ಕರ್ನಾಟಕ

ಅಕ್ರಮ ಲಾಟರಿ ದಂಧೆ ಮುಚ್ಚಿ ಹಾಕಲು 100 ಕೋಟಿ ಡೀಲ್ ಫೇಲ್: ಕುಮಾರಸ್ವಾಮಿ ಹೊಸ ಬಾಂಬ್

Pinterest LinkedIn Tumblr

Kumaraswamy

ಬೆಂಗಳೂರು, ಮೇ 26: ಅಕ್ರಮ ಲಾಟರಿ ದಂಧೆ ಮುಚ್ಚಿ ಹಾಕಲು 100 ಕೋಟಿ ರೂ.ಗಳ ಬೇಡಿಕೆ ಇಡಲಾಗಿತ್ತು. ಈ ಡೀಲ್ ಕೈಗೂಡದ ಹಿನ್ನೆಲೆಯಲ್ಲಿ ಪ್ರಕರಣ ಬಹಿರಂಗಗೊಂಡಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ.

ವಿಧಾನಸೌಧದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಡೀಲ್ ಕುದುರಿಸಲು ರಾಜ್ಯದ ಉನ್ನತ ಅಧಿಕಾರಿಯೊಬ್ಬರ ಪುತ್ರ ಪ್ರಸ್ತುತ ಬಂಧಿಯಾಗಿರುವ ಪಾರಿರಾಜನ್ ಅವರನ್ನು ಭೇಟಿ ಮಾಡಿದ್ದರು. 100 ಕೋಟಿ ಹೆಚ್ಚಾಯಿತು. 10 ಕೋಟಿ ಚೌಕಾಶಿ ನಡೆದಿತ್ತು. ಅದರಲ್ಲಿ ಒಮ್ಮತ ಮೂಡದಿದ್ದಾಗ ಈ ಒಂದಂಕಿ ಲಾಟರಿ ಕರ್ಮಕಾಂಡ ಬೆಳಕಿಗೆ ಬಂದಿದೆ ಎಂದು ಅವರು ಆರೋಪಿಸಿದ್ದಾರೆ. ಕೇವಲ ಪೊಲೀಸ್ ಅಧಿಕಾರಿಗಳಲ್ಲದೆ, ಅಧಿಕಾರಿ ವೃಂದದವರು ಸಹ ಇದರಲ್ಲಿದ್ದು , ಇದರ ಬಗ್ಗೆ ಸಂಪೂರ್ಣ ತನಿಖೆ ನಡೆಸಬೇಕಾದರೆ ಸಿಬಿಐ ತನಿಖೆ ನಡೆಯಬೇಕು ಎಂದು ಹೇಳಿದ್ದಾರೆ. ಪ್ರಸ್ತುತ ಇದನ್ನು ಮುಚ್ಚಿ ಹಾಕಲು ವ್ಯವಸ್ಥಿತ ಸಂಚು ನಡೆದಿದೆ ಎಂದು ಅವರು ಆರೋಪಿಸಿದ್ದಾರೆ.

ನಾವು ವಾಚ್ ಡಾಗ್‌ಗಳಾಗಿ ಸರ್ಕಾರದ ಅಕ್ರಮಗಳನ್ನು ಬೆಳಕಿಗೆ ತರುತ್ತಿದ್ದೇವೆ. ಅಕ್ರಮ ದಂಧೆಗೆ ಕಡಿವಾಣ ಹಾಕಲು ಜೆಡಿಎಸ್ ನಿರಂತರ ಪ್ರಯತ್ನ ಮುಂದುವರೆಸಿದೆ ಎಂದು ಅವರು ತಿಳಿಸಿದ್ದಾರೆ. ಕೋಲಾರ ಜಿಲ್ಲೆಯಲ್ಲಿ ಮಂಜುನಾಥ್ ಎಂಬ ಕಾನ್ಸ್‌ಸ್ಟೇಬಲ್ ಪಾರಿರಾಜನ್‌ನಿಂದ ಹಣ ಪಡೆಯುತ್ತಿದ್ದ. ಅವನಿಗೆ ಹಣ ಕೊಡದೆ ಹೋದಾಗ ಮಂಜುನಾಥ್ ಲಾಟರಿ ನಿಷೇಧ ದಳದ ಮುಖ್ಯ ಪೇದೆಗಳಾದ ಸಿಂಗ್ ಮತ್ತು ಮಂಜುನಾಥ್ ಎಂಬಾತನಿಗೆ ಮಾಹಿತಿ ಕೊಟ್ಟ. ಇವರು ಇನ್ಸ್‌ಪೆಕ್ಟರ್ ರಾಮಪ್ಪ ಗುತ್ತೇದಾರನಿಗೆ ಸುದ್ದಿ ಕೊಟ್ಟರು. ನಂತರ ಪಾರಿರಾಜನ್‌ನನ್ನು ಕರೆಸಿಕೊಳ್ಳಲಾಗಿತ್ತು. ನಂತರ ತನಿಖೆ ನೆಪದಲ್ಲಿ ಪ್ರಕರಣವನ್ನೇ ಮುಚ್ಚಿ ಹಾಕಲು ವ್ಯವಹಾರ ನಡೆದಿತ್ತು. ಆಗ ಪಾರಿರಾಜನ್‌ನನ್ನು ಕರೆದುಕೊಂಡು ಸಿಂಗ್ ಮತ್ತು ಮಂಜುನಾಥ್ ಚೆನ್ನೈಗೆ ಹೋಗುತ್ತಾರೆ. ಈ ದಂಧೆಯ ಕಿಂಗ್ ಪಿನ್ ಮಾರ್ಟಿನ್ ಅವರ ಬಳಿ 40 ಲಕ್ಷಕ್ಕೆ ವ್ಯವಹಾರ ಕುದುರಿಸಿ ಅದನ್ನು ತೆಗೆದುಕೊಂಡು ಬರಲಾಗಿ ಈ ಹಣವನ್ನು ಹಂಚಿಕೊಳ್ಳಲಾಗುತ್ತದೆ.

