ಕರ್ನಾಟಕ

ಮಂತ್ರಿ, ಓರಿಯಾನ್, ಶೋಭಾಮಾಲ್ ಗಳೂ ಕೂಡ ಅಕ್ರಮ

Pinterest LinkedIn Tumblr

mantri-square

ಬೆಂಗಳೂರು, ಜೂ.2- ಮಲ್ಲೇಶ್ವರಂನ ಮಂತ್ರಿಮಾಲ್, ರಾಜ್‌ಕುಮಾರ್ ರಸ್ತೆಯ ಓರಿಯಾನ್ ಮಾಲ್ ಹಾಗೂ ಸುಜಾತಾ ಟಾಕಿಸ್ ಮುಂಭಾಗದ ಶೋಭಾ ಮಾಲ್ ಮತ್ತು ಅಪಾರ್ಟ್‌ಮೆಂಟ್‌ಗಳು ಅಕ್ರಮ ಕಟ್ಟಡಗಳಾಗಿದ್ದು, ಈ ಕಟ್ಟಡಗಳ ಬಿಲ್ಡರ್ ಹಾಗೂ ಅಕ್ರಮ ಕಾಮಗಾರಿಗೆ ಅವಕಾಶ ಕಲ್ಪಿಸಿಕೊಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ

ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಅವರು ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ. ನಗರ ಜಿಲ್ಲಾಧಿಕಾರಿ ಶಂಕರ್ ಅವರಿಗೆ ಪತ್ರ ಬರೆದಿರುವ ಎನ್.ಆರ್.ರಮೇಶ್ ಅವರು ಈ ಮೂರು ಬೃಹತ್ ಕಟ್ಟಡಗಳು ಅಕ್ರಮ ಕಟ್ಟಡಗಳಾಗಿವೆ ಎಂಬುದಕ್ಕೆ ಪುರಾವೆ ಒದಗಿಸಿದ್ದಾರೆ.  ಯಾವುದೇ ಕೈಗಾರಿಕಾ ಪ್ರದೇಶಗಳನ್ನು  ವಸತಿ ಪ್ರದೇಶಗಳನ್ನಾಗಿ ಅಥವಾ ವಸತಿ ಪ್ರದೇಶಗಳನ್ನು ಕೈಗಾರಿಕಾ ಪ್ರದೇಶಗಳನ್ನಾಗಿ ಭೂ ಪರಿವರ್ತನೆ ಮಾಡಬಾರದು ಎಂದು ಕಾನೂನಿನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.ಒಂದು ವೇಳೆ ಭೂ ಪರಿವರ್ತನೆ ಮಾಡಬೇಕಾದ ಸಂದರ್ಭದಲ್ಲಿ ಸಾರ್ವಜನಿಕ ಆಕ್ಷೇಪಣೆಯನ್ನು ಪ್ರಮುಖ ದಿನಪತ್ರಿಕೆಗಳಲ್ಲಿ ಪ್ರಕಟಿಸಬೇಕು ಹಾಗೂ ಸಾರ್ವಜನಿಕರು ನೀಡುವ ಆಕ್ಷೇಪಣೆಗಳಿಗೆ ಮನ್ನಣೆ ನೀಡಬೇಕು ಎನ್ನುವುದನ್ನು ಉಚ್ಛ ಹಾಗೂ ಸರ್ವೋಚ್ಛ ನ್ಯಾಯಾಲಯಗಳು ಪುಷ್ಟೀಕರಿಸಿವೆ.

