ಕರ್ನಾಟಕ

ಬೆಂಗಳೂರು: ನಗರದ ವಿವಿಧೆಡೆ ಭೀಕರ ಅಪಘಾತ ವಿದ್ಯಾರ್ಥಿಗಳು ಸೇರಿ ಮೂವರು

Pinterest LinkedIn Tumblr

1_page1_image1

ನಗರದ ಎರಡು ಕಡೆ ನಡೆದ ಪ್ರತ್ಯೇಕ ಅಪಘಾತದಲ್ಲಿ ಮೇಘಾಲಯದ ಇಬ್ಬರು ವಿದ್ಯಾರ್ಥಿಗಳು ಸೇರಿ ಮೂವರು ಮೃತಪಟ್ಟಿರುವ ಘಟನೆ ನಡೆದಿದೆ. ರಾಜಾಜಿನಗರ ಸಂಚಾರಿ: ನಾರಾಯಣ ನೇತ್ರಾಲಯದಿಂದ ಬೈಕ್‌ನಲ್ಲಿ ಹಿಂದಿರುಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಅತಿವೇಗವಾಗಿ ಬಂದ ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪ್ಟಟಿರುವ ಘಟನೆ ರಾಜಾಜಿನಗರ ಸಂಚಾರಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಆರ್‌ಟಿನಗರದ ನಿವಾಸಿ ಬೈದ್ಯನಾಥ ಜಸ್ಪಾಲ್ (60)ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿ.

ರಾಜಾಜಿನಗರದಲ್ಲಿನ ನಾರಾಯಣ ನೇತ್ರಾಲಯಕ್ಕೆ ಕಣ್ಣು ಪರೀಕ್ಷೆಗಾಗಿ ಬೈದ್ಯನಾಥ್ ಜಸ್ಪಾಲ್ ಅವರು ಬಂದಿದ್ದರು. ಪರೀಕ್ಷೆ ಮಾಡಿಸಿಕೊಂಡು ಇಂದು ಮಧ್ಯಾಹ್ನ 12 ಗಂಟೆಯಲ್ಲಿ ಬೈಕ್‌ನಲ್ಲಿ ಹಿಂದಿರುಗುತ್ತಿದ್ದಾಗ ಇಸ್ಕಾನ್ ದೇವಾಲಯದ ಮುಂಭಾಗ ಅತಿ ವೇಗವಾಗಿ ಬಂದ ಟಿಪ್ಪರ್ ಲಾರಿ ಡಿಕ್ಕಿ ಹೊಡೆದಿದೆ.

ಪರಿಣಾಮವಾಗಿ ಗಂಭಿರವಾಗಿ ಗಾಯಗೊಂಡು ತೀವ್ರ ರಕ್ತಸ್ರಾವವಾಗಿ ಜಸ್ಪಾಲ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಪಘಾತ ಸಂಭವಿಸಿದ ವೇಳೆ ಕೆಲ ಕಾಲ ಸಂಚಾರಕ್ಕೆ ಅಡಚಣೆ ಉಂಟಾಯಿತು. ರಾಜಾಜಿನಗರ ಠಾಣೆ ಇನ್‌ಸ್ಪೆಕ್ಟರ್ ವರ್ಗಾವಣೆಗೊಂಡಿರುವ ಹಿನ್ನೆಲೆಯಲ್ಲಿ ಪೀಣ್ಯಾ ಸಂಚಾರಿ ಠಾಣೆಯ ಇನ್‌ಸ್ಪೆಕ್ಟರ್ ರಾಜು ಸ್ಥಳಕ್ಕೆ ಆಗಮಿಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ರಾಜಾಜಿನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಯಲಹಂಕ: ಬೈಕ್ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ನಂತರ ಸಿಗ್ನಲ್ ಪೋಲ್‌ಗೆ ಅಪ್ಪಳಿಸಿದ ಪರಿಣಾಮ ಮೇಘಾಲಯದ ವಿದ್ಯಾರ್ಥಿಗಳಿಬ್ಬರೂ ಸಾವನ್ನಪ್ಪಿರುವ ಘಟನೆ ಯಲಹಂಕ ಸಂಚಾರಿ ಠಾಣೆ ವ್ಯಾಪ್ತಿಯಲ್ಲಿ ಇಂದು ಮುಂಜಾನೆ ಸಂಭವಿಸಿದೆ.

ಮೃತಪಟ್ಟವರನ್ನು ವೆಸ್ಟಾಲ್ ಡಾಕರ್(20) ಮತ್ತು ಲಾಂಪ್ಹರಂಗ್ ಇಯಾನ್ ಶಿ(20) ಎಂದು ಗುರುತಿಸಲಾಗಿದೆ. ಇಂಡಿಯನ್ ಅಕಾಡೆಮಿಯಲ್ಲಿ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದ ಇವರಿಬ್ಬರು ಹೆಣ್ಣೂರಿನ ಮನೆಯೊಂದರಲ್ಲಿ ಪೇಯಿಂಗ್ ಗೆಸ್ಟ್ ಆಗಿದ್ದರು. ಇವರ ಸ್ನೇಹಿತ ಊರಿಗೆ ತೆರಳುತ್ತಿದ್ದರಿಂದ ಆತನನ್ನು ಬೀಳ್ಕೊಡುವ ಸಂಬಂಧ ಇಂದು ಬೆಳಗ್ಗೆ ಇವರಿಬ್ಬರು ಬೈಕ್‌ನಲ್ಲಿ ಹಾಗೂ ಕೆಲವು ಸ್ನೇಹಿತರು ಕಾರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುತ್ತಿದ್ದರು.

ಮುಂಜಾನೆ 6.15ರಲ್ಲಿ ಬೆಂಗಳೂರು -ಬಳ್ಳಾರಿ ರಸ್ತೆ ಬಳಿಯ ಭಾರತಿನಗರ ಕ್ರಾಸ್ ಐಎಎಫ್ ಬಳಿ ಬೈಕ್ ನಿಯಂತ್ರಣ ತಪ್ಪಿ ಮೊದಲು ರಸ್ತೆವಿಭಜಕಕ್ಕೆ ಡಿಕ್ಕಿ ಹೊಡೆದು ಕೆಲ ದೂರ ಉಜ್ಜಿಕೊಂಡು ಹೋಗಿ ಸಿಗ್ನಲ್ ಪೋಲ್‌ಗೆ ಅಪ್ಪಳಿಸಿದೆ.

ಪರಿಣಾಮವಾಗಿ ಬೈಕ್ ಚಲಾಯಿಸುತ್ತಿದ್ದ ವೆಸ್ಟಾಲ್ ಡಾಕರ್ ಸ್ಥಳದಲ್ಲೇ ಮೃತಪಟ್ಟರೆ , ಗಂಭಿರವಾಗಿ ಗಾಯಗೊಮಡಿದ್ದ ಹಿಂಬದಿ ಸವಾರ ಲಾಂಪ್ಹರಂಗ್ ಇಯಾನ್‌ಶಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ಈ ಇಬ್ಬರ ಶವಗಳನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದ್ದು, ಕಾರಿನಲ್ಲಿದ್ದ ಸ್ನೇಹಿತರು ಮುಂದೆ ಚಲಿಸಿದ್ದರಿಂದ ಬೈಕ್ ಅಪಘಾತವಾಗಿರುವುದು ಇವರ ಗಮನಕ್ಕೆ ಬಂದಿಲ್ಲ. ಅಪಘಾತಕ್ಕೆ ಅತಿವೇಗವೇ ಕಾರಣ ಎನ್ನಲಾಗಿದ್ದು , ಯಲಹಂಕ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Write A Comment