ಕರ್ನಾಟಕ

ಒತ್ತುವರಿ ತೆರವು: ಮನೆ ಕಳೆದುಕೊಂಡವರ ಪರಿ ಪರಿ ಗೋಳು

Pinterest LinkedIn Tumblr

Bangalore-Sarakki-lAkeಬೆಂಗಳೂರು, ಮೇ 19- ಸ್ವಾಮಿ ನಮಗೆ ನ್ಯಾಯ ಕೊಡಿ…  ಸಾಲ…. ಸೋಲ ಮಾಡಿ ಕಷ್ಟಪಟ್ಟು ನಿವೇಶನ ಖರೀದಿಸಿ ಮನೆ ಕಟ್ಟಿದ್ದೆವು… ಈಗ ಮನೆ ಒಡೆದು ಹಾಕಿರುವುದರಿಂದ ಬೀದಿಗೆ ಬಿದ್ದಿದ್ದೇವೆ… ನಿಮ್ಮ ಕಾಲಿಗೆ ಬೀಳುತ್ತೇವೆ ಮೊದಲು ಪುನರ್ ವಸತಿ ಕಲ್ಪಿಸಿಕೊಡಿ..

ಹೀಗೆ ಕೆರೆ ಒತ್ತುವರಿ ಸದನ ಸಮಿತಿ ಮುಂದೆ ದುಃಖ ತೋಡಿಸಿಕೊಂಡಿದ್ದು, ಕೆರೆ ತೆರವಿನಲ್ಲಿ ಮನೆಕಳೆದುಕೊಂಡ ಸಂತ್ರಸ್ತರು. ಶಾಸಕ ಕೆ.ಬಿ.ಕೋಳಿವಾಡ ನೇತೃತ್ವದ ಕೆರೆ ಒತ್ತುವರಿ ಸದನ ಸಮಿತಿ ಇಂದು ಬೆಂಗಳೂರಿನ ಅನೇಕ ಕೆರೆ ಪ್ರದೇಶಗಳಿಗೆ ಭೇಟಿ ನೀಡಿದ ವೇಳೆ ಸೂರು ಕಳೆದುಕೊಂಡು ಬೀದಿ ಪಾಲಾದವರು ಕಣ್ಣೀರುಗರೆದರು. ಎಚ್.ಡಿ.ಕುಮಾರಸ್ವಾಮಿ, ಸುರೇಶ್‌ಕುಮಾರ್, ಗೋಪಾಲಯ್ಯ, ಬಿ.ಆರ್.ಯಾವಗಲ್, ಡಾ.ಸುಧಾಕರ್, ಬಿಬಿಎಂಪಿ, ಬಿಡಿಎ, ಕಂದಾಯ ಅಧಿಕಾರಿಗಳು ಕೆ.ಬಿ.ಕೋಳಿವಾಡ ಅವರೊಂದಿಗೆ ಭೇಟಿ ನೀಡುತ್ತಿದ್ದಂತೆ ಕೆಲ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರೆ, ಬಹಳಷ್ಟು ಮಹಿಳೆಯರು ತೀವ್ರ ದುಃಖ ತೋಡಿಕೊಂಡರು.

ಸಾಲ-ಸೋಲ ಮಾಡಿ, ಚಿನ್ನಾಭರಣವನ್ನು ಬ್ಯಾಂಕಿನಲ್ಲಿ ಅಡವಿಟ್ಟು, ಮಕ್ಕಳ ಮದುವೆಯನ್ನೂ ಮುಂದೂಡಿ ತಲೆಗೊಂದು ಸೂರಿರಲಿ ಎಂದು ಮನೆಕಟ್ಟಿಕೊಂಡೆವು. ಈಗ ಮನೆ ಒಡೆದಿದ್ದಾರೆ. ನಾವು ಏನು ಮಾಡಬೇಕು? ಎಲ್ಲಿಗೆ ಹೋಗಬೇಕು? ದಿಕ್ಕು ತೋಚದಂತಾಗಿದೆ ಎಂದು ದುಃಖಿಸಿದರು. ಬಹುತೇಕ ಎಲ್ಲಾ ಕೆರೆ ಪ್ರದೇಶದಲ್ಲೂ ಇದೇ ಸನ್ನಿವೇಶ ಕಂಡು ಬಂದಿತು. ಚಾಮರಾಜಪೇಟೆಯಲ್ಲಿರುವ ಕೆಂಪಾಂಬುದಿ ಕೆರೆ, ಸೌತ್‌ಎಂಡ್ ವೃತ್ತದಲ್ಲಿರುವ ಯಡಿಯೂರು ಕೆರೆ, ಅರಕೆರೆ ಕೆರೆ, ಬನ್ನೇರುಘಟ್ಟ ರಸ್ತೆ, ದೊರೆಸಾನಿಪಾಳ್ಯ ಕೆರೆ, ಪುಟ್ಟೇನಹಳ್ಳಿ ಕೆರೆ ಸೇರಿದಂತೆ ವಿವಿಧ ಕೆರೆಗಳಿಗೆ ಸಮಿತಿ ಸದಸ್ಯರು ಭೇಟಿ ನೀಡಿದಾಗ ಸಂತ್ರಸ್ತರ ದುಃಖ ಕಟ್ಟೆ  ಒಡೆದಿತ್ತು.
ಮಾತಿನ ಚಕಮಕಿ:
ಪುಟ್ಟೇನಹಳ್ಳಿಕೆರೆಗೆ ಸಮಿತಿ ಸದಸ್ಯರು ಭೇಟಿ ನೀಡಿದಾಗ ಸಂತ್ರಸ್ತರು ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ ಹಿಡಿ ಶಾಪ ಹಾಕಿದರು. ಏನೂ ತಪ್ಪು ಮಾಡದ ನಮ್ಮನ್ನು ಬೀದಿಗೆ ತಳ್ಳಿದ್ದಾರೆ. ಬಿಡಿಎ ನಿಯಮಗಳ ಪ್ರಕಾರವೇ ನಿವೇಶನ ಖರೀದಿ ಮಾಡಿದ್ದೇವೆ. ನಮಗೇಕೆ ಇಂತಹ ಶಿಕ್ಷೆ ನೀಡಿದ್ದೀರಿ. ನಮಗೆ ನ್ಯಾಯ ದೊರಕಿಸಿಕೊಡಿ ಎಂದು ಸಂತ್ರಸ್ತರು ಕಾಲು  ಹಿಡಿದು ಗೋಲಾಡಿದರು. ಒಂದು ಹಂತದಲ್ಲಿ ಮಾತಿನ ಚಕಮಕಿ ನಡೆದು ಅಧಿಕಾರಿಗಳ ಮೇಲೆ ಹಲ್ಲೆ  ಯತ್ನವೂ ನಡೆಯಿತು. ತಕ್ಷಣವೇ ಸದನ ಸಮಿತಿ ಸದಸ್ಯರು ಮಧ್ಯ ಪ್ರವೇಶಿಸಿ ನಿಮಗೆ ನ್ಯಾಯ ಒದಗಿಸಲು ಬಂದಿದ್ದೇವೆ. ಕೆರೆ ಒತ್ತುವರಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ವರದಿ ನೀಡಿ ಪುನರ್ ವಸತಿ ಕಲ್ಪಿಸುವಂತೆ ಒತ್ತಡ ಹೇರಲಾಗುವುದು ಎಂದು ಆಶ್ವಾಸನೆ ನೀಡಿದರು.

……………………………………..

ಕೆರೆ ಒತ್ತುವರಿಯನ್ನು ತೆರವು ಮಾಡದ ಪಾಲಿಕೆ :ಅಧಿಕಾರಿಗಳಿಗೆ ಹಿಗ್ಗಾಮುಗ್ಗಾ ತರಾಟೆ
ಬೆಂಗಳೂರು, ಮೇ 19-ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಕೆರೆಗಳನ್ನು ಕಾನೂನು ಬಾಹಿರವಾಗಿ ಒತ್ತುವರಿ ಮಾಡಿಕೊಂಡಿ ರುವವರನ್ನು ತೆರವುಗೊಳಿಸುವಲ್ಲಿ ಮೀನಾಮೇಷ ಎಣಿಸುತ್ತಿರುವ ಅಧಿಕಾರಿಗಳನ್ನು ಕೆರೆ ಒತ್ತುವರಿ ಸದನ ಸಮಿತಿ ಸದಸ್ಯರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಪ್ರಸಂಗ ಇಂದು ಜರುಗಿತು. ಕೆರೆ ಒತ್ತುವರಿ ಸದನ ಸಮಿತಿ ಅಧ್ಯಕ್ಷ ಕೆ.ಬಿ.ಕೋಳೀವಾಡ ನೇತೃತ್ವದ ಸಮಿತಿ ಸದಸ್ಯರಾದ ಎಚ್.ಡಿ.ಕುಮಾರಸ್ವಾಮಿ, ಎಸ್.ಸುರೇಶ್‌ಕುಮಾರ್, ಕೆ.ಗೋಪಾಲಯ್ಯ, ಬಿ.ಆರ್.ಯಾವಗಲ್, ಡಾ.ಸುಧಾಕರ್, ಬಿಡಿಎ ಆಯುಕ್ತ ಶ್ಯಾಮ್‌ಭಟ್, ಬೆಂಗಳೂರು ಉತ್ತರ ತಾಲೂಕು ತಹಶೀಲ್ದಾರ್ ಶಿವಪ್ಪ, ಕಂದಾಯ ಅಧಿಕಾರಿಗಳು ಇಂದು ಕೆರೆ ಪ್ರದೇಶಗಳಿಗೆ ಭೇಟಿ ನೀಡಿದಾಗ ಅಧಿಕಾರಿಗಳ ಅರೆಬರೆ  ಉತ್ತರದಿಂದ  ಸದಸ್ಯರು ಸಿಡಿಮಿಡಿಗೊಂಡರು.

ಬಡವರು ಮನೆಗಳನ್ನು ನಿರ್ಮಿಸಿಕೊಂಡರೆ ನೋಟೀಸ್ ನೀಡಿ ರಾತ್ರೋರಾತ್ರಿ ಕಡುವುತ್ತೀರಿ. ಅದೇ ಶ್ರೀಮಂತರು ಮನೆ ಕಟ್ಟಿದರೆ ತೆರವುಗೊಳಿಸಲು ಹಿಂದೇಟು ಹಾಕುವುದೇಕೆ? ದೇಶದಲ್ಲಿ ಬಡವರಿಗೊಂದು, ಶ್ರೀಮಂತರಿಗೊಂದು ಕಾನೂನು ಇದೆಯೇ ಎಂದು ಕೆ.ಬಿ.ಕೋಳಿವಾಡ ಬಿಡಿಎ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನೀವು ಮಾಡಿರುವ ತಪ್ಪಿನಿಂದಾಗಿ ಜನಸಾಮಾನ್ಯರು ಜನಪ್ರತಿನಿಧಿಗಳಿಗೆ  ಹಿಡಿಶಾಪ ಹಾಕುತ್ತಿದ್ದಾರೆ.  2-3 ಬಾರಿ  ನೋಟಿಸ್ ನೀಡಿದರೂ ಮನೆ ತೆರವು ಮಾಡಿಲ್ಲ. ಏನು ಮಾಡ್ತಾ ಇದ್ದೀರಾ ಎಂದು ಖಾರವಾಗಿ ಪ್ರಶ್ನಿಸಿದರು.
ಬಲಾಢ್ಯರಿಗೆ ಒಂದು, ಸಾಮಾನ್ಯರಿಗೆ ಒಂದು ಎಂಬ ಪ್ರತ್ಯೇಕ ಕಾನೂನು ಇಲ್ಲ. ಸರ್ಕಾರಿ ಕೆರೆ ಒತ್ತುವರಿ ಮಾಡಿಕೊಂಡಿರುವವರು ಎಷ್ಟೇ ಪ್ರಭಾವಿಗಳಾಗಿದ್ದರೂ ಮೊದಲು ನೋಟೀಸ್ ನೀಡಿ.  ನೋಟಿಸ್‌ಗೆ ಸಮರ್ಪಕ ಉತ್ತರ ಬಾರದಿದ್ದರೆ ಮೀನಾಮೇಷ ಮಾಡಬೇಡಿ ಕ್ರಮ ತೆಗೆದುಕೊಳ್ಳಿ ಎಂದು ಸೂಚಿಸಿದರು.

ಬೆಂಗಳೂರಿನ ಕೆರೆಗಳು ಬಿಡಿಎ ಸುಪರ್ದಿಯಲ್ಲಿದೆ. ಅನೇಕ ಭೂಗಳ್ಳರು, ರಿಯಲ್ ಎಸ್ಟೇಟ್ ಮಾಫಿಯಾಗಳು, ಬಿಲ್ಡರ್‌ಗಳು ಕೆರೆ ಒತ್ತುವರಿ ಮಾಡಿ ದೊಡ್ಡ ಬಂಗಲೆಗಳು, ವಾಣಿಜ್ಯ ಸಂಕೀರ್ಣಗಳು, ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಿಕೊಂಡಿದ್ದಾರೆ. ಕೆರೆ ಒತ್ತುವರಿಯಾಗುವ ವೇಳೆ ನೀವೆಲ್ಲ ಏನು ಮಾಡುತ್ತಿದ್ದಿರಿ ಎಂದು ತರಾಟೆಗೆ ತೆಗೆದುಕೊಂಡರು. ಬಿಡಿಎ ವ್ಯಾಪ್ತಿಯಲ್ಲಿರುವ ಎಲ್ಲಾ ಕೆರೆಗಳನ್ನು ಮೊದಲು ಸಮೀಕ್ಷೆ ನಡೆಸಬೇಕು. ಯಾವ ಕೆರೆಗಳು ಒತ್ತುವರಿಯಾಗಿವೆ ಎಂಬುದನ್ನು ಗುರುತಿಸಬೇಕು. ಒತ್ತುವರಿಯಾಗಿರುವುದು ರುಜುವಾತಾದರೆ  ಅದನ್ನು ವಶಕ್ಕೆ ಪಡೆದು ತಂತಿ ಬೇಲಿ ಹಾಕಬೇಕೆಂದು ಕೋಳಿವಾಡ ಸೂಚಿಸಿದರು. ಅಧಿಕಾರಿಗಳು ತಬ್ಬಿಬ್ಬು: ಸದನ ಸಮಿತಿ ಸದಸ್ಯರು ಭೇಟಿ ನೀಡಿದ ವೇಳೆ ಬಹುತೇಕ ಬಿಡಿಎ ಹಾಗೂ ಬಿಬಿಎಂಪಿ, ಕಂದಾಯ ಅಧಿಕಾರಿಗಳು ಹಾರಿಕೆ ಉತ್ತರ ನೀಡಿ ಮುಖಕ್ಕೆ ಮಂಗಳಾರತಿ ಮಾಡಿಸಿಕೊಂಡು ತಬ್ಬಿಬ್ಬಾದರು.
ಸಮಿತಿ ಸದಸ್ಯರು ಭೇಟಿ ನೀಡಿದ ಕೆರೆ ಪ್ರದೇಶಗಳಲ್ಲೆಲ್ಲ ಏಕೆ ಒತ್ತುವರಿಯಾಗಿದೆ? ಎಷ್ಟು ಒತ್ತುವರಿಯಾಗಿದೆ? ಮೂಲ ವಿಸ್ತೀರ್ಣವೆಷ್ಟು? ಇದಕ್ಕೆ ಸಂಬಂಧಿಸಿದ  ದಾಖಲೆಗಳೆಲ್ಲಿ ಎಂದು ಸದಸ್ಯರು ಪ್ರಶ್ನಿಸಿದಾಗ ಅಧಿಕಾರಿಗಳು ತಡಬಡಾಯಿಸಿ ಸರಿಯಾಗಿ ಉತ್ತರಿಸಲಿಲ್ಲ. ಇದರಿಂದ ಆಕ್ರೋಶಗೊಂಡ ಸದನ ಸಮಿತಿ ಸದಸ್ಯರು ನೀವು ಮಾಡಿರುವ ತಪ್ಪಿನಿಂದಾಗಿ ನಾವು ತಲೆತಗ್ಗಿಸುವಂತಾಗಿದೆ. ಮುಂದೆ ಈ ರೀತಿ ಆಗದಂತೆ ಎಚ್ಚರ ವಹಿಸಬೇಕೆಂದು ಕೆ.ಬಿ.ಕೋಳಿವಾಡ ಸೂಚಿಸಿದರು.

Write A Comment