ಬೆಂಗಳೂರಲ್ಲಿ ಕೆರೆಗಳನ್ನು ಒತ್ತುವರಿ ಮಾಡಿಕೊಂಡು ಅಮಾಯಕರನ್ನು ಇಂದು ಸಂಕಷ್ಟಕ್ಕೆ ಸಿಲುಕಿಸಿರುವವರು ಯಾವುದೇ ಪಕ್ಷದಲ್ಲಿದ್ದರೂ ಪತ್ತೆಹಚ್ಚಿ ಗಲ್ಲಿಗೆ ಹಾಕಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಹೇಳಿದರು. ಬಾಣಸವಾಡಿ ಕೆರೆ ಒತ್ತುವರಿ ತೆರವು ಕಾರ್ಯಾಚರಣೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತರ ಅಳಲನ್ನು ಆಲಿಸಿ ನ್ಯಾಯ ಒದಗಿಸುವ ಭರವಸೆ ನೀಡಿದ ಅವರು, ಅಮಾಯಕರು ಬೀದಿಗೆ ಬೀಳುವಂತೆ ಮಾಡಿದ ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬೆಂಗಳೂರಿನಲ್ಲಿ ಒಂದಿಂಚು ಜಾಗ ಖರೀದಿ ಮಾಡುವುದೇ ಕಷ್ಟ. ಸೂರು ನಿರ್ಮಿಸಿಕೊಳ್ಳಲು ಸಾಲಸೋಲ ಮಾಡಿ ಇದ್ದ ಒಡವೆ, ವಸ್ತುಗಳನ್ನು ಅಡವಿಟ್ಟು ನಿವೇಶನ ಖರೀದಿಸಿರುತ್ತಾರೆ. ಅಲ್ಲಿ ಮನೆ ಕಟ್ಟಿ ನೆಮ್ಮದಿಯ ನಿಟ್ಟುಸಿರು ಬಿಡುವಷ್ಟರಲ್ಲಿ ಅಧಿಕಾರಿಗಳ ತಪ್ಪಿನಿಂದ ದಶಕಗಳಿಂದ ದುಡಿದ ಹಣದೊಂದಿಗೆ ಮನೆಯೂ ಇಲ್ಲದೆ, ಬೀದಿಗೆ ಬಂದಿದ್ದಾರೆ. ಅಧಿಕಾರಿಗಳ ತಪ್ಪಿಗೆ ಇವರಿಗೇಕೆ ಶಿಕ್ಷೆ ಎಂದು ಹರಿಹಾಯ್ದರು.
ಕೆರೆ ಜಾಗದಲ್ಲಿ ಬಿಡಿಎ ಅಧಿಕಾರಿಗಳು ನಿವೇಶನಗಳನ್ನು ರಿಜಿಸ್ಟ್ರಾರ್ ಮಾಡಿಕೊಟ್ಟಿದ್ದೇಕೆ ಎಂದು ಪ್ರಶ್ನಿಸಿದ ಅವರು, ಬಡ ಹಾಗೂ ಮಧ್ಯಮ ವರ್ಗದ ಖಾಸಗಿ ಹಾಗೂ ಸರ್ಕಾರಿ ಕೆಲಸ ಮಾಡಿಕೊಂಡು ನಿವೃತ್ತರಾಗಿ ಕೂಡಿಟ್ಟ ಹಣದಲ್ಲಿ ನಿರ್ಮಿಸಿಕೊಂಡ ಮನೆಗಳು ಇಂದು ಅವರಿಗಿಲ್ಲದಾಗಿದೆ. ನೇಪಾಳದಲ್ಲಿ ಪ್ರಕೃತಿ ವಿಕೋಪದಿಂದ ಜನ ಮನೆ ಮಠ ಕಳೆದುಕೊಂಡರೆ ಇಲ್ಲಿ ಸರ್ಕಾರವೇ ಜೆಸಿಬಿ ತಂದು ಎಲ್ಲವನ್ನು ಧ್ವಂಸ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಶಾಸಕ ಕೆ.ಬಿ.