ರಾಷ್ಟ್ರೀಯ

ಸೇನೆಯಲ್ಲಿ ಶಸ್ತ್ರಾಸ್ತ್ರಗಳ ತೀವ್ರ ಕೊರತೆ!: 20 ದಿನಗಳ ಯುದ್ಧಕ್ಕೆ ಬೇಕಾದಷ್ಟೂ ದಾಸ್ತಾನಿಲ್ಲ; ಇಂಡಿಯನ್ ಆರ್ಮಿಯ ದುರವಸ್ಥೆ ಸಿಎಜಿ ವರದಿಯಿಂದ ಬಹಿರಂಗ

Pinterest LinkedIn Tumblr

IndianArmy

ಹೊಸದಿಲ್ಲಿ, ಮೇ 9: ಮದ್ದುಗುಂಡುಗಳ ತೀವ್ರ ಕೊರತೆಯಿಂದಾಗಿ ಭಾರತವು 15-20 ದಿನಗಳಿಗಿಂತ ಹೆಚ್ಚು ಯುದ್ಧವೊಂದನ್ನು ನಡೆಸಲಾರದು. ಈ ಗಾಯಕ್ಕೆ ಬರೆಯೆಳೆದಂತೆ, ಕಳೆದ 30 ವರ್ಷಗಳಿಂದ ತಯಾರಿಕೆಯ ಹಂತದಲ್ಲಿದ್ದರೂ ಸ್ವದೇಶಿ ನಿರ್ಮಿತ ತೇಜಸ್ ಹಗುರ ಯುದ್ಧ ವಿಮಾನವು ಇನ್ನೂ ಯುದ್ಧ ಸನ್ನದ್ಧ ಸ್ಥಿತಿಯನ್ನು ತಲುಪಿಲ್ಲ.

ಮದ್ದುಗುಂಡು ದಾಸ್ತಾನಿನ ಕಳವಳಕಾರಿ ಕೊರತೆಯು 11.8 ಲಕ್ಷ ಸೈನಿಕ ಬಲದ ಭಾರತೀಯ ಸೇನೆಯ ಕಾರ್ಯಾಚರಣೆ ಸನ್ನದ್ಧ ಸ್ಥಿತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಇದೇ ವೇಳೆ, ತೇಜಸ್‌ನ ಸಮಸ್ಯೆಯು ಐಎಎಫ್‌ನ ಯುದ್ಧವಿಮಾನಗಳ ಸಂಖ್ಯೆ ತೀರಾ ಇಳಿಮುಖಗೊಳ್ಳಲು ಕಾರಣವಾಗಿದೆ.

ಶುಕ್ರವಾರ ಭಾರತದ ಮಹಾಲೇಖಪಾಲರು ಸಂಸತ್ತಿನಲ್ಲಿ ಮಂಡಿಸಿದ ವರದಿಯೊಂದರಲ್ಲಿ ಇದನ್ನು ಅಧಿಕೃತವಾಗಿ ಹೇಳಿದ್ದಾರೆ. ಲೆಕ್ಕಪತ್ರ ಪರಿಶೋಧಕರು ತೇಜಸ್ ಮಾರ್ಕ್-1 ಕೇವಲ ಸುಮಾರು ಶೇ.35ರಷ್ಟು ಮಾತ್ರವೇ ಸ್ವದೇಶಿ ನಿರ್ಮಿತವಾಗಿರುವುದಕ್ಕೆ ಹಾಗೂ ಸುಮಾರು 53ರಷ್ಟು ತಾಂತ್ರಿಕ ಅಗತ್ಯಗಳ ಕೊರತೆಯಿರುವುದಕ್ಕೆ ಹಾಗೂ ಆ ಮೂಲಕ ಯುದ್ಧದಲ್ಲಿ ಅದರ ಸಾಮರ್ಥ್ಯ ಹಾಗೂ ಆಯುಷ್ಯ ಪ್ರಮಾಣವು ಭಾರೀ ಕಡಿಮೆಯಾಗಿರುವುದಕ್ಕಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. 170 ವಿವಿಧ ರೀತಿಯ ಮದ್ದುಗುಂಡುಗಳ ಪೈಕಿ 125ರ ದಾಸ್ತಾನು 20 ದಿನಗಳ ಯುದ್ಧಕ್ಕೂ ಅಥವಾ ‘ಕನಿಷ್ಠ ಅಂಗೀಕಾರಾರ್ಹ ಅಪಾಯದ ಮಟ್ಟ’ದ ಅಗತ್ಯಕ್ಕೂ ಸಾಕಾಗದು. ಅಲ್ಲದೆ ಶೇ.50 ವಿಧದ ಮದ್ದುಗುಂಡುಗಳ ದಾಸ್ತಾನು 2013ರ ಮಾರ್ಚ್‌ನಲ್ಲಿ ಕಳವಳಕಾರಿಯಾಗಿತ್ತು ಅಥವಾ 10 ದಿನಗಳಿಗೂ ಸಾಕಾಗದಷ್ಟಿತ್ತೆಂದು ಅದು ಹೇಳಿದೆ.

