿಯಾಗುತ್ತಿತ್ತು. ವಿಧಿಯಿಲ್ಲದೆ ಸೊಳ್ಳೆ ಬತ್ತಿ ಹಚ್ಚಿಕೊಂಡು ಕರ್ತವ್ಯ ನಿರ್ವಹಣೆ ಮಾಡುತ್ತಿದ್ದರು.

* ಶಾಂತಿಯುತ ಮತದಾನ
ಮಹದೇವಪುರ, ಜೂ.2-ಬೆಂಗಳೂರು ಪೂರ್ವ ತಾಲೂಕಿನ ಮಹದೇವಪುರ ಕ್ಷೇತ್ರದಲ್ಲಿ ಶಾಂತಿಯುತ ಮತದಾನವಾಗಿದ್ದು, ಮಧ್ಯಾಹ್ನದ ವೇಳೆಗೆ ಶೇ.50ರಷ್ಟು ಮತದಾನ ನಡೆದಿತ್ತು. ಕೆಲ ಮತಗಟ್ಟೆಗಳಲ್ಲಿ ಬಿರುಸಿನ  ಮತದಾನ ನಡೆದರೆ, ಕೆಲವೆಡೆ ಮತಗಟ್ಟೆಗೆಬರಲು ಮತದಾರರು ಅಷ್ಟಾಗಿ ಆಸಕ್ತಿ ತೋರಿರಲಿಲ್ಲ. ಬೈಯಪ್ಪನಹಳ್ಳಿಯಲ್ಲಿ ಕೆಲ ಕಾಲ ಗೊಂದಲ ಉಂಟಾದರೂ ನಂತರ ಮತಗಟ್ಟೆ ಅಧಿಕಾರಿಗಳು ಸರಿಪಡಿಸಿದರು. 11 ಗ್ರಾಮ ಪಂಚಾಯತಿಗಳ 262 ಸ್ಥಾನಗಳಿಗೆ 28 ಜನ ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದ 234 ಸ್ಥಾನಗಳಿಗೆ 599 ಜನ ಇಂದು ನಡೆಯುವ ಚುನಾವಣಾ ಕಣದಲ್ಲಿದ್ದಾರೆ. ಬೆಂಗಳೂರು ಪೂರ್ವ ತಾಲೂಕಿನ ಮಹದೇವಪುರ ಕ್ಷೇತ್ರದ 11 ಪಂಚಾಯತಿ ವ್ಯಾಪ್ತಿಯಲ್ಲಿ 46,602 ಪುರುಷ ಮತದಾರರು, 41,889 ಮಹಿಳೆಯರು ಮತ್ತು 2 ಇತರೆ ಮತದಾರರು ಸೇರಿ ಒಟ್ಟು 88,493 ಮತದಾರರು ಇದ್ದಾರೆ. ಒಟ್ಟು 102 ಮತದಾನ ಕೇಂದ್ರಗಳಿವೆ. ಈ ಕೇಂದ್ರದಲ್ಲಿ ಸೂಕ್ಷ್ಮ36, ಅತಿ ಸೂಕ್ಷ್ಮ 31 ಸಾಮಾನ್ಯ 35 ಎಂದು ಗುರುತಿಸಲಾಗಿದೆ ಎಂದು ತಹಶೀಲ್ದಾರ್ ಹರೀಶ್ ನಾಯ್ಕ್ ತಿಳಿಸಿದ್ದಾರೆ. ಮಂಡೂರು ಪಂಚಾಯ್ತಿಯ ಜ್ಯೋತಿಪುರದಲ್ಲಿ ವೇಣು ಸೇರಿದಂತೆ ಮೂವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Write A Comment