ಬೆಂಗಳೂರು, ಮೇ 18-ತಮ್ಮ ಐದೂವರೆ ದಶಕಗಳ ರಾಜಕೀಯದಲ್ಲಿ ಹಲವು ಏಳುಬೀಳುಗಳನ್ನು ಕಂಡಿರುವ (ಮಾಜಿ ಪ್ರಧಾನಿ) ಅಭಿಮಾನಿಗಳ ಪಾಲಿನ ಮಣ್ಣಿನ ಮಗ ಎಂದೇ ಕರೆಸಿಕೊಳ್ಳುವ ಹರದನಹಳ್ಳಿ ದೊಡ್ಡೇಗೌಡ ದೇವೇಗೌಡ ಅಲಿಯಾಸ್ ಎಚ್.ಡಿ.ದೇವೇಗೌಡರಿಗೆ ಇಂದು 83ನೇ ಹುಟ್ಟುಹಬ್ಬದ ಸಂಭ್ರಮ.
ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಹರದನಹಳ್ಳಿಯಲ್ಲಿ ದೊಡ್ಡೇಗೌಡ ಮತ್ತು ದೇವಮ್ಮ ದಂಪತಿ ಪುತ್ರನಾಗಿ 1933, ಮೇ 18ರಂದು ಜನಿಸಿದ ದೇವೇಗೌಡರು ದೇಶ ಕಂಡ ಅಪರೂಪದ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದಾರೆ. ದೇಶದ 12ನೇ ಪ್ರಧಾನಿ ಹಾಗೂ ಕರ್ನಾಟಕದ 14ನೇ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿರುವ ದೇವೇಗೌಡರು ರಾಜಕೀಯದಲ್ಲಿ ಸುದೀರ್ಘ ಐದೂವರೆ ದಶಕಗಳ ಕಾಲ ಸವೆದು ಬಂದ ಹಾದಿ ಇಂದಿನ ಯುವಜನಾಂಗಕ್ಕೆ ದಾರಿದೀಪ ಎಂದರೂ ಅತಿಶಯೋಕ್ತಿಯಾಗದು.
ದಿನದ 24 ಗಂಟೆಯೂ ರಾಜಕೀಯವನ್ನೇ ಉಸಿರಾಡುವ ದೇವೇಗೌಡರು ಅಧಿಕಾರದಲ್ಲಿ ಇರಲಿ, ಇಲ್ಲದಿರಲಿ ಸದಾ ಸುದ್ದಿಯಲ್ಲಿರುವ ಏಕೈಕ ರಾಜಕಾರಣಿ. ನಂಬಿದವರಿಗೆ ಪ್ರಾಣವನ್ನಾದರೂ ತ್ಯಾಗ ಮಾಡುವ, ಹಾಗೆಯೇ ಕೈಕೊಡುವವರಿಗೆ ತಕ್ಕ ಪಾಠ ಕಲಿಸದೆ ಬಿಡುವವರಲ್ಲ.
ನಾಡಿನ ಅನ್ನದಾತರ ಬಗ್ಗೆ ಹೊಂದಿರುವ ಅವರ ಕಳಕಳಿಯನ್ನು ಯಾರೊಬ್ಬರೂ ಪ್ರಶ್ನಿಸುವಂತಿಲ್ಲ. ರೈತನಿಗೆ ಅನ್ಯಾಯವಾಗುತ್ತದೆ ಎಂದರೆ ಗೌಡರು ಸುಮ್ಮನೆ ಕುಳಿತ ಜಾಯಮಾನದವರಲ್ಲ. ತಮ್ಮದೇ ಪಕ್ಷವಿದ್ದರೂ ಜಾಡಿಸಲು ಹಿಂದೆ-ಮುಂದೆ ನೋಡುವುದಿಲ್ಲ. ರೈತರ ಬಗ್ಗೆ ಹೊಂದಿರುವ ಅತೀವ ಪ್ರೀತಿಯಿಂದಲೇ ಈಗಲೂ ಅಭಿಮಾನಿಗಳು ಸೇರಿದಂತೆ ಅನೇಕರು ಅವರನ್ನು ಮಣ್ಣಿನ ಮಗನೆಂದೇ ಕರೆಯುತ್ತಾರೆ. ಕರ್ನಾಟಕದ ಅನೇಕ ಏಳುಬೀಳುಗಳಿಗೆ ಕಾರಣೀಭೂತರಾಗಿರುವ ದೇವೇಗೌಡರು ಐದೂವರೆ ದಶಕಗಳಲ್ಲಿ ಕಂಡ ನೋವು, ನಲಿವು ಒಳಗೊಂಡ ಆತ್ಮಚರಿತ್ರೆ ಬರೆಯಲು ಮುಂದಾಗಿದ್ದಾರೆ.
ವಿಶೇಷ ಪೂಜೆ:
83ನೇ ವಸಂತಕ್ಕೆ ಇಂದು ಕಾಲಿಟ್ಟ ದೇವೇಗೌಡರು ಪದ್ಮನಾಭನಗರದಲ್ಲಿರುವ ಮಂಜುನಾಥಸ್ವಾಮಿ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಪತ್ನಿ ಚೆನ್ನಮ್ಮ, ಪುತ್ರರಾದ ಬಾಲಕೃಷ್ಣೇಗೌಡ, ಎಚ್.ಡಿ.ರೇವಣ್ಣ, ಎಚ್.ಡಿ.ಕುಮಾರಸ್ವಾಮಿ, ಡಾ.ಮಂಜುನಾಥ್, ಪುತ್ರಿಯರು, ಸೊಸೆಯಂದಿರು ಸೇರಿದಂತೆ ಅಪಾರ ಅಭಿಮಾನಿಗಳು ನೆಚ್ಚಿನ ನಾಯಕನಿಗೆ ಶುಭ ಕೋರಿದರು. ಇದಲ್ಲದೆ ಪಕ್ಷದ ವತಿಯಿಂದಲೂ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಎಚ್.ಡಿ.ದೇವೇಗೌಡರ ಅಭಿಮಾನಿಗಳ ಯುವಜನ ಸಮಾಜಸೇವೆ ವತಿಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಇದೇ ರೀತಿ ಶಾಸಕರು, ಪಕ್ಷದ ಮುಖಂಡರು, ರಾಜ್ಯದ ವಿವಿಧ ಭಾಗಗಳಿಂದ ತೆರಳಿ ಗೌಡರಿಗೆ ಹುಟ್ಟುಹಬ್ಬದ ಶುಭ ಕೋರಿದರು. ಶಾಸಕರು, ಬಿಬಿಎಂಪಿ ಮಾಜಿ ಸದಸ್ಯರು, ಪಕ್ಷದ ಕಾರ್ಯಕರ್ತರು ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ ವಿತರಣೆ, ಕ್ಯಾನ್ಸರ್ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರು.
* ದೇವೇಗೌಡರ ಹುಟ್ಟುಹಬ್ಬ ಆಚರಣೆ
ಹಾಸನ, ಮೇ 18-ಮಾಜಿ ಪ್ರಧಾನಿ ಹಾಗೂ ಜೆಡಿಎಸ್ನ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡರ 83ನೇ ಹುಟ್ಟುಹಬ್ಬವನ್ನು ನಗರದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಇಂದು ಬೆಳಗ್ಗೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿತು. ನಂತರ ಕಾರ್ಯಕರ್ತರು, ಅಭಿಮಾನಿಗಳು ಹೇಮಾವತಿ ಪ್ರತಿಮೆ ಬಳಿ 83 ಕೆಜಿ ತೂಕದ ಕೇಕನ್ನು ಕತ್ತರಿಸುವ ಮೂಲಕ ಸಂಭ್ರಮಿಸಿದರು. ಶಾಸಕ ಎಚ್.ಎಸ್.ಪ್ರಕಾಶ್, ವಿಧಾನಪರಿಷತ್ ಸದಸ್ಯ ಪಟೇಲ್ ಶಿವರಾಮ್, ಮಾಜಿ ಜಿ.ಪಂ. ಅಧ್ಯಕ್ಷ ಸತ್ಯನಾರಾಯಣ, ಜೆಡಿಎಸ್ ರಾಜ್ಯ ಕಾರ್ಯದರ್ಶಿ ಹೊಂಗೇರಿ ರಘು, ಮುಖಂಡರಾದ ಕರಿಗೌಡ ಹಾಗೂ ಕಾರ್ಯಕರ್ತರು ಈ ಸಂದರ್ಭದಲ್ಲಿದ್ದರು.