ಕರ್ನಾಟಕ

ಪಿಯು ಫಲಿತಾಂಶ ಗೊಂದಲ : ಸುಷ್ಮಾ ಗೋಡಬೊಲೆಗೆ ತುರ್ತು ನೋಟಿಸ್

Pinterest LinkedIn Tumblr

Sushma-Godbole-PU-Result

ಬೆಂಗಳೂರು, ಮೇ 28-ಪಿಯುಸಿ ಫಲಿತಾಂಶ ಪ್ರಕಟಣೆ ವೇಳೆ ಸಾಕಷ್ಟು  ಗೊಂದಲಗಳ ಮೂಲಕ ತೀವ್ರ ವಿವಾದಗಳ ನಡುವೆ  ಸರ್ಕಾರಕ್ಕೆ ಮುಜುಗರ ಉಂಟು ಮಾಡಿದ್ದ ಪದವಿ ಪೂರ್ವ ಶಿಕ್ಷಣ ಇಲಾಖೆ ಮಂಡಳಿ ನಿರ್ದೇಶಕಿ ಸುಷ್ಮಾ ಗೋಡಬೊಲೆಗೆ ಸ್ಪಷ್ಟನೆ ಕೋರಿ ಸರ್ಕಾರ  ತುರ್ತು  ನೋಟಿಸ್ ಜಾರಿ ಮಾಡಿದೆ.

ಇದೇ  22 ರಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜ್‌ಕುಮಾರ್ ಕತ್ರಿ ಅವರು ನೋಟಿಸ್ ಜಾರಿ ಮಾಡಿದ್ದು, ಸ್ಪಷ್ಟನೆ ನೀಡಬೇಕೆಂದು ಸೂಚಿಸಿದ್ದಾರೆ.  ಫಲಿತಾಂಶ ಪ್ರಕಟವಾದ ಬಳಿಕ ಉಂಟಾದ  ಗೊಂದಲಗಳ ಬಗ್ಗೆ ಸ್ಪಷ್ಟನೆ ನೀಡುವಂತೆ  ಸೂಚನೆ ನೀಡಿದ್ದರೂ ವಿಳಂಬ ಮಾಡಿದ್ದರಿಂದ ಉದ್ದೇಶವೇನೆಂದು ನೋಟಿಸ್‌ನಲ್ಲಿ ಪ್ರಶ್ನಿಸಲಾಗಿದೆ.  ನಿಮ್ಮ ಪ್ರಮಾದದಿಂದಾಗಿ ಶಿಕ್ಷಣ ಇಲಾಖೆಗೆ ಸಾಕಷ್ಟು ಮುಜುಗರ ಉಂಟಾಗಿದೆ. ಪೋಷಕರು, ವಿದ್ಯಾರ್ಥಿಗಳಿಗೆ, ವಿವಿಧ ಸಂಘಟನೆಗಳು, ರಾಜಕೀಯ ಪಕ್ಷಗಳ ಮುಖಂಡರು ಒಂದು ವಾರ ಪ್ರತಿಭಟನೆ ನಡೆಸಿ ನಮ್ಮ ಇಲಾಖೆಗೆ ಹಿಡಿಶಾಪ ಹಾಕಿದ್ದಾರೆ. ಇದರ ಹಿಂದಿನ ಉದ್ದೇಶವಾದರೂ ಏನು ಎಂದು ಕೇಳಲಾಗಿದೆ.

ಮೇ 18 ರಂದು ಪಿಯುಸಿ ಫಲಿತಾಂಶ ಪ್ರಕಟಗೊಂಡ ಬಳಿಕ ಸಾಕಷ್ಟು ಗೊಂದಲ ಉಂಟಾಗಿತ್ತು. ಸರ್ಕಾರಿ ವೆಬ್‌ಸೈಟ್‌ಗಳಲ್ಲಿ ಒಂದು ರೀತಿಯ ಫಲಿತಾಂಶ ಪ್ರಕಟಗೊಂಡರೆ, ಖಾಸಗಿ ವೆಬ್‌ಸೈಟ್‌ನಲ್ಲಿ ಮತ್ತೊಂದು ರೀತಿಯ ಫಲಿತಾಂಶ ಬಂದಿತ್ತು. ಫಲಿತಾಂಶದ ಬಗ್ಗೆ ಸಾಕಷ್ಟು ನಿರೀಕ್ಷೆಯಿಟ್ಟುಕೊಂಡಿದ್ದ ಪ್ರತಿಭಾನ್ವಿತ ವಿದ್ಯಾರ್ಥಿಗಳು ಕಡಿಮೆ ಅಂಕ ಬಂದಿರುವುದು ಇಲ್ಲವೆ, ಅನುತ್ತೀರ್ಣರಾಗಿರುವ ಬಗ್ಗೆ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳು ನಡೆದಿವೆ. ಅಲ್ಲದೆ ಪಿಯು ಮಂಡಳಿ ಮುಂದೆ ಒಂದು ವಾರ ಪೋಷಕರು, ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಇಲಾಖೆಗೆ ಹಿಡಿಶಾಪ ಹಾಕಿದ್ದಾರೆ.  ಸ್ವತಃ ಶಿಕ್ಷಣ ಸಚಿವರಾದ ಕಿಮ್ಮನೆ ರತ್ನಾಕರ್ ಸ್ಪಷ್ಟನೆ ನೀಡಬೇಕೆಂದು ಪದೇ ಪದೇ ಸೂಚನೆ ಕೊಟ್ಟರೂ ನೀವು ಇದನ್ನು ಗಂಭೀರವಾಗಿ ಪರಿಗಣಿಸದೆ ಉದಾಸೀನ ತೋರಿದಿರಿ. ಈ ಹಿನ್ನೆಲೆಯಲ್ಲಿ ನಿಮಗೆ ನೋಟಿಸ್ ಜಾರಿ ಮಾಡಿ ಸ್ಪಷ್ಟನೆ ನೀಡಬೇಕೆಂದು ಸರ್ಕಾರ ಆದೇಶಿಸಿದೆ.

Write A Comment