ಆ ಬಳಿಕವೂ ಪರಿಸ್ಥಿತಿ ಹೆಚ್ಚು ಬದಲಾವಣೆಗೊಂಡಿಲ್ಲ. ಆಂಗ್ಲ ದೈನಿಕವೊಂದು ವರದಿ ಮಾಡಿರುವಂತೆ, ಅಂಗೀಕೃತ, ಸೇನೆಯ ‘‘ಮದ್ದುಗುಂಡು ಮಾರ್ಗ ನಕ್ಷೆಯು’’ ಕೇವಲ 2019ರ ವೇಳೆ ಅಗತ್ಯವಿರುವ 40 ದಿನಗಳ ಡಬ್ಲುಡಬ್ಲುಆರ್ ಸಾಧ್ಯವಾಗಬಹುದೆಂದು ಹೇಳಿದೆ. ಈಗಿನ ಸ್ಥಿತಿಯನ್ನು ಗಮನಿಸಿದರೆ ಅದನ್ನು ಸಾಧಿಸುವಂತೆ ಕಾಣುವುದಿಲ್ಲ.

ತನ್ನ ಮಿತವಾದ ಉತ್ಪಾದನಾ ಸಾಮರ್ಥ್ಯದಿಂದಾಗಿ ಶಸ್ತ್ರಾಸ್ತ್ರ ಕಾರ್ಖಾನೆ ಮಂಡಳಿಯು ಅಗತ್ಯವನ್ನು ಪೂರೈಸಲು ವಿಫಲವಾಗಿದೆ. ಇದರೊಂದಿಗೆ ಆಮದು ಮಾರ್ಗವೂ ‘ಅಕಾರಣವಾಗಿ’ ನಿಧಾನವಾಗಿದೆಯೆಂದು ಸಾಬೀತುಪಡಿಸುತ್ತಿದೆ. 2013ರಲ್ಲಿ ಆವಶ್ಯಕತೆಯ ಅಂಗೀಕಾರ ನೀಡಲಾಗಿರುವ 17 ಆಮದು ಪ್ರಕರಣಗಳಲ್ಲಿ (ಒಟ್ಟು ಆಮದು ವೌಲ್ಯ ರೂ. 16,594 ಕೋಟಿ), 2014ರ ಡಿಸೆಂಬರ್ ವರೆಗೂ ಗುತ್ತಿಗೆಗಳನ್ನು ಅಂತಿಮಗೊಳಿಸಲು ಸಾಧ್ಯವಾಗಿಲ್ಲವೆಂದು ಸಿಎಜಿ ಹೇಳಿದೆ.

ತೇಜಸ್‌ನ ಬಗ್ಗೆ, ಎಂಜಿನ್, ಮಲ್ಟಿ-ಮೋಡ್ ರಾಡಾರ್, ರ್ಯಾಂಡಮ್, ಫೈಟ್ ಕಂಟ್ರೋಲ್ ಸಿಸ್ಟಂ ಅಕ್ಯುಲೇಟರ್‌ಗಳು, ಮಲ್ಟಿ-ಫಂಕ್ಷನಲ್ ಡಿಸ್‌ಪ್ಲೇ ಸಿಸ್ಟಂ ಮತ್ತಿತರ ಪ್ರಮುಖ ಭಾಗಗಳಿಗೆ ಅದು ‘ವಿದೇಶಿ ಮೂಲವನ್ನವಲಂಬಿಸಿದೆ’ ಎಂದು ಅದು ವ್ಯಾಖ್ಯಾನಿಸಿದೆ.

