ಮಂಗಳೂರು: ಆರ್ಥಿಕ ಶಿಸ್ತು, ಸಬಲೀಕರಣ, ಸಮಗ್ರ ಅಭಿವೃದ್ಧಿಯಿಂದ ಬಲಿಷ್ಠ ಭಾರತ ನಿರ್ಮಾಣದ ಹಾದಿಯಲ್ಲಿ ಪ್ರತಿಯೊಬ್ಬ ನಾಗರಿಕರಿಗೂ ವಿಮೆ ನೀಡುವ ಯೋಜನೆಯ ಅನುಷ್ಠಾನವು ದೇಶದಲ್ಲಿ ಹೊಸ ಅಧ್ಯಾಯದ ಆರಂಭವಾಗಿದೆ ಎಂದು ಕೇಂದ್ರ ಕಾನೂನು ಮತ್ತು ನ್ಯಾಯಾಂಗ ಸಚಿವ ಡಿ. ವಿ. ಸದಾನಂದ ಗೌಡ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಬ್ಯಾಂಕ್ಗಳ ಸಹಯೋಗದೊಂದಿಗೆ ಶನಿವಾರ ನಗರದ ಸಿ.ವಿ.ನಾಯಕ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ, ಅಟಲ್ ಪಿಂಚಣಿ ಯೋಜನೆ ಮತ್ತು ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆಗಳಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಈ 3 ಯೋಜನೆಗಳನ್ನು ಕೊಲ್ಕತಾದಲ್ಲಿ ಪ್ರಧಾನಿ ನರೇಂದ್ರ ದೇಶಕ್ಕೆ ಸಮರ್ಪಿಸುತ್ತಿರುವ ಸಂದರ್ಭ ದ.ಕ. ಜಿಲ್ಲಾ ಬ್ಯಾಂಕ್ಗಳ ವತಿಯಿಂದ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಚಾಲನೆ ನೀಡಿ ಮಾತನಾಡಿದ ಸಚಿವರು, ದೇಶದಲ್ಲಿ ಆರ್ಥಿಕವಾಗಿ ದುರ್ಬಲರಾಗಿರುವ ಜನರ ಆತಂಕವನ್ನು ದೂರ ಮಾಡುವ ಉದ್ದೇಶದಿಂದ ಈ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.
ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆಯನ್ವಯ ವಾರ್ಷಿಕ 12 ರೂಪಾಯಿ ಪಾವತಿಯೊಂದಿಗೆ 18ರಿಂದ 70 ವರ್ಷದೊಳಗಿನ ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್ ಉಳಿತಾಯ ಖಾತೆದಾರರಿಗೆ 2 ಲಕ್ಷ ರೂ. ಅಪಘಾತ ವಿಮಾ ಯೋಜನೆ ದೊರೆಯಲಿದೆ. ಈ ಯೋಜನೆ ಅತ್ಯಂತ ಸರಳವಾದ ವಿಧಾನಗಳನ್ನು ಹೊಂದಿದೆ. ಅದೇ ರೀತಿ ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆಯಲ್ಲಿ 18 ರಿಂದ 50 ವರ್ಷದೊಳಗಿನ ಎಲ್ಲಾ ಬ್ಯಾಂಕ್ ಉಳಿತಾಯ ಖಾತೆದಾರರು ವಾರ್ಷಿಕ 330 ರೂ. ಪಾವತಿಸಿದಲ್ಲಿ 2 ಲಕ್ಷ ರೂ. ಜೀವ ವಿಮಾ ಸೌಲಭ್ಯ ಪಡೆಯಬಹುದು. ಇನ್ನೂ ಅಟಲ್ ಪಿಂಚಣಿ ಯೋಜನೆ ಅಸಂಘಟಿತ ನಾಗರಿಕರಿಗೆ ಅನ್ವಯವಾಗುತ್ತದೆ. ಈ ಯೋಜನೆಯನ್ವಯ ಜನಸಾಮಾನ್ಯರೂ 60ನೆ ವರ್ಷಗಳಿಂದ ಮಾಸಿಕ ನಿಶ್ಚಿತ 1,000 ರೂ.ನಿಂದ 5,000 ರೂ. ಪಿಂಚಣಿ ಪಡೆಯಬಹುದಾಗಿದೆ. ದೇಶದ ಸ್ವಾತಂತ್ರ ನಂತರದ ಆರೂವರೆ ದಶಕದ ಇತಿಹಾಸದಲ್ಲಿ ಜನರ ಬಳಿಗೆ ಬ್ಯಾಂಕನ್ನು ಹಾಗೂ ವಿಮಾ ಯೋಜನೆಯನ್ನು ಕೊಂಡೊಯ್ಯುವ ಮಹತ್ವದ ಯೋಜನೆ ಇದಾಗಿದೆ ಎಂದು ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು.
ದೇಶದ ಪ್ರತಿಯೊಬ್ಬ ನಾಗರಿಕರೂ ಆರ್ಥಿಕ ಭದ್ರತೆ, ಸುರಕ್ಷತೆ ನೀಡುವ ನಿಟ್ಟಿನಲ್ಲಿ ನೂತನ ವಿಮಾ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ಇದರ ಅನುಷ್ಠಾನಕ್ಕೆ ಪ್ರತಿಯೊಬ್ಬರ ಶ್ರಮಿಸಬೇಕು. ಡವರ ಏಳಿಗೆಗಾಗಿ ಜನಧನ್, ವಿಮಾ ಮುಂತಾದ ಯೋಜನೆಗಳ ಮೂಲಕ ದೇಶದಲ್ಲಿ ಆರ್ಥಿಕ ಶಿಸ್ತು ತರಲಾಗುತ್ತಿದ್ದು, ಇದರಿಂದ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯ ಎಂದರು.
ದೇಶಕ್ಕೆ ಆರೂವರೆ ದಶಕಗಳು ಕಳೆದರೂ, ದೇಶದ ಪ್ರತಿಯೊಬ್ಬ ನಾಗರಿಕರಿಗೂ ಭದ್ರತೆ, ಸುರಕ್ಷತೆ ನೀಡಲು ಸಾಧ್ಯವಾಗಿಲ್ಲ. ಪ್ರಧಾನಿ ನರೇಂದ್ರ ಮೋದಿಯವರ ವಿಭಿನ್ನ ಪರಿಕಲ್ಪನೆಯಿಂದಾಗಿ ಬ್ಯಾಂಕ್ ಖಾತೆ ಹೊಂದಿದ ಪ್ರತಿಯೊಬ್ಬ ನಾಗರಿಕರು ಈ ವಿಮಾ ಸೌಲಭ್ಯ ಪಡೆದುಕೊಳ್ಳಬಹುದು ಎಂದರು.
ದೇಶದಲ್ಲಿ ಆರ್ಥಿಕ ಶಿಸ್ತು ಕಾಪಾಡಿಕೊಂಡು ಬಂದರೆ ಆರ್ಥಿಕ ಅಭಿವೃದ್ಧಿ ಆಗುತ್ತದೆ. ಈ ಮೂಲಕ ದೇಶದ ಜಿಡಿಪಿ ಏರಿಕೆಯಾಗುತ್ತದೆ. ಮೋದಿಯವರು ಅಭಿವೃದ್ಧಿ ಮತ್ತು ಪಾರದರ್ಶಕ ಆಡಳಿತ ಗುರಿ ಇಟ್ಟುಕೊಂಡು ಸಾಗುತ್ತಿದ್ದಾರೆ. ಭಾರತವನ್ನು ಭ್ರಷ್ಟಾಚಾರ ಮುಕ್ತ ದೇಶವನ್ನಾಗಿ ಮಾಡಲು ಪಣ ತೊಟ್ಟಿದ್ದಾರೆ. ಈಗಾಗಲೇ 11 ತಿಂಗಳು ಭ್ರಷ್ಟಾಚಾರ ರಹಿತ ಆಡಳಿತ ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಈ ಹಿಂದೆ ಆರಂಭಿಸಿರುವ ಪ್ರಧಾನ ಮಂತ್ರಿ ಜನಧನ್ ಯೋಜನೆಯ ಮೂಲಕ ದೇಶಾದ್ಯಂತ ಕೇವಲ 6 ತಿಂಗಳಲ್ಲಿ 13 ಕೋಟಿ ಜನ ಇದರ ಪ್ರಯೋಜನ ಪಡೆದರು. ಇದರಿಂದ ಸರಕಾರಿ ಯೋಜನೆಗಳು ಮಧ್ಯವರ್ತಿಗಳ ಸಹಾಯವಿಲ್ಲದೆ ನೇರವಾಗಿ ಫಲಾನುಭವಿಗಳ ಕೈ ಸೇರುವಂತಾಗಿದೆ. ಈ ಯೋಜನೆಗೆ ಜನರಿಂದ ಅಭೂತಪೂರ್ವ ಬೆಂಬಲ ದೊರೆತಿದೆ. ಅದೇ ರೀತಿ ಪ್ರಸ್ತುತ ಆರಂಭಿಸಿರುವ ಈ 3 ಯೋಜನೆಗಳನ್ನು ಅಧಿಕಾರಿಗಳು ಜನರ ಬಳಿಗೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗುತ್ತಾರೆ ಎಂಬ ವಿಶ್ವಾಸ ತನಗಿದೆ ಎಂದು ಡಿ.ವಿ.ಸದಾನಂದ ತಿಳಿಸಿದರು.
ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ದೇಶದ ಕಟ್ಟಕಡೆ ವ್ಯಕ್ತಿಗೂ ಆರ್ಥಿಕ ಶಕ್ತಿ ತುಂಬುವ ಪರಿಕಲ್ಪನೆ ಮೂಲಕ ಗಾಂಧೀಜಿ ಕಂಡ ರಾಮ ರಾಜ್ಯದ ಕನಸನ್ನು ಪ್ರಧಾನಿ ನರೇಂದ್ರ ಮೋದಿ ನನಸು ಮಾಡುತ್ತಿದ್ದಾರೆ ಎಂದರು.
ದೇಶದಲ್ಲಿ ಅದರಲ್ಲೂ ನಮ್ಮ ಜಿಲ್ಲೆಯಲ್ಲಿ ಜನಧನ ಯೋಜನೆಯಿಂದ ಆರ್ಥಿಕ ಸ್ವಾವಲಂಬಿತನ ಬಂದಿದೆ. ಇಡೀ ಭಾರತ ಸ್ವಾಭಿಮಾನ, ಆರ್ಥಿಕ ಚೈತನ್ಯದಿಂದ ಮುಂದುವರಿಯುತ್ತಿದ್ದು, ಇಡೀ ಜಗತ್ತು ಇಂದು ಭಾರತದತ್ತ ನೋಡುವಂತೆ ಪ್ರಧಾನಿ ಮೋದಿ ಮಾಡಿದ್ದಾರೆ ಎಂದರು.
ವಿಧಾನ ಪರಿಷತ್ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್, ಸಿಂಡಿಕೇಟ್ ಬ್ಯಾಂಕ್ ಕ್ಷೇತ್ರ ಪ್ರಧಾನ ವ್ಯವಸ್ಥಾಪಕ ಕೆ. ಟಿ. ರೈ, ಜಿಲ್ಲಾಧಿಕಾರಿ ಎ. ಬಿ. ಇಬ್ರಾಹಿಂ, ಕಾರ್ಪೊರೇಶನ್ ಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಕೆ. ಶ್ರೀವಾಸ್ತವ, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತೆ ಹೆಫ್ಸಿಬಾ ರಾಣಿ ಕೊರ್ಲಾಪಟಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀವಿದ್ಯಾ ಉಪಸ್ಥಿತರಿದ್ದರು.
ಯುಕೋ ಬ್ಯಾಂಕ್ ಆಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಅರುಣ್ ಕೌರ್ ಸ್ವಾಗತಿಸಿದರು. ಕಾರ್ಪೊರೇಶನ್ ಬ್ಯಾಂಕ್ ಸಾರ್ವಜನಿಕ ಸಂಪರ್ಕಾಧಿಕಾರಿ ಡುಂಡಿರಾಜ್ ಮತ್ತು ಕಾರ್ಪೊರೇಶನ್ ಬ್ಯಾಂಕ್ನ ಉಷಾಕೃಷ್ಣ ಮೂರ್ತಿ ಕಾರ್ಯಕ್ರಮ ನಿರೂಪಿಸಿದರು.
ಇದೇ ಸಂದರ್ಭ ಸಚಿವ ಡಿ. ವಿ. ಸದಾನಂದ ಗೌಡ ಮೂರು ಮಂದಿಗೆ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಹಸ್ತಾಂತರಿಸಿದರು.
ಇದೇ ವೇಳೆ ನೂತನ ಯೋಜನೆಗಳಿಗೆ ಪ್ರಧಾನಮಂತ್ರಿ ಕೊಲ್ಕತಾದಲ್ಲಿ ಚಾಲನೆ ನೀಡುತ್ತಿ ರುವ ಕಾರ್ಯಕ್ರಮದ ನೇರ ದೃಶ್ಯವನ್ನು ಟಿ.ವಿ ಪರದೆಯ ಮೂಲಕ ವೀಕ್ಷಿಸಲು ಸಭಾಂಗಣದಲ್ಲಿ ಅವಕಾಶ ಕಲ್ಪಿಸಲಾಗಿತ್ತು.