ಕರ್ನಾಟಕ

ಭೂ ಸ್ವಾಧೀನ ಕಾಯ್ದೆ ರೈತ ವಿರೋಧಿಯಲ್ಲ: ಕೇಂದ್ರ ಸಚಿವ ರವಿಶಂಕರ್ ಪ್ರಸಾದ್

Pinterest LinkedIn Tumblr

bjp

ಬೆಂಗಳೂರು, ಮೇ 26: ಕೇಂದ್ರ ಸರ್ಕಾರದ ಉದ್ದೇಶಿತ ಭೂ ಸ್ವಾಧೀನ ಕಾಯ್ದೆಯನ್ನು ಬಲವಾಗಿ ಸಮರ್ಥಿಸಿಕೊಂಡ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ರವಿಶಂಕರ್ ಪ್ರಸಾದ್, ಈ ಕಾಯ್ದೆಯನ್ನು ಕೆಲವು ತಿದ್ದುಪಡಿಗಳೊಂದಿಗೆ ಜಾರಿಗೆ ತರಲು ಸರ್ಕಾರ ತೀರ್ಮಾನಿಸಿದೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಅವರು ಇಂದು ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. 2013ರಲ್ಲಿ ಯುಪಿಎ ಸರ್ಕಾರ ಭೂ ಸ್ವಾಧೀನ ಕಾಯ್ದೆ ಜಾರಿಗೆ ತರಲು ಉದ್ದೇಶಿಸಿತ್ತು. ಆಗ ಆ ಪಕ್ಷದ ಹಲವು ರಾಜ್ಯಗಳ ಮುಖ್ಯಮಂತ್ರಿಗಳೇ ಅದನ್ನು ವಿರೋಧಿಸಿದ್ದರು. ನಾವು ತರಲು ಉದ್ದೇಶಿಸಿರುವ ಈ ಕಾಯ್ದೆ ರೈತರು ಮತ್ತು ಬಡವರ ಪರವಾಗಿದೆಯೇ ಹೊರತು ವಿರುದ್ಧವಾಗಿಲ್ಲ ಎಂದು ಅವರು ಹೇಳಿದರು.

ಭೂ ಸ್ವಾಧೀನ ಕಾಯ್ದೆ ಯಾರ ವಿರುದ್ಧವೂ ಅಲ್ಲ. ಇದು ಜನಪರ ಮತ್ತು ಅಭಿವೃದ್ಧಿ ಪರವಾದ ಕಾಯ್ದೆ. ಜನರಿಂದ ತಿರಸ್ಕೃತವಾದ ಪಕ್ಷವೊಂದು ನಮಗೆ ನೀತಿಪಾಠ ಮಾಡುವ ಅಗತ್ಯವಿಲ್ಲ. ಭೂ ಸ್ವಾಧೀನ ಕಾಯ್ದೆ ಜಾರಿಯಾದರೆ ಕೈಗಾರಿಕೆಗಳು ಸ್ಥಾಪನೆಯಾಗುತ್ತವೆ, ದ್ಯೋಗಗಳು ಸೃಷ್ಟಿಯಾಗುತ್ತವೆ. ಭೂಮಿ ನೀಡಿದ ರೈತರ ಪ್ರತಿ ಕುಟುಂಬದ ಒಬ್ಬರಿಗೆ ಉದ್ಯೋಗ ನೀಡಲಾಗುವುದು. ಅಲ್ಲದೆ, ನಾವು ಸ್ವಾಧೀನಪಡಿಸಿಕೊಳ್ಳುವ ಭೂಮಿಗೆ ಮಾರುಕಟ್ಟೆ ದರಕ್ಕಿಂತ ನಾಲ್ಕು ಪಟ್ಟು ಹೆಚ್ಚಿನ ಬೆಲೆ ನೀಡಲಾಗುವುದು ಎಂದರು. ಆದರೆ, ವಿರೋಧ ಪಕ್ಷಗಳು ಅನಗತ್ಯವಾಗಿ ಭೂ ಸ್ವಾಧೀನ ಕಾಯ್ದೆ ವಿರುದ್ಧ ಜನರನ್ನು ತಪ್ಪುದಾರಿಗೆ ಎಳೆಯುತ್ತಿವೆ ಎಂದು ಟೀಕಿಸಿದ ಅವರು, ಸರ್ಕಾರ ವಶಪಡಿಸಿಕೊಳ್ಳುವ ಭೂಮಿಯಲ್ಲಿ ಜನೋಪಯೋಗಿಯಾದ ಶಾಲೆ, ಆಸ್ಪತ್ರೆ, ಕೈಗಾರಿಕೆ ಮುಂತಾದವುಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿದರು.

ಹತ್ತು ವರ್ಷ ಆಡಳಿತ ನಡೆಸಿದ ಯುಪಿಎ ಸರ್ಕಾರ, ಹಗರಣಗಳಲ್ಲಿ ಮುಳುಗಿ ಹೋಗಿದ್ದು, ನಾವು ಒಂದು ವರ್ಷ ಯಾವುದೇ ಹಗರಣಗಳಿಲ್ಲದೆ ಪೂರೈಸಿದ್ದೇವೆ. ಕಲ್ಲಿದ್ದಲು ಗಣಿ ಹಂಚಿಕೆಯಲ್ಲಿ ನಡೆದಿದ್ದ ಅಕ್ರಮವನ್ನು ಸರಿಪಡಿಸುವ ನಿಟ್ಟಿನಲ್ಲಿ ಕೆಲವೇ ಗಣಿಗಳನ್ನು ಮರು ಹಂಚಿಕೆ ಮಾಡಿ ಸರ್ಕಾರಕ್ಕೆ 2 ಲಕ್ಷ ಕೋಟಿ ರೂ. ಲಾಭ ಮಾಡಲಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ನಮ್ಮನ್ನು ಟೀಕಿಸುವ ಯಾವುದೇ ನೈತಿಕ ಹಕ್ಕಿಲ್ಲ ಎಂದು ಹೇಳಿದರು. ನರೇಂದ್ರ ಮೋದಿ ವಿದೇಶ ಪ್ರವಾಸದಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದು ಹೇಳುವ ರಾಹುಲ್‌ಗಾಂಧಿ, ಸುಮಾರು ಎರಡು ತಿಂಗಳ ಕಾಲ ನಾಪತ್ತೆಯಾಗಿದ್ದರು. ಅವರು ಎಲ್ಲಿಗೆ ಹೋಗಿದ್ದರು, ಏನು ಮಾಡಿದರು ಎಂಬುದನ್ನು ಇನ್ನೂ ಬಾಯಿಬಿಟ್ಟಿಲ್ಲ. ನಮಗೆ ಕಾಂಗ್ರೆಸ್ ಯಾವುದೇ ಪಾಠ ಮಾಡುವ ಅಗತ್ಯವಿಲ್ಲ ಎಂದು ಅವರು ಹೇಳಿದರು.

Write A Comment