ಕರ್ನಾಟಕ

ಅಕ್ರಮ ಲಾಟರಿ: ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಸೇವೆಯಿಂದ ಅಮಾನತು; 10 ಪೊಲೀಸ್ ಅಧಿಕಾರಿಗಳಿಗೆ ನಡುಕ; ಬಂಧನದ ಭೀತಿ

Pinterest LinkedIn Tumblr

alok kumar

ಬೆಂಗಳೂರು, ಮೇ ೨೪- ಅಕ್ರಮ ಲಾಟರಿ ಮಾರಾಟ ದಂಧೆಯ ರೂವಾರಿ ಪಾರಿರಾಜನ್ ಜೊತೆ ಸಂಪರ್ಕ ಹೊಂದಿದ್ದ ಆರೋಪದಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅವರನ್ನು ಸರ್ಕಾರ ನಿರ್ದಾಕ್ಷಿಣ್ಯವಾಗಿ ಸೇವೆಯಿಂದ ಅಮಾನತು ಮಾಡಿದ ಬೆನ್ನಲ್ಲೇ ಐಜಿ, ಎಸ್‍ಪಿ ಸೇರಿದಂತೆ 10ಕ್ಕೂ ಅಧಿಕ ಹಿರಿಯ ಪೊಲೀಸ್ ಅಧಿಕಾರಿಗಳಲ್ಲಿ ನಡುಕ ಆರಂಭಗೊಂಡಿದೆ.

ಕಟ್ಟುನಿಟ್ಟಿನ ಅಧಿಕಾರಿ ಎಂದೇ ಹೆಸರುವಾಸಿಯಾಗಿದ್ದ ಅಲೋಕ್ ಕುಮಾರ್ ಅವರ ಅಮಾನತಿನಿಂದ 10ಕ್ಕೂ ಅಧಿಕ ಎಸ್.ಪಿ, ಡಿವೈಎಸ್‍ಪಿ, ಇನ್‌ಸ್ಪೆಕ್ಟರ್, ಸಬ್‌ಇನ್‌ಸ್ಪೆಕ್ಟರ್‌ಗಳು ಈ ದಂಧೆಯಲ್ಲಿ ಭಾಗಿಯಾಗಿರುವ ಬಗ್ಗೆ ಸಿಐಡಿ ವರದಿಯಲ್ಲಿ ಪ್ರಸ್ತಾಪವಾಗಿರುವುದರಿಂದ 10ಕ್ಕೂ ಅಧಿಕ ಅಧಿಕಾರಿಗಳು ವಿಚಾರಣೆ ಅಥವಾ ಬಂಧನದ ಭೀತಿ ಎದುರಿಸುತ್ತಿದ್ದಾರೆ.

ಸರ್ಕಾರ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿರುವ ಹಿನ್ನೆಲೆಯೂ ಅವರಲ್ಲಿ ನಡುಕಕ್ಕೆ ಕಾರಣ ಎನ್ನಲಾಗಿದೆ. ಮಧ್ಯಂತರ ವರದಿ ಕೈ ಸೇರಿದ ತಕ್ಷಣ ಸರ್ಕಾರ ಅಲೋಕ್ ಕುಮಾರ್ ಅವರನ್ನು ಅಮಾತನುಗೊಳಿಸಿದೆ. ಮಾತ್ರವಲ್ಲ ಈ ಹಿಂದೆ ಎಸ್.ಪಿ. ಧರಣೇಶ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿತ್ತು.

ಮಂಗಳೂರಿನಲ್ಲಿ ಈ ಹಿಂದೆ ಎಸ್‍ಪಿಯಾಗಿ ಸೇವೆ ಸಲ್ಲಿಸಿದ್ದ ಐಪಿಎಸ್ ಅಧಿಕಾರಿ, ಬೆಂಗಳೂರಿನಲ್ಲಿ ಸೇವೆ ಸಲ್ಲಿಸಿದ ನಾಲ್ವರು ಪೊಲೀಸ್ ಆಯುಕ್ತರು, ಓರ್ವ ನಿವೃತ್ತ ಡಿಜಿಪಿ, ಓರ್ವ ಐಜಿಪಿ ಅಧಿಕಾರಿಗಳು ಪಾರಿರಾಜನ್‍ನೊಂದಿಗೆ ಸಂಪರ್ಕ ಹೊಂದಿದ್ದರು ಎಂಬ ಮಾತು ಕೇಳಿಬರುತ್ತಿದೆ. ಇವರಲ್ಲಿ ಈಗ ಕೆಲವರು ನಿವೃತ್ತಿಯಾಗಿದ್ದು, ಇನ್ನು ಕೆಲವರು ವಿವಿಧೆಡೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರೆಲ್ಲರಲ್ಲಿ ಈತ ಆತಂಕ ಮನೆ ಮಾಡಿದೆ.

ಯಾವಾಗ ಸಿಐಡಿಯಿಂದ ನೋಟೀಸ್ ಬರುತ್ತದೋ, ಯಾವಾಗ ತನಿಖಾಧಿಕಾರಿಗಳು ಮನೆಗೆ ಬರುತ್ತಾರೋ ಎಂಬ ಆತಂಕ ಇವರನ್ನು ಕಾಡುತ್ತಿದೆ. ಕೆಲವರು ನಿವೃತ್ತರಾಗಿ ಮನೆಯಲ್ಲಿ ಆರಾಮ ಜೀವನ ಸಾಗಿಸುತ್ತಿದ್ದು, ಇದೀಗ ಇಳಿವಯಸ್ಸಿನಲ್ಲಿ ಕೆಟ್ಟಹೆಸರು ಬರುವುದರಿಂದ ಬೇಸರಗೊಂಡಿದ್ದಾರೆ.

ಮಾಧ್ಯಮಕ್ಕೆ ಹೇಳಿಕೆ ನೀಡಿರುವುದು ಮುಳುವಾಯಿತೆ?

ಅಲೋಕ್ ಕುಮಾರ್ ಅವರು ಇತ್ತೀಚೆಗೆ ಮಾಧ್ಯಮವೊಂದಕ್ಕೆ ಪಾರಿರಾಜನ್ ನನ್ನ ಹಿತೈಷಿ ಎಂದು ಹೇಳಿಕೆ ನೀಡಿದ್ದರು. ಇದೇ ಅಂಶ ಅವರ ಅಮಾನತಿಗೆ ಕಾರಣ ಎನ್ನಲಾಗಿದೆ.

ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ ಆರೋಪಿಯೊಬ್ಬನನ್ನು ನನ್ನ ಹಿತೈಷಿ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿರುವುದು ಸರ್ಕಾರವನ್ನು ಮುಜುಗರಕ್ಕೆ ಈಡುಮಾಡಿತ್ತು. ಇದೇ ವಿಷಯವನ್ನು ಎತ್ತಿಕೊಂಡ ವಿರೋಧ ಪಕ್ಷಗಳು ಸರ್ಕಾರದ ಅಧಿಕಾರಿಗಳು ನಿರ್ಭೀತಿಯಿಂದ ಇಂತಹ ಹೇಳಿಕೆ ನೀಡುತ್ತಿದ್ದಾರೆ. ದಂಧೆಗೆ ಸರ್ಕಾರದ ಬೆಂಬಲ ಇದೆ ಎಂದು ಟೀಕಿಸಿತ್ತು. ಈ ಎಲ್ಲ ಕಾರಣಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅವರನ್ನು ಅಮಾನತುಗೊಳಿಸಿದ್ದಾರೆ ಎನ್ನಲಾಗಿದೆ.

ಆರೋಪಿಗಳ ವಿರುದ್ಧ ಯಾವ ಸೆಕ್ಷನ್‍ಗಳಡಿ ಪ್ರಕರಣ ದಾಖಲಾಗುತ್ತದೆ ಎಂಬುದರ ಮೇಲೆ ಅವರ ಭವಿಷ್ಯ ಅಡಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Write A Comment