ಕರ್ನಾಟಕ

ಬಿಎಸ್ ವೈ, ಎಚ್ಡಿಕೆಗೆ ಮತ್ತೊಂದು ಡಿನೋಟಿಫಿಕೇಷನ್ ಭೂತ

Pinterest LinkedIn Tumblr

bsy-hdk

ಬೆಂಗಳೂರು: ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಎಚ್.ಡಿ ಕುಮಾರಸ್ವಾಮಿ ಅವರ ಬೆನ್ನಿಗೆ ಮತ್ತೊಂದು ಡಿನೋಟಿಫಿಕೇಷನ್ ಭೂತ ಅಂಟಿಕೊಂಡಿದೆ. ಆರ್.ಟಿ ನಗರದ  ಗಂಗೇನಹಳ್ಳಿ ವ್ಯಾಪ್ತಿಯ ಮಠದಹಳ್ಳಿ ಬಡಾವಣೆ ಪ್ರದೇಶದಲ್ಲಿ 1 ಎಕರೆ 11ಗುಂಟೆ ಭೂಮಿಯನ್ನು ಸ್ವಾಧೀನದಿಂದ ಕೈ ಬಿಟ್ಟಿದ್ದಾರೆ ಎಂಬ ಆರೋಪದ ಮೇಲೆ ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ವಿರುದ್ಧ ಸಾಮಾಜಿಕ ಕಾರ್ಯಕರ್ತ ಜಯಕುಮಾರ್ ಹೀರೆಮಠ್ ಅವರ ದೂರಿನ ಮೇಲೆ ಲೋಕಾಯುಕ್ತ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ. ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅನುಸಾರ ಎಫ್ಐಆರ್ ದಾಖಲಾಗಿದೆ ಎಂದು  ಲೋಕಾಯುಕ್ತ ಪೊಲೀಸ್ ಕಚೇರಿ ತಿಳಿಸಿದೆ. ಮಾಜಿ ಮುಖ್ಯಮಂತ್ರಿಗಳ ಜತೆ ವಿಮಲಾ, ಟಿ.ಎಸ್. ಚನ್ನಪ್ಪ, ರಾಜಶೇಖರಯ್ಯ ಹಾಗೂ ಸಂಬಂಧಿಸಿದ ಅಧಿಕಾರಿಗಳನ್ನೂ ಆರೋಪಿಗಳನ್ನಾಗಿ ಹೆಸರಿಸಲಾಗಿದೆ.

ಮಠದಹಳ್ಳಿ ವ್ಯಾಪ್ತಿಯ ಸರ್ವೆ ಸಂಖ್ಯೆ 7/1ಬಿ, 7/1ಸಿ, ಮತ್ತು  7/1ಡಿ ವ್ಯಾಪ್ತಿಯಲ್ಲಿ ತಲಾ 17 ಗುಂಟೆ ಭೂಮಿಯನ್ನು ಯಡಿಯೂರಪ್ಪ ಡಿನೋಟಿಫೈ ಮಾಡಿದ್ದರು. ಮೂಲತ: ಈ ಭೂಮಿ ತಿಮ್ಮಾರೆಡ್ಡಿ, ನಾಗಪ್ಪ ಹಾಗೂ ಮುನಿಸ್ವಾಮಪ್ಪ ಮಾಲೀಕರಾಗಿದ್ದರು. ಆದರೆ ರಾಜಶೇಖರಯ್ಯ ಎಂಬುವವರು ತಾನೇ ಈ ಜಮೀನಿನ ಮಾಲೀಕ ಎಂದು ಸರ್ಕಾರಕ್ಕೆ ಡಿನೋಟಿಫೈ ಮಾಡುವಂತೆ ಅರ್ಜಿ ಸಲ್ಲಿಸಿದ್ದರು.

2007 ರಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ಕುಮಾರಸ್ವಾಮಿ ಡಿನೋಟಿಫೈ ಮಾಡುವಂತೆ ಆದೇಶ ನೀಡಿದ್ದರು. ಆದರೆ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಅವರು ಡಿನೋಟಿಫೈಗೆ ವಿರೋಧ ವ್ಯಕ್ತಪಡಿಸಿದ್ದರು. ಬಳಿಕ ಅಧಿಕಾರಕ್ಕೆ ಬಂದ ಯಡಿಯೂರಪ್ಪ 2010ರಲ್ಲಿ ಈ ಭೂಮಿಯನ್ನು ಡಿನೋಟಿಫೈ ಮಾಡಿದರು. ಡಿನೋಟಿಫೈ ಮಾಡಿದ ಬಳಿಕ ರಾಜಶೇಖರ್ ಅವರು ಕುಮಾರಸ್ವಾಮಿ ಅವರ ಸಂಬಂಧಿಗೆ ಭೂಮಿ ಹಸ್ತಾಂತರಿಸಿದ್ದಾರೆ. ಈ ಪ್ರಕ್ರಿಯೆಯಲ್ಲಿ ಮಾಜಿ ಮುಖ್ಯಮಂತ್ರಿಗಳು ಭಾಗಿಯಾಗಿದ್ದಾರೆ ಎನ್ನುವುದು ದೂರುದಾರರ ಅಹವಾಲಾಗಿದೆ. ಜುಲೈ 5 ರಂದು ನೋಂದಣಿ ಮಾಡಿಸಿಕೊಟ್ಟಿದ್ದಾರೆ.

ಈ ಪ್ರಕ್ರಿಯೆಗಳು ಸಂಶಯಾಸ್ಪದ ಮತ್ತು ಕಾನೂನುಬಾಹಿರವಾಗಿದೆ. ಇಬ್ಬರು ಮಾಜಿ ಸಿಎಂಗಳು ಅಧಿಕಾರ ದುರ್ಬಳಕೆ ಮಾಡಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜಯಕುಮಾರ್ ಹಿರೇಮಠ್  ಆಗ್ರಹಿಸಿದ್ದಾರೆ.
-ಕನ್ನಡಪ್ರಭ

Write A Comment