ಮನೋರಂಜನೆ

ಕನ್ನಡಕ್ಕೆ ಮರಳಿದ ತೇಜ್ `ಡ್ಯೂಡ್’

Pinterest LinkedIn Tumblr

tejas

ಮೀಸೆ ಚಿಗುರುವ ವಯಸ್ಸಿಗೇ `ಮೀಸೆ ಚಿಗುರಿದಾಗ’ ಎನ್ನುವ ಚಿತ್ರದಲ್ಲಿ ನಾಯಕನಟನಾಗಿ ಕಾಣಿಸಿಕೊಂಡಿದ್ದ ಅಪ್ಪಟ ಕನ್ನಡದ ಹುಡುಗ. ತೇಜಸ್ ಇದೀಗ ಮತ್ತೆ ಕನ್ನಡಕ್ಕೆ ಮರಳುತ್ತಿದ್ದಾರೆ.

ಪ್ರವೀಣ್ ನಾಯಕ್ ನಿರ್ದೇಶಿಸಿದ್ದ `ಮೀಸೆ ಚಿಗುರಿದಾಗ’ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ಯುವಕ. ಈ ಚಿತ್ರದಲ್ಲಿ ನಟಿಸಿದ ನಂತರ ಓದು ಮುಂದುವರೆಸಿದ ತೇಜಸ್ ನಂತರ ಪ್ರತಿಷ್ಟಿತ ಇನ್‍ಫೋಸಿಸ್ ಸಂಸ್ಥೆಯಲ್ಲಿ ನೌಕರಿಗೂ ಸೇರಿದ್ದರು.

ಆದರೂ ನಟನೆಯ ಗೀಳು ತೇಜಸ್‍ಗೆ ಬಿಟ್ಟುಹೋಗಿರಲಿಲ್ಲ. ಆ ಸಂದರ್ಭದಲ್ಲೇ ತಮಿಳು ಚಿತ್ರರಂಗದಲ್ಲಿ ತೇಜಸ್‍ಗೆ ಅವಕಾಶಗಳ ಬಾಗಿಲು ತೆರೆಯಲು ಆರಂಭಿಸಿದವು. `ಕಾದಲನ್’ ಎಂಬ ಬ್ಲಾಕ್ ಬಸ್ಟರ್ ಸಿನಿಮಾವನ್ನು ನಿರ್ಮಿಸಿದ್ದ ಕೆ.ಟಿ. ಕುಂಜುಮನ್‍ರ ನಿರ್ಮಾಣದಲ್ಲಿ ನಟಿಸುವ ಛಾನ್ಸು ತೇಜಸ್ ಪಾಲಾಗಿತ್ತು. ಅದರ ಪ್ರತಿಳಲವೆಂಬಂತೆ  ಕಾದಲುಕ್ಕುಂ ಮರಣಮಿಲ್ಲೈ, ಕೊಂಜಂ ವೆಗಿಲ್ ಕೊಂಜಮ್ ಮಳೈ, ಗಾಂತಂ ಹೀಗೆ ಒಂದರ ಹಿಂದೆ ಒಂದರಂತೆ ಮೂರು ಚಿತ್ರಗಳಲ್ಲಿ ತೇಜಸ್ ನಟಿಸಿದರು. ಈ ಚಿತ್ರಗಳು ತೇಜಸ್ ತಮಿಳು ಚಿತ್ರರಂಗದಲ್ಲಿ ಅಪಾರವಾದ ಹೆಸರನ್ನೂ ತಂದುಕೊಟ್ಟಿದೆ.

ಸದ್ಯ ತೇಜಸ್ ತಮ್ಮ ಹೆಸರನ್ನು ಕೊಂಚ ಮೊಟಕುಗೊಳಿಸಿಕೊಂಡು ತೇಜ್ ಎಂಬ ಹೆಸರಿನಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. `ಮೊಳಿವದ್ ಯದನಾಲ್’ ಎಂಬ ತಮಿಳುಚಿತ್ರ ಸಂಪೂರ್ಣ ಸಿದ್ದಗೊಂಡು ಮುಂದಿನ ತಿಂಗಳಲ್ಲಿ ತೆರೆಗೆ ಬರಲು ಅಣಿಯಾಗುತ್ತಿದೆ. ಇದರ ಜೊತೆಗೆ `ವಿನ್ನೈ ತೊಡು’ ಎಂಬ ಚಿತ್ರ ಕೂಡಾ ನಿರ್ಮಾಣ ಹಂತದಲ್ಲಿದೆ.

ಈಗ ಮತ್ತೊಂದು ವಿಶೇಷವೆಂದರೆ, ತೇಜ್ ಕನ್ನಡ ಚಿತ್ರರಂಗಕ್ಕೆ ಮತ್ತೆ ಮರಳಿದ್ದಾರೆ. ಅದು `ಡ್ಯೂಡ್’ ಚಿತ್ರದ ಮೂಲಕ. ಕನ್ನಡದವರೇ ಆಗಿದ್ದು ತಮಿಳಿನ ಒಂದಷ್ಟು ಚಿತ್ರಗಳಿಗೆ ಕೆಲಸ ಮಾಡಿರುವ ಅಜಿತ್ ಮಿಲನ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ತಮ್ಮದೇ ಜ್ಯುವೆಲ್ಲರಿ ವ್ಯವಹಾರ ಮತ್ತು ಈ ಕಾಮರ್ಸ್ ಬ್ಯುಸಿನೆಸ್‍ಗಳನ್ನು ಹೊಂದಿರುವ ರೋಹಿತ್ ಜೈನ್ ಮತ್ತು ದಿಲೀಪ್ ಜೈನ್ ಒಟ್ಟಾಗಿ ಸೇರಿ ಸಂಕೇಶ್ವರ ಫಿಲಂಸ್ ಸಂಸ್ಥೆಯ ಮೂಲಕ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಕನ್ನಡದ ಯಾರೇ ಕೂಗಾಡಲಿ ಚಿತ್ರಕ್ಕೆ ಛಾಯಾಗ್ರಾಹಕರಾಗಿದ್ದ ಸುಕುಮಾರ್ ಈ ಚಿತ್ರಕ್ಕೆ ಕ್ಯಾಮೆರಾ ಹಿಡಿಯುತ್ತಿದ್ದಾರೆ. ಇನ್ನು ಶೌರ್ಯ ಮತ್ತು ಡವ್ ಚಿತ್ರಗಳಲ್ಲಿ ನಟಿಸಿರುವ ಮದಲ್ಸಾ ಶರ್ಮಾ ಮತ್ತು ಲಂಡನ್‍ನ ಮಾಡೆಲ್ ಒಬ್ಬರು ಈ ಚಿತ್ರದ ನಾಯಕಿಯರಾಗಿದ್ದಾರೆ. ಕನ್ನಡ ಮತ್ತು ತಮಿಳು ಎರಡೂ ಭಾಷೆಯಲ್ಲಿ ಏಕಕಾಲಕ್ಕೆ ತಯಾರಾಗುತ್ತಿರುವ ಈ ಚಿತ್ರದಿಂದ ತಮಿಳು ಚಿತ್ರರಂಗದಲ್ಲಿ ಹೆಸರು ಮಾಡಿರುವ ಕನ್ನಡದ ಪ್ರತಿಭೆಯೊಂದು ರೀ ಎಂಟ್ರಿ ಪಡೆದಿರೋದಂತೂ ಸಂತಸದ ವಿಚಾರವಾಗಿದೆ.

Write A Comment