ಕರ್ನಾಟಕ

ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ಸಿಲಿಕಾನ್‌ಸಿಟಿ

Pinterest LinkedIn Tumblr

Bangalore-Allegu

ಬೆಂಗಳೂರು,ಮೇ19- ಬೆಳಗ್ಗೆ ರಣ ಬಿಸಿಲು… ಸಂಜೆಯಾಗುತ್ತಿದ್ದಂತೆ ಮಳೆ… ಹೀಗಾಗುತ್ತಿರುವುದರಿಂದ ಸಿಲಿಕಾನ್ ಸಿಟಿ ಜನರಿಗೆ ಸಾಂಕ್ರಾಮಿಕ ರೋಗಗಳ  ಭೀತಿ ಆವರಿಸಿದೆ.  ಅಕಾಲಿಕ ಮಳೆಯಿಂದ ಸೋಂಕು ಹರಡುವಿಕೆ ಹೆಚ್ಚಾಗುತ್ತಿದ್ದು, ಡೆಂಘೀ, ಮಲೇರಿಯಾ, ಟೈಫಾಯ್ಡ್‌ನಂತಹ ರೋಗಗಳು ಕಾಣಿಸಿಕೊಳ್ಳುತ್ತಿವೆ.

ಮಳೆಗಾಲ  ಅಲ್ಲದಿದ್ದರೂ ಮಳೆ ಸುರಿಯುತ್ತಿರುವುದರಿಂದ  ಹಲವು ರೋಗಗಳು ಉಲ್ಭಣವಾಗಬಹುದೆಂದು ಜನತೆ ಚಿಂತೆಗೀಡಾಗಿದ್ದಾರೆ.  ನಗರದ ಹಲವೆಡೆ ನೀರು ಶೇಖರಣೆಗೊಂಡು ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗುತ್ತಿದೆ. ಕೆಲವು ಕೊಳಚೆ ಪ್ರದೇಶಗಳಲ್ಲಿ, ಪಾಳುಬಿದ್ದ ನಿವೇಶನಗಳಲ್ಲಿ  ಮತ್ತಿತರೆಡೆ ತ್ಯಾಜ್ಯ ಪದಾರ್ಥಗಳಲ್ಲಿ  ಶೇಖರಣೆಗೊಂಡಿರುವ ನೀರಿನಿಂದ ಕ್ರಿಮಿಗಳು ಉತ್ಪತ್ತಿಯಾಗುತ್ತಿವೆ.  ಪ್ರಮುಖವಾಗಿ ಈ ಸಂದರ್ಭದಲ್ಲಿ ಫುಡ್ ಪಾಯ್ಸನ್( ವಿಷಾಹಾರ) ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದ್ದು,  ಇದರಿಂದ ವೈರಲ್ ಫೀವರ್ ಸೇರಿದಂತೆ ಹಲವು ಸೋಂಕಿನ ರೋಗಗಳು ಬರುತ್ತಿವೆ.

ಈಗಾಗಲೇ ಆರೋಗ್ಯ ಇಲಾಖೆ  ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದರೂ   ಸಾಂಕ್ರಾಮಿಕ ರೋಗಗಳ ನಿಯಂತ್ರಣ ಸಾಧ್ಯವಾಗುತ್ತಿಲ್ಲ ಎಂಬ ಆತಂಕ ಕೂಡ ಜನರನ್ನು ಕಾಡುತ್ತಿದೆ.  ಕಾಯಿಸಿ ಆರಿಸಿದ ನೀರನ್ನು ಬಳಸಿದರೂ ಅದು  ಶುದ್ಧವೆಂದು ಪರಿಗಣಿಸಲು ಸಾಧ್ಯವಿಲ್ಲ. ಏಕೆಂದರೆ ಆ ನೀರಿನಲ್ಲೂ ರೋಗಾಣು ಉಳಿದುಕೊಂಡಿರುತ್ತವೆ. ಆದ್ದರಿಂದ ಸಾಕಷ್ಟು ಮುನ್ನೆಚ್ಚರಿಕೆ ವಹಿಸುವುದು ಅತ್ಯಾವಶ್ಯಕ ಎಂದು ವೈದ್ಯರು ಹೇಳುತ್ತಾರೆ.  ಹವಾಮಾನ ವೈಪರಿತ್ಯದಿಂದ  ಈಗಾಗಲೇ ಸೋಂಕುಗಳು ಕಾಣಿಸಿಕೊಂಡಿದ್ದು, ಆಸ್ಪತ್ರೆಗಳಲ್ಲಿ  ರೋಗಿಗಳ ದಾಖಲಾತಿ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಬಹುತೇಕರನ್ನು  ರಕ್ತಪರೀಕ್ಷೆಗೆ ಒಳಪಡಿಸಲಾಗುತ್ತಿದೆ.

