ಬೆಂಗಳೂರು, ಮೇ 15- ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರು ಅಪ್ಪಿ ತಪ್ಪಿ ವೃತ್ತಿ ಶಿಕ್ಷಣ ಕೋರ್ಸ್‌ಗಳಿಗೆ ಕೋಚಿಂಗ್ ಕ್ಲಾಸ್ (ತರಬೇತಿ ತರಗತಿ) ನಡೆಸೀರಿ ಜೋಕೆ..! ಏಕೆಂದರೆ, ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಕೋಚಿಂಗ್‌ಕ್ಲಾಸ್ ನಡೆಸಬಾರದೆಂದು ಪದವಿ ಪೂರ್ವ ಶಿಕ್ಷಣ ಮಂಡಳಿ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಒಂದು ವೇಳೆ ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಉಪನ್ಯಾಸಕರು ಕೋಚಿಂಗ್ ಕ್ಲಾಸ್ ನಡೆಸಿದರೆ ಅಂತಹವರನ್ನು ಸೇವೆಯಿಂದ ಅಮಾನತುಪಡಿಸುವುದು, ಮುಂಬಡ್ತಿಗೆ ತಡೆ ಸೇರಿದಂತೆ ಕಠಿಣ ಶಿಸ್ತುಕ್ರಮ ಜರುಗಿಸಲಾಗುವುದು
ಎಂದು ಅಧಿಸೂಚನೆಯಲ್ಲಿ ಎಚ್ಚರಿಸಲಾಗಿದೆ. ಈ ಸಂಬಂಧ ಮಂಡಳಿಯು ಉಪನ್ಯಾಸಕರ ಮೇಲೆ ಹದ್ದಿನ ಕಣ್ಣಿಡಲು ವಿಚಕ್ಷಣ ದಳವೊಂದನ್ನು ರಚನೆ ಮಾಡಿದೆ. ಯಾವ ಉಪನ್ಯಾಸಕರು ತರಬೇತಿ ವರ್ಗಗಳನ್ನು ನಡೆಸುತ್ತಾರೋ ಅಂತಹವರ ಮೇಲೆ ದಾಳಿ ನಡೆಸಿ ತಡೆ ಹಿಡಿಯಬೇಕೆಂದು ಸೂಚನೆ ಕೊಡಲಾಗಿದೆ.
ಕಾರಣವೇನು..?
ಪ್ರತಿವರ್ಷ ಮಾರ್ಚ್ ಹಾಗೂ ಏಪ್ರಿಲ್ ತಿಂಗಳ ಶೈಕ್ಷಣಿಕ ಅವಧಿ ಮುಗಿದ ನಂತರ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರು ಕೋಚಿಂಗ್ ಕ್ಲಾಸ್ ನಡೆಸುವುದು ಸರ್ವೆ ಸಾಮಾನ್ಯವಾಗಿತ್ತು. ಎಂಜಿನಿಯರಿಂಗ್, ವೈದ್ಯಕೀಯ, ದಂತ ವೈದ್ಯಕೀಯ, ವಾಸ್ತುಶಿಲ್ಪ, ಕೃಷಿ ವಿಜ್ಞಾನ ಕೋರ್ಸ್‌ಗಳಿಗೆ ಸಂಬಂಧಿಸಿದಂತೆ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಕೋಚಿಂಗ್ ಕ್ಲಾಸ್ ನಡೆಸುತ್ತಿದ್ದರು. ಏಪ್ರಿಲ್, ಮೇ ತಿಂಗಳ ಅವಧಿಯಲ್ಲಿ ನಡೆಯುವ ಸಿಇಟಿ/ಎಐಇಇಇ/ಐಐಟಿ/ಜೆಇಇ ಪರೀಕ್ಷೆಗಳಿಗೆ ಸರ್ಕಾರದ ಕಣ್ತಪ್ಪಿಸಿ ಉಪನ್ಯಾಸಕರು ತರಗತಿಗಳನ್ನು ನಡೆಸುತ್ತಿದ್ದರು. ಒಂದೇ ಕಾಲೇಜಿನ ಎಂಟರಿಂದ ಹತ್ತು ಉಪನ್ಯಾಸಕರು ಸೇರಿಕೊಂಡು ಪ್ರತ್ಯೇಕ ಕೊಠಡಿಯೊಂದನ್ನು ಬಾಡಿಗೆ ಪಡೆದು ಕೋಚಿಂಗ್ ನೀಡುತ್ತಿದ್ದರು.
ಇದು ಎಷ್ಟರ ಮಟ್ಟಿಗೆ ನಡೆಯುತ್ತಿತ್ತೆಂದರೆ ಪ್ರತಿಯೊಬ್ಬ ವಿದ್ಯಾರ್ಥಿಗಳಿಂದ ಒಂದು ವಿಷಯಕ್ಕೆ ಮೂರರಿಂದ ನಾಲ್ಕು ಸಾವಿರ ಇಲ್ಲವೆ ಐದು ಸಾವಿರ ವಸೂಲಿ ಮಾಡುತ್ತಿದ್ದರು. ವಿಜ್ಞಾನ ವಿಭಾಗದ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರಕ್ಕೆ ಎರಡು ತಿಂಗಳ ಅವಧಿಗೆ ಕನಿಷ್ಟ 15 ರಿಂದ 20 ಸಾವಿರ ಹಣವನ್ನು ಒಬ್ಬ ವಿದ್ಯಾರ್ಥಿಯಿಂದ ಪೀಕುತ್ತಿದ್ದರು. ಇದು ಒಂದು ರೀತಿ ಸರ್ಕಾರಿ ಉಪನ್ಯಾಸಕರೇ ಹಗಲು ದರೋಡೆ ಮಾಡಿದಂತೆ ಆಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಪದವಿ ಪೂರ್ವ ಶಿಕ್ಷಣ ಮಂಡಳಿ ಉಪನ್ಯಾಸಕರುಗಳಿಗೆ ಮೂಗುದಾರ ಹಾಕಲು ಮುಂದಾಗಿದೆ. ಎರಡು ದಿನಗಳ ಹಿಂದೆಯಷ್ಟೆ ಅಧಿಸೂಚನೆ ಹೊರಡಿಸಲಾಗಿದ್ದು, ಈ ಪ್ರಕಾರ ಯಾವುದೇ ಸರ್ಕಾರಿ ಉಪನ್ಯಾಸಕರು ಕೋಚಿಂಗ್ ಕ್ಲಾಸ್ ನಡೆಸುವ ಹಾಗಿಲ್ಲ. ಹಾಗೊಂದು ವೇಳೆ ನಡೆಸಿದ್ದೇ ಆದರೆ ಶಿಸ್ತುಕ್ರಮ ಖಚಿತ.