ಅಂತರಾಷ್ಟ್ರೀಯ

10 ಸೆಕೆಂಡ್‌ಗಿಂತ ಕಡಿಮೆ ಆಗಿದೆ ಏಕಾಗ್ರತೆ ಅವಧಿ

Pinterest LinkedIn Tumblr

Brain-mapping-jpg

ಟೊರಾಂಟೊ: ಡಿಜಿಟಲ್‌ ಟೆಕ್ನಾಲಜಿ ಹಾವಳಿ ಹೆಚ್ಚಾದಂತೆ ಮನುಷ್ಯರ ಏಕಾಗ್ರತೆ ಅವಧಿ 12 ಸೆಕೆಂಡ್‌ಗಳಿಂದ 8 ಸೆಕೆಂಡ್‌ಗಳಿಗೆ ಇಳಿದಿದೆ ಎಂದು ಮೈಕ್ರೋಸಾಫ್ಟ್‌ ಇತ್ತೀಚಿಗೆ ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ.

ಹೆಚ್ಚು ಚೆಂಚಲ ಎನ್ನಲಾಗುವ ಗೋಲ್ಡ್‌ಫಿಶ್‌ನ ಏಕಾಗ್ರತೆ ಅವಧಿ (ಸರಾಸರಿ 9)ಗಿಂತ ಮನುಷ್ಯರ ಏಕಾಗ್ರತೆ ಕಡಿಮೆ ಆಗಿದೆ ಎಂಬ ಅಂಶ ಅಧ್ಯಯನದಿಂದ ಬಹಿರಂಗವಾಗಿದೆ.

ತಂತ್ರಜ್ಞಾನದ ಪರಿಣಾಮಗಳು ಹಾಗೂ ಇಂದಿನ ಡಿಜಿಟಲ್‌ ಬದುಕು ಏಕಾಗ್ರತೆ ಮೇಲೆ ಬೀರುವ ಪರಿಣಾಮಗಳ ಕುರಿತು ಅಧ್ಯಯನ ನಡೆಸಿ 54 ಪುಟಗಳ ವರದಿ ಸಿದ್ಧಪಡಿಸಲಾಗಿದೆ. 18 ವರ್ಷ ದಾಟಿದ ಕೆನಡಾದ 2,000ಕ್ಕೂ ಹೆಚ್ಚು ಮಂದಿ ಈ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು.

ದಿನ ನಿತ್ಯ ಬಳಸುವ ಸ್ಮಾರ್ಟ್‌ಫೋನ್‌ ಹಾಗೂ ಇತರ ಡಿಜಿಟಲ್‌ ಮಾಧ್ಯಮಗಳ ಪರಿಣಾಮವನ್ನು ಅರಿಯಲು ಸಂಶೋಧಕರು ನಡೆಸಿದ ಅಧ್ಯಯನದ ವೇಳೆ, ಸಮೀಕ್ಷೆಯಲ್ಲಿ ಪಾಲ್ಗೊಂಡವರು ಗೇಮ್‌ ಆಡುವ ಜತೆ ಆನ್‌ಲೈನ್‌ನಲ್ಲಿ ಮಾತುಕತೆ ನಡೆಸಿದ್ದಾರೆ. ಸಾಮಾಜಿಕ ಜಾಲ ತಾಣಗಳ ಬಳಕೆ ವೇಳೆ ಅವರ ಮೆದುಳಿನ ಚಟುವಟಿಕೆಯನ್ನು ಸಂಶೋಧಕರು ದಾಖಲಿಸಿಕೊಂಡಿದ್ದರು. ಜತೆಗೆ, ಅವರ ವರ್ತನೆಯನ್ನು ಚಿತ್ರೀಕರಿಸಲಾಗಿತ್ತು.

ಸಂಶೋಧಕರ ತಂಡ ಅವರ ಏಕಾಗ್ರತೆಯ ಅವಧಿಯನ್ನು ಅಂದಾಜಿಸಿ ಅವರ ವರ್ತನೆಯನ್ನು ಗಮನಿಸಿದ ಬಳಿಕ, 2000ನೇ ಇಸವಿಯಲ್ಲಿ 12 ಸೆಕೆಂಡ್‌ಗಳಷ್ಟಿದ್ದ ಮನುಷ್ಯರ ಏಕಾಗ್ರತೆ ಈಗ ಕೇವಲ 8 ಸೆಕೆಂಡ್‌ಗೆ ಇಳಿದಿರುವ ಅಂಶ ಬಯಲು ಮಾಡಿದೆ. ಉಪಕರಣಗಳ ಬಳಕೆ ವಿಷಯಕ್ಕೆ ಬಂದರೆ,ಯುವ ಜನರಿಗೆ ಅದರ ಗೀಳು ಹೆಚ್ಚಿರುವ ವಿಷಯವೂ ಗಮನಕ್ಕೆ ಬಂದಿದೆ.

ಖಾಲಿ ಕುಳಿತಿರುವಾಗ ಮೊದಲು ಫೋನ್‌ ಕೈಗೆತ್ತಿಕೊಳ್ಳುವಿರಾ ಎಂಬ ಪ್ರಶ್ನೆಗೆ 18 ರಿಂದ 24 ವರ್ಷದೊಳಗಿನ ಶೇ.77 ರಷ್ಟು ಮಂದಿಯ ಉತ್ತರ ‘ಹೌದು’ ಆಗಿತ್ತು. ಆದರೆ, 65ಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಮೊಬೈಲ್‌ ಮುಂತಾದ ಸಾಧನಗಳ ಸೆಳೆತ ಕಡಿಮೆ.

ಪ್ರತಿ 30 ಸೆಕೆಂಡ್‌ಗಳಿಗೊಮ್ಮೆ ಮೊಬೈಲ್‌ ಚೆಕ್‌ ಮಾಡುವುದಾಗಿ 18-24 ವಯಸ್ಸಿನವರು ಒಪ್ಪಿಕೊಂಡಿದ್ದಾರೆ. ಈ ಪೈಕಿ ಮುಕ್ಕಾಲು ಭಾಗದಷ್ಟು ಮಂದಿ ಪುಟ್ಟ ಡಿಜಿಟಲ್‌ ಸಾಧನವನ್ನು ಟಿವಿ ವೀಕ್ಷಣೆಗೆ ಬಳಸಿದ್ದಾಗಿ ಹೇಳಿದ್ದಾರೆ. ಒಂದು ಸಮಾಧಾನದ ವಿಷಯವೆಂದರೆ, ಏಕಕಾಲದಲ್ಲಿ ಹಲವು ಕೆಲಸ ನಿರ್ವಹಿಸುವ ಕೌಶಲ ಸುಧಾರಣೆಯಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.

Write A Comment