ಕರ್ನಾಟಕ

ಗ್ರಾ.ಪಂ. ಚುನಾವಣೆಗೆ ಸಿದ್ಧತೆ ಪೂರ್ಣ

Pinterest LinkedIn Tumblr

vote

ಬೆಂಗಳೂರು, ಮೇ 27: ರಾಜ್ಯದಲ್ಲಿ ಗ್ರಾಮ ಪಂಚಾಯತ್ ಚುನಾವಣೆ ಯಶಸ್ವಿಗೊಳಿಸಲು ಚುನಾವಣಾ ಆಯೋಗವು ಎಲ್ಲ ರೀತಿಯ ವ್ಯವಸ್ಥೆಯನ್ನು ಮಾಡಿಕೊಂಡಿದ್ದು, ಯಾವುದೇ ಲೋಪದೋಷಗಳಿಲ್ಲದೆ ಸುಗಮವಾಗಿ ಚುನಾವಣೆ ನಡೆಯಲಿದೆ ಎಂದು ರಾಜ್ಯ ಚುನಾವಣಾ ಆಯುಕ್ತ ಟಿ.ಎನ್. ಶ್ರೀನಿವಾಸಾಚಾರಿ ತಿಳಿಸಿದ್ದಾರೆ.
ಬುಧವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಬೆಂಗಳೂರು ವರದಿಗಾರರ ಕೂಟ ಹಾಗೂ ಪ್ರೆಸ್‌ಕ್ಲಬ್ ಆಫ್ ಬೆಂಗಳೂರು ಜಂಟಿಯಾಗಿ ಏರ್ಪಡಿಸಿದ್ದ ಪತ್ರಿಕಾ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾಳೆ (ಮೇ 29) ಬೆಳಗಾವಿ, ಮೈಸೂರು ಭಾಗ ಸೇರಿದಂತೆ ಒಟ್ಟು 15 ಜಿಲ್ಲೆಗಳಲ್ಲಿ ಎರಡನೆ ಹಂತದ ಚುನಾವಣೆ ಪ್ರಕ್ರಿಯೆ ಆರಂಭಗೊಳ್ಳಲಿದೆ. ಅದೇ ರೀತಿ ಜೂನ್ 2ರಂದು ಎರಡನೆ ಹಂತದ ಮತದಾನ ನಡೆಯಲಿದೆ ಎಂದರು.
ಆಯೋಗವು ರಾಜ್ಯದ 30 ಜಿಲ್ಲೆಗಳಲ್ಲಿನ ಒಟ್ಟು 6,073 ಗ್ರಾಮ ಪಂಚಾಯತ್‌ಗಳ ಪೈಕಿ 5,835 ಗ್ರಾಮ ಪಂಚಾಯತ್‌ಗಳಿಗೆ ಸಾರ್ವತ್ರಿಕ ಚುನಾವಣೆಯನ್ನು ನಿಗದಿಪಡಿಸಿದ ವೇಳಾಪಟ್ಟಿಯಲ್ಲಿಯೇ ನಡೆಸಲಾಗುವುದು ಎಂದರು.ಕೆಲ ವೊಂದು ಗ್ರಾಮಗಳಲ್ಲಿ ಹರಾಜು ಮೂಲಕ ಅವಿ ರೋಧ ಆಯ್ಕೆ ಕಾರ್ಯ ನಡೆ ದಿದೆ ಎಂಬ ಸುದ್ದಿ ಹೆಚ್ಚಾಗಿದೆ. ಹಾಗಾಗಿ ಈಗಾಗಲೇ ಎಲ್ಲ ಜಿಲ್ಲಾಧಿಕಾರಿಗಳಿಗೂ ಅಂತಹ ಕಾನೂನು ಬಾಹಿರ ಚಟುವಟಿಕೆಗಳು ನಡೆಯದಂತೆ ಎಚ್ಚರ ವಹಿಸಬೇಕು ಹಾಗೂ ಎಲ್ಲರಿಗೂ ಸಂವಿಧಾನದ ನಿಯಮದಂತೆ ಸ್ಪರ್ಧಿಸಲು ಮುಕ್ತ ಅವಕಾಶ ನೀಡಬೇಕೆಂದು ಸೂಚಿಸಲಾಗಿದೆ ಎಂದು ಶ್ರೀನಿವಾಸಾಚಾರಿ ವಿವರಿಸಿದರು. ರಾಜ್ಯ ಸರಕಾರದ ಮುಂದೆ ಈಗಾಗಲೇ ಚುನಾವಣೆ ಪ್ರಚಾರದ ಅವಧಿಯನ್ನು ನಾಲ್ಕು ದಿನಗಳಿಗೆ ಕಡ್ಡಾಯಗೊಳಿಸಬೇಕೆಂದು ಮನವಿ ಮಾಡಲಾಗಿರುವ ಪ್ರಸ್ತಾವನೆಯಿದೆ ಎಂದ ಅವರು, ಈ ಬಾರಿ ಗ್ರಾಮ ಪಂಚಾಯತ್ ಚುನಾವಣೆಗೆ ಅವಧಿ ವಿಸ್ತರಿಸಲು ಸಾಧ್ಯವಾಗಿಲ್ಲ. ಹಾಗಾಗಿ ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆ ಪ್ರಕ್ರಿಯೆ ಜಾರಿಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಪ್ರಸ್ತುತ ಸಾಲಿನ ಗ್ರಾ.ಪಂಚಾಯತ್ ಚುನಾವಣಾ ವಿಭಾಗಕ್ಕೆ ಒಬ್ಬರಂತೆ 52 ಮಂದಿ ವೀಕ್ಷಕರನ್ನು 15 ಗ್ರಾ.ಪಂ.ಗೆ ಒಬ್ಬ ಜಿಲ್ಲಾ ಮಟ್ಟದ ಅಧಿಕಾರಿಯನ್ನು ನೋಡಲ್ ಅಧಿಕಾರಿಯನ್ನಾಗಿ ಒಟ್ಟು 352 ಮಂದಿಯನ್ನು ನೇಮಕ ಮಾಡಲಾಗಿದೆ. ಅಲ್ಲದೆ, ಕೆಲವೊಂದು ಗ್ರಾಮದಲ್ಲಿ ಚುನಾವಣೆ ಬಹಿಷ್ಕಾರ ಹಾಕಿದ್ದಾರೆ ಎಂದರು.
ಸೂಪರ್ ಬಂದೋಬಸ್ತ್: ಒಂದೇ ಗ್ರಾಮದ ವ್ಯಕ್ತಿಗಳು ಪರಸ್ಪರ ಚುನಾವಣೆಯಲ್ಲಿ ಸ್ಪರ್ಧಿಸುವ ಹಿನ್ನೆಲೆಯಲ್ಲಿ ಅತೀ ಹೆಚ್ಚಾದ ಜವಾಬ್ದಾರಿಯು ಆಯೋಗದ ಮೇಲೆ ಇದೆ. ಆದ್ದರಿಂದ ಈಗಾಗಲೇ 39,891 ಪೊಲೀಸ್ ಸಿಬ್ಬಂದಿ, ಹೆಚ್ಚುವರಿ ನೇಮಕ ಮಾಡಿರುವ ಮೀಸಲು ಪಡೆ(ಕೆಎಸ್‌ಆರ್‌ಪಿ/ಸಿಎಆರ್/ಡಿಎಆರ್) 582 ಹಾಗೂ 18,879 ಹೋಮ್ ಗಾರ್ಡ್‌ಗಳನ್ನು ನಿಯೋಜಿಸಲಾಗಿದೆ.
ಬೀದರ್‌ಗೆ ಇವಿಎಂ: ಬೀದರ್ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಪ್ರಾಯೋಗಿಕವಾಗಿ ಒಟ್ಟು 1,154 ಮತಗಟ್ಟೆಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳ(ಇವಿಎಂ) ಮೂಲಕ ಚುನಾವಣೆ ಪ್ರಕ್ರಿಯೆ ಕೈಗೊಳ್ಳಲಾಗುವುದು ಎಂದರು.

ರಾಜ್ಯದ ಪ್ರತಿಯೊಂದು ಗ್ರಾಮ ಪಂಚಾಯತ್‌ನಲ್ಲೂ ಸೂಕ್ತ ರೀತಿಯಲ್ಲಿ ಹಾಗೂ ಶಾಂತವಾಗಿ ಮತದಾನ ಪ್ರಕ್ರಿಯೆ ನಡೆಯಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಯಾವುದೇ ಲೋಪದೋಷಗಳು ಉಂಟಾಗದಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಟಿ.ಎನ್.ಶ್ರೀನಿವಾಸಾಚಾರಿ, ರಾಜ್ಯ ಚುನಾವಣಾ ಆಯುಕ್ತ

ಗ್ರಾಮ ಪಂಚಾಯತ್‌ಗಳು  5,835
ಒಟ್ಟು ಸ್ಥಾನಗಳು  94,348
ಚು.ನಡೆಯಲಿರುವ ಸ್ಥಾನಗಳು  84,760
ಕಣದಲ್ಲಿರುವ ಅಭ್ಯರ್ಥಿಗಳು  2,33,493
ಒಟ್ಟು ಮತಗಟ್ಟೆಗಳು  37,754
ಸೂಕ್ಷ್ಮ ಮತಗಟ್ಟೆಗಳು  8,515
ಅತೀಸೂಕ್ಷ್ಮ ಮತಗಟ್ಟೆಗಳು  6,167
ಒಟ್ಟು ಮತದಾರರು  2,78,50,874
ಪುರುಷ ಮತದಾರರು  1,41,80,139
ಮಹಿಳಾ ಮತದಾರರು  1,36,70,735

Write A Comment