ಅಲ್ಲದೆ, ತೇಜಸ್ ಮಾರ್ಕ್-1ಕ್ಕೆ ಸ್ಥಳಾಭಾವದಿಂದಾಗಿ ಸ್ವರಕ್ಷಣಾ ಜಾಮರ್‌ನ್ನು ಅಳವಡಿಸಲು ಸಾಧ್ಯವಿಲ್ಲದ ಕಾರಣ, ಅದು ವಿದ್ಯುನ್ಮಾನ ಯುದ್ಧ ಸಾಮರ್ಥ್ಯದ ಕೊರತೆ ಹೊಂದಿದೆ. ವಿಮಾನಕ್ಕೆ ಅಳವಡಿಸಿರುವ ರಾಡಾರ್ ಎಚ್ಚರಿಕೆ ಗ್ರಾಹಕ/ಕೌಂಟರ್ ಮೇಜರ್ ಡಿಸ್ಪೆನ್ಸಿಂಗ್ ವ್ಯವಸ್ಥೆಗಳು ಸಹ ಕಾರ್ಯಾಚರಣೆ ಸಮಸ್ಯೆಯನ್ನು ಹೊಂದಿವೆಯೆಂದು ಸಿಎಜಿ ತಿಳಿಸಿದೆ.

ಐಎಎಫ್ ಬಯಸುತ್ತಿರುವ, ಹೆಚ್ಚು ಬಲಶಾಲಿ ಎಂಜಿನ್ ಹಾಗೂ ಇನ್ನೂ ಕಡಿಮೆ ಭಾರದ ತೇಜಸ್ ಮಾರ್ಕ್-2, ಇನ್ನೂ ಡ್ರಾಯಿಂಗ್ ಬೋರ್ಡ್‌ನಲ್ಲೇ ಇವೆ. ಈಗಿನ ಸ್ಥಿತಿಯಂತೆ ಯುದ್ಧ ವಿಮಾನವು ಬಿವಿಆರ್ (ದೃಕ್ಪಥದ ಆಚೆಗೆ) ಕ್ಷಿಪಣಿಗಳನ್ನು ಉಡಾಯಿಸಲಾರದು ಅಥವಾ ಲೇಸರ್ ನಿರ್ದೇಶಿತ ಬಾಂಬ್‌ಗಳನ್ನು ಹಾಕಲಾರದು. ಅದು ಆಕಾಶದಲ್ಲೇ ಮರು-ಇಂಧನ ಪೂರಣದ ಸಾಮರ್ಥ್ಯ ಹೊಂದಿಲ್ಲ. 2015ರ ಡಿಸೆಂಬರ್‌ನೊಳಗೆ ಮಾರ್ಕ್-1, ಅಂತಿಮ ಕಾರ್ಯಾಚರಣಾ ಪರವಾನಿಗೆ ಪಡೆದ ಬಳಿಕ ಅದು ಈ ರೀತಿ ಮಾಡಲು ಸಮರ್ಥವಾಗಬಹುದೆಂಬ ಆಶಾವಾದ ಇರಿಸಿಕೊಳ್ಳಲಾಗಿದೆ.

ಕಡಿಮೆ ಆಯುಷ್ಯ, ಕಡಿಮೆ ಸಾಧನೆ, ಕಡಿಮೆ ವ್ಯಾಪ್ತಿ ಹಾಗೂ ಸಹಿಷ್ಣುತೆ, ಕಡಿಮೆ ಪೈಲಟ್ ರಕ್ಷಣೆ, ಕಡಿಮೆ ಕಾರ್ಯಾಚರಣೆ ಸಾಮರ್ಥ್ಯ ಹಾಗೂ ಕಡಿಮೆ ಶಸ್ತ್ರಾಸ್ತ್ರ ನಿಖರತೆ ಹೊಂದಿರುವ ಮಾರ್ಕ್-1ನ್ನೇ ಬಳಸುವ ಒತ್ತಡ ಐಎಎಫ್‌ನ ಮೇಲೆ ಬೀಳಬಹುದೆಂದು ಸಿಎಜಿ ಹೇಳಿದೆ.

Write A Comment