ಕರ್ನಾಟಕ

ಪಂಚಾಯ್ತಿ ಚುನಾವಣೆ : ಇಂದು ಮೊದಲ ಹಂತದ ಮತದಾನ

Pinterest LinkedIn Tumblr

GramPanchayat-Election

ಬೆಂಗಳೂರು, ಮೇ 28- ಗ್ರಾಮ ಪಂಚಾಯ್ತಿಯ ಮೊದಲ ಹಂತದ ಚುನಾವಣೆಯ ಮತದಾನ ನಾಳೆ ರಾಜ್ಯದ 15 ಜಿಲ್ಲೆಗಳಲ್ಲಿ ನಡೆಯಲಿದೆ. ಕಡೆಗಳಿಗೆಯ ಬಿರುಸಿನ ಚುನಾವಣೆ ಪ್ರಚಾರದಲ್ಲಿ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ತೊಡಗಿದ್ದಾರೆ. ಪ್ರಚಾರದ ಭರಾಟೆ ನಿರ್ಣಾಯಕ ಘಟ್ಟ ತಲುಪಿದ್ದು, ಮತದಾರರನ್ನು ತಮ್ಮತ್ತ ಮನ ಸೆಳೆಯಲು ನಾನಾ ರೀತಿಯ ಕಸರತ್ತು ನಡೆಸುತ್ತಿದ್ದಾರೆ.

ಒಟ್ಟು 43,579 ಸದಸ್ಯ ಸ್ಥಾನಗಳಿಗೆ  1,20,663 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದು ನಾಳೆ ಅವರ ಭವಿಷ್ಯವನ್ನು ಮತದಾರರು ನಿರ್ಧರಿಸಲಿದ್ದಾರೆ. ಬೆಳಗ್ಗೆ 7ರಿಂದ ಸಂಜೆ 5ರವರೆಗೆ ಆಯಾ ಮತಗಟ್ಟೆಗಳಲ್ಲಿ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಹಾಸನ, ಕೊಡಗು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಳಗಾವಿ, ಬಿಜಾಪುರ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ 3,156 ಗ್ರಾಪಂಗಳಿಗೆ ಮತದಾನ ನಡೆಯಲಿದೆ.48,621 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, 554 ಸ್ಥಾನಗಳಿಗೆ ನಾಮಪತ್ರೆಗಳೇ ಸಲ್ಲಿಕೆಯಾಗಿಲ್ಲ. 4,460 ಸದಸ್ಯ ಸ್ಥಾನಗಳಿಗೆ ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದೆ. nಚುನಾವಣಾ ಕಣದಲ್ಲಿ ಅತ್ತೆ-ಸೊಸೆ, ಅತ್ತಿಗೆ-ನಾದಿನಿ, ಅಣ್ಣ-ತಮ್ಮ, ಒರಗಿತ್ತಿಯರು ಕೂಡ ಸ್ಪರ್ಧೆಗಿಳಿದಿರುವುದು ಈ ಬಾರಿಯ ವಿಶೇಷ. ಹಳ್ಳಿ ಚುನಾವಣೆಯಾಗಿರುವುದರಿಂದ ಇಂದು ಮತದಾರರ ಓಲೈಕೆ ನಡೆಯಲಿದ್ದು, ನಾನಾ ರೀತಿಯ ಉಡುಗೊರೆಗಳ ಆಮಿಷಗಳನ್ನು ಒಡ್ಡಲಾಗುತ್ತಿದೆ.

ಚುನಾವಣಾ ಸಿಬ್ಬಂದಿ:
ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿ ಇಂದು ಆಯಾ ತಾಲ್ಲೂಕಿನಲ್ಲಿ ಸಮಾವೇಶಗೊಂಡು ನಿಗದಿ ಪಡಿಸಿರುವ ಮತಗಟ್ಟೆಗಳಿಗೆ ಚುನಾವಣಾ ಸಾಮಗ್ರಿಯೊಂದಿಗೆ ತೆರಳಿದರು. ತಾಲ್ಲೂಕು ಕೇಂದ್ರಗಳಲ್ಲಿ ಮಸ್ಟರಿಂಗ್ ನಡೆದಿದ್ದು, ನಾಳೆ ಸಂಜೆ ತಾಲ್ಲೂಕು ಕೇಂದ್ರಗಳಲ್ಲೇ ಡಿ ಮಸ್ಟರಿಂಗ್ ಕೂಡ ನಡೆಯುತ್ತದೆ. ಜೂನ್ 5ರಂದು ಆಯಾ ತಾಲ್ಲೂಕು ಕೇಂದ್ರಗಳಲ್ಲಿ ಮತ ಎಣಿಕೆ ನಡೆದು ಅಂದು ಸಂಜೆಯೊಳಗೆ ಫಲಿತಾಂಶ ಹೊರ ಬೀಳಲಿದೆ.

