ರಾಷ್ಟ್ರೀಯ

‘ವರ್ಷ್ ಏಕ್ ಕಾಮ್ ಅನೇಕ್’: ಮೋದಿ ಸರ್ಕಾರದ ವರ್ಷಾಚರಣೆಗೆ ದೇಶಾದ್ಯಂತ ಅದ್ಧೂರಿ ಸಿದ್ದತೆ

Pinterest LinkedIn Tumblr

India Independence Day

ನವದೆಹಲಿ, ಮೇ 16: ಭಾರತೀಯ ಜನತಾಪಕ್ಷ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ)ಸರ್ಕಾರ ಒಂದು ವರ್ಷದ ಆಡಳಿತ ಪೂರೈಸುತ್ತಿರುವ ಈ ಸಂದರ್ಭದಲ್ಲಿ ದೇಶಾದ್ಯಂತ ಅದ್ಧೂರಿ ಕಾರ್ಯಕ್ರಮಗಳನ್ನು ನಡೆಸಲು ಪಕ್ಷ ಸರ್ವಸಿದ್ಧತೆಗಳನ್ನು ನಡೆಸಿದೆ.

ಈ ಕಾರ್ಯಕ್ರಮಗಳಿಗಾಗಿ ಪ್ರಧಾನಿ ಮೋದಿ ಆಡಳಿತದ ಯಶಸ್ಸನ್ನು ಸಾರಲು ಬಿಜೆಪಿ ಎರಡು ಘೋಷ ವಾಕ್ಯಗಳನ್ನು ಬಿಡುಗಡೆ ಮಾಡಿದೆ. ಮೊದಲನೆಯದು ವರ್ಷ್ ಏಕ್ ಕಾಮ್ ಅನೇಕ್ ಮತ್ತು ಎರಡನೆಯದು ಮೋದಿ ಸರ್ಕಾರ್ ಕಾಮ್ ಲಗ್ತಾರ್ ಈ ಘೋಷ ವಾಕ್ಯಗಳನ್ನು ಭಾರತೀಯ ಜನತಾಪಕ್ಷ ಆಯೋಜಿಸಲಿರುವ ಕಾರ್ಯಕ್ರಮಗಳಲ್ಲಿ ಪ್ರಮುಖವಾಗಿ ಬಳಸಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ. ದೇಶಾದ್ಯಂತ 2 ಲೋಕಸಭಾ ಕ್ಷೇತ್ರಗಳಿಗೆ ಒಂದರಂತೆ 250 ರ್ಯಾ ಲಿಗಳನ್ನು ನಡೆಸಲು ಪಕ್ಷ ತೀರ್ಮಾನಿಸಿದೆ. ಇದರ ಜೊತೆ ಸಂಸದರು ಮತ್ತು ಶಾಸಕರು ದೇಶಾದ್ಯಂತ 500 ಸುದ್ದಿಗೋಷ್ಠಿಗಳನ್ನು ನಡೆಸಲಿದ್ದಾರೆ. ಸರ್ಕಾರ ಒಂದು ವರ್ಷ ಪೂರೈಸುವ ಮೇ 26ರಿಂದ ಮೇ 31ರವರೆಗೆ ಪ್ರತಿಯೊಬ್ಬ ಸಂಸದನೂ ತನ್ನ ಕ್ಷೇತ್ರಕ್ಕೆ ಭೇಟಿ ನೀಡುವಂತೆ ಪ್ರಧಾನಿ ಮೋದಿ ತಾಕೀತು ಮಾಡಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದ ಬಳಿಕ 2014ರ ಮೇ 26ರಂದು ಮೋದಿ ಪ್ರಧಾನಿಯಾಗಿ ಅಧಿಕಾರಿ ವಹಿಸಿಕೊಂಡಿದ್ದರು.

ರಾಜ್ಯದಲ್ಲೂ ಸಾಧನಾ ಸಮಾವೇಶವಕ್ಕೆಸಿದ್ಧತೆ
ಬೆಂಗಳೂರು: ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಒಂದು ವರ್ಷ ಯಶಸ್ವಿಯಾಗಿ ಪೂರ್ಣಗೊಳಿಸುತ್ತಿದ್ದು ಮೇ 26ರಿಂದ 30ರವರೆಗೆ ಒಂದು ವರ್ಷದ ಸಾಧನಾ ಸಮಾವೇಶ ಆಚರಿಸಲು ಭರದ ಸಿದ್ಧತೆ ನಡೆಸುತ್ತಿದೆ. ರಾಜ್ಯದಲ್ಲಿ ಕೂಡ ನಾಲ್ಕೈದು ದಿನಗಳ ಕಾಲ ಕೇಂದ್ರ ಸರ್ಕಾರದ ಒಂದು ವರ್ಷದ ಸಾಧನಾ ಸಮಾವೇಶವನ್ನು ಯಶಸ್ವಿಯಾಗಿ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ. ಸಮಾವೇಶದ ರೂಪುರೇಷೆ ಸಿದ್ಧಪಡಿಸಲು ಇಂದು ನಡೆಯಬೇಕಾಗಿದ್ದ ಬಿಜೆಪಿ ಪ್ರಮುಖರ ಸಭೆಯನ್ನು ಮುಂದೂಡಲಾಗಿದೆ.

ತಮ್ಮ ಪಕ್ಷದ ಎಲ್ಲಾ ಸಂಸದರು ಕೂಡ ತಮ್ಮ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಸಾಧನಾ ಸಮಾವೇಶ ನಡೆಸಲು ಈಗಾಗಲೇ ಬಿಜೆಪಿ ಸೂಚಿಸಿದೆ. ಸಂಸದರು ಇಲ್ಲದಿರುವ ಕಡೆಗಳಲ್ಲಿ ಪಕ್ಷದ ಜಿಲ್ಲಾಧ್ಯಕ್ಷರು ಹಾಗೂ ಶಾಸಕರು ಒಂದು ವರ್ಷದ ಸಾಧನಾ ಸಮಾವೇಶವನ್ನು ಜನರ ಸಮಾವೇಶವನ್ನಾಗಿ ಆಚರಿಸಲು ಸಿದ್ಧತೆ ಮಾಡಿಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ.

ಸಮಾವೇಶದ ಅಂಗವಾಗಿ ಜಾಥಾ ಕೂಡ ಹಮ್ಮಿಕೊಳ್ಳಲಾಗುತ್ತದೆ. ಕಳೆದ ಒಂದು ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಕೈಗೊಂಡಿರುವ ಕಾರ್ಯಕ್ರಮಗಳು, ಜಾರಿಗೆ ತಂದಿರುವ ಯೋಜನೆಗಳ ಬಗ್ಗೆ ಜನಜಾಗೃತಿ ಮೂಡಿಸುವುದು ಪ್ರಮುಖ ಉದ್ದೇಶವಾಗಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಕೇಂದ್ರ ಸರ್ಕಾರ ಹಮ್ಮಿಕೊಂಡಿರುವ ಜನಪರ ಕಾರ್ಯಕ್ರಮಗಳ ಬಗ್ಗೆ ಸ್ಥಳೀಯವಾಗಿ ಜನರಿಗೆ ಮನವರಿಕೆ ಮಾಡಿಕೊಡುವುದು, ಆ ಮೂಲಕ ಕೇಂದ್ರ ಸರ್ಕಾರ ಹಾಗೂ ಪಕ್ಷದ ವರ್ಚಸ್ಸನ್ನು ಹೆಚ್ಚಿಸಿಕೊಳ್ಳಲು ಬಿಜೆಪಿ ತೀರ್ಮಾನಿಸಿದೆ. ರಾಜ್ಯಾದ್ಯಂತ ಆಚರಿಸಲಿರುವ ಒಂದು ವರ್ಷದ ಸಾಧನಾ ಸಮಾವೇಶಗಳ ಬಗ್ಗೆ ಸದ್ಯದಲ್ಲೇ ರಾಜ್ಯ ಬಿಜೆಪಿ ಪ್ರಮುಖರು ಸಭೆ ಸೇರಿ ರೂಪುರೇಷೆಗಳನ್ನು ಸಿದ್ಧಪಡಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

Write A Comment