ಕರ್ನಾಟಕ

ಬಾಣಸವಾಡಿಯ ಹತಭಾಗ್ಯರು..?

Pinterest LinkedIn Tumblr

Ban-glaore-BDA

ಬಾಣಸವಾಡಿ ಕೆರೆ ಒತ್ತುವರಿ ಮಾಡಲು ಬಂದಾಗ ನಮಗೇನೂ ಗೊತ್ತಾಗಲಿಲ್ಲ, ನಾವು ವಿರೋಧ ಮಾಡಿದೆವು ಆಗ ವಾಸದ ಮನೆಗಳನ್ನು ಒಡೆಯುವುದಿಲ್ಲ , ವಾಣಿಜ್ಯ ಕಟ್ಟಡಗಳನ್ನು ಮಾತ್ರ ಒಡೆಯುತ್ತಾರೆ ಎಂದು ತಿಳಿಯಿತು.  ಆದರೆ 80 ಅಡಿ ರಸ್ತೆಯ 7ನೆ ಕ್ರಾಸ್‌ನಲ್ಲಿರುವ ನಮ್ಮ ಮನೆಗಳೆಲ್ಲಾ ಸಂಪೂರ್ಣ ನಾಶವಾದಂತಿದೆ ನಮ್ಮ ಮನೆಯ ಹಿಂಭಾಗದಲ್ಲಿ ವಾಣಿಜ್ಯ ಕಟ್ಟಡಗಳಿವೆ  ಅವುಗಳನ್ನು ತೆರವು ಮಾಡುವ ಸಂದರ್ಭದಲ್ಲಿ ನಮ್ಮ ಮನೆಗಳು ಸಂಪೂರ್ಣ ನಾಶವಾಗಿವೆ.  ಕೆಲವು ಭಾಗಶಃ ನಾಶವಾಗಿವೆ.

ಮತ್ತೆ ಕೆಲವು ಜೆಸಿಬಿಗಳ ಘರ್ಜನೆಗೆ  ಜಖಂಗೊಂಡಿವೆ, ಇನ್ನು ಕೆಲವು ಮನೆಗಳು ಬಿದ್ದು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವು ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ. ಇಲ್ಲಿನ 17 ಮನೆಗಳ ಪರಿಸ್ಥಿತಿ ಹೀಗಾಗಿದೆ ಎಂದು  ಇಲ್ಲಿನ ನಿವಾಸಿ ಇಂದ್ರಾಣಿ ಮುಕುಂದ್ ಅವರು  ಹೇಳುತ್ತಾರೆ.

ನಮ್ಮ ಮನೆಯ ಮೇಲೆ ವಾಣಿಜ್ಯ ಕಟ್ಟಡ ತೆರವುಗೊಳಿಸಿದ ಮಣ್ಣು ಬಿದ್ದಿದೆ. ಅದನ್ನು ಈವರೆಗೆ ತೆಗೆದುಹಾಕಿಲ್ಲ ನಾವು 20 ವರ್ಷಗಳ ಹಿಂದೆ  ವೆಂಕಟಮ್ಮ ಎಂಬುವವರ ಬಳಿ ಸೈಟ್ ಪಡೆದು ಮನೆ ಕಟ್ಟಿ ಕಂದಾಯ ಎಲ್ಲವನ್ನೂ ಕಟ್ಟುತ್ತಾ ಬಂದಿದ್ದೇವೆ. ನಮ್ಮಲ್ಲಿ ಅದಕ್ಕೆ ಸರಿಯಾದ ದಾಖಲೆಗಳಿವೆ. ಈಗ ನಮ್ಮ ಮನೆಗಳನ್ನು  ಒಡೆಯುತ್ತೇವೆ ಎಂದು ಮಾರ್ಕ್ ಮಾಡಿದ್ದಾರೆ. ಮಕ್ಕಳನ್ನು ಶಾಲೆಗೆ ಸೇರಿಸಿದ್ದೇವೆ ಇಲ್ಲೇ ನಮ್ಮ ಯಜಮಾನರು ಕೊರಿಯರ್ ಸರ್ವೀಸ್‌ನಲ್ಲಿ ಕೆಲಸ ಮಾಡುತ್ತಾರೆ, ಹೇಗೋ ಬದುಕು ಕಟ್ಟಿಕೊಂಡಿದ್ದೇವೆ ಸರ್ಕಾರದವರು ಈಗ ಮನೆ ಒಡೆದರೆ ನಾವು ಎಲ್ಲಿಗೆ ಹೋಗಬೇಕು ಎಂಬುದು ಇವರ ಅಳಲು. ವಿಮಲಾ ಇವರು ಮಾಜಿ ಸೈನಿಕರ ಪತ್ನಿ . ಇವರ ಮನೆಯೂ ಕೂಡ ಡ್ಯಾಮೇಜ್ ಆಗಿದೆ. ಪಾಪ ಪಿಂಚಿಣಿಯಲ್ಲಿ ಬದುಕು ದೂಡುತ್ತಿದ್ದಾರೆ ಮನೆ ರಿಪೇರಿ ಮಾಡಿಕೊಳ್ಳುವುದು ಹೇಗೆಂಬುದು ಇವರನ್ನು ಕಾಡುತ್ತಿದೆ.
ಅನ್ಸರ್ ಎಂಬುವವರು ಶೀಟ್ ಮನೆಯಲ್ಲಿ ಬದುಕುತ್ತಿದ್ದರು. ಇವರ ಮನೆಯ ಹಿಂದಿನ ವಾಣಿಜ್ಯ ಕಟ್ಟಡವನ್ನು ಒಡೆದು ಹಾಕಿದ್ದೇ ತಡ ಅಲ್ಲಿನ ಗೋಡೆ ಕುಸಿದು ಮಣ್ಣು  ಇವರ ಮನೆ ಮೇಲೆ ಬಿದ್ದಿದೆ. ಯಾವಾಗ ಮನೆ ಬೀಳುತ್ತದೋ  ಗೊತ್ತಿಲ್ಲ. ಇಂಥ ಪರಿಸ್ಥಿತಿಯನ್ನು ಸರ್ಕಾರವೇ ನಿರ್ಮಾಣ ಮಾಡಿದೆ.

ಸತೀಶ್ ಅವರ ಪರಿಸ್ಥಿತಿಯೇ ಬೇರೆ. ಇದು ಕೆರೆ ಜಾಗ ಅಂತ ನಮಗೆ ಗೊತ್ತಿರಲಿಲ್ಲ. ವೆಂಕಟಮ್ಮ ಎಂಬುವವರು ಸೈಟ್ ಮಾಡಿ ಹಂಚಿದರು ಆಗ ನಾವು ಜಾಗ ತೆಗೆದುಕೊಂಡ್ವಿ ಮನೆ ಕಟ್ಟಿ 25 ವರ್ಷ ಆಯಿತು ಆಕ್ರಮ, ಸಕ್ರಮ ಮಾಡ್ತಾರೆ ಎಂದು ಖುಷಿಯಾಗಿದ್ದೆವು, ಈಗ ನೋಡಿದರೆ ಮನೆ ಉರುಳಿಸೋಕೆ ಬಂದಿದ್ದಾರೆ. ಈಗೇನೋ ಸದ್ಯಕ್ಕೆ ಮನೆ ಒಡೆಯಲ್ಲ ಎಂದು ಹೇಳಿದ್ದಾರೆ ಯಾವಾಗ ಬಂದು ಮನೆ ಒಡೆಯುತ್ತಾರೋ ಹೇಳೋಕಾಗೊಲ್ಲ . ಇಲ್ಲಿ 15ಗಿ30, 20ಗಿ 40ರಲ್ಲಿ  ಮನೆ ಕಟ್ಟಿಕೊಂಡಿರುವವರೇ ಹೆಚ್ಚು ಅವಿಭಕ್ತ ಕುಟುಂಬಗಳು ಇಲ್ಲಿವೆ. ಮನೋಮಣಿ ಎಂಬುವವರ ತಾಯಿ, ಮಗಳು, ಮಗ ಸರವಣ , ಪಚ್ಚೇಯಪ್ಪ , ಜಯಂತಿ ಚಾಲಕನ ವೃತ್ತಿ ಮಾಡುವವರು, ಗಾರೆ ಕೆಲಸ ಮಾಡುವವರು ಎಲ್ಲರೂ ಒಟ್ಟಿಗೆ ಇದ್ದಾರೆ. ಇವರ ಮನೆಗೂ ಭಾಗಶಃ ಡ್ಯಾಮೇಜ್ ಆಗಿದೆ.

7ನೇ ಮುಖ್ಯರಸ್ತೆಯಲ್ಲಿರುವ ಮಧುರೈ ಇಡ್ಲಿ ಹೊಟೇಲ್ ಒಡೆದ ಕೂಡಲೇ ಅದರ  ಹಿಂಭಾಗದಲ್ಲಿದ್ದ ಜ್ಯೂಲಿ ಅವರ ಮನೆಯ ಮುಂಭಾಗದಲ್ಲಿ ರಾಶಿ ರಾಶಿ ಮಣ್ಣು ಬಿದ್ದಿದೆ. ಮಣ್ಣನ್ನು ತೆಗೆದುಹಾಕಿಲ್ಲ ಮನೆಯ ಕದ ತೆಗೆಯಲು ಆಗುತ್ತಿಲ್ಲ , ಜೆಸಿಬಿಗಳ ಕಂಪನಗಳಿಂದ ಮನೆ ಬಿರುಕು ಬಿಟ್ಟಿದೆ. ಮನೆಯಲ್ಲಿ ಕಾಲೇಜಿಗೆ ಹೋಗುವ ಮಗಳಿದ್ದಾಳೆ . ಈ ರೀತಿ ಸರ್ಕಾರದವರು ಮಾಡಿ ಹೋದರೆ ನಾವೇನು ಮಾಡುವುದು ತಿಳಿಯದಾಗಿದೆ. ಯಾವುದೇ ನೋಟೀಸ್ ನೀಡದೆ ಯಾರೊಂದಿಗೂ ಚರ್ಚೆ ಮಾಡದೆ ಏಕಾಏಕಿ ಇಂತಹ ಕ್ರಮಕೈಗೊಳ್ಳುವ ಸರ್ಕಾರ ಏಕೆ ಬೇಕು? ಸೂರು, ನೀರು, ರಸ್ತೆ  ಮುಂತಾದ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಸರ್ಕಾರ ಒದಗಿಸಬೇಕಿರುವುದು ಅದರ ಕರ್ತವ್ಯ. ಆದರೆ ಅದನ್ನು ಕಸಿದುಕೊಂಡು ಬೀದಿ ಪಾಲು  ಮಾಡುವುದು ಎಷ್ಟು ಸಮಂಜಸ ಎಂಬುವುದು ಇವರ ಪ್ರಶ್ನೆ . ಇಂತಹ ಸರ್ಕಾರಗಳಿಗೆ ತಕ್ಕ ಪಾಠ ಕಲಿಸಬೇಕು. ನ್ಯಾಯಾಲಯದ ಆದೇಶ ಎಂದು ಹೇಳುತ್ತಾರೆ, ನ್ಯಾಯಾಲಯದ ಆದೇಶವನ್ನು ನಮ್ಮಂತಹ ಬಡವರ ಮೇಲೆಯೇ ಪ್ರಯೋಗಿಸುತ್ತಾರೆ. ಇದು ಎಷ್ಟು ಸರಿ ಎಂದು ಇವರು ಆಕ್ರೋಶ ವ್ಯಕ್ತಪಡಿಸುತ್ತಾರೆ. ಇವರ ಈ ನೋವಿನಲ್ಲಿ ಎರಡು ದಶಕಗಳ ಕಾಲ ಶ್ರಮಿಸಿ ಕಟ್ಟಿದ ಕನಸಿನ ಮನೆಗಳಿವೆ. ಅವು ನುಚ್ಚು ನೂರಾಗುವುದನ್ನು ಸಹಿಸಲು ಇವರಿಗೆ ಸಾಧ್ಯವಾಗುತ್ತಿಲ್ಲ . ಎಲ್ಲರೂ ಇವರ ಪರವಾಗಿ ನಿಲ್ಲಬೇಕಾಗಿದೆ.
– ಕೆ.ಎಸ್.ಜನಾರ್ಧನ್
-ಈ ಸಂಜೆ

Write A Comment