ಕರ್ನಾಟಕ

ಅಲೋಕ್‌ ಕುಮಾರ್ ಪ್ರಕರಣ : ಐಪಿಎಸ್ ವಲಯವೇ ಇಬ್ಭಾಗವಾಗಿ ಜಾತಿ ಸ್ವರೂಪ !

Pinterest LinkedIn Tumblr

Alok-Kumar

ಬೆಂಗಳೂರು, ಮೇ 26: ಒಂದಂಕಿ ಲಾಟರಿ ಪ್ರಕರಣದಲ್ಲಿ ಕಿಂಗ್‌ಪಿನ್ ಪಾರಿರಾಜನ್ ಜತೆ ಸಂಪರ್ಕ ಹೊಂದಿದ ಆರೋಪದ ಮೇಲೆ ಸೇವೆಯಿಂದ ಅಮಾನತುಗೊಂಡ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್‌ಕುಮಾರ್ ಪ್ರಕರಣ ಐಪಿಎಸ್ ವಲಯವೇ ಇಬ್ಭಾಗವಾಗಿ ಜಾತಿ ಸ್ವರೂಪ ಪಡೆದಿದೆ.

ಅಲೋಕ್‌ಕುಮಾರ್ ಅವರನ್ನು ಶನಿವಾರ ರಾಜ್ಯ ಸರ್ಕಾರ ಅಮಾನತು ಮಾಡಿ ಆದೇಶ ಹೊರಡಿಸಿತ್ತು. ಇದರಿಂದ ಅಸಮಾಧಾನಗೊಂಡಿರುವ ಕೆಲ ಐಪಿಎಸ್ ಅಧಿಕಾರಿಗಳು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಇದು ಎಷ್ಟರ ಮಟ್ಟಿಗೆ ಎಂದರೆ ಐಪಿಎಸ್ ವಲಯವನ್ನೇ ಇಬ್ಭಾಗ ಮಾಡಿದ್ದು ಅಲೋಕ್‌ಕುಮಾರ್‌ಗೆ ನೈತಿಕ ಬೆಂಬಲ ನೀಡಲು ಕೆಲ ಅಧಿಕಾರಿಗಳು ಮುಂದೆ ಬಂದಿದ್ದಾರೆ. ಈ ಹಿಂದೆ ರಾಜ್ಯದಲ್ಲಿ ಕೆಲ ಐಪಿಎಸ್ ಅಧಿಕಾರಿಗಳ ಮೇಲೆ ಈ ರೀತಿ ವಿವಾದ ಬಂದಾಗ ತಮ್ಮ ಸಹೋದ್ಯೋಗಿಗೆ ಸ್ವಜಾತಿಯ ಅಧಿಕಾರಿಗಳೇ ಪರೋಕ್ಷವಾಗಿ ನೈತಿಕ ಬೆಂಬಲ ನೀಡಿದ್ದರು.

ಈಗ ಅಲೋಕ್‌ಕುಮಾರ್‌ಗೂ ಕೂಡ ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಉತ್ತರ ಭಾರತದ ಅನೇಕ ಐಪಿಎಸ್ ಹಾಗೂ ಐಎಎಸ್ ಅಧಿಕಾರಿಗಳು ಬೆಂಬಲ ಸೂಚಿಸಿ ಕಾನೂನು ಹೋರಾಟ ನಡೆಸುವಂತೆ ಸಲಹೆ ಮಾಡಿದ್ದಾರೆ. ರಾಜ್ಯದಲ್ಲಿ ಉತ್ತರ ಪ್ರದೇಶ, ಜಾರ್ಖಂಡ್, ಬಿಹಾರ, ಉತ್ತರಾಂಚಲ, ಮಧ್ಯ ಪ್ರದೇಶ, ಛತ್ತೀಸ್‌ಗಢ, ರಾಜಸ್ಥಾನ ಸೇರಿದಂತೆ ಅನೇಕ ರಾಜ್ಯಗಳ ನೂರಕ್ಕೂ ಹೆಚ್ಚು ಅಧಿಕಾರಿಗಳು ಸೇವೆ ಸಲ್ಲಿಸುತ್ತಿದ್ದಾರೆ. ಈ ಎಲ್ಲ ಅಧಿಕಾರಿಗಳು ಗೌಪ್ಯವಾಗಿ ಸಭೆ ಸೇರಿ ಅಲೋಕ್‌ಕುಮಾರ್‌ಗೆ ಬೆಂಬಲ ನೀಡಬೇಕೆಂಬ ಒಂದು ಸಾಲಿನ ನಿರ್ಣಯ ಕೈಗೊಂಡಿದ್ದಾರೆ.

