ಕರ್ನಾಟಕ

ನಿಜವಾದ ಫಲಾನುಭವಿಗಳಿಗೆ ನಿವೇಶನ ನೀಡದಿದ್ದರೆ ರಕ್ತಪಾತ: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ

Pinterest LinkedIn Tumblr

Doreswamy-1

ಬೆಂಗಳೂರು,ಮೇ 8- ಶಾಂತಿನಗರ ಹೌಸಿಂಗ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ಭಾರೀ ಅವ್ಯವಹಾರ ನಡೆದಿದ್ದು , ನಿಜವಾದ ಫಲಾನುಭವಿಗಳಿಗೆ  ನಿವೇಶನ ನೀಡದೆ ಅನ್ಯಾಯ ಮಾಡಲಾಗಿದ್ದು ,  ಇದನ್ನು ಸರಿಪಡಿಸದಿದ್ದರೆ ರಕ್ತಪಾತವಾಗಲಿದೆ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಮಹಾತ್ಮ ಗಾಂಧೀಜಿ ಮೊದಲ ಹೆಜ್ಜೆ  ಕಾರ್ಯಕ್ರಮದಲ್ಲಿ ಭಾಗವಹಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದರು.

ಸರ್ಕಾರ 65 ಎಕರೆ ಭೂಮಿಯನ್ನು ವಶಪಡಿಸಿಕೊಂಡಿದೆ.  ಆದರೆ ಬಡವರಿಗೆ ಒಂದಿಂಚು ಭೂಮಿ ನೀಡಲಾಗಿಲ್ಲ. ಯಾರ್ಯಾಗರೋ ಪ್ರಭಾವಿ ವ್ಯಕ್ತಿಗಳು ಭೂಮಿ ಪಡೆದಿದ್ದಾರೆ. ಈ ಬಗ್ಗೆ  ಕ್ರಮಕ್ಕಾಗಿ ಲೋಕಾಯುಕ್ತರನ್ನು ಭೇಟಿಯಾಗಿ  ಒತ್ತಾಯ ಮಾಡಲಾಗಿದೆ ಎಂದರು.

ಒತ್ತುವರಿ ಕಾರ್ಯಾಚರಣೆ ನಡೆದಾಗ ಬಡವರಿಗೆ ಆದ ಅನ್ಯಾಯದ ಬಗ್ಗೆ ವಿರೋಧ ಪಕ್ಷದವರು ಬಾಯಿ ಬಿಡಲಿಲ್ಲ. ಆದರೆ ಈಗ ಭೂಗಳ್ಳರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ತಿಳಿಸಿದಾಗ ಬಾಯಿ ಬಿಡುತ್ತಿರುವುದು ನೋಡಿದರೆ ಪ್ರತಿಪಕ್ಷಗಳು ಆಮಿಷಕ್ಕೊಳಗಾಗಿವೆ ಎಂಬುದು ತಿಳಿದುಬರುತ್ತದೆ ಎಂದು ದೊರೆಸ್ವಾಮಿ ಗಂಭೀರ ಆರೋಪ ಮಾಡಿದರು. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಿ ಭೂಗಳ್ಳರಿಗೆ ಎರಡು ವರ್ಷ ಶಿಕ್ಷೆ ನೀಡಲಾಗುವುದು ಎಂಬ ನಿರ್ಣಯ ಸ್ವಾಗತಾರ್ಹ ಎಂದರು. ಎರಡು ವರ್ಷದ ಹಿಂದೆ ಈ ಬಗ್ಗೆ ಮಸೂದೆ ಅಂಗೀಕಾರಗೊಂಡಾಗ ಭೂಗಳ್ಳರು ಕೇಂದ್ರದ ಮೇಲೆ ಒತ್ತಡ ಹೇರಿ ಗೃಹ ಇಲಾಖೆಯಲ್ಲಿ ನೆನೆಗುದಿಗೆ ಬೀಳುವಂತೆ ಮಾಡಿದ್ದರು. ಇದಕ್ಕೆ ರಾಷ್ಟ್ರಪತಿಗಳು  ಅಂಕಿತ ಹಾಕಿರಲಿಲ್ಲ. ಕಾನೂನು ಸಚಿವ ಟಿ.ಬಿ.ಜಯಚಂದ್ರ ಹೋರಾಟ ಮಾಡಿ ರಾಷ್ಟ್ರಪತಿಗಳ ಸಹಿ ಪಡೆದಿದ್ದಾರೆ ಎಂದು ಹೇಳಿದರು.

ಭೂಗಳ್ಳರು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರ ವಿರುದ್ದ ಸರ್ಕಾರ ಕ್ರಮ ಕೈಗೊಳ್ಳಬೇಕು. ಬಿಡಿಎ ಒಡೆತನದಲ್ಲಿದ್ದ ಅಕ್ರಮ ಕಾಂಪ್ಲೆಕ್ಸ್ ನಿವೇಶನ, ಟೌನ್‌ಶಿಪ್‌ಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಅನಧಿಕೃತವಾಗಿ ನಿರ್ಮಿಸಿದ ಕಟ್ಟಡಗಳನ್ನು ಯಾವುದೇ ಮುಲಾಜಿಲ್ಲದೆ ಕೆಡವಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.  ಅಮಾಯಕರಿಗೆ ಮೊದಲು ನಿವೇಶನ ನೀಡುವುದು ಸರ್ಕಾರದ ಆದ್ಯಕರ್ತವ್ಯ. ಈ ಬಗ್ಗೆ ತಮ್ಮದೇನೂ ಅಭ್ಯಂತರವಿಲ್ಲ ಎಂದು ದೊರೆಸ್ವಾಮಿ ಸುದ್ದಿಗಾರರಿಗೆ ತಿಳಿಸಿದರು.  ಯಾವುದೇ ಕಾರಣಕ್ಕೂ ತೆರವು ಕಾರ್ಯಾಚರಣೆ ನಿಲ್ಲಿಸಕೂಡದು ಎಂದು ಸರ್ಕಾರಕ್ಕೆ ಒತ್ತಾಯಿಸಿದ ಅವರು, ಬೆಂಗಳೂರಿನಲ್ಲಿ ಕೆರೆ ಇರಬೇಕೋ ಬೇಡವೋ ಎಂಬುದರ ಬಗ್ಗೆ ನಿರ್ಧಾರ ಮಾಡಿ ಎಂದರಲ್ಲದೆ ಅಪಾರ್ಟ್‌ಮೆಂಟ್‌ಗಳಲ್ಲಿ ಬೋರ್‌ವೆಲ್  ಹಾಕಿರುವುದರಿಂದ  ಅಂತರ್ಜಲ ಮಟ್ಟ ಕುಸಿದಿದ್ದು , ಯಾವ ಕೆರೆಗಳು ಉಳಿದಿಲ್ಲ ಎಂದರು.  ಕೆರೆ ಬೇಡ  ಎನ್ನುವುದೇಯಾದರೆ ಈ ಬಗ್ಗೆ ವಿಶೇಷ ಅಧಿವೇಶನ ಕರೆದು ನಿರ್ಣಯ ಕೈಗೊಳ್ಳಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದರು.

Write A Comment