ಕರ್ನಾಟಕ

ನೇಪಾಳ ಭೂಕಂಪ ಸಂತ್ರಸ್ತರಿಗೆ ಅಣ್ಣಾವ್ರ ಕುಟುಂಬದಿಂದ 10ಲಕ್ಷ ರೂ.ದೇಣಿಗೆ

Pinterest LinkedIn Tumblr

raj

ಬೆಂಗಳೂರು, ಮೇ 7: ನೇಪಾಳ ಭೂಕಂಪ ಸಂತ್ರಸ್ತರ ನೆರವಿಗೆ ನಟ ಸಾರ್ವಭೌಮ ಡಾ.ರಾಜ್‌ಕುಮಾರ್ ಕುಟುಂಬ ಮೊದಲ ಹಂತದಲ್ಲಿ ಮುಖ್ಯಮಂತ್ರಿ ಪರಿಹಾರ ನಿಧಿಗೆ 10 ಲಕ್ಷ ರೂ.ಗಳ ದೇಣಿಗೆ ನೀಡಿದೆ. ರಾಜ್‌ಕುಮಾರ್ ಅವರ ಮೊಮ್ಮಗ ವಿನಯ್‌ರಾಜ್‌ಕುಮಾರ್ ಅವರ ಹುಟ್ಟುಹಬ್ಬದ ದಿನವಾದ ಇಂದು ರಾಜ್ ಪುತ್ರರಾದ ಹಿರಿಯ ನಟರಾದ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಅವರುಗಳು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ 10 ಲಕ್ಷ ರೂ.ಗಳ ಚೆಕ್ಕನ್ನು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಿವರಾಜ್‌ಕುಮಾರ್, ಪ್ರಕೃತಿ ವಿಕೋಪಗಳು ಎಲ್ಲಿಯೂ ಆಗಬಾರದು. ನೇಪಾಳದಲ್ಲಿ ಭೂಕಂಪ ಆಗಿದೆ. ಇದು ದುರಾದೃಷ್ಟ. ಸಂತ್ರಸ್ತರಿಗೆ ನಮ್ಮ ಕೈಲಾದ ನೆರವು ನೀಡಬೇಕು. ಕನ್ನಡ ಚಿತ್ರೋದ್ಯಮದ ಕಲಾವಿದರು ಕೂಡ ಸಂತ್ರಸ್ತರ ನೆರವಿಗೆ ಧಾವಿಸಬೇಕು ಎಂದು ಕರೆ ನೀಡಿದರು. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದನ್ನು ಅಪ್ಪಾಜಿ ನಮಗೆ ಹೇಳಿಕೊಟ್ಟಿದ್ದಾರೆ. ಅದರಂತೆ ನಾವು ಅನುಸರಿಸುತ್ತಾ ಬಂದಿದ್ದೇವೆ ಎಂದರು.

ರಾಘವೇಂದ್ರರಾಜ್‌ಕುಮಾರ್ ಮಾತನಾಡಿ, ನಮ್ಮ ದೇಶದಲ್ಲಿ ಗುಜರಾತ್ ಭೂಕಂಪ ಹಾಗೂ ಸುನಾಮಿಯಂತಹ ದುರ್ಘಟನೆಗಳಿಗೆ ವಿದೇಶಗಳು ಸ್ಪಂದಿಸಿದ್ದವು. ಬೇರೆ ದೇಶಗಳಲ್ಲಿ ದುರಂತ ನಡೆದಾಗಲೂ ನಾವು ಸ್ಪಂದಿಸಬೇಕು. ಶಿವರಾಜ್‌ಕುಮಾರ್‌ರಿಂದ 5 ಲಕ್ಷ ಹಾಗೂ ನಮ್ಮ ಮನೆಯಿಂದ 5 ಲಕ್ಷ ಸೇರಿ 10 ಲಕ್ಷ ರೂ. ಚೆಕ್ ನೀಡಿದ್ದೇವೆ. ಪುನೀತ್‌ರಾಜ್‌ಕುಮಾರ್ ಕೂಡ ದೇಣಿಗೆ ನೀಡುತ್ತಾರೆ. ಅಭಿಮಾನಿಗಳು, ಕಲಾವಿದರು ಕೂಡ ಸಂತ್ರಸ್ತರಿಗೆ ಕೈಲಾದ ನೆರವು ನೀಡಬೇಕು ಎಂದರು. ವಿನಯ್‌ರಾಜ್‌ಕುಮಾರ್ ಮಾತನಾಡಿ, ಸಹಾಯ ಮಾಡಲು ದೊಡ್ಡವರು, ಚಿಕ್ಕವರು ಎಂಬ ಭೇದವಿಲ್ಲ. ತಮ್ಮ ಕೈಲಾದ ನೆರವನ್ನು ನೀಡುತ್ತಿರಬೇಕು. ಸಂತ್ರಸ್ತರಿಗೆ ನೆರವು ನೀಡುವ ಮೂಲಕ ನನ್ನ ಹುಟ್ಟುಹಬ್ಬ ಆಚರಣೆಗೆ ಚಾಲನೆ ನೀಡಲಾಗಿದೆ ಎಂದರು.

Write A Comment