ಕರ್ನಾಟಕ

ಡಿಕೆ ರವಿಗೂ ಇತ್ತು ಒಂದಂಕಿ ಲಾಟರಿ ಹಗರಣದ ಮಾಹಿತಿ..?: ಬಹುಕೋಟಿ ಮೌಲ್ಯದ ಲಾಟರಿ ಹಗರಣಕ್ಕೆ ಹೊಸ ತಿರುವು, ಹಗರಣದ ನಿಜವಾದ ಕಿಂಗ್ ಪಿನ್ ಮಾರ್ಟಿನ್

Pinterest LinkedIn Tumblr

LOTTERY-SCAM-DK-RAVI

ಬೆಂಗಳೂರು: ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿರುವ ಒಂದಂಕಿ ಲಾಟರಿ ಹಗರಣಕ್ಕೆ ಪ್ರಮುಖ ತಿರುವು ದೊರೆತಿದ್ದು, ಲಾಟರಿ ಹಗರಣಕ್ಕೆ ಸಂಬಂಧಿಸಿದ ಮಾಹಿತಿಗಳು ಅಂದಿನ ಐಎಎಸ್ ಅಧಿಕಾರಿ ಡಿಕೆ ರವಿ ಅವರಿಗೂ ಕೂಡ ಇತ್ತ ಎನ್ನುವ ಮಹತ್ವದ ಅಂಶ ಬೆಳಕಿಗೆ ಬಂದಿದೆ.

ರಾಜ್ಯಸರ್ಕಾರದ ಬೊಕ್ಕಸಕ್ಕೆ ಭಾರಿ ಪ್ರಮಾಣದಲ್ಲಿ ಕನ್ನ ಹಾಕಿರುವ ಲಾಟರಿ ಹಗರಣದಲ್ಲಿ ಸರ್ಕಾರಕ್ಕೆ ಸುಮಾರು 2,750 ಕೋಟಿ ರು.ತೆರಿಗೆ ವಂಚನೆಯಾಗಿದೆ ಎಂದು ಕೇಳಿಬರುತ್ತಿದ್ದು, ಈ ಬಗ್ಗೆ ಅಂದಿನ ವಾಣಿಜ್ಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತರಾಗಿದ್ದ ಡಿಕೆ ರವಿ ಅವರಲ್ಲಿ ದೂರು ಕೂಡ ದಾಖಲಾಗಿತ್ತು ಎಂದು ಹೇಳಲಾಗುತ್ತಿದೆ. ಕರ್ನಾಟಕ ರಾಜ್ಯ ಚಿಲ್ಲರೆ ಲಾಟರಿ ಮಾರಾಟಗಾರರು ಈ ಬಗ್ಗೆ ಡಿಕೆ ರವಿ ಅವರಲ್ಲಿ ದೂರು ಸಲ್ಲಿಕೆ ಮಾಡಿದ್ದರು ಎಂದು ಹೇಳಲಾಗುತ್ತಿದೆ. ವಿಪರ್ಯಾಸವೆಂದರೆ ದೂರು ದಾಖಲಾದ 3 ದಿನದಲ್ಲಿ ಡಿಕೆ ರವಿ ಅವರು ತಮ್ಮ ಕೋರಮಂಗಲದ ಅಪಾರ್ಟ್ ಮೆಂಟ್ ನಲ್ಲಿ ನಿಗೂಢವಾಗಿ ಸಾವಿಗೀಡಾಗಿದ್ದರು.

ಮಾರ್ಚ್ 13ರಂದು ಡಿಕೆ ರವಿ ಅವರಲ್ಲಿ ದೂರು ದಾಖಲಾಗಿದ್ದು, ಮಾರ್ಚ್ 16ರಂದು ಡಿಕೆ ರವಿ ಅವರು ನಿಗೂಢವಾಗಿ ಸಾವಿಗೀಡಾಗಿದ್ದರು. ಹೀಗಾಗಿ ದಕ್ಷ ಅಧಿಕಾರಿ ಡಿಕೆ ರವಿ ಅವರು ಲಾಟರಿ ಮಾಫಿಯಾಕ್ಕೆ ಬಲಿಯಾದರೆ ಎಂಬ ಅನುಮಾನ ಮೂಡತೊಡಗಿದೆ.

ಇನ್ನು ಕರ್ನಾಟಕ ರಾಜ್ಯ ಚಿಲ್ಲರೆ ಲಾಟರಿ ಮಾರಟಗಾರರು ನೀಡಿರುವ ದೂರಿನಲ್ಲಿ ಪ್ರಮುಖವಾಗಿ 8 ಕಂಪನಿಗಳನ್ನು ಹೆಸರಿಸಲಾಗಿದ್ದು, 2000ದಿಂದ 2007ರವರೆಗೂ ತಮಿಳುನಾಡು ಮೂಲದ ಎಸ್ ಆರ್ ಮಾರ್ಕೆಟಿಂಗ್ ಸಂಸ್ಥೆ ಸೇರಿದಂತೆ ಒಟ್ಟು 8 ಕಂಪನಿಗಳು ಬಹುಕೋಟಿ ತೆರಿಗೆ ವಂಚನೆ ಮಾಡಿರುವ ಕುರಿತು ದೂರಿನಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ. ಅಂದಿನ ವಾಣಿಜ್ಯ ತೆರಿಗೆ ಇಲಾಖೆ ಹೆಚ್ಚುವರಿ ಆಯುಕ್ತರಾಗಿದ್ದ ಡಿಕೆ ರವಿ ಅವರಿಗೆ ಕರ್ನಾಟಕ ರಾಜ್ಯ ಚಿಲ್ಲರೆ ಲಾಟರಿ ಮಾರಾಟಗಾರರು ಮಾರ್ಚ್ 13ರಂದು ಈ ಬಗ್ಗೆ ದೂರು ಸಲ್ಲಿಸಿದ್ದರು ಎಂದು ತಿಳಿದುಬಂದಿದೆ.

ಎಸ್ ಆರ್ ಮಾರ್ಕೆಂಟಿಂಗ್ ಸಂಸ್ಥೆಯ ಮಾಲೀಕ ಮಾರ್ಟಿನ್ ನಕಲಿ ಡಿಡಿ ಮತ್ತು ಚೆಕ್ ಗಳನ್ನು ಸೃಷ್ಟಿಸಿ ರಾಜ್ಯ ಸರ್ಕಾರಕ್ಕೆ ಭಾರಿ ವಂಚನೆ ಮಾಡಿದ್ದಾನೆ. ದಕ್ಷಿಣ ಭಾರತದಲ್ಲಿ ಲಾಟರಿ ಮಾರಾಟದ ದೊಡ್ಡ ಕಿಂಗ್ ಪಿನ್ ಮಾರ್ಟಿನ್ ಎಂದು ಹೇಳಲಾಗುತ್ತಿದ್ದು. ಈತನ ಹಲವು ಏಜೆಂಟರುಗಳ ಪೈಕಿ ಪಾರಿರಾಜನ್ ಕೂಡ ಒಬ್ಬನಾಗಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ ಎಂದು ತಿಳಿದುಬಂದಿದೆ. ತಮಿಳುನಾಡು ರಾಜ್ಯದ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರಿಗೂ ಆಪ್ತನಾಗಿದ್ದ ಮಾರ್ಟಿನ್ ತನ್ನ ವರ್ಚಸ್ಸನ್ನು ಬಳಕೆ ಮಾಡಿ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಭಾರಿ ತೆರಿಗೆ ವಂಚನೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ವಾಣಿಜ್ಯ ತೆರಿಗೆ ಇಲಾಖೆಯ ಕೆಲ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು, ನಕಲಿ ಸೀಲ್ ಗಳನ್ನು ಬಳಸಿ ಮಾರ್ಟಿನ್ ಸರ್ಕಾರಕ್ಕೆ ಭಾರಿ ತೆರಿಗೆ ವಂಚನೆ ಮಾಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಇನ್ನು ಏಜೆಂಟ್ ಸಂಸ್ಥೆಗಳಾದಂತಹ ಎಂಎಸ್ ಮಂಜುನಾಥ್ ಏಜೆನ್ಸಿ, ಲಕ್ಷ್ಮಿ ಏಜೆನ್ಸಿ, ಬೆಸ್ಟ್ ಅಂಡ್ ಕಂ, ರಾಜಶ್ರೀ ಗ್ರೂಪ್ , ಕನ್ನಯ್ಯ ಏಜೆನ್ಸಿ, ತಾರಾ ಅಂಡ್ ಕಂ, ಎಲ್ ಎಸ್ ಡಿಸ್ಟ್ರಿಬ್ಯೂಟರ್ಸ್ ಕಂಪನಿಗಳು ಕೂಡ ಈ ಭಾರಿ ಪ್ರಮಾಣದ ತೆರಿಗೆ ವಂಚನೆಯಲ್ಲಿ ಭಾಗಿಯಾಗಿದ್ದವು ಮತ್ತು ಇದರಲ್ಲಿ ಪಾರಿರಾಜನ್ ಕೂಡ ಒಬ್ಬನಾಗಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.

ಒಟ್ಟಾರೆ ಇಡೀ ರಾಜ್ಯದ ಗಮನ ಸೆಳೆದಿರುವ ಒಂದಂಕಿ ಲಾಟರಿ ಹಗರಣ ದಿನಕಳೆದಂತೆ ಹೊಸ ತಿರುವು ಪಡೆಯುತ್ತಿದ್ದು, ಪ್ರಮುಖ ಪೊಲೀಸ್ ಅಧಿಕಾರಿಗಳು ಮತ್ತು ರಾಜಕಾರಣಿಗಳ ಹೆಸರುಗಳು ಪ್ರಕರಣದಲ್ಲಿ ತಳಕುಹಾಕಿಕೊಂಡಿದೆ ಎಂದು ಹೇಳಲಾಗುತ್ತಿದೆ.

Write A Comment