ಕರ್ನಾಟಕ

ಬಾಯಿ ಮುಚ್ಕೊಂಡು ಇರದಿದ್ದರೆ ಬೆಂಗಳೂರಿಂದಲೇ ಪ್ಯಾಕ್‌ಅಪ್

Pinterest LinkedIn Tumblr

Kannada-protest

ಬೆಂಗಳೂರು, ಮೇ 7- ಬಿ-ಪ್ಯಾಕ್ ಅಂದರೆ ಬೆಂಗಳೂರು ಪೊಲಿಟಿಕಲ್ ಆಕ್ಷನ್  ಕಮಿಟಿ (ಬೆಂಗಳೂರು ರಾಜಕೀಯ ಕ್ರಿಯಾಸಮಿತಿ). ಆದರೆ ಈ ಸಮಿತಿ ಮಾಡ್ತಿರೋ ಕೆಲ್ಸ ನೋಡಿದ್ರೆ ಬೆಂಗಳೂರನ್ನೇ ಪ್ಯಾಕ್‌ಅಪ್ ಮಾಡಲು ಮುಂದಾಗಿರುವಂತಿದೆ. ಬಿ ಪ್ಯಾಕ್‌ನಲ್ಲಿರುವವರು ಉದ್ಯಮ ಲೋಕ ಹಾಗೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅತಿರಥ ಮಹಾರಥರು.  ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜೂಂದಾರ್ ಷಾ, ಟಿ.ವಿ.ಮೋಹನದಾಸ್ ಪೈ, ಕೆ.ಜಯರಾಜ್, ಅಶ್ವಿನ್ ಮಹೇಶ್, ಅಶ್ವಿನಿ ನಾಚಪ್ಪ, ರೇವತಿ ಅಶೋಕ್, ಪ್ರಸಾದ್ ಬಿದ್ದಪ್ಪ, ಚಾರುಶರ್ಮಾ, ಸ್ಯಾನ್ಲಿ ಪಿಂಟೋ, ಹರೀಶ್ ಬಿಜೂರ್, ಪ್ರಕಾಶ್ ಬೆಳವಾಡಿ, ಕಲ್ಪನಾಕರ್,

ನಿಶಾ ಮಿಲ್ಲೆಟ್, ವಾಣಿ ಗಣಪತಿ, ಅನಿಲ್ ಶೆಟ್ಟಿ, ಡಾ.ಹರಿ ಪರಮೇಶ್ವರ್ ಮತ್ತಿತರ ಖ್ಯಾತ ವ್ಯಕ್ತಿಗಳೇ ಇದ್ದಾರೆ. ಇವ್ರು ಮನಸ್ಸು ಮಾಡಿದರೆ ಸಮಾಜಕ್ಕೆ ಒಳ್ಳೆಯದಾಗುವಂತಹ ಕೆಲ್ಸ ಮಾಡಬಹುದು.  ಬೆಂಗಳೂರನ್ನು ಸಿಂಗಾಪೂರ  ಕೂಡ ಮಾಡ್ಬಹುದು ಆದ್ರೆ ಅವರು ಅದನ್ನೆಲ್ಲಾ ಬಿಟ್ಟು ಕನ್ನಡಿಗರ ಸ್ವಾಭಿಮಾನದ ಕೇಂದ್ರವಾಗಿರುವ ಬೆಂಗಳೂರನ್ನು ವಿಭಜಿಸುವ ರಾಜಕೀಯ ಹುನ್ನಾರಕ್ಕೆ ತಾಳ ಹಾಕುವ ಮೂಲಕ  ಉಂಡ ಮನೆಗೇ ಕನ್ನ ಹಾಕುವ ಕಾರ್ಯಕ್ಕೆ ಕೈ ಹಾಕಿದ್ದಾರೆ.
ನಾಡಪ್ರಭು ಕೆಂಪೇಗೌಡ ಕಟ್ಟಿದ ಬೆಂಗಳೂರು ವಿಭಜನೆ ನಾಡಪ್ರಭುವಿಗೆ ಮಾಡಿದ ದ್ರೋಹ. ಯಾವುದೇ ಕಾರಣಕ್ಕೂ ಇಬ್ಭಾಗ ಮಾಡಲು ಬಿಡುವುದಿಲ್ಲ ಎಂದು ಕನ್ನಡಪರ ಸಂಘಟನೆಗಳು ಬೀದಿಗಿಳಿದು ಹೋರಾಟಕ್ಕೆ ಇಳಿದಿದ್ದರೆ, ಈ ಮಹಾನುಭಾವರು ಬೆಂಗಳೂರನ್ನು ಮೂರು ಭಾಗ ಮಾಡಲೇಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡುವ ಮೂಲಕ ತಮ್ಮ ನಾಡ ದ್ರೋಹತನ ಪ್ರದರ್ಶಿಸಿದ್ದಾರೆ.

ಬಿ-ಪ್ಯಾಕ್ ಮುಖ್ಯಸ್ಥೆಯಾಗಿರುವ ಕಿರಣ್ ಮಜೂಂದಾರ್ ಷಾ, ಮೋಹನ್‌ದಾಸ್ ಪೈ, ಅಶ್ವಿನ್ ಮಹೇಶ್, ಪ್ರಸಾದ್ ಬಿದ್ದಪ್ಪ ಮತ್ತಿತರರು ಅನ್ನ ತಿನ್ನುತ್ತಿರುವುದು ಕನ್ನಡದ ಮಣ್ಣಿನಲ್ಲಿ. ಇಂತಹ ಮಣ್ಣಿನ ಋಣ ತೀರಿಸಬೇಕಾದ ಇವರು, ಉಂಡ ಮನೆಗೆ ಕನ್ನ ಹಾಕುವ ಕಾರ್ಯಕ್ಕೆ ಕೈ ಹಾಕಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.  ಕಿರಣ್ ಮಜೂಂದಾರ್ ಒಡೆತನದ ಬಯೋಕಾನ್ ಸಂಸ್ಥೆ ತನ್ನ ತ್ಯಾಜ್ಯ ನೀರನ್ನು  ಸಮೀಪದ ಕಾಲುವೆಗೆ ಹರಿಸುವ ಮೂಲಕ ಪರಿಸರ ಮಾಲಿನ್ಯಕ್ಕೆ ಕಾರಣವಾಗಿದೆ. ಇದನ್ನು ಸರಿಪಡಿಸಲು ಮುಂದಾಗದ ಅವರು ಆಡಳಿತ ದೃಷ್ಟಿಯಿಂದ ಬೆಂಗಳೂರನ್ನು ವಿಭಜಿಸುವುದು ಸೂಕ್ತ ಎಂದು ಹೇಳಿಕೆ ನೀಡಿರುವುದು ಹಾಸ್ಯಾಸ್ಪದವಾಗಿದೆ.  ಇನ್ನು ಬಿದ್ದಪ್ಪ..ಇವರ  ಬಾಯಲ್ಲಿ ಬರೋ ಕನ್ನಡ ಪದಗಳು ಜಿ.ಪಿ.ರಾಜರತ್ನಂ ಅವರನ್ನೇ ನಾಚಿಸುವಂತಿದೆ. ಇವರಿಗೆ ಬೆಂಗಳೂರು ವಿಭಜಿಸಿದ್ರೆ ಒಳ್ಳೆದಂತೆ. ಯಾವ ದೃಷ್ಟಿಯಿಂದ ಅಂತ ಮಾತ್ರ ಯಾರಿಗೂ ಅರ್ಥ ಆಗ್ತಿಲ್ಲ.  ಬಿಬಿಎಂಪಿ ಆಯುಕ್ತರಾಗಿ ಉತ್ತಮ ಅಧಿಕಾರಿಯೆಂದೇ ಗುರ್ತಿಸಿಕೊಂಡಿದ್ದ ಕೆ.ಜಯರಾಜ್ ನಿವೃತ್ತಿಯಾಗುತ್ತಿದ್ದಂತೆ ಬೆಂಗಳೂರು ವಿಭಜನೆ ಪರ ಮಾತನಾಡುತ್ತಿರುವುದು ಅವರ ಇಬ್ಬಂದಿತನಕ್ಕೆ ಸಾಕ್ಷಿಯಾಗಿದೆ. ಮನೆ ಒಡೆಯುವ ಕಾರ್ಯಕ್ಕೆ ಕೈ ಹಾಕಿರುವ ಈ ಮಹಾನುಭಾವರ ನಡವಳಿಕೆಗೆ ಕನ್ನಡ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿರುವುದು ಹೀಗೆ.
– ಟಿ.ಎ.ನಾರಾಯಣಗೌಡ (ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ)

ಬೆಂಗಳೂರನ್ನು ವಿಭಜಿಸಿ ಎಂದು ಸರ್ಕಾರಕ್ಕೆ ಸಲಹೆ ನೀಡಲು ಇವ್ರೆಲ್ಲಾ ಯಾರು? ಎಂದು ಖಾರವಾಗಿ ಪ್ರಶ್ನಿಸಿರುವ ನಾರಾಯಣಗೌಡರು, ನಾಚಿಕೆಯಾಗ್ಬೇಕು ಬಿ.ಪ್ಯಾಕ್ ನವರಿಗೆ. ಇವರಿಗೇನು  ಗೊತ್ತು ನಗರದ ಇತಿಹಾಸ. ಇವರು ಇಲ್ಲಿ ಬಂದಿರೋದು ಹಣ ಮಾಡೋಕೆ. ಅದನ್ನು ಮಾಡೋದು ಬಿಟ್ಟು ಬೆಂಗಳೂರು ವಿಭಜಿಸಿ ಎಂದು ಸರ್ಕಾರಕ್ಕೆ ಸಲಹೆ ನೀಡಲು ಇವರಿಗೆ ಅಧಿಕಾರ ಕೊಟ್ಟೋರು ಯಾರು ಎಂದು ಗುಡುಗಿದ್ದಾರೆ. ನೆರೆಯ ಆಂಧ್ರದಲ್ಲಿರುವ ಉದ್ಯಮಗಳು ಸ್ಥಳೀಯರಿಗೆ ಶೇ.70 ರಷ್ಟು, ತಮಿಳುನಾಡಿನಲ್ಲಿ ಶೇ.70ರಷ್ಟು ಉದ್ಯೋಗ ನೀಡಿವೆ. ಈ ಮಹಾನುಭಾವರು ಎಷ್ಟು ಕನ್ನಡಿಗರಿಗೆ ಉದ್ಯೋಗ ಕೊಟ್ಟಿದ್ದಾರೆ.  ಕಡಿಮೆ ದರದಲ್ಲಿ ಭೂಮಿ ಪಡೆದು ರಿಯಲ್ ಎಸ್ಟೇಟ್ ಉದ್ದಿಮೆದಾರರಂತಾಗಿರುವ ಇವರು, ವಾರ್ಷಿಕ 400 ಕೋಟಿ 500 ಕೋಟಿ  ಆದಾಯ ಗಳಿಸಿದ್ದೇವೆ ಎಂದೆಲ್ಲಾ ಕೊಚ್ಚಿಕೊಳ್ತಾರೆ. ಅದರಲ್ಲಿ ಎಷ್ಟು  ಪಾಲನ್ನು ಬೆಂಗಳೂರು ಉದ್ಧಾರಕ್ಕೆ ಬಳಸಿದ್ದಾರೆ ಎಂಬುದನ್ನು ಬಹಿರಂಗಗೊಳಿಸಲಿ ಎಂದು  ಸವಾಲು ಹಾಕಿದ್ದಾರೆ. ಪ್ರಧಾನ ಮಂತ್ರಿ ಅವರನ್ನು ಭೇಟಿಯಾಗಿ ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶ ಮಾಡಿ ಎಂದು ಕಿವಿ ಊದಿದ್ದ ವೈಟ್ ಕಾಲರ‌ಸ್ನ ಗಳು ಇವರು, ಬೆಂಗಳೂರನ್ನು ವಿಭಜನೆ ಮಾಡಿ ಎಂದು ಹೇಳೋಕೆ ನಗರ ಏನು ಅವರಪ್ಪನ ಮನೆ ಆಸ್ತೀನಾ. ಬಿ.ಪ್ಯಾಕ್‌ನವರು ತಮ್ಮ ಧೋರಣೆಯನ್ನು ಬದಲಿಸಿಕೊಳ್ಳದಿದ್ದರೆ ಅವರ ಸಂಸ್ಥೆಗಳ ಮುಂದೆ ನೂರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿ  ಅವರನ್ನೇ ಇಲ್ಲಿಂದ ತೊಲಗಿಸಬೇಕಾಗುತ್ತದೆ ಎಂದು ನಾರಾಯಣಗೌಡರು ಎಚ್ಚರಿಸಿದ್ದಾರೆ.

ವಾಟಾಳ್ ನಾಗರಾಜ್:
ಬೆಂಗಳೂರನ್ನು ವಿಭಜಿಸುವ ನಿರ್ಧಾರ ತುಂಬಾ  ಅಪಾಯಕಾರಿ ಬೆಳವಣಿಗೆ. ಇಂತಹ ದುಸ್ಸಾಹಸಕ್ಕೆ ಬೆಂಬಲ ನೀಡುತ್ತಿರುವ ಬಿ.ಪ್ಯಾಕ್‌ನವರು ಬಾಯಿ ಮುಚ್ಕೊಂಡು ಇರದಿದ್ದರೆ ಅವರನ್ನೇ ಬೆಂಗಳೂರಿನಿಂದ ಪ್ಯಾಕ್ ಅಪ್ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್. ಪಂಚತಾರಾ ಸಂಸ್ಕೃತಿಯ ಬಿ.ಪ್ಯಾಕ್‌ನವರಿಗೆ ಬೆಂಗಳೂರು ಕಟ್ಟಿದ ನಾಡಪ್ರಭು ಕೆಂಪೇಗೌಡರ ಬಗ್ಗೆ ಏನೂ ಗೊತ್ತಿಲ್ಲ. ಅವರಿಗೆ ನಗರದ ನೈಜತೆಯ ಅರಿವಿಲ್ಲ. ಬಿಬಿಎಂಪಿ ವಿಭಜನೆ ಮಾಡಿದರೆ ಅದು ಕೆಂಪೇಗೌಡರಿಗೆ ಮಾಡುವ ಅಪಮಾನ. ಇಂತಹ ಕಾರ್ಯಕ್ಕೆ ಕನ್ನಡ ಪರ ಸಂಘಟನೆಗಳು ಯಾವುದೇ ಕಾರಣಕ್ಕೂ ಅವಕಾಶ ನೀಡಲ್ಲ. ಹಿಂದಿನ ಯಾವ ಸರ್ಕಾರಗಳೂ ಬೆಂಗಳೂರಿನ ಬೆಳವಣಿಗೆ ಬಗ್ಗೆ ಗಮನ ಹರಿಸದ ಪರಿಣಾಮ ಇಂದು ಇಂತಹ  ಸ್ಥಿತಿ ಬಂದಿದೆ. ಆಡಳಿತ ನಡೆಸಿದವರು ದೂರದೃಷ್ಟಿ ಇಲ್ಲದೆ  ಬರೀ  ರಿಯಲ್ ಎಸ್ಟೇಟ್ ದಂಧೆಗೆ ಪ್ರೋತ್ಸಾಹ ನೀಡಿದ್ದರಿಂದ ನಗರ ವಿಸ್ತಾರಗೊಂಡಿದೆ. ಇದಕ್ಕೆ ಕಡಿವಾಣ ಹಾಕುವ ಬದಲು ನಗರವನ್ನೇ ವಿಭಜಿಸಲು ಮುಂದಾಗಿರುವುದು ಮೂರ್ಖತನದ ಪರಮಾವಧಿ.
ನೆಲ-ಜಲ-ಭಾಷೆ ವಿಚಾರದಲ್ಲಿ ಕನ್ನಡಿಗರ ಸ್ವಾಭಿಮಾನ ಕೆಣಕಿದರೆ ಅದನ್ನು ನಾವು ಸಹಿಸುವುದಿಲ್ಲ. ಬಿ.ಪ್ಯಾಕ್‌ನವರು ತಮ್ಮ ಕೆಲಸ ಮಾಡಿಕೊಂಡು ತೆಪ್ಪಗಿದ್ದರೆ ಚೆಂದ. ಇಲ್ಲ ಅಂದರೆ ಅವರನ್ನೇ ಬೆಂಗಳೂರಿನಿಂದ ಪ್ಯಾಕ್‌ಅಪ್ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಜಗದೀಶ್, ಜಯಕರ್ನಾಟಕ  ರಾಜ್ಯಧ್ಯಕ್ಷ:

ಬೆಂಗಳೂರು ವಿಭಜಿಸುವಂತೆ ಸರ್ಕಾರಕ್ಕೆ ಮನವಿ ಮಾಡಿರುವ  ಬಿ.ಪ್ಯಾಕ್ ನವರದು ಉದ್ಧಟತನದ ಪರಮಾವಧಿ. ಯಾವುದೇ ಕಾರಣಕ್ಕೂ ಬಿಬಿಎಂಪಿ ವಿಭಜನೆಗೆ ಅವಕಾಶ ನೀಡುವುದಿಲ್ಲ ಎನ್ನುತ್ತಾರೆ ಜಯ ಕರ್ನಾಟಕ  ಸಂಘಟನೆ ರಾಜ್ಯಧ್ಯಕ್ಷ ಜಗದೀಶ್.
ಮೆಕೆದಾಟು ವಿಚಾರದಲ್ಲಿ  ಹೋರಾಟ ನಡೆಸುತ್ತಿರುವ ನಮ್ಮ ಸಂಘಟನೆ  ನಾಡು-ನುಡಿಗಾಗಿ ಪ್ರಾಣ ಕೊಡಲು ಸಿದ್ಧವಿದೆ. ಕಳೆದ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದ ಸಂದರ್ಭದಲ್ಲೂ ಬಿಬಿಎಂಪಿಯನ್ನು ವಿಭಜನೆ ಮಾಡಬಾರದು ಎಂದು ಮನವಿ ಮಾಡಿಕೊಂಡಿದ್ದೇವೆ.  ಒಂದು ವೇಳೆ ಸರ್ಕಾರ ಬಿಬಿಎಂಪಿಯನ್ನು ವಿಭಜಿಸಿದರೆ ನಾವು  ಬೀದಿಗಿಳಿದು ಹೋರಾಟ ನಡೆಸುತ್ತೇವೆ ಎಂದು ಜಗದೀಶ್ ಘರ್ಜಿಸಿದ್ಧಾರೆ.

ಕುಮಾರ್, ಕನ್ನಡ  ಸೇನೆ ರಾಜ್ಯಾಧ್ಯಕ್ಷ:

ಬೆಂಗಳೂರು  ವಿಭಜಿಸುವ ಬಿ.ಪ್ಯಾಕ್ ನವರು ನೀಡಿರುವ ಮನವಿಯ ಹಿಂದೆ ರಾಜಕೀಯ ಕುತಂತ್ರವಿದೆ ಎಂದು ಆರೋಪಿಸಿರುವ ಕನ್ನಡ ಸೇನೆ ರಾಜ್ಯಾಧ್ಯಕ್ಷ ಕುಮಾರ್  ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಟಾಲಂ ಬಿ.ಪ್ಯಾಕ್ ಬೆನ್ನಿಗೆ ನಿಂತಿದೆ ಎಂದು ದೂರಿದ್ದಾರೆ.
ನಾಡಪ್ರಭು ಕೆಂಪೇಗೌಡರು ಕಟ್ಟಿದ ಈ ಬೆಂಗಳೂರನ್ನು ವಿಭಜನೆ ಮಾಡಿದರೆ ತಕ್ಕಶಾಸ್ತಿ ಎದುರಿಸಬೇಕಾಗುತ್ತದೆ. ಇಂತಹ ಕಾರ್ಯಕ್ಕೆ ಪ್ರೋತ್ಸಾಹ ನೀಡುತ್ತಿರುವ  ಬಿ.ಪ್ಯಾಕ್‌ನವರು ತಮ್ಮ ಸ್ವಾರ್ಥಕ್ಕಾಗಿ ಮನೆ ಒಡೆಯುವ ಕೆಲಸಕ್ಕೆ ಕೈ ಹಾಕಿದ್ದಾರೆ ಎಂದು ಕುಮಾರ್ ಆರೋಪಿಸಿದ್ದಾರೆ. ನಾಡು ಒಡೆಯಬಾರದು ಎಂಬ ಕನ್ನಡಪರ ಸಂಘಟನೆಗಳ ಒಕ್ಕೊರಲ ಮನವಿಗೆ ಸ್ಪಂದಿಸದಿದ್ದರೆ ನಮ್ಮ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ರಮೇಶ್‌ಪಾಳ್ಯ
– ಈ ಸಂಜೆ

Write A Comment