ಕೋಳಿವಾಡ ಅವರ ನೇತೃತ್ವದ ಸದನ ಸಮಿತಿ ಅಂತಿಮ ವರದಿ ನೀಡುವವರೆಗೂ ಕೆರೆ ಒತ್ತುವರಿ ತೆರವು ಮಾಡದಂತೆ ಮನವಿ ಮಾಡಿದ್ದೆ. ಆದರೆ ಅದನ್ನು ಗಣನೆಗೆ ತೆಗೆದುಕೊಳ್ಳಲದೆ ತೆರವು ಮಾಡಲಾಗಿದೆ. ಇದೀಗ ಮನೆ ಕಳೆದುಕೊಂಡವರ ರಕ್ಷಣೆ ಮಾಡುವವರು ಯಾರು. ಕೆ.ಬಿ.ಕೋಳಿವಾಡ ಸದನ ಸಮಿತಿ ಬೆಂಗಳೂರು ಸುತ್ತಮುತ್ತ ಕೆರೆಗಳಿವೆ, ಎಲ್ಲೆಲ್ಲಿ ಒತ್ತುವರಿಯಾಗಿದೆ ಎಂಬ ಬಗ್ಗೆ ವರದಿಯನ್ನು ಸರ್ಕಾರದ ಮುಂದಿಡುವಂತೆ ಕೋರಿದ್ದೇನೆ ಎಂದರು. ನನಗೆ ಯಾವುದೇ ರಾಜಕಾರಣ ಮಾಡುವ ಅಗತ್ಯವಿಲ್ಲ. ಇಂತಹ ನೊಂದ ಜನರ ದುಃಖ ಆಲಿಸುವುದು ಅವರಿಗೆ ಸಹಾಯ ಮಾಡುವುದು ನನ್ನ ಕರ್ತವ್ಯ. ಹಾಗಾಗಿ ಇಲ್ಲಿಗೆ ಭೇಟಿ ನೀಡಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಬೆಂಗಳೂರು ಉಳಿಸಿ ಸಂವಾದ: ಬೆಂಗಳೂರು ಅಭಿವೃದ್ದಿ ಹೇಗಿರಬೇಕು ಎನ್ನುವ ಬಗ್ಗೆ ಇದೇ ಭಾನುವಾರ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೆಂಗಳೂರು ಉಳಿಸಿ ಎಂಬ ಶೀರ್ಷಿಕೆಯಡಿ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ರಾಜಕಾಲುವೆ ಒತ್ತುವರಿ, ಕೆರೆ ಒತ್ತುವರಿ ಸೇರಿದಂತೆ ಇನ್ನಿತರ ಬೆಂಗಳೂರಿನ ಪ್ರಮುಖ ಸಮಸ್ಯೆಗಳ ಬಗ್ಗೆ ಸಲಹೆ ಸೂಚನೆಗಳನ್ನು ಪಡೆಯಲು ಸಂವಾದ ಏರ್ಪಡಿಸಲಾಗಿದೆ. ಇದರಲ್ಲಿ ರಾಜಕಾರಣಿಗಳು, ಸಚಿವರು ಯಾರಾದರೂ ಪಾಲ್ಗೊಳ್ಳಬಹುದು ಎಂದರು. ಈಗಾಗಲೇ ಬೆಂಗಳೂರಿನಲ್ಲಿ ಸಿಗುತ್ತಿರುವ ನೀರು ವಿಷಕಾರಿಯಾಗಿದೆ. ಇನ್ನು ಸೇವಿಸುವ ಗಾಳಿಯೂ ವಿಷವಾದರೂ ಅಚ್ಚರಿ ಇಲ್ಲ. ಇಂತಹ ಅನಾಹುತಗಳನ್ನು ತಡೆಗಟ್ಟುವವರು ಯಾರು? ಇದು ಹೀಗೆ ಮುಂದುವರೆದರೆ ಜೀವನ ಮಾಡಲು ಸಾಧ್ಯವೇ ಎಂದರು. ಕೆರೆ ಸಂರಕ್ಷಣೆ ಮಾಡುವುದರೊಂದಿಗೆ ಕೆರೆ ಒತ್ತುವರಿ ತೆರವಿನಿಂದ ಸಂತ್ರಸ್ತರಾದವರಿಗೆ ಪುನರ್ವಸತಿ ಕಲ್ಪಿಸುವುದು ಸರ್ಕಾರದ ಕೆಲಸ. ಹಾಗಾಗಿ ಕೂಡಲೇ ತಾತ್ಕಾಲಿಕ ಶೆಡ್ಗಳನ್ನು ನಿರ್ಮಿಸಿ ಅವರಿಗೆ ಸಹಾಯ ಒದಗಿಸಲಿ ಎಂದು ಒತ್ತಾಯಿಸಿದರು.
