ಕರ್ನಾಟಕ

ಲಾಟರಿ ದಂಧೆ : ಕೆಲವರಿಗೆ ಅಮಾನತಿನ ಶಿಕ್ಷೆ : ಇನ್ನುಳಿದವರಿಗೆ ಸರ್ಕಾರದ ಶ್ರೀರಕ್ಷೆ ?

Pinterest LinkedIn Tumblr

Lottery-in-Karnatka-a

ಬೆಂಗಳೂರು, ಮೇ 24- ಅಕ್ರಮ ಲಾಟರಿ ದಂಧೆಯಲ್ಲಿ ಭಾಗಿಯಾದ ಕೆಲವರನ್ನು ಅಮಾನತುಪಡಿಸಿ ಉಳಿದವರನ್ನು ಸರ್ಕಾರ ರಕ್ಷಣೆ ಮಾಡಲು ಹೊರಟಿದೆಯೇ ಎಂಬ ಅನುಮಾನ ಕೇಳಿಬರುತ್ತಿದೆ. ಏಕೆಂದರೆ, ಈ ಪ್ರಕರಣದಲ್ಲಿ ಈಗಾಗಲೇ ರಾಜ್ಯ ಸರ್ಕಾರ ಅಬಕಾರಿ ಮತ್ತು ಲಾಟರಿ ನಿಷೇಧ ದಳದ ಮುಖ್ಯಸ್ಥ ಧರಣೇಶ್ ಹಾಗೂ ಬೆಂಗಳೂರು

ಪೂರ್ವ ವಲಯದ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್‌ಕುಮಾರ್ ಅವರನ್ನು ಸೇವೆಯಿಂದ ಅಮಾನತುಪಡಿಸಿದೆ. ಆದರೆ, ಇದೇ ಪ್ರಕರಣದಲ್ಲಿ ಭಾಗಿಯಾಗಿ ಹಾಗೂ ಇದೀಗ ಆಯಕಟ್ಟಿನ ಪ್ರಮುಖ ಹುದ್ದೆಯಲ್ಲಿರುವ ಕೆಲವರನ್ನು ಸರ್ಕಾರ ರಕ್ಷಣೆ ಮಾಡಲು ಮುಂದಾಗಿದೆಯೇ ಎಂಬ ಗುಮಾನಿ ಪೊಲೀಸ್ ವಲಯದಲ್ಲಿ ಎದ್ದಿದೆ. ಏಕೆಂದರೆ, ಈ ಹಿಂದೆ ಲಾಟರಿ ಮತ್ತು ಅಬಕಾರಿ ನಿಷೇಧ ದಳದ ಮುಖ್ಯಸ್ಥರಾಗಿದ್ದವರಿಗೆ ಈ ಪ್ರಕರಣದ ಪ್ರಮುಖ ರೂವಾರಿ ಪಾರಿರಾಜನ್ ಸಂಪರ್ಕ ಇತ್ತು ಎನ್ನಲಾಗಿದೆ.

ರಾಜ್ಯದ ಯಾವುದೇ ಭಾಗದಲ್ಲಿ ಕಾನೂನು ಬಾಹಿರವಾಗಿ ಲಾಟರಿ ಚಟುವಟಿಕೆಗಳು ನಡೆಯಬಾರದೆಂಬ ಕಾರಣಕ್ಕಾಗಿಯೇ ಐಜಿಪಿ ದರ್ಜೆಯ ಅಧಿಕಾರಿಯನ್ನು ಈ ವಿಭಾಗದ ಮುಖ್ಯಸ್ಥರನ್ನಾಗಿ ನೇಮಕ ಮಾಡಿತ್ತು. ಇವರ ಕಣ್ಸನ್ನೆಯಲ್ಲೇ ಪಾರಿರಾಜನ್ ಒಂದಂಕಿ ಸೇರಿದಂತೆ ವಿವಿಧ ರೀತಿಯ ಲಾಟರಿ ಟಿಕೆಟ್‌ಗಳನ್ನು ಮಾರಾಟ ಮಾಡಿದ್ದಾನೆ ಎನ್ನಲಾಗಿದೆ.  ಐಜಿಪಿ ಸೇರಿದಂತೆ ವಿವಿಧ ಹಂತದ ಅಧಿಕಾರಿಗಳನ್ನು ಸರಿಪಡಿಸಿಕೊಂಡಿದ್ದ  ಪಾರಿರಾಜನ್ ಪ್ರತಿತಿಂಗಳು ಹಫ್ತಾ ನೀಡಿ ತನ್ನ ವ್ಯವಹಾರಕ್ಕೆ ಯಾರೊಬ್ಬರೂ ಅಡ್ಡಿಯಾಗದಂತೆ ನೋಡಿಕೊಂಡಿದ್ದ.
ಸರ್ಕಾರವೇನೋ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಿದೆ. ಸಿಐಡಿ ವರದಿ ನೋಡಿಕೊಂಡು ಮುಂದಿನ ಕ್ರಮ ಜರುಗಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ, ಸಾರ್ವಜನಿಕ ವಲಯದಲ್ಲಿ ಮೂಡಿರುವ ಸಂದೇಹವೆಂದರೆ, ಪ್ರಮುಖ ಹುದ್ದೆಯಲ್ಲಿರುವ ಈ ಅಧಿಕಾರಿಯನ್ನು ಅಮಾನತು ಮಾಡಲು ಮೀನಾಮೇಷವೇಕೆ ಎಂಬ ಪ್ರಶ್ನೆ ಮೂಡಿದೆ.

Write A Comment