ಆದರೂ ಎಲ್ಲ ಕಾನೂನುಗಳನ್ನೂ ಗಾಳಿಗೆ ತೂರಿರುವ ಬಿಬಿಎಂಪಿ, ಬಿಡಿಎ ಅಧಿಕಾರಿಗಳು ಈ ಮೂರು ಅಕ್ರಮ ಕಟ್ಟಡಗಳಿಗೆ ಅನುಮತಿ ನೀಡಿದ್ದಾರೆ ಎಂದು ಎನ್.ಆರ್.ರಮೇಶ್ ದೂರಿನಲ್ಲಿ ಆರೊಪಿಸಿದ್ದಾರೆ. ಮಲ್ಲೇಶ್ವರಂನ ಸಂಪಿಗೆ ರಸ್ತೆಯಲ್ಲಿರುವ ರಾಜಾಮಿಲ್ ಪ್ರದೇಶದಲ್ಲಿ ಮಂತ್ರಿಗ್ರೀನ್ಸ್ ಅಪಾರ್ಟ್‌ಮೆಂಟ್ ಹಾಗೂ ಮಂತ್ರಿಮಾಲ್, ಡಾ.ರಾಜ್‌ಕುಮಾರ್ ರಸ್ತೆಯ ಯಶವಂತಪುರ ಸಮೀಪದ ಕಿರ್ಲೋಸ್ಕರ್ ಕೈಗಾರಿಕಾ ಸಂಸ್ಥೆಯ ಜಾಗದಲ್ಲಿ ಬ್ರಿಗೇಡ್ ಗೇಟ್ ವೇ ಅಪಾರ್ಟ್‌ಮೆಂಟ್ ಹಾಗೂ ಓರಿಯಾನ್ ಮಾಲ್ ಮತ್ತು ಸುಜಾತಾ ಚಿತ್ರಮಂದಿರದ ಮುಂಭಾಗದಲ್ಲಿರುವ ಮಿನರ್ವ ಮಿಲ್ ಪ್ರದೇಶದಲ್ಲಿ ಶೋಭಾ ಅಪಾರ್ಟ್‌ಮೆಂಟ್ ಮತ್ತು ಶೋಭಾ ಮಾಲ್ ನಿರ್ಮಿಸಿರುವುದು ಅಕ್ಷಮ್ಯ.  ಮಾತ್ರವಲ್ಲ, ಈ ಮೂರೂ ಬೃಹತ್ ಕಟ್ಟಡಗಳು ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡಿವೆ. ಜತೆಗೆ ಬಫರ್ ಜೋನ್‌ಗೆ ಜಾಗ ಬಿಟ್ಟಿಲ್ಲ. ಹೀಗಾಗಿ ಈ ಮೂರೂ ಕಟ್ಟಡಗಳು ಸಂಪೂರ್ಣ ಅಕ್ರಮ ಎಂಬುದು ಸಾಬೀತಾಗಿದೆ.

ಆದ್ದರಿಂದ ಕಾನೂನಿನ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಕೈಗಾರಿಕಾ ಪ್ರದೇಶಗಳಿಗೆ ಮೀಸಲಾಗಿದ್ದ ಪ್ರದೇಶಗಳನ್ನು ವಸತಿ ಪ್ರದೇಶಗಳನ್ನಾಗಿ ಭೂ ಪರಿವರ್ತನೆ ಮಾಡಿರುವ ಅಧಿಕಾರಿಗಳು, ಬಿಲ್ಡರ್‌ಗಳು ಹಾಗೂ ಯಾವುದೇ ಸರ್ಕಾರಿ ಜಾಗವನ್ನು ಗುರುತಿಸದೆ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿರುವ  ಬಿಬಿಎಂಪಿ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಬಿಡಿಎ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ರಮೇಶ್ ಪತ್ರದಲ್ಲಿ ಒತ್ತಾಯಿಸಿದ್ದಾರೆ.  ಇದರ ಜತೆಗೆ ಈ ಮೂರೂ ಕಟ್ಟಡಗಳು ಅಕ್ರಮ ಕಟ್ಟಡಗಳಾಗಿದ್ದು, ಅವುಗಳನ್ನು ತೆರವುಗೊಳಿಸುವಂತೆ ಬಿಎಂಟಿಎಫ್ ಅಪರ ಪೊಲೀಸ್ ಮಹಾ ನಿರ್ದೇಶಕರಿಗೂ ದೂರು ನೀಡಿದ್ದಾರೆ.

Write A Comment