ಬೆಂಗಳೂರು, ಮೇ 26: ರಾಜ್ಯ ರಾಜಕಾರಣದಲ್ಲಿ ಕೋಲಾಹಲ ಸೃಷ್ಟಿಸಿರುವ ಬಹುಕೋಟಿ ರೂ.ಗಳ ಒಂದಂಕಿ ಲಾಟರಿ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಕಳೆದ ಒಂದು ವಾರದಿಂದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಮತ್ತು ವಿರೋಧ ಪಕ್ಷಗಳಾದ ಬಿಜೆಪಿ, ಜೆಡಿಎಸ್ಗಳ ನಡುವೆ ಭಾರಿ ವಾಕ್ಸಮರಕ್ಕೆ ಕಾರಣವಾಗಿದ್ದ ಈ ಹಗರಣದಲ್ಲಿ ಈಗಾಗಲೇ ಹಿರಿಯ ಪೊಲೀಸ್ ಅಧಿಕಾರಿಗಳಾದ ಅಲೋಕ್ಕುಮಾರ್ ಮತ್ತು ಧರಣೇಶ್ ಅವರು ಅಮಾನತಾಗಿ ವಿಚಾರಣೆ ಎದುರಿಸುತ್ತಿದ್ದಾರೆ.
ರಾಜ್ಯ ಸರ್ಕಾರ ಈ ಪ್ರಕರಣವನ್ನು ಸಿಐಡಿ ವಿಚಾರಣೆಗೆ ವಹಿಸಿತ್ತು. ಸಿಐಡಿ ವಿಚಾರಣೆ ಮುಂದುವರೆದಿರುವಾಗಲೇ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಆಗ್ರಹಿಸಿ ಪ್ರತಿಭಟನೆಗಿಳಿದಿದ್ದವು ಈ ಕುರಿತಂತೆ ನಿನ್ನೆಯಷ್ಟೆ ವಿಪಕ್ಷಗಳ ಟೀಕೆಗೆ ಉತ್ತರಿಸಿದ್ದ ಗೃಹ ಸಚಿವ ಕೆ.ಜೆ.ಜಾರ್ಜ್ ಅವರು, ಪ್ರಕರಣವನ್ನು ಜಾರಿನಿರ್ದೇಶನಾಲಯ(ಇಡಿ)ದ ತನಿಖೆಗೆ ಒಪ್ಪಿಸುವ ಇಂಗಿತ ವ್ಯಕ್ತಪಡಿಸಿದ್ದರು.
ಆದರೆ, ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಚಿವರ ಸಭೆಯಲ್ಲಿ ಸರ್ಕಾರ ಈ ದಿಢೀರ್ ನಿರ್ಧಾರ ತೆಗೆದುಕೊಂಡಿದೆ. ಈ ರೀತಿ ರಾಜ್ಯ ಸರ್ಕಾರ ಸಿಬಿಐಗೆ ಒಪ್ಪಿಸುತ್ತಿರುವುದು ಇದು ಐದನೆ ಪ್ರಕರಣವಾಗಿದೆ. ಮೊನ್ನೆಯಷ್ಟೇ ದಕ್ಷ ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ಸಾವಿನ ಪ್ರಕರಣವನ್ನು ಹಾಗೂ ಅದಕ್ಕೂ ಮೊದಲು ರಾಮನಗರ, ಮಂಡ್ಯ ಸಹಕಾರ ಬ್ಯಾಂಕುಗಳಲ್ಲಿ ನಡೆದ ಹಣ ದುರುಪಯೋಗ ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐಗೆ ಒಪ್ಪಿಸಿತ್ತು. ಈಗ ಅಕ್ರಮ ಲಾಟರಿ ಹಗರಣವನ್ನು ಸಿಬಿಐಗೆ ಒಪ್ಪಿಸುವ ಮೂಲಕ ಪ್ರತಿಪಕ್ಷಗಳ ವಾಗ್ದಾಳಿಗೆ ತಿರುಗೇಟು ನೀಡಿದೆ. ಖಾಸಗಿ ಚಾನಲ್ನಲ್ಲಿ ಹಗರಣ ಬಯಲಾಗುತ್ತಿದ್ದಂತೆ ರಾಜ್ಯ ಸರ್ಕಾರ ಸ್ವಯಂ ಪ್ರೇರಿತವಾಗಿ ಕ್ರಮ ಕೈಗೊಂಡು ಲಾಟರಿ ಕಿಂಗ್ಪಿನ್ ಪಾರಿರಾಜನನ್ನು ಬಂಧಿಸಿತ್ತು. ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಲಾಗಿತ್ತು.
ಆತನ ವಿಚಾರಣೆಯಿಂದ ತಿಳಿದು ಬಂದ ಮಾಹಿತಿ ಆಧರಿಸಿ ಅಬಕಾರಿ ಹಾಗೂ ಲಾಟರಿ ವಿಚಕ್ಷಣ ದಳದ ಎಸ್ಪಿ ಧರಣೇಶ್ ಹಾಗೂ ಹೆಚ್ಚುವರಿ ನಗರ ಪೊಲೀಸ್ ಆಯುಕ್ತ ಅಲೋಕ್ಕುಮಾರ್ ಅವರನ್ನು ಅಮಾನತುಗೊಳಿಸಿದ್ದಲ್ಲದೆ, ಸಿಐಡಿ ಅಧಿಕಾರಿಗಳು ಈ ಇಬ್ಬರನ್ನು ತೀವ್ರ ವಿಚಾರಣೆಗೆ ಒಳಪಡಿಸಿತ್ತು.
ರಾಜ್ಯದ ಅಧಿಕಾರಿ ವಲಯದಲ್ಲಿ ಅಲ್ಲೋಲಕಲ್ಲೋಲ ಉಂಟುಮಾಡಿರುವ ಈ ಲಾಟರಿ ಹಗರಣದ ವ್ಯಾಪ್ತಿ, ಉದ್ದಗಲ ಅಳತೆ ಮೀರಿದ್ದಾಗಿದೆ. ಪಾರಿರಾಜನ್ ಮೇಲ್ನೋಟಕ್ಕೆ ಕಾಣಿಸಿಕೊಳ್ಳುತ್ತಿರುವ ಕಿಂಗ್ಪಿನ್ ಎನಿಸಿದರೂ ಮತ್ತೊಬ್ಬ ಪ್ರಮುಖ ಆರೋಪಿಯ ಕೈವಾಡ ಕೇಳಿ ಬರುತ್ತಿದೆ. ಆತ ತಮಿಳುನಾಡು, ಕೇರಳ ರಾಜ್ಯಗಳಲ್ಲಿ ನೆಲೆಯೂರಿ ರಾಜ್ಯದ ಅಕ್ರಮ ಲಾಟರಿ, ಒಂದಂಕಿ, ಮಟ್ಕಾ ದಂಧೆಯನ್ನು ನಿಯಂತ್ರಿಸುತ್ತಿದ್ದಾನೆ ಎಂದು ಹೇಳಲಾಗಿದೆ. ಅಲೋಕ್ಕುಮಾರ್ ಅವರಂತೆ ಇತರೆ 6ಮಂದಿ ಐಪಿಎಸ್ ಅಧಿಕಾರಿಗಳು ಪಾರಿರಾಜನ್ ಜತೆ ಸಂಪರ್ಕದಲ್ಲಿರುವುದಕ್ಕೆ ಸಾಕ್ಷಾಧಾರಗಳು ಲಭ್ಯವಾಗಿವೆ. ಆದರೆ, ಸಿಐಡಿ ಅಧಿಕಾರಿಗಳ ವಿಚಾರಣೆಗೆ ಹಿರ್ಯಿರ ಅಧಿಕಾರಿಗಳು ಸಹಕರಿಸುತ್ತಿಲ್ಲ ಎನ್ನಲಾಗಿದೆ. ಹೀಗಾಗಿ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.