ಬಿಗಿ ಭದ್ರತೆ:
ಗ್ರಾಮ ಪಂಚಾಯ್ತಿ ಚುನಾವಣೆಗೆ ಸೂಕ್ತ ಬಿಗಿ ಭದ್ರತೆಯನ್ನು ಒದಗಿಸಲಾಗಿದ್ದು, ಅತಿ ಸೂಕ್ಷ್ಮ ಮತಗಟ್ಟೆಗಳಿಗೆ ಹೆಡ್‌ಕಾನ್ಸ್‌ಟೆಬಲ್ ಹಾಗೂ ಕಾನ್ಸ್‌ಟೆಬಲ್ ನಿಯೋಜಿಸಲಾಗಿದೆ. ಸೂಕ್ಷ್ಮ ಮತಗಟ್ಟೆಗಳಿಗೆ ಕಾನ್ಸ್‌ಟೆಬಲ್ ಜತೆಗೆ ಒಬ್ಬೊಬ್ಬ ಹೋಮ್‌ಗಾರ್ಡ್ಸ್‌ನನ್ನು ನಿಯೋಜಿಸಲಾಗಿದೆ. ಸಾಮಾನ್ಯ ಮತಗಟ್ಟೆಗಳಿಗೆ ಒಬ್ಬ ಕಾನ್ಸ್‌ಟೆಬಲ್‌ನನ್ನು ನಿಯೋಜಿಸಲಾಗಿದೆ. ಅಲ್ಲದೆ, 10 ಮತಗಟ್ಟೆಗಳಿಗೆ ಒಬ್ಬ ಸಬ್‌ಇನ್ಸ್‌ಪೆಕ್ಟರ್‌ಗೆ ಭದ್ರತೆಯ ಹೊಣೆಗಾರಿಕೆಯನ್ನು ವಹಿಸಲಾಗಿದೆ.

*  20,225 ಭದ್ರತಾ ಸಿಬ್ಬಂದಿ
ಬೆಂಗಳೂರು, ಮೇ 28-ನಾಳೆ ನಡೆಯಲಿರುವ ಮೊದಲ ಹಂತದ ಗ್ರಾ.ಪಂ.ಚುನಾವಣೆ ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಯಲು ಸಕಲ ಸಿದ್ದತೆಗಳನ್ನು ಮಾಡಿಕೊಂಡಿದ್ದು, ಭದ್ರತೆಗಾಗಿ 20,225 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
15 ಜಿಲ್ಲೆಗಳಲ್ಲಿ ನಡೆಯುವ ಮೊದಲ ಹಂತದ ಗ್ರಾ.ಪಂ.ಚುನಾವಣೆಗೆ 16,965 ಮತಗಟ್ಟೆಗಳನ್ನು ಸ್ಥಾಪಿಸಿದ್ದು, ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಕಾನ್ಸ್‌ಟೇಬಲ್‌ನಿಂದ ಹಿಡಿದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರೆಗೆ ವಿವಿಧ ಹಂತದ 20,225 ಸಿಬ್ಬಂದಿಯನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ.  ಕಎಸ್‌ಆರ್‌ಪಿ, ಸಿಎಅರ್, ಡಿಎಆರ್ ಸೇರಿದಂತೆ 304 ತುಕುಡಿಗಳನ್ನು ನಿಯೋಜಿಸಲಾಗಿದೆ. ಹೆಚ್ಚಿನ ಭದ್ರತೆಗಾಗಿ 9,763 ಗೃಹ ರಕ್ಷಕ ದಳದ ಸಿಬ್ಬಂದಿಯನ್ನು ಚುನಾವಣಾ ಕಾರ್ಯದ ಭದ್ರತೆಗಾಗಿ ಬಳಸಿಕೊಳ್ಳಲಾಗಿದೆ. ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

* ಓಟ್ ಹಾಕಲು ಬನ್ನಿ ಮರೀಬೇಡಿ
ಬೆಂಗಳೂರು, ಮೇ 28 -ಕಾರ್ ಮಾಡ್ಕೊಂಡು ಬಂದ್‌ಬಿಡಿ, ಅದೇನಾಗುತ್ತೆ ಕೊಡ್ತೀವಿ, ಓಟು ಹಾಕೋದ್ ಮರೀಬೇಡಿ. ದಯವಿಟ್ಟು ಊರಿಗ್ ಬಂದು ಓಟ್ ಹಾಕಿ, ನಿಮ್ ಓಟು ಬಹಳ ಮುಖ್ಯ. ನೀವ್ ನಾಲ್ಕ್ ಜನ ಓಟ್ ಹಾಕಿದ್ರೆ ನಾವ್ ಗೆಲ್ತೀವಿ.
ಈ ಥರ ಫೋನ್ ಕರೆಗಳು ಬೆಂಗಳೂರಿನಲ್ಲಿರುವವರಿಗೆ ಬರ್ತಾರನೇ ಇವೆ. ಬೇರೆ ಬೇರೆ ಊರುಗಳಿಂದ ಬದುಕಿಗೋಸ್ಕರ ಬೆಂಗಳೂರಿಗೆ ಬಂದು ನೆಲೆಸಿರುವವರಿಗೆ ಪಂಚಾಯ್ತಿ ಚುನಾವಣಾ ಸಂದರ್ಭದಲ್ಲಿ ಫುಲ್ ಡಿಮ್ಯಾಂಡ್ ಬಂದಿದೆ. ಊರಿನಲ್ಲಿ ಓಟು ಇದ್ದವರಿಗೆ ಕಣದಲ್ಲಿರುವ ಅಭ್ಯರ್ಥಿಗಳು ಪರಿ ಪರಿಯಾಗಿ ಬೇಡಿಕೊಳ್ಳುತ್ತಿದ್ದಾರೆ.  ಏನಾದ್ರೂ ಆಗ್ಲಿ ಖರ್ಚು ನಾವು ಕೊಡ್ತೀವಿ ನೀವ್ ಬಂದು ಓಟ್ ಹಾಕ್ಲೇ ಬೇಕು ಎಂದು ಅಲವತ್ತುಕೊಳ್ಳುತ್ತಿದ್ದಾರೆ. ನಿನ್ನೆಯಿಂದ ವಿವಿಧ ಗ್ರಾಮಗಳಿಗೆ ತೆರಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಟ್ರೈನ್‌ಗಳಲ್ಲಿ, ಬಸ್‌ಗಳಲ್ಲಿ ವಿವಿಧ ಊರುಗಳಿಗೆ ಹೋಗುತ್ತಿರುವವರ ದೃಶ್ಯ ಕಂಡುಬಂತು.

ಗಾರ್ಮೆಂಟ್ಸ್, ವಿವಿಧ ಫ್ಯಾಕ್ಟರಿಗಳಲ್ಲಿ ವಿವಿಧ ಉದ್ಯೋಗಗಳನ್ನು ಹಿಡಿದು ಬದುಕುತ್ತಿರುವವರು ತಮ್ಮ ಮತದಾನದ ಮಹತ್ವ ಅರಿತಿದ್ದಾರೆ. ಅಂತಹವರು ಯಾರ ಮಾತನ್ನೂ ಕೇಳದೆ ತಮ್ಮಷ್ಟಕ್ಕೆ ತಾವು ಹೋಗಿ ತಮ್ಮ ಮತ ಚಲಾಯಿಸಿ ಬರುತ್ತಾರೆ. ಮತ್ತೆ ಕೆಲವರು ತಮ್ಮ ಮತಗಳಿಗೆ ಡಿಮ್ಯಾಂಡ್ ಕ್ರಿಯೇಟ್ ಮಾಡಿಕೊಳ್ಳುತ್ತಾರೆ.  ಕೆಲವರು ಯಾವ ಗೋಜಿಗೂ ಹೋಗದೆ ಚುನಾವಣೆಯೂ ಬೇಡ ಮತದಾನವೂ ಬೇಡ ಎಂದು ತಮ್ಮಷ್ಟಕ್ಕೆ ತಾವು ಇರುತ್ತಾರೆ. ಆದರೆ ಕಣದಲ್ಲಿರುವ ಅಭ್ಯರ್ಥಿಗಳು ಮಾತ್ರ ಬೆಂಗಳೂರಿನಲ್ಲಿರುವ ಮತದಾರರನ್ನು ಬಸ್‌ಗಳಲ್ಲಿ, ವ್ಯಾನ್‌ಗಳಲ್ಲಿ ಕರೆದೊಯ್ಯುತ್ತಿದ್ದಾರೆ.

Write A Comment