ಈ ಸ್ಥಳಕ್ಕೆ ಸುರೇಶ್ ಕುಮಾರ್ ಭೇಟಿ ನೀಡಿದ್ದರು. ಆದರೆ ತಮ್ಮ ಪಕ್ಷದವರಿಂದ ಆದ ಅನ್ಯಾಯದ ಬಗ್ಗೆ ಮಾತನಾಡಲಿಲ್ಲ ಎಂದು ಪ್ರಶ್ನಿಸಿದರು. ಈ ವೇಳೆ ಶಾಸಕರಾದ ಜಮೀರ್ ಅಹಮದ್, ಅಖಂಡ ಶ್ರೀನಿವಾಸಮೂರ್ತಿ, ಆರ್.ಪ್ರಕಾಶ್, ಗೋಪಾಲಯ್ಯ ಮತ್ತಿತರರು ಉಪಸ್ಥಿತರಿದ್ದರು. ಭಿನ್ನಾಭಿಪ್ರಾಯ ಮುಗಿದ ಅಧ್ಯಾಯ: ಎಚ್.ಡಿ.ಕುಮಾರಸ್ವಾಮಿ ಹಾಗೂ ತಮ್ಮ ನಡುವೆ ಉಂಟಾಗಿದ್ದ ಭಿನ್ನಾಭಿಪ್ರಾಯ ಇದೀಗ ಮುಗಿದ ಅಧ್ಯಾಯ ಎಂದು ಶಾಸಕ ಜಮೀರ್ ಅಹಮ್ಮದ್ ತಿಳಿಸಿದರು. ಬಾಣಸವಾಡಿ ಬಳಿಯ ಕೆರೆ ಒತ್ತುವರಿ ತೆರವು ಪ್ರದೇಶಕ್ಕೆ ಭೇಟಿ ನೀಡಿ ಸಂತ್ರಸ್ತರ ಸಮಸ್ಯೆ ಆಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವೇಳೆ, ಕೆಲವು ದಿನಗಳ ಹಿಂದೆ ನಮ್ಮ ನಡುವೆ ಉಂಟಾಗಿದ್ದ ವೈಮಸ್ಸನ್ನು ಪಕ್ಷದ ವರಿಷ್ಠ ದೇವೇಗೌಡರು ಮಾತುಕತೆಯ ಮೂಲಕ ಬಗೆಹರಿಸಿದ್ದಾರೆ ಎಂದರು.
ಯಾವುದೋ ವಿಚಾರದ ಬಗ್ಗೆ ಅಸಮಾಧಾನ ಉಂಟಾಗಿ ಭಿನ್ನಾಭಿಪ್ರಾಯ ತಲೆದೋರಿತ್ತು. ಹಾಗಾಗಿ ಪಕ್ಷದ ಚಟುವಟಿಕೆಗಳಿಂದ ದೂರವಿದ್ದೆ. ಈಗ ಪಕ್ಷದ ಸಂಘಟನೆಯಲ್ಲಿ ಅವರೊಂದಿಗೆ ಸಕ್ರಿಯನಾಗಿದ್ದೇನೆ ಎಂದು ತಿಳಿಸಿದರು.
ಎಲ್ಲರೂ ಒಗ್ಗಟ್ಟಾಗಿ ಬೇರು ಮಟ್ಟದಿಂದ ಪಕ್ಷ ಸಂಘಟನೆಗೆ ಗಮನ ನೀಡುತ್ತೇವೆ. ಕುಮಾರಸ್ವಾಮಿಯವರು ಹೆಗಲಿಗೆ ಹೆಗಲಾಗಿ ಸಂಘಟನಾ ಕೆಲಸದಲ್ಲಿ ಪಾಲ್ಗೊಳ್ಳುವೆ ಎಂದರು.