ಮಂಗಳೂರು, ಮೇ.10: ಪಡೀಲ್ ಮತ್ತು ಬಜಾಲ್ ನಡುವಿನಲ್ಲಿ ನಿರ್ಮಿಸಲಾದ ರೈಲ್ವೆ ಕೆಳ ಸೇತುವೆ ಕಾಮಗಾರಿಯು ಜೂನ್ ತಿಂಗಳಾಂತ್ಯಕ್ಕೆ ಜನಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.
ಪಡೀಲ್-ಬಜಾಲ್ ರೈಲ್ವೆ ಕೆಳ ಸೇತುವೆ ಕಾಮಗಾರಿಯನ್ನು ಶನಿವಾರ ವೀಕ್ಷಿಸಿದ ಬಳಿಕ ಅವರು ಪತ್ರಕರ್ತರ ಜತೆ ಮಾತನಾಡುತ್ತಿದ್ದರು.
ಮಂಗಳೂರು ಮಹಾನಗರ ಪಾಲಿಕೆ ಮತ್ತು ರೈಲ್ವೆ ಇಲಾಖೆ ಜಂಟಿಯಾಗಿ ಹಮ್ಮಿಕೊಂಡಿದ್ದ ಈ ಕಾಮಗಾರಿಯು ವಿನ್ಯಾಸ ಹಾಗೂ ಅಂತರ್ಜಲ ಸಮಸ್ಯೆಯಿಂದಾಗಿ ಕಾಮಗಾರಿ ಸ್ವಲ್ಪ ಹಿನ್ನಡೆಯಾಗಿತ್ತು ಎಂದ ಸಚಿವರು, ಕೆಳ ಸೇತುವೆಯಲ್ಲಿ ಮಳೆ ನೀರು ನಿಲ್ಲುವ ಸಮಸ್ಯೆಯನ್ನು ಈ ಮಳೆಗಾಲದಲ್ಲಿ ಅರಿತು ಕೊಂಡು ತಾತ್ಕಾಲಿಕ ಕ್ರಮ ಕೈಗೊಂಡು ಮುಂದಿನ ಹಂತದಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.
ರಸ್ತೆ ನಿರ್ಮಾಣ ಮಾಡುವಾಗ ಮತ್ತಷ್ಟು ಇಳಿಜಾರು ಆಗುವ ಸಾಧ್ಯತೆಯ ಬಗ್ಗೆ ಮಾತನಾಡಿದ ಡಿ.ವಿ.ಸದಾನಂದ ಗೌಡ, ನಗರ ಪಾಲಿಕೆ ಹಾಗೂ ಸ್ಥಳೀಯರ ಜತೆ ಮಾತುಕತೆ ನಡೆಸಿ ಸೂಕ್ತ ವಿನ್ಯಾಸದಲ್ಲಿ ರಸ್ತೆ ನಿರ್ಮಿಸುವಂತೆ ರೈಲ್ವೆ ಅಧಿಕಾರಿಗಳಿಗೆ ಸೂಚಿಸಿದರು.
ರೈಲ್ವೆ ಸಚಿವನಾಗಿದ್ದಾಗ ಕರ್ನಾಟಕ್ಕೆ ಘೋಷಿಸಿದ್ದ 21 ರೈಲು ಗಳ ಪೈಕಿ 16 ರೈಲುಗಳನ್ನು ಲೋಕಾರ್ಪಣೆ ಮಾಡಲಾಗಿದೆ. ಬೆಂಗಳೂರು-ಮೈಸೂರು ರೈಲ್ವೆ, ಹಾಸನ-ಮಂಗಳೂರು ರೈಲ್ವೆ ಕಾಮಗಾರಿ, ಹಾಸನ-ಸಕಲೇಶಪುರ ರೈಲ್ವೆ ದ್ವಿಪಥ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಸಚಿವ ಡಿ.ವಿ.ಸದಾನಂದ ಗೌಡ ತಿಳಿಸಿದರು.
ಶಿರಾಡಿ ರಸ್ತೆ 13 ಕಿ.ಮೀ. ಅಭಿವೃದ್ಧಿ ಕಾಮಗಾರಿ ಪೈಕಿ 10 ಕಿ.ಮೀ. ಪೂರ್ಣಗೊಂಡಿದೆ. ಬಿ.ಸಿ.ರೋಡ್-ಮಾಣಿ ರಸ್ತೆ 7 ಕೋಟಿ ರೂ.ನಲ್ಲಿ ಅಭಿವೃದ್ಧಿಗೊಳ್ಳಲಿದೆ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಡಿ.ವಿ. ಉತ್ತರಿಸಿದರು.
ಚಿತ್ರನಟ ಸಲ್ಮಾನ್ ಖಾನ್ ಪ್ರಕರಣದ ಕುರಿತು ಪತ್ರ ಕರ್ತರ ಪ್ರಶ್ನೆಗೆ ಉತ್ತರಿಸಿದ ಡಿ.ವಿ. ಸದಾನಂದ ಗೌಡ, ಪ್ರಕರಣ ನ್ಯಾಯಾಲಯದಲ್ಲಿರುವ ಕಾರಣ ತಾನು ಈ ಬಗ್ಗೆ ಏನನ್ನೂ ಪ್ರತಿಕ್ರಿಯಿಸುವುದಿಲ್ಲ. ಕೇಂದ್ರ ಸರಕಾರ ಕಾನೂನು ಸುಧಾರಣೆಗೆ ಯೋಜನೆ ರೂಪಿಸಿದೆ ಎಂದರು.
ಸಂಸದ ನಳಿನ್‌ಕುಮಾರ್ ಕಟೀಲ್, ಮಾಜಿ ಶಾಸಕ ಎನ್.ಯೋಗೀಶ್ ಭಟ್, ಕಾರ್ಪೊರೇಟರ್ ಸುಧೀರ್ ಶೆಟ್ಟಿ ಕಣ್ಣೂರು, ಮನಪಾ ಆಯುಕ್ತೆ ಹೆಫ್ಸಿಬಾರಾಣಿ ಕೊರ್ಲಾಪಟಿ, ರೈಲ್ವೆ ವಿಭಾಗೀಯ ಕಾರ್ಯಪಾಲಕ ಎಂಜಿನಿಯರ್ ಶ್ರೀಕುಮಾರ್ ಉಪಸ್ಥಿತರಿದ್ದರು.