ಸಿಎಟಿಗೆ ಮೇಲ್ಮನವಿ:
ಅಕ್ರಮ ಲಾಟರಿಯಲ್ಲಿ ಭಾಗಿಯಾದ ಆರೋಪಕ್ಕೆ ಸಿಲುಕಿ ಅಮಾನತುಗೊಂಡಿರುವ ಅಲೋಕ್‌ಕುಮಾರ್, ಅಮಾನತು ಆದೇಶ ಪ್ರಶ್ನಿಸಿ ಕೇಂದ್ರ ಆಡಳಿತಾತ್ಮಕ ನ್ಯಾಯಾಧೀಕರಣ (ಸಿಎಟಿ)ಕ್ಕೆ ಮೇಲ್ಮನವಿ ಸಲ್ಲಿಸುವಂತೆ ಅಧಿಕಾರಿಗಳು ಸಲಹೆ ಮಾಡಿದ್ದಾಗಿ ತಿಳಿದುಬಂದಿದೆ.

ಇನ್ನು ಕೆಲವೇ ದಿನಗಳಲ್ಲಿ ಅಲೋಕ್‌ಕುಮಾರ್ ರಾಜ್ಯ ಸರ್ಕಾರದ ನಿರ್ಧಾರ ಪ್ರಶ್ನಿಸಿ ಸಿಎಟಿಗೆ ಮೇಲ್ಮನವಿ ಸಲ್ಲಿಸಲಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.

ಸರ್ಕಾರದ ಇಬ್ಬಂದಿತನ:
ಈ ಹಿಂದೆ ಕೆಲ ಐಪಿಎಸ್ ಮತ್ತು ಐಎಎಸ್ ಅಧಿಕಾರಿಗಳು ವಿವಾದಕ್ಕೆ ಸಿಲುಕಿದಾಗ ಯಾವ ಅಧಿಕಾರಿಯನ್ನು ಕೂಡ ಸರ್ಕಾರ ಅಮಾನತು ಮಾಡಿರಲಿಲ್ಲ. ಆದರೆ, ಸಾರ್ವಜನಿಕ ವಲಯದಲ್ಲಿ ದಕ್ಷ ಹಾಗೂ ಪ್ರಾಮಾಣಿಕ ಎಂದೇ ಗುರುತಿಸಿಕೊಂಡಿದ್ದ ಅಲೋಕ್‌ಕುಮಾರ್ ಅಮಾನತು ಮಾಡಿರುವುದು ವ್ಯವಸ್ಥಿತ ಷಡ್ಯಂತ್ರದ ಒಂದು ಭಾಗ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಫಿ ಕೆಫೆಯಲ್ಲಿ ಮೊಬೈಲ್ ಮೂಲಕ ಮಹಿಳೆಯೊಬ್ಬಳ ಛಾಯಾಚಿತ್ರ ತೆಗೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಎಸ್ ಅಧಿಕಾರಿ ರವೀಂದ್ರ ಅವರಿಗೆ ಸರ್ಕಾರ ಎಲ್ಲ ರೀತಿಯ ಸಹಾಯ ನೀಡಿತ್ತು. ಆದರೆ, ಅಲೋಕ್‌ಕುಮಾರ್‌ಗೆ ಯಾವುದೇ ರೀತಿಯ ನೋಟಿಸ್ ಕೂಡ ನೀಡದೆ ಏಕಾಏಕಿ ಅಮಾನತು ಮಾಡಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಕೆಲವರು ಪ್ರಶ್ನಿಸಿದ್ದಾರೆ. ಈಗ ಅಲೋಕ್‌ಕುಮಾರ್ ಅಮಾನತು ಪ್ರಕರಣ ಐಪಿಎಸ್ ವಲಯದಲ್ಲಿ ಅಸಮಾಧಾನಕ್ಕೆ ಎಡೆಮಾಡಿಕೊಟ್ಟಿದೆ. ಮುಂದೆ ಇನ್ನಾವ ಸ್ವರೂಪ ಪಡೆಯುತ್ತದೆಯೋ ಎಂಬುದನ್ನು ಕಾದು ನೋಡಬೇಕು.

Write A Comment