ಧರಣೇಶ್ ಮತ್ತು ಅರುಣ್ ಚಕ್ರವರ್ತಿ ತಲಾ 15 ಲಕ್ಷಗಳನ್ನು ಪಡೆದರೆ ತನಿಖಾ ತಂಡದಲ್ಲಿದ್ದ ಇನ್ಸ್‌ಪೆಕ್ಟರ್ ರಾಮಪ್ಪ ಗುತ್ತೇದಾರ್ ಅವರಿಗೆ 5 ಲಕ್ಷ ರೂ.ಗಳನ್ನು ಮತ್ತು ಮಾಹಿತಿ ನೀಡಿದಂತಹ ಮಂಜುನಾಥ್ ಮತ್ತು ಮುಖ್ಯ ಪೇದೆ ಸಿಂಗ್‌ಗೆ ತಲಾ 2 ಲಕ್ಷ ನೀಡಲಾಗುತ್ತದೆ.

ಹಿರಿಯ ಅಧಿಕಾರಿಗಳು ಇಷ್ಟೊಂದು ಹಣ ಪಡೆದಿದ್ದಾರೆ. ನಮಗೆ ಕಮ್ಮಿ ಹಣ ಸಿಕ್ಕಿದೆ ಎಂದು ಸಿಂಗ್ ಮತ್ತು ಮಂಜುನಾಥ್ ಬೇಸರಗೊಂಡಿದ್ದರು. ಇದೇ ಪ್ರಕರಣ ಬೆಳಕಿಗೆ ಬರಲು ಕಾರಣ ಎಂದು ತಿಳಿಸಿದ್ದಾರೆ. ಇದಲ್ಲದೆ ಧರಣೇಶ್ ಅವರು ಪಾರಿರಾಜನ್‌ನನ್ನು ಮಂತ್ರಿಯೊಬ್ಬರು ಭೇಟಿ ಮಾಡಿಸಿ ಪ್ರತಿ ತಿಂಗಳು ಹಣ ನೀಡುವಂತೆ ಮಾತುಕತೆ ನಡೆದಿತ್ತು. ಎಷ್ಟು ತಿಂಗಳಿನಿಂದ ಎಷ್ಟು ಹಣ ಸಂದಾಯ ಆಗಿದೆ ಎಂಬುದು ಬಹಿರಂಗಗೊಳ್ಳಬೇಕಾಗಿದೆ ಎಂದು ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ಇದರಲ್ಲಿ ಸುಮಾರು 45ಕ್ಕೂ ಹೆಚ್ಚು ಅಧಿಕಾರಿಗಳು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಬಾಗಿಯಾಗಿದ್ದಾರೆ. ಸಿದ್ದರಾಮಯ್ಯ ಅವರು ನಮ್ಮದೇನು ತಪ್ಪಿಲ್ಲ ಎಂದು ಹೇಳುತ್ತಿದ್ದಾರೆ. ಭಯವೇಕೆ, ತಾಕತ್ತಿದ್ದರೆ ಇದನ್ನು ಸಿಬಿಐಗೆ ವಹಿಸಲಿ ಎಂದು ಸವಾಲು ಎಸೆದಿದ್ದಾರೆ. ಸಿಐಡಿಗೆ ವಹಿಸಿ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನ ನಡೆಸಲಾಗಿದೆ. ಸಾರ್ವಜನಿಕರು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದರೆ ನ್ಯಾಯ ಸಮ್ಮತವಾಗಿ ಅದು ಸಿಬಿಐ ತನಿಖೆಯಾಗುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದ್ದಾರೆ.

Write A Comment