ಬೆಂಗಳೂರು: ಕರ್ನಾಟಕದ ಯಾವುದೇ ಭಾಗದಲ್ಲಿ ಇನ್ನು ಮುಂದೆ ಚಿತ್ರೀಕರಣಕ್ಕೆ ತೆರಳಿದರೆ ಅದರ ವಿವರಗಳನ್ನು ಕಡ್ಡಾಯವಾಗಿ ವಾರ್ತಾ ಇಲಾಖೆ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿಗೆ ನೀಡಿ ಅನುಮತಿ ಪಡೆದೇ ಚಿತ್ರೀಕರಣಕ್ಕೆ ಹೋಗಬೇಕೆಂದು ವಾಣಿಜ್ಯ ಮಂಡಳಿ ಅಧ್ಯಕ್ಷ ಥಾಮಸ್ ಡಿಸೋಜ ಹಾಗೂ ನಿರ್ಮಾಪಕ ವಲಯದ ಕಾರ್ಯದರ್ಶಿ ಭಾ.ಮಾ.ಹರೀಶ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಬಿಸಿಲು ಕುದುರೆ ಚಿತ್ರೀಕರಣಕ್ಕೆಂದು ನಟ-ನಟಿ ಸೇರಿದಂತೆ ಸಹನಟಿಯರ ತಂಡ ಶಿವಮೊಗ್ಗಕ್ಕೆಂದು ತೆರಳಿದ್ದಾಗ ಸಹನಟಿಯೊಬ್ಬರ ಮೇಲೆ ಚಿತ್ರ ನಿರ್ಮಾಪಕ ಎಂದು ಹೇಳಿಕೊಂಡು ಪರಿಚಯಿಸಿಕೊಂಡ ಅಲ್ಲಿನ ಸ್ಥಳೀಯ ನಿವಾಸಿಯೊಬ್ಬ ಅತ್ಯಾಚಾರಕ್ಕೆ ಯತ್ನಿಸಿದ್ದ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಇಂದು ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಭೆ ನಡೆದು ಮುನ್ನೆಚ್ಚರಿಕೆಯಾಗಿ ಈ ನಿರ್ಧಾರಕ್ಕೆ ಬರಲಾಯಿತು.
ಚಿತ್ರೀಕರಣಕ್ಕೆ ಹೋಗುವ ವಿವರಗಳನ್ನು ವಾರ್ತಾ ಇಲಾಖೆ ಹಾಗೂ ವಾಣಿಜ್ಯ ಮಂಡಳಿಗೆ ಒಂದು ವಾರದ ಮುಂಚಿತವಾಗಿ ನೀಡಿ ಅನುಮತಿ ಪಡೆಯಬೇಕು. ಆ ರೀತಿ ಮಾಡುವುರಿಂದ ಅಲ್ಲಿ ಯಾವುದೇ ಸಮಸ್ಯೆ ಎದುರಾದರೂ ತಕ್ಷಣ ತಮಗೆ ತಿಳಿಯುತ್ತದೆ. ಇದರಿಂದ ಆಗುವ ಅನಾಹುತಗಳನ್ನು ತಪ್ಪಿಸಬಹುದಾಗಿದೆ ಎಂದು ಸೂಚಿಸಿದರು. ಈ ಸಂಬಂಧ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೂ ಹಾಗೂ ನಗರ ಪೊಲೀಸ್ ಆಯುಕ್ತರಿಗೂ ಪತ್ರ ಕಳುಹಿಸುವುದಾಗಿ ಭಾ.ಮಾ. ಹರೀಶ್ ತಿಳಿಸಿದರು. ಘಟನೆ ವಿವರ: ಸಿನಿಮಾ ಚಿತ್ರೀಕರಣಕ್ಕೆಂದು ಶಿವಮೊಗ್ಗಕ್ಕೆ ತೆರಳಿದ್ದಾಗ ನಿರ್ಮಾಪಕನೆಂದು ಹೇಳಿಕೊಂಡು ಬಂದಿದ್ದ ವ್ಯಕ್ತಿಯೊಬ್ಬ ಅತ್ಯಾಚಾರಕ್ಕೆ ಯತ್ನಿಸಿದನೆಂದು ಆರೋಪಿಸಿ ಸಹನಟಿಯೊಬ್ಬರು ಶಿವಮೊಗ್ಗದ ಮಹಿಳಾ ಠಾಣೆಗೆ ದೂರು ನೀಡಿದ್ದಾರೆ.
ಬಿಸಿಲುಕುದುರೆ ಚಿತ್ರದ ಚಿತ್ರೀಕರಣಕ್ಕೆಂದು ಮೇ 21ರಂದು ಹೊಸ ನಾಯಕ ಹಾಗೂ ನಾಯಕಿ ಜೊತೆ ತಂಡವೊಂದು ಶಿವಮೊಗ್ಗಕ್ಕೆ ತೆರಳಿತ್ತು. ಸಿನಿಮಾಗಳಿಗೆ ಸಹನಟಿಯರನ್ನು ಪರಿಚಯಿಸುವ ಮಧ್ಯವರ್ತಿ ಉಪ್ಪಿ ಎಂಬುವರಿಗೆ ಪರಿಚಿತನಾಗಿದ್ದ ಶಿವಮೊಗ್ಗದ ಜಿಲ್ಲಾ ಕಾಂಗ್ರೆಸ್ ಸೆಕ್ರೆಟರಿ ಎನ್ನಲಾದ ಕುಮಾರ್, ನಾಯಕಿಯ ಫ್ರೆಂಡ್ ಪಾತ್ರದಲ್ಲಿ ನಟಿಸಲು ತೆರಳಿದ್ದ ಸಹನಟಿ ರೇಷ್ಮಾ(ಹೆಸರು ಬದಲಿಸಲಾಗಿದೆ)ಗೆ ತಾನು ಈ ಚಿತ್ರದ ನಿರ್ಮಾಪಕ ಎಂದು ಪರಿಚಯಿಸಿಕೊಂಡು ಆಕೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಘಟನೆ ಸಂಬಂಧ ಶಿವಮೊಗ್ಗ ಮಹಿಳಾ ಠಾಣೆಗೆ ಸಹನಟಿ ಈಗಾಗಲೇ ದೂರು ನೀಡಿರುವುದರಿಂದ ಅಲ್ಲಿನ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.