ಬೆಂಗಳೂರು,ಮೇ ೬- ಗ್ರಾಮ ಪಂಚಾಯ್ತಿ ಚುನಾವಣೆ, ಸರ್ಕಾರದ ಎರಡು ವರ್ಷಗಳ ಸಾಧನೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಇಂದು ಗಂಭೀರ ಚರ್ಚೆ ನಡೆಸಿದರು. ಮುಖ್ಯಮಂತ್ರಿ ಅಧಿಕೃತ ನಿವಾಸ ಕಾವೇರಿಗೆ ಭೇಟಿ ನೀಡಿದ ಪರಮೇಶ್ವರ್ ಅವರು, ಸಂಪುಟ ವಿಸ್ತರಣೆ, ಗ್ರಾಪಂ ಚುನಾವಣೆ, ನಿಗಮ-ಮಂಡಳಿಗಳ ನೇಮಕಾತಿ, ಬಿಬಿಎಂಪಿ ಚುನಾವಣೆ, ಕಾಂಗ್ರೆಸ್ ಸದಸ್ಯತ್ವ ನೋಂದಣಿ ಅಭಿಯಾನ, ಸರ್ಕಾರದ ಎರಡು ವರ್ಷಗಳ ಸಾಧನಾ ಸಮಾವೇಶ, ಸಚಿವರ ಮೌಲ್ಯಮಾಪನ ಸೇರಿದಂತೆ ಹಲವು ವಿಷಯಗಳ ಕುರಿತು ಸುದೀರ್ಘ ಮಾತುಕತೆ ನಡೆಸಿದರು.
ರೇಸ್ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ನಿನ್ನೆ ಜಿಲ್ಲಾಧ್ಯಕ್ಷರು ಹಾಗೂ ಕೆಪಿಸಿಸಿ ಪದಾಧಿಕಾರಿಗಳ ಸಭೆಯಲ್ಲಿ ಸರ್ಕಾರದ ಬಗ್ಗೆ ಜನರಿಗಿರುವ ಅಭಿಪ್ರಾಯ ಹಾಗೂ ಕಾರ್ಯಕರ್ತರಲ್ಲಿ ಮೂಡಿರುವ ಕೆಲ ಅಪಸ್ವರದ ಬಗ್ಗೆ ಮುಖ್ಯಮಂತ್ರಿಯವರಿಗೆ ತಿಳಿಸಲಾಯಿತು.
ಸಚಿವರು ವೈಯಕ್ತಿಕ ಹಿತಾಸಕ್ತಿಯ ನೆಲೆಯಲ್ಲಿ ಕೆಲಸ ಮಾಡುತ್ತಿದ್ದು, ಪಕ್ಷ ಮತ್ತು ಸರ್ಕಾರಕ್ಕೆ ಒಳ್ಳೆಯ ಹೆಸರು ಬರುವಂತೆ ನಡೆದುಕೊಳ್ಳುತ್ತಿಲ್ಲ. ಬಹಳಷ್ಟು ಶಾಸಕರು ಇನ್ನೂ ಅಸಮಾಧಾನದಲ್ಲೇ ಇದ್ದಾರೆ. ಬಹುಬೇಗನೆ ಇದನ್ನು ದೂರ ಮಾಡಬೇಕಾದ ಅವಶ್ಯಕತೆ ಇದೆ ಎಂದು ಪರಮೇಶ್ವರ್ ವಿವರಿಸಿದ್ದಾರೆ ಎಂದು ಹೇಳಲಾಗಿದೆ. ಸದಸ್ಯತ್ವ ನೋಂದಣಿ ಅಭಿಯಾನ ಯಶಸ್ಸಿಗೆ ಎಷ್ಟೇ ಒತ್ತಡ ಹಾಕಿದರೂ ಸಚಿವರಿಂದ ಸರಿಯಾದ ಸ್ಪಂದನೆ ಸಿಗುತ್ತಿಲ್ಲ. ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಗ್ರಾಪಂ ಚುನಾವಣೆಗೆ ಚಿಹ್ನೆ ಇಲ್ಲದೆ ಇದ್ದರೂ ಪಕ್ಷದ ಕೆಳ ಹಂತದ ಕಾರ್ಯಕರ್ತರನ್ನು ಸಿದ್ಧಗೊಳಿಸುವುದು ಅತಿ ಮುಖ್ಯವಾಗಿದೆ. ಸಾಧನಾ ಸಮಾವೇಶ ನಡೆಸಲು ತೀರ್ಮಾನಿಸಿರುವ ನಡುವೆಯೇ ಜನಸಾಮಾನ್ಯರಿಗೆ ಮತ್ತಷ್ಟು ಹತ್ತಿರವಾಗಲು ಬೆಂಗಳೂರು ಬಿಟ್ಟು , ದಾವಣಗೆರೆ ಅಥವಾ ಮಧ್ಯ ಕರ್ನಾಟಕದ ಜಿಲ್ಲೆಗಳಲ್ಲಿ ಸಮಾವೇಶ ನಡೆಸಿದರೆ ಹೇಗೆ ಎಂಬ ಬಗ್ಗೆಯೂ ಚರ್ಚೆ ನಡೆಸಿದ್ದಾರೆ.
ಗ್ರಾಪಂ ಚುನಾವಣೆ ಘೋಷಣೆಯಾಗಿರುವುದರಿಂದ ಸರ್ಕಾರದ ವತಿಯಿಂದ ಕಾರ್ಯಕ್ರಮ ನಡೆಸಲು ಸಾಧ್ಯವಿಲ್ಲ. ಪಕ್ಷದ ಮೂಲಕವೇ ಕಾರ್ಯಕ್ರಮ ಆಯೋಜಿಸುವಂತೆ ಮುಖ್ಯಮಂತ್ರಿ ಸಲಹೆ ನೀಡಿದ್ದು, ಅದಕ್ಕೆ ಬೇಕಾದ ಎಲ್ಲ ಸಹಕಾರ ನೀಡುವ ಭರವಸೆ ನೀಡಿದ್ದಾರೆ.
ಇಬ್ಬರು ಮುಖಂಡರು ಸುಮಾರು ೪೫ ನಿಮಿಷಕ್ಕೂ ಹೆಚ್ಚು ಕಾಲ ರಹಸ್ಯ ಮಾತುಕತೆ ನಡೆಸಿದರು. ಬಿಬಿಎಂಪಿ ಚುನಾವಣೆಗೆ ಸುಪ್ರೀಂಕೋರ್ಟ್ ಮೂರು ತಿಂಗಳ ಗಡುವು ನೀಡಿರುವುದರಿಂದ ಚುನಾವಣೆ ತಯಾರಿ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ.