ಬೆಂಗಳೂರು, ಮೇ 17: ಕೋಳಿ ಮನೆ ಹೋಟೆಲ್ನಲ್ಲಿ ಕ್ಲೀನರ್ ಆಗಿದ್ದ ವ್ಯಕ್ತಿಯ ಕತ್ತುಕೊಯ್ದು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಇಂದು ಬೆಳಗ್ಗೆ ಉಪ್ಪಾರಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕಪಾಲಿ ಚಿತ್ರಮಂದಿರ ಸಮೀಪದ ದಾಸಪ್ಪ ಬಿಲ್ಡಿಂಗ್ನ ನೆಲಮಹಡಿಯಲ್ಲಿರುವ ಕೋಳಿಮನೆ ಹೋಟೆಲ್ನಲ್ಲಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ ನಂಜೇಗೌಡ (55) ಭೀಕರವಾಗಿ ಹತ್ಯೆಯಾದ ವ್ಯಕ್ತಿ.
ನಂಜೇಗೌಡ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲ್ಲೂಕಿನ ಬಿಳಿಗೆರೆ ನಿವಾಸಿಯಾಗಿದ್ದು, ಕಳೆದ ನಾಲ್ಕು ವರ್ಷಗಳಿಂದ ಕೋಳಿ ಮನೆಯಲ್ಲಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ. ಮೂರು ದಿನಗಳ ಹಿಂದೆ ಕ್ಲೀನರ್ ಕೆಲಸಕ್ಕೆ ಸೇರಿಕೊಂಡ ರಮೇಶ ಎಂಬ ವ್ಯಕ್ತಿ ನಾಪತ್ತೆಯಾಗಿದ್ದು, ಆತನೇ ಈ ಕೊಲೆ ಮಾಡಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಶ್ರೀನಿವಾಸ್ ಮಾಲೀಕತ್ವದ ಕೋಳಿ ಮನೆಯಲ್ಲಿ ಕೃಷ್ಣಪ್ಪ ಎಂಬುವವರು ಕ್ಯಾಷಿಯರ್ ಮತ್ತು ಮ್ಯಾನೇಜರ್ ಆಗಿದ್ದು, ನಂಜೇಗೌಡ ಮತ್ತು ರವಿ ಎಂಬುವವರು ಕ್ಲೀನರ್ ಹಾಗೂ ಸಪ್ಲೈಯರ್ ಆಗಿ ಕೆಲಸ ಮಾಡುತ್ತಿದ್ದರು. ಮಧ್ಯಾಹ್ನ ಒಂದು ಗಂಟೆವರೆಗೂ ಕ್ಲೀನರ್ ಕೆಲಸ ಮಾಡುತ್ತಿದ್ದ ನಂಜೇಗೌಡ ನಂತರ ಹೋಟೆಲ್ ಮುಂಭಾಗವೇ ಬೊಂಡಾ, ಬಜ್ಜಿ ಮಾರಾಟ ಮಾಡುತ್ತಿದ್ದ. ಹೋಟೆಲ್ ಬಾಗಿಲು ಮುಚ್ಚಿದ ನಂತರ ಕೃಷ್ಣಪ್ಪ ಮನೆಗೆ ತೆರಳಿದರೆ, ರವಿ ಮತ್ತು ನಂಜೇಗೌಡ ಅಲ್ಲೇ ನಿದ್ರಿಸುತ್ತಿದ್ದರು.
ಆದರೆ, ಮೂರು ದಿನಗಳ ಹಿಂದೆ ರಮೇಶ್ ಎಂಬ ವ್ಯಕ್ತಿ ಕ್ಲೀನರ್ ಕೆಲಸಕ್ಕೆ ಸೇರಿಕೊಂಡಿದ್ದರಿಂದ ಮೂವರೂ ಅಲ್ಲೇ ತಂಗುತ್ತಿದ್ದರು. ಎಂದಿನಂತೆ ನಿನ್ನೆ ರಾತ್ರಿ ಕೆಲಸ ಮುಗಿಸಿದ ಮೂವರು ನಿದ್ರೆಗೆ ಜಾರಿದರು. ಇಂದು ಬೆಳಗ್ಗೆ 7 ಗಂಟೆಗೆ ಎಲ್ಲರೂ ಒಟ್ಟಿಗೆ ಎದ್ದರಾದರೂ ರವಿ ಸ್ನಾನ ಮಾಡಲು ತೆರಳಿದಾಗ ರಮೇಶ ಮತ್ತು ನಂಜೇಗೌಡ ಮಾತನಾಡುತ್ತಾ ಕುಳಿತಿದ್ದರು.ಸ್ನಾನ ಮುಗಿಸಿ ಹೊರ ಬಂದ ರವಿಗೆ ಕಂಡಿದ್ದು ರಕ್ತದ ಮಡುವು. ಆ ಮಡುವಿನಲ್ಲೇ ನಂಜೇಗೌಡ ಶವವಾಗಿ ಬಿದ್ದಿದ್ದ. ಆದರೆ, ರಮೇಶ ನಾಪತ್ತೆಯಾಗಿದ್ದ.
ತಕ್ಷಣ ರವಿ ಹೋಟೆಲ್ ಮಾಲೀಕರಿಗೆ ಹಾಗೂ ಉಪ್ಪಾರಪೇಟೆ ಪೊಲೀಸರಿಗೆ ವಿಷಯ ಮುಟ್ಟಿಸಿದ. ಸ್ಥಳಕ್ಕೆ ಬಂದ ಉಪ್ಪಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶವವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿದ್ದು, ರಮೇಶ ಈರುಳ್ಳಿ ಕತ್ತರಿಸುವ ಚಾಕುವಿನಿಂದ ನಂಜೇಗೌಡನ ಕತ್ತು ಕೊಯ್ದು ಕೊಲೆ ಮಾಡಿ ಪರಾರಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ಕುಮಾರ್, ಡಿಸಿಪಿ ಲಾಬೂರಾಮ್, ಎಸಿಪಿ ರಾಜೇಂದ್ರಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
