ಕರ್ನಾಟಕ

ಜುಲೈನಲ್ಲಿ ಬಿಬಿಎಂಪಿ ಚುನಾವಣೆ ಜೂನ್ ಮೊದಲ ವಾರ ಹೊಸ ಮೀಸಲಾತಿ

Pinterest LinkedIn Tumblr

BBMP-Epoll

ಮುಂದಿನ ಜುಲೈ ಕೊನೆಯ ವಾರದಲ್ಲಿ ಬಿಬಿಎಂಪಿ ಚುನಾವಣೆ ನಡೆಯಲಿದ್ದು, ಅದಕ್ಕಾಗಿ ಜೂನ್ ಮೊದಲ ವಾರದಲ್ಲಿ ಹೊಸ ಮೀಸಲಾತಿ ಪಟ್ಟಿ ಸಿದ್ಧಗೊಳಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. ಕೆಪಿಸಿಸಿ ಕಚೇರಿಗೆ ಆಗಮಿಸಿದ ಅವರು, ಕಾರ್ಯಕರ್ತರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರ ಜತೆ ಮಾತನಾಡಿದರು.ಕಳೆದ ತಿಂಗಳು ಬಿಬಿಎಂಪಿ ಚುನಾವಣೆಗಾಗಿ ಸಿದ್ಧಪಡಿಸಲಾಗಿದ್ದ ವಾರ್ಡ್ ಮೀಸಲಾತಿ ಪಟ್ಟಿಯನ್ನು ರದ್ದುಗೊಳಿಸಲಾಗಿದೆ. ಹೊಸದಾಗಿ ಮೀಸಲಾತಿ ಪಟ್ಟಿ ಸಿದ್ದಪಡಿಸಿ ಚುನಾವಣೆ ನಡೆಸಲಾಗುವುದು ಎಂದು ಹೇಳಿದರು.

ಹೈಕೋರ್ಟ್ ಏಕಸದಸ್ಯ ಪೀಠ ಬಿಬಿಎಂಪಿಗೆ ಮೇ 30ರೊಳಗೆ ಚುನಾವಣೆ ನಡೆಸಬೇಕೆಂದು ಆದೇಶ ನೀಡಿತ್ತು. ಹೈಕೋರ್ಟ್ ವಿಭಾಗಿಯ ಪೀಠ ಆ ಆದೇಶವನ್ನು ರದ್ದುಮಾಡಿತ್ತು. ಸುಪ್ರೀಂಕೋರ್ಟ್ ತೀರ್ಪನ್ನು ಪರಿಷ್ಕರಣೆ ಮಾಡಿ ಚುನಾವಣೆ ನಡೆಸಲು ಮೂರು ತಿಂಗಳ ಕಾಲಾವಕಾಶ ನೀಡಿ ಏ.4ರಂದು ತೀರ್ಪು ನೀಡಿದೆ. ಅದರಂತೆ ಚುನಾವಣೆ ನಡೆಸುವುದು ಅನಿವಾರ್ಯ ಎಂದು ತಿಳಿಸಿದರು.

ಹೈಕೋರ್ಟ್ ವಿಭಾಗೀಯ ಪೀಠ ಏಕಸದಸ್ಯ ಪೀಠದ ತೀರ್ಪನ್ನು ರದ್ದುಗೊಳಿಸುತ್ತಿದ್ದಂತೆ ವಾರ್ಡ್ ಮೀಸಲಾತಿ ಪಟ್ಟಿ ತನ್ನಷ್ಟಕ್ಕೆ ತಾನೇ ರದ್ದುಗೊಂಡಿದೆ. ಸುಪ್ರೀಂಕೋರ್ಟ್ ಆದೇಶದಂತೆ ಜುಲೈ ತಿಂಗಳ ಕೊನೆಯಲ್ಲಿ ಚುನಾವಣೆ ನಡೆಸುವುದು ನಿಶ್ಚಿತ. ಮತ್ತೆ ಮೇಲ್ಮನವಿ ಸಲ್ಲಿಸುವ ಚಿಂತನೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.ಬಿಬಿಎಂಪಿ ಮೀಸಲಾತಿ ಪಟ್ಟಿ ಸಿದ್ದಗೊಳಿಸುವಾಗ ಕೆಳಹಂತದ ಕಾರ್ಯಕರ್ತರ ಅಭಿಪ್ರಾಯವನ್ನು ಪರಿಗಣಿಸಿಲ್ಲ ಎಂಬ ಆಕ್ಷೇಪಕ್ಕೆ ಉತ್ತರಿಸಿದ ಅವರು, ವಾರ್ಡ್ ಮೀಸಲಾತಿ ಪಟ್ಟಿ ಸಿದ್ಧಗೊಳಿಸುವಾಗ ಸರ್ಕಾರ ಹಸ್ತಕ್ಷೇಪಮಾಡುವುದು ಸರಿಯಲ್ಲ. ಆದರೂ ಈ ತಿಂಗಳ 19ರಂದು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಭೆ ನಡೆಸಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲಾಗುವುದು ಎಂದರು.ಬಿಬಿಎಂಪಿ ವಿಭಜನೆಯ ಪ್ರಸ್ತಾವನೆ ಸದ್ಯಕ್ಕೆ ಕೈ ಬಿಡಲಾಗಿದೆ. ವಿಧಾನಸಭೆ ಪರಿಷತ್ತಿನ ಆಯ್ಕೆ ಸಮಿತಿ ವರದಿ ಬರಬೇಕು. ಆ ವರೆಗೆ ವಿಭಜನೆಯ ಮಾತಿಲ್ಲ. ಈ ನಡುವೆ ಸುಪ್ರೀಂಕೋರ್ಟ್‌ನ ತೀರ್ಪಿನಂತೆ ವಿಳಂಬ ಮಾಡದೆ ಚುನಾವಣೆ ನಡೆಸಲಾಗುವುದು ಎಂದರು.

ಯಾವುದೇ ಸಂದರ್ಭದಲ್ಲಿ ಚುನಾವಣೆ ನಡೆದರೂ ಬಿಬಿಎಂಪಿಯಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಸಂಸತ್ ಚುನಾವಣೆಯ ನಂತರ ರಾಜ್ಯದಲ್ಲಿ ನಡೆಯಲಿರುವ ಮೂರು ಲೋಕಸಭೆ ಚುನಾವಣೆಯಲ್ಲೂ ಕಾಂಗ್ರೆಸ್ ಉತ್ತಮ ಸಾಧನೆ ಮಾಡಿದೆ. ಮತದಾರರ ಮನಸ್ಥಿತಿ ಬದಲಾಯಿಸಿದೆ ಎಂದು ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರು ಅಭಿವೃದ್ಧಿ ಹಾಗೂ ಸಮಸ್ಯೆಗಳ ಪರಿಹಾರಕ್ಕೆ ಸಾಕಷ್ಟು ಒತ್ತು ನೀಡಿದ್ದಾರೆ ಎಂದು ರಾಮಲಿಂಗಾರೆಡ್ಡಿ ಸಮರ್ಥಿಸಿಕೊಂಡರು

Write A Comment