ಬೆಂಗಳೂರು,ಜೂ.1: ನಿರ್ಮಾಪಕರ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ನಗರದ ಚಲನಚಿತ್ರ ವಾಣಿಜ್ಯ ಮಂಡಳಿ ಎದುರು ನಿರ್ಮಾಪಕರು ಧರಣಿ ಆರಂಭಿಸಿದ್ದಾರೆ. ತಾವು ನಿರ್ಮಿಸುತ್ತಿರುವ ಚಿತ್ರಗಳು ಹಲವಾರು ಕಾರಣಗಳಿಂದ ಬಾಕ್ಸ್ ಆಫೀಸ್‌ನಲ್ಲೇ ಉಳಿಯುತ್ತಿದ್ದು, ಇದಕ್ಕೆ ಕಾರಣವಾಗಿರುವ ಸಮಸ್ಯೆಗಳನ್ನು ಪರಿಹರಿಸುವಂತೆ ನಿನ್ನೆ ನಡೆದ ಸಭೆಯಲ್ಲಿ ಚರ್ಚಿಸಲಾಯಿತಾದರೂ ಯಾವುದೇ ನಿರ್ಧಾರ ಕೈಗೊಳ್ಳದ ಹಿನ್ನೆಲೆಯಲ್ಲಿ ಇಂದಿನಿಂದ 10 ದಿನಗಳ ಕಾಲ ಧರಣಿ ನಡೆಸಲಿದ್ದು ಒಂದು ವೇಳೆ ಇದಕ್ಕೆ ಸೂಕ್ತ ಸ್ಪಂದನೆ ದೊರೆಯದಿದ್ದಲ್ಲಿ 11ನೇ ದಿನದಿಂದ 24 ಗಂಟೆಗಳ ಕಾಲ ಉಪವಾಸ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಆನಂತರವೂ ಸಂಬಂಧಪಟ್ಟವರು ಸಮಸ್ಯೆ ಬಗೆಹರಿಸದಿದ್ದರೆ ಅಮರಣಾಂತ ಉಪವಾಸ ನಡೆಸಲು ನಿರ್ಮಾಪಕರು ಮುಂದಾಗಿದ್ದಾರೆ. ಚಲನಚಿತ್ರ ಕಲಾವಿದರು ಹಾಗೂ ನಿರ್ದೇಶಕರು ಟಿವಿಗಳ ರಿಯಾಲಿಟಿ ಶೋ ನಿರೂಪಣೆಯಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ಪಾಲ್ಗೊಳ್ಳುತ್ತಿರುವುದರಿಂದ ಆ ಸಮಯದಲ್ಲಿ ಜನ ಥಿಯೇಟರ್‌ಗಳಿಗೆ ಬರುತ್ತಿಲ್ಲ.
ಥಿಯೇಟರ್‌ಗಳಿಗೆ ವಾರದ ಲೆಕ್ಕದಲ್ಲಿ ಕೊಡಬೇಕಾಗಿರುವ ಬಾಡಿಗೆಯನ್ನು ಪರ್ಸಂಟೇಜ್ ಲೆಕ್ಕದಲ್ಲಿ ನೀಡಲು ಮಾರ್ಪಟ್ಟು ಮಾಡುವುದು. ಚಿತ್ರಪ್ರದರ್ಶಕರು ನಿರ್ಮಾಪಕರಿಗೆ ಸಹಕಾರ ನೀಡುವುದು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸಬೇಕು. ಈಗಾಗಲೇ ನಿರ್ಮಾಪಕರು ಪರಭಾಷಾ ಚಿತ್ರಗಳ ಹಾವಳಿಗಳಿಂದ ಕನ್ನಡ ಚಿತ್ರಗಳಿಗೆ ಬೇಡಿಕೆ ಇಲ್ಲದಂತಾಗಿ ನಲುಗುವಂತಾಗಿದೆ. ಹಾಕಿದ ದುಡ್ಡು ಬರುತ್ತಿಲ್ಲ. ಅಲ್ಪಸ್ವಲ್ಪ ಲಾಭದಲ್ಲಿ ಏನನ್ನೂ ಮಾಡಲು ಸಾಧ್ಯವಿಲ್ಲ. ಇದರಿಂದ ಚಿತ್ರರಂಗದಲ್ಲಿ ಉಳಿಯುವುದೇ ಒಂದು ಸವಾಲಾಗಿದೆ. ಹೀಗಾಗಿ ತಮ್ಮ ಬೇಡಿಕೆ ಈಡೇರಿಸುವಂತೆ ಸಭೆಯಲ್ಲಿ ಕೋರಿದ್ದರು. ಈ ಹಿನ್ನೆಲೆಯಲ್ಲಿ ಇಂದು ಆರಂಭಿಸಿರುವ ಧರಣಿಗೆ ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ ಬೆಂಬಲ ಸೂಚಿಸಿದ್ದಾರೆ.
ನಿರ್ಮಾಪಕ ರಾಘವೇಂದ್ರ ರಾಜ್‌ಕುಮಾರ್ ಈ ಕುರಿತಂತೆ ಚಿತ್ರರಂಗದ ಸಮಸ್ಯೆ ನಮ್ಮ ಮನೆಯ ವಿಷಯವಿದ್ದಂತೆ, ಇದನ್ನು ಮುಂದಿಟ್ಟುಕೊಂಡು ಚಾನೆಲ್‌ಗಳ ಮುಂದೆ ಹೋಗುವ ಬದಲು ಎಲ್ಲರನ್ನು ಕರೆಸಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನು ನಟ ಜಗ್ಗೇಶ್, ನಮ್ಮಲ್ಲಿ ಒಗ್ಗಟ್ಟಿಲ್ಲ. ಚಿತ್ರರಂಗವನ್ನು ಉಳಿಸಿಬೆಳೆಸಬೇಕಾದರೆ ಎಲ್ಲರೂ ಒಗ್ಗೂಡಬೇಕು. ನಮ್ಮಲ್ಲಿ ಕೆಲವರು ಬ್ಯಾಂಕ್ ಬ್ಯಾಲೆನ್ಸ್ ನೋಡಿಕೊಂಡು ಕೆಲಸ ಮಾಡುತ್ತಾರೆ ಎಂದು ನೊಂದು ನುಡಿದಿದ್ದಾರೆ. ಈ ಎಲ್ಲ ಬೆಳವಣಿಗೆಗಳ ನಡುವೆ ಇಂದು ನಿರ್ಮಾಪಕರು ಧರಣಿ ಆರಂಭಿಸಿದ್ದು , ನಿರ್ಮಾಪಕ ಜಯಸಿಂಹ ಮುಸುರಿ ನೇತೃತ್ವದಲ್ಲಿ ಉಮೇಶ್ ಬಣಕಾರ್, ಬಾಮಾ ಹರೀಶ್, ಟೇಶಿ ವೆಂಕಟೇಶ್, ಎ.ಗಣೇಶ್, ರಾಜೇಂದ್ರ ಸಿಂಗ್ ಬಾಬು ಮತ್ತಿತರರು ಧರಣಿಯಲ್ಲಿ ನಿರತರಾಗಿದ್ದಾರೆ.