ರಾಷ್ಟ್ರೀಯ

ಜೂನ್‌ನಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಸಾಧ್ಯತೆ

Pinterest LinkedIn Tumblr

Rain-in-june

ಬೆಂಗಳೂರು, ಮೇ 28- ನೈರುತ್ಯ ಮುಂಗಾರು ಪ್ರಾರಂಭದಲ್ಲೇ ದುರ್ಬಲಗೊಳ್ಳುವ ಮುನ್ಸೂಚನೆ ಗಳಿವೆ ಎಂದು ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ನೈರುತ್ಯ ಮುಂಗಾರು ಪ್ರಾರಂಭಕ್ಕೆ ಬೇಕಾದ ಪೂರಕ ವಾತಾವರಣ ನಿರ್ಮಾಣವಾಗುತ್ತಿದ್ದು, ಎರಡು ದಿನಗಳ ಕಾಲ ವಿಳಂಬವಾಗುವ ಲಕ್ಷಣಗಳಿವೆ ಎಂದು

ಕರ್ನಾಟಕ ನೈಸರ್ಗಿಕ ವಿಕೋಪ  ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್. ಶ್ರೀನಿವಾಸರೆಡ್ಡಿ ಈ ಸಂಜೆಗೆ ತಿಳಿಸಿದರು. ಜೂ.2ರ ವೇಳೆಗೆ ಮುಂಗಾರು ರಾಜ್ಯ ಪ್ರವೇಶಿಸಿದರೂ ಕೂಡ  ಜೂ.10ರ ತನಕ ಚೇತರಿಕೆ ಕಾಣು ವುದಿಲ್ಲ. ಆನಂತರ ಮುಂಗಾರು ಮಳೆ ಚುರುಕಾದರೂ ರಾಜ್ಯದ 20 ಜಿಲ್ಲೆಗಳಲ್ಲಿ ವಾಡಿಕೆಗಿಂತ ಶೇ.20ರಷ್ಟು ಮಳೆ ಕಡಿಮೆಯಾಗುತ್ತದೆ. ಆದರೆ, ಅಖಿಲ ಭಾರತ ಮಟ್ಟಕ್ಕೆ ಹಾಗೂ ಇತರೆ ರಾಜ್ಯಗಳಿಗೆ ಹೋಲಿಸಿದರೆ. ಒಟ್ಟಾರೆ ರಾಜ್ಯದ ಮುಂಗಾರು ಮಳೆಯ ಪ್ರಮಾಣ ತೃಪ್ತಿದಾಯಕವಾಗಲಿದೆ ಎಂದರು. ಜೂನ್‌ನಲ್ಲಿ ಮಳೆ ಅಭಾವ ಕಂಡು ಬಂದರೂ ಜುಲೈ ಮತ್ತು ಆಗಸ್ಟ್ ನಲ್ಲಿ ಉತ್ತಮ ಮಳೆಯಾಗುವ ಮುನ್ಸೂಚನೆಗಳು ಕಂಡಬರುತ್ತಿವೆ ಎಂದು ತಿಳಿಸಿದರು.

ಆದರೆ, ಹವಾಮಾನ ತಜ್ಞ ವಿ.ಎಸ್.ಪ್ರಕಾಶ್ ಅವರ ಪ್ರಕಾರ ಮೇ 31 ಇಲ್ಲವೇ ಜೂನ್ 1ರಂದು ಮುಂಗಾರು ಮಳೆ ರಾಜ್ಯ ಪ್ರವೇಶಿಸುವ ಸಾಧ್ಯತೆ ಇದೆ. ಮೂರ್ನಾ್ಲ್ಕು ದಿನಗಳ ಕಾಲ ಮಳೆಯಾದರೂ ಆನಂತರ ಮುಂಗಾರು ದುರ್ಬಲಗೊಳ್ಳಲಿದೆ.  ಮತ್ತೆ ಜೂ.10ಮತ್ತು 11ರ ನಂತರ ರಾಜ್ಯದಲ್ಲಿ ಮಳೆ ಚುರುಕಾಗಲಿದೆ. ಆದರೂ 2ರಿಂದ 4ವಾರಗಳ ಕಾಲ ಮಳೆ ಅಭಾವ ಸಂಭವಿಸುವ ಸಾಧ್ಯತೆ ಹೆಚ್ಚಾಗಲಿದೆ. ಈ ಬಾರಿ ಪ್ರತಿ ವಾರವೂ ಬದಲಾವಣೆಗಳು ಹೆಚ್ಚಾಗಿ ಕಂಡು ಬರುತ್ತಿದ್ದು, ಮಳೆಯ ದೀರ್ಘಕಾಲಿಕ ಮುನ್ಸೂಚನೆ ಅಂದಾಜು ನಿಖರವಾಗುತ್ತಿಲ್ಲ ಎಂದು ಸ್ಪಷ್ಟಪಡಿಸಿದರು. ನಿನ್ನೆ ರಾತ್ರಿ ಬೆಂಗಳೂರು, ಬೆಂಗ ಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಮೈಸೂರು, ಬಾಗಲಕೋಟೆ, ಗದಗ, ಕೊಪ್ಪಳ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆಯಾಗಿದೆ. ಕೆಲವು ಭಾಗಗಳಲ್ಲಿ ಗುಡುಗು, ಮಿಂಚು, ಸಿಡಿಲು , ಬಿರುಗಾಳಿಯ ಆರ್ಭಟ ಹೆಚ್ಚಾಗಿ ಕಂಡು ಬಂದಿರುವುದು ವರದಿಯಾಗಿದೆ.

ಮುಂಗಾರು ಮಳೆಗೂ ನಿನ್ನೆ ಬಿದ್ದಿರುವ ಮಳೆಗೂ ಸಂಬಂಧವಿಲ್ಲ. ಇದು ಎಂದಿನಂತೆ ಮುಂಗಾರು ಪೂರ್ವ ಮಳೆಯಾಗಿದೆ. ಸ್ಥಳೀಯ ಹವಾಮುನ್ಸೂಚನೆ ಪ್ರಕಾರ ಇಂದು ಮತ್ತು ನಾಳೆ ಯಥಾ ರೀತಿ ಮಳೆ ಮುಂದುವರೆಯುವ ಸಾಧ್ಯತೆಗಳಿವೆ ಎಂದು ತಜ್ಞರು ತಿಳಿಸಿದ್ದಾರೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಲಘು ವಾಯುಭಾರ ಕುಸಿತ ಪರಿಣಾಮದಿಂದ ನಿನ್ನೆಯಿಂದ ಮೋಡಕವಿದ ವಾತಾವರಣ ಕಂಡು ಬರುತ್ತಿದ್ದು, ಇನ್ನೂ ಎರಡು ದಿನಗಳ ಕಾಲ ಮಳೆ ಮುಂದುವರೆಯುವ ಸಾಧ್ಯತೆಗಳಿವೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.

Write A Comment