ಮಂಗಳೂರು, ಮೇ.8: ಜನರ ಸುರಕ್ಷತೆಗಾಗಿ ಪ್ರಧಾನಮಂತ್ರಿ ಸಮರ್ಪಿಸುತ್ತಿರುವ ವಿಶೇಷ ಯೋಜನೆಗಳನ್ನು ನಗರದ ಸಿ.ವಿ.ನಾಯಕ್ ಸಭಾಂಗಣದಲ್ಲಿ ಮೇ 9ರಂದು ಕೇಂದ್ರ ಸರಕಾರದ ಕಾನೂನು ಸಚಿವ ಡಿ.ವಿ.ಸದಾನಂದ ಗೌಡ ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಸಂಸದ ನಳಿನ್ ಕುಮಾರ್ ಕಟೀಲ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಕಾರ್ಪೊರೇಶನ್ ಬ್ಯಾಂಕ್‌ನ ಮಹಾ ಪ್ರಬಂಧಕ ಲಕ್ಷ್ಮೀಕಾಂತ ರೆಡ್ಡಿ ಪತ್ರಿಕಾಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಪ್ರಧಾನ ಮಂತ್ರಿ ಸುರಕ್ಷತಾ ಯೋಜನೆಯಲ್ಲಿ ವಾರ್ಷಿಕ 12 ರಾ.ಪಾವತಿಯೊಂದಿಗೆ 18ರಿಂದ 70 ವರ್ಷದೊಳಗಿನ ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್ ಉಳಿತಾಯ ಖಾತೆದಾರರಿಗೆ 2ಲಕ್ಷ ರೂ.ಗಳ ಅಪಘಾತ ವಿಮಾ ಯೋಜನೆ, ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆಯಲ್ಲಿ ವಾರ್ಷಿಕ 330 ರೂ. ಕಂತಿನ ಪಾವತಿಯೊಂದಿಗೆ 18ರಿಂದ 50 ವರ್ಷದೊಳಗಿನ ಎಲ್ಲಾ ಬ್ಯಾಂಕ್ ಖಾತೆದಾರರಿಗೆ 2 ಲಕ್ಷ ರೂ.ಗಳ ಜೀವ ವಿಮಾ ಸೌಲಭ್ಯವಿದೆ.
ಈ ಯೋಜನೆಯ ಪ್ರಕಾರ ಫಲಾನುಭವಿಗಳು ಒಂದು ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ಹೊಂದಿರಬೇಕು. ಉಳಿತಾಯ ಖಾತೆ ಹೊಂದಿರುವ ಬ್ಯಾಂಕ್‌ನಲ್ಲಿ ಯೋಜನೆಗೆ ಸಂಬಂಧಿಸಿದಂತೆ ವಿಮಾ ಅರ್ಜಿ ಫಾರಂನ್ನು ತುಂಬಿ ಈ ಯೋಜನೆಯ ಸೌಲಭ್ಯ ಪಡೆಯಬಹುದು ಎಂದು ಲಕ್ಷ್ಮೀಕಾಂತ ರೆಡ್ಡಿ ತಿಳಿಸಿದ್ದಾರೆ.
ಅಟಲ್ ಪಿಂಚಣಿ ಯೋಜನೆಯನ್ನು ಜಾರಿಗೆ ತರಲಾಗುತ್ತಿದ್ದು, ಈ ಯೋಜನೆ ಆದಾಯ ತೆರಿಗೆ ಪಾವತಿ ಮಾಡದ ಅಸಂಘಟಿತ ನಾಗರಿಕರಿಗೆ ಅನ್ವಯವಾಗುತ್ತಿದ್ದು, 60 ವರ್ಷಗಳ ನಂತರ ಮಾಸಿಕ 1, 000 ರೂ.ಗಳಿಂದ 5,000 ರೂ. ಪಿಂಚಣಿ ಪಡೆಯಬಹುದಾಗಿದೆ. 18ರಿಂದ 40 ವರ್ಷ ವಯೋಮಾನದ ಬ್ಯಾಂಕ್ ಉಳಿತಾಯ ಖಾತೆದಾರರು ಈ ಯೋಜನೆಯಲ್ಲಿ ಭಾಗವಹಿಸಬಹುದು. ಗ್ರಾಹಕರು ಬ್ಯಾಂಕ್ ಖಾತೆಯಿಂದ ಪ್ರತಿ ತಿಂಗಳು ಉಳಿತಾಯದ ಮೊತ್ತವನ್ನು ಕಡಿತ ಮಾಡಲು ಆದೇಶ ನೀಡುವ ಮೂಲಕ ಈ ಯೋಜನೆಯಲ್ಲಿ ಪಾಲ್ಗೊಳ್ಳಬಹುದು ಎಂದು ರೆಡ್ಡಿ ತಿಳಿಸಿದ್ದಾರೆ.