ದಾವಣಗೆರೆ, ಮೇ 16: ಗ್ರಾಮ ಪಂಚಾಯ್ತಿ ಚುನಾವಣಾ ಪ್ರಚಾರಕ್ಕೆ ಆಡಳಿತಾರೂಢ ಕಾಂಗ್ರೆಸ್ ದಾವಣಗೆರೆಯ ಬಾಪೂಜಿ ಎಂಬಿಎ ಕಾಲೇಜು ಆವರಣದಲ್ಲಿಂದು ಅದ್ಧೂರಿ ಸಮಾವೇಶ ನಡೆಸುವ ಮೂಲಕ ಚಾಲನೆ ನೀಡಿತು. ಸಿಎಂ ಸಿದ್ದ ರಾಮಯ್ಯ ಅವರ ಸರ್ಕಾರಕ್ಕೆ ಎರಡು ವರ್ಷ ತುಂಬಿದ ಸಂಭ್ರಮಾಚರಣೆ ಗಾಗಿ ಏರ್ಪಡಿಸಲಾಗಿದ್ದ ಸರ್ವೋದಯ ಸಮಾವೇಶ ಗ್ರಾಪಂ ಚುನಾವಣಾ ಪ್ರಚಾರದ ವೇದಿಕೆಯಾಗಿ ಪರಿವರ್ತನೆ ಯಾಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಎಐಸಿಸಿ ಪ್ರಧಾನ ಕಾರ್ಯದರ್ಶಿಹಾಗೂ ಕೇಂದ್ರದಮಾಜಿ ಸಚಿವ ಗುಲಾಂನಬಿ ಆಜಾದ್, ಲೋಕ ಸಭೆ ಕಾಂಗ್ರೆಸ್‌ನಾಯಕ ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ಮಾಜಿ ಸಚಿವರಾದ ಜಯರಾಂ ರಮೇಶ್, ಎಂ.ವೀರಪ್ಪಮೊಯ್ಲಿ, ಎಐಸಿಸಿ ಕಾರ್ಯದರ್ಶಿ ಚೆಲ್ಲಕುಮಾರ್, ಬಿ.ಕೆ.ಹರಿಪ್ರಸಾದ್, ಆಸ್ಕರ್ ಫರ್ನಾಂಡೀಸ್ ರಾಜ್ಯ ಸಚಿವ ಸಂಪುಟದ ಎಲ್ಲಾ ಸಚಿವರು ಸಮಾವೇಶದಲ್ಲಿ ಭಾಗವಹಿಸಿದ್ದರು. ರಾಜ್ಯದ ಕೇಂದ್ರಬಿಂದುವಾದ ಬೆಣ್ಣೆದೋಸೆ ನಗರಿ ದಾವಣಗೆರೆ ಕಾಂಗ್ರೆಸ್ ಸರ್ವೋದಯ ಸಮಾವೇಶದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮಯವಾಗಿತ್ತು. ಜನಸಾಗರ ಸಮಾವೇಶಕ್ಕೆ ಹರಿದು ಬಂದಿತ್ತು.
ರಾಜ್ಯ ಸರ್ಕಾರದ ಎರಡು ವರ್ಷದ ಸಾಧನೆಯನ್ನು ಸುದೀರ್ಘವಾಗಿ ವಿವರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರತಿಪಕ್ಷಗಳ ರಾಜಕೀಯ ಷಡ್ಯಂತ್ರದ ಕುರಿತು ಕಿಡಿಕಾರಿದರು. ರಾಜ್ಯ ಸರ್ಕಾರದ ಜನಪರ ಆಡಳಿತವನ್ನು ಸಹಿಸಲಾಗದೆ ಪ್ರತಿಪಕ್ಷಗಳು ಉದ್ದೇಶ ಪೂರ್ವಕವಾಗಿ ಆಧಾರರಹಿತ ಆರೋಪಗಳನ್ನು ಮಾಡುತ್ತಿವೆ. ಜನ ಇದಕ್ಕೆ ಬೆಲೆ ನೀಡುವುದಿಲ್ಲ. ಗ್ರಾಪಂ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಮತ ಹಾಕಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತಮ್ಮ ನೇತೃತ್ವದ ಸರ್ಕಾರ ಐದು ವರ್ಷ ಪೂರೈಸಲಿದ್ದು, ರಾಜ್ಯದ ಅಭಿವೃದ್ಧಿಗೆ ಇನ್ನಷ್ಟು ಪ್ರಾಮಾಣಿಕ ಹಾಗೂ ಬದ್ಧತೆಯಿಂದ ಕೆಲಸ ಮಾಡಲಿದೆ. ಕೆಲಸ ಮಾಡುವ ಮೂಲಕವೇ ಪ್ರತಿಪಕ್ಷಗಳ ಆರೋಪಗಳಿಗೆ ಉತ್ತರ ನೀಡುತ್ತೇವೆ ಎಂದು ಅವರು ತಿರುಗೇಟು ನೀಡಿದರು. ಚುನಾವಣೆ ಸಂದರ್ಭದಲ್ಲಿ ಸುಳ್ಳು ಆರೋಪಗಳನ್ನು ಮಾಡುವುದರ ಮೂಲಕ ಮತ ಗಿಟ್ಟಿಸುವ ಕೀಳು ರಾಜಕಾರಣವನ್ನು ಪ್ರತಿಪಕ್ಷಗಳು ಮಾಡುತ್ತಿವೆ. ಇದಕ್ಕೆ ಜನ ಕಾಂಗ್ರೆಸ್‌ಗೆ ಮತ ನೀಡುವ ಮೂಲಕವೇ ಉತ್ತರ ನೀಡುತ್ತಾರೆ ಎಂದು ಹೇಳಿದರು. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು. ವೇದಿಕೆಯಲ್ಲಿದ್ದ ಎಲ್ಲ ನಾಯಕರು ಸಿದ್ದರಾಮಯ್ಯ ಅವರ ಸರ್ಕಾರದ ಸಾಧನೆಗಳ ಬಗ್ಗೆ ಗುಣಗಾನ ಮಾಡಿದರು. ರಾಷ್ಟ್ರೀಯ ನಾಯಕ ಗುಲಾಬ್‌ನಬಿ ಆಜಾದ್ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಬೆನ್ನುತಟ್ಟಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಗಮನದ ಹಿನ್ನೆಲೆಯಲ್ಲಿ ದಾವಣಗೆರೆಯ ಪ್ರಮುಖ ರಸ್ತೆಗಳಿಗೆ ಡಾಂಬರೀಕರಣ ಮಾಡಿ ಸ್ವಚ್ಛತೆಯನ್ನು ಕಾಯ್ದುಕೊಳ್ಳಲಾಗಿತ್ತು. ಎಲ್ಲೆಡೆ ಕಾಂಗ್ರೆಸ್‌ನ ಬ್ಯಾನರ್, ಬಂಟಿಂಗ್ಸ್‌ಗಳು ರಾರಾಜಿಸುತ್ತಿದ್ದವು. ಪ್ರಮುಖವಾಗಿ ಸೋನಿಯಾಗಾಂಧಿ, ರಾಹುಲ್‌ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ಅವರ ಭಾವಚಿತ್ರಗಳು ಎದ್ದು ಕಾಣಿಸುತ್ತಿದ್ದವು. ಮಾಜಿ ಪ್ರಧಾನಿ ಡಾ.ಮನಮೋಹನ್‌ಸಿಂಗ್ ಅವರ ಭಾವಚಿತ್ರ ಕಾಂಗ್ರೆಸ್ ಬ್ಯಾನರ್‌ಗಳಲ್ಲಿ ನಾಪತ್ತೆಯಾಗಿದ್ದವು.
ದಾವಣಗೆರೆಯ ಸಮೀಪದ ಜಿಲ್ಲೆಗಳಾದ ಚಿತ್ರದುರ್ಗ, ಹಾವೇರಿ, ಬಿಜಾಪುರ, ಗದಗ, ಹುಬ್ಬಳ್ಳಿ-ಧಾರವಾಡ ಮತ್ತಿತರ ಜಿಲ್ಲೆಗಳಿಂದ ಜನರನ್ನು ಕರೆತರಲು ಬಸ್ ವ್ಯವಸ್ಥೆ ಮಾಡಲಾಗಿತ್ತು. ಸಮಾವೇಶದಲ್ಲಿ ಭಾಗವಹಿಸುವವರಿಗೆ ಬಾಯಾರಿಕೆ ನೀಗಿಸಲು 2 ಲಕ್ಷ ಮಜ್ಜಿಗೆ ಪ್ಯಾಕೆಟ್‌ಗಳನ್ನು ಪೂರೈಸಲಾಗಿತ್ತು.
ಸಮಾವೇಶಕ್ಕೂ ಮುನ್ನಾ ದಿನವಾದ ಶುಕ್ರವಾರ ದಾವಣಗೆರೆಯಲ್ಲಿ ಭಾರಿ ಮಳೆ ಸುರಿದಿತ್ತು. ಇದರಿಂದಾಗಿ ಇಡೀ ರಾತ್ರಿ ಮಳೆಯಲ್ಲಿ ನೆಂದಿದ್ದ ಪೆಂಡಾಲ್‌ನ ಒಂದು ಭಾಗ ಕುಸಿದು ಕೆಲ ಕಾಲ ಅಡಚಣೆಯಾಗಿತ್ತು. ತಕ್ಷಣವೇ ಸಿಬ್ಬಂದಿಗಳು ಚುರುಕಾಗಿ ಕೆಲಸ ಮಾಡಿ ಬಿದ್ದುಹೋಗಿದ್ದ ಪೆಂಡಾಲನ್ನು ಸಿದ್ಧಪಡಿಸಿದರು. 720 ಅಡಿ ಉದ್ದ 340 ಅಡಿ ಅಗಲದ ಭಾರೀ ಗಾತ್ರದ ಪೆಂಡಾಲನ್ನು ಹಾಕಲಾಗಿದೆ.