ನಿಯಂತ್ರಣ ಹೇಗೆ:
ಊಟ ಮಾಡುವ ಮೊದಲು ಕೈಯನ್ನು ಸ್ವಚ್ಚವಾಗಿ ತೊಳೆದುಕೊಳ್ಳುವುದು ಅಗತ್ಯ. ಹೊರಗಿನ ಪದಾರ್ಥಗಳನ್ನು  ಆದಷ್ಟು ಮಟ್ಟಿಗೆ ನಿಯಂತ್ರಿಸುವುದು ಮತ್ತು  ಬಿಸಿಯಾದ ಆಹಾರವನ್ನೇ ಸೇವಿಸಬೇಕು.  ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ತಾಜಾ  ತರಕಾರಿ ಹಾಗೂ ಆಹಾರವನ್ನು  ಕಡ್ಡಾಯವಾಗಿ ಸೇವಿಸುವುದು, ಮನೆಯ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳುವುದು, ನೀರು ನಿಲ್ಲದಂತೆ ನೋಡಿಕೊಳ್ಳುವುದು, ನೀರು ನಿಂತ ಜಾಗಗಳಲ್ಲಿ ಸೊಳ್ಳೆ ನಿಯಂತ್ರಣದ ಸಿಂಪಡಿಕೆ ಮಾಡಿಸುವುದು, ಸುತ್ತಮುತ್ತಲ ಜಾಗ ಒದ್ದೆಯಾಗಿರದಂತೆ ನೋಡಿಕೊಳ್ಳುವುದು.
ಸೊಳ್ಳೆ ನಿಯಂತ್ರಿಸಲು ಕೆಲವು ಸುಲಭ ಕ್ರಮಗಳಾದ ಅರಿಶಿನ ಕೊಂಬನ್ನು ಸುಟ್ಟು ಮನೆ ತುಂಬ ಹೊಗೆ ಹಾಕುವುದು,  ಕಿಟಕಿಗಳಿಗೆ ಸೊಳ್ಳೆ ಪರದೆ ಹಾಕುವುದು,  ಹಸಿ ಕಸಗಳನ್ನು ಮನೆಯಲ್ಲಿ ಇಡದಿರುವುದು ಮುಂತಾದ ಕ್ರಮಗಳನ್ನು ಅನುಸರಿಸಿ ಸ್ವಲ್ಪ ಮಟ್ಟಿಗೆ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಬಹುದು.  ಮಕ್ಕಳನ್ನು ರೋಗ ಬಾಧಿತರಿಂದ ಆದಷ್ಟು ದೂರವಿಡುವುದು, ಮಕ್ಕಳಿಗೆ ಹೊರಗಿನ ತಿಂಡಿತಿನಿಸುಗಳನ್ನು ಕೊಡಬಾರದು. ಮನೆಮದ್ದುಗಳನ್ನು ಸಿದ್ದಪಡಿಸಿಕೊಂಡಿದ್ದರೆ ಒಳಿತು. ಇದರಿಂದ ರೋಗ ಬರುವುದನ್ನು ತಡೆಗಟ್ಟಬಹುದು